×
Ad

ಹರಿಗೆ ‘ಅಹಿಂದ’ ಸಂಘಟನೆಯೇ ಸವಾಲು...

Update: 2026-06-25 11:43 IST

Photo Credit: X/@HariprasadBK2

ಸಿದ್ದರಾಮಯ್ಯನವರ ರಾಜೀನಾಮೆಯಿಂದ ಅಹಿಂದ ವರ್ಗ ಹೇಗೆ ವರ್ತಿಸುತ್ತದೆ ಎಂದು ಹೇಳುವುದು ಕಷ್ಟ. ಹರಿಪ್ರಸಾದ್ ಹಿಂದುಳಿದ ಈಡಿಗ ಜಾತಿಯವರು. ಹೈಕಮಾಂಡ್ ಲೆಕ್ಕಾಚಾರಗಳು ಸರಿಯಾದರೆ ಮುಂದಿನ ಚುನಾವಣೆಯಲ್ಲಿ ಅಹಿಂದ ಮತಗಳು ಚದುರದಿರಬಹುದು. ಈ ಸಮುದಾಯದ ಮತಗಳು ಹರಿದು ಹಂಚಿಹೋಗದಂತೆ ಹಿಡಿದಿಡುವ ಜವಾಬ್ದಾರಿ ಅಧ್ಯಕ್ಷರ ಮೇಲಿದೆ. ಅದನ್ನು ಮಾಡುವ ತಾಕತ್ತೂ ಇದೆ. ಜಾರಕಿಹೊಳಿ ಭವಿಷ್ಯದ ಅಹಿಂದ ನಾಯಕ ಎಂದು ಯತೀಂದ್ರ ಕೊಟ್ಟ ‘ಜಡ್ಜ್ ಮೆಂಟ್’ ಹುಸಿಗೊಳಿಸುವ ಅವಕಾಶ ಹರಿಪ್ರಸಾದ್‌ಗೆ ಸಿಕ್ಕಿದೆ. ‘ಯಾರಿಗಿಂತಲೂ ತಾವೇನು ಕಡಿಮೆಯಿಲ್ಲ. ಅಹಿಂದ ಯಾರ ಜಾಗೀರು ಅಲ್ಲ’ ಎಂದು ನಿರೂಪಿಸಬೇಕಿದೆ.

ರಾಜ್ಯ ರಾಜಕಾರಣದಲ್ಲಿ ಕೊನೆಗೂ ಎರಡು ಪ್ರಮುಖ ಬದಲಾವಣೆಗಳಾಗಿವೆ. ಒಂದು- ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ. 2- ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನೇಮಕ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕದಲಿಸಿ, ಉತ್ತರಾಧಿಕಾರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ಸುಲಭವಾಗಿ ನೇಮಿಸಬಹುದೆಂದು ಹೈಕಮಾಂಡ್ ನಿರೀಕ್ಷಿಸಿರಲಿಲ್ಲ. ಈ ತೀರ್ಮಾನ ‘ತುಟ್ಟಿ’ ಆಗಬಹುದು; ತೀವ್ರ ಪ್ರತಿರೋಧ ಬರಬಹುದೆಂದು ಭಾವಿಸಿತ್ತು. ಹಿರಿಯ ನಾಯಕ ಘನತೆಯಿಂದ ನಡೆದುಕೊಂಡಿದ್ದಾರೆ. ಸಮಚಿತ್ತದಿಂದ ವರಿಷ್ಠರ ಸೂಚನೆ ಪಾಲಿಸಿದ್ದಾರೆ. ಆದರೀಗ ಅವರು ಬೇಸರದಲ್ಲಿದ್ದಾರೆ. ವರಿಷ್ಠರ ನಿರ್ಧಾರದ ಬಗ್ಗೆ ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ. ಬಹಿರಂಗವಾಗಿ ಏನೂ ಮಾತಾಡದೆ, ಮೌನವಾಗಿದ್ದಾರೆ.

ಮುಖ್ಯಮಂತ್ರಿ ಶಿವಕುಮಾರ್ ಬಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಿಸಲಾಗಿದೆ. ಅಳೆದು ತೂಗಿ ತೀರ್ಮಾನ ಮಾಡಲಾಗಿದೆ. ಒಕ್ಕಲಿಗ ಸಮಾಜದ ಶಿವಕುಮಾರ್ ಮುಖ್ಯಮಂತ್ರಿ. ಹಿಂದುಳಿದ ವರ್ಗದ ಹರಿಪ್ರಸಾದ್ ಪಿಸಿಸಿ ಅಧ್ಯಕ್ಷ, ದಲಿತ ಸಮಾಜದ ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿ. ಜಾತಿ ಲೆಕ್ಕಾಚಾರದ ಮೇಲೆ ಇವೆಲ್ಲವೂ ಆಗಿದೆ. ಪ್ರಬಲ ಜಾತಿಗಳ ಜತೆ ‘ಅಹಿಂದ’ ವರ್ಗವನ್ನು ಬೆಸೆಯುವ ಪ್ರಯತ್ನ ನಡೆದಿದೆ. ಸ್ಥಳೀಯ ಸಂಸ್ಥೆ, ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡೇ ನಿರ್ಧಾರ ಕೈಗೊಳ್ಳಲಾಗಿದೆ.

ಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಇನ್ನು ಕೆಲವರ ಕಣ್ಣಿತ್ತು. ಸತೀಶ್ ಜಾರಕಿಹೊಳಿ ಪ್ರಬಲ ಆಕಾಂಕ್ಷಿಯಾಗಿದ್ದರು. ಎಷ್ಟರ ಮಟ್ಟಿಗೆಂದರೆ, ‘2028ರ ವಿಧಾನಸಭೆ ಚುನಾವಣೆ ಬಳಿಕ ನಾನೂ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಹೇಳಿಕೊಂಡಿದ್ದರು. ಅಧ್ಯಕ್ಷ ಸ್ಥಾನ, ಸಚಿವ ಸ್ಥಾನ ಎರಡೂ ಕೇಳಿದರು. ಎರಡು ದೋಣಿಯಲ್ಲಿ ಕಾಲಿಡಲು ಮುಂದಾದರು. ಕೊನೆ ಕ್ಷಣದಲ್ಲಿ ಅಧ್ಯಕ್ಷ ಸ್ಥಾನ ತಪ್ಪಿಹೋಯಿತು. ಸಿದ್ದರಾಮಯ್ಯ ಅವರೊಂದಿಗೆ ಜಾರಕಿಹೊಳಿ ಸಂಬಂಧ ಹದಗೆಡದಿದ್ದರೆ ಅವರ ಆಸೆ ಬಹುಶಃ ಕೈಗೂಡುತಿತ್ತು. ‘ನನ್ನ ತಂದೆಯವರ ಬಳಿಕ ಜಾರಕಿಹೊಳಿಯವರೇ ಅಹಿಂದ ನಾಯಕ’ ಎಂದು ಯತೀಂದ್ರ ಸಮಾರಂಭವೊಂದರಲ್ಲಿ ಘೋಷಿಸಿದ್ದರು. ನಾಯಕತ್ವ ಬದಲಾವಣೆ ವೇಳೆ ಸತೀಶ್ ಇಟ್ಟ ಹೆಜ್ಜೆ ತಿರುಗು ಬಾಣವಾಯಿತು. ಒಳಗೊಳಗೇ ಡಿಕೆಶಿ ಜತೆ ಮಾಡಿಕೊಂಡಿದ್ದರೆನ್ನಲಾದ ಒಪ್ಪಂದದ ಪರಿಣಾಮ ಹರಿಪ್ರಸಾದ್ ಪರ ಮಾಜಿ ಮುಖ್ಯಮಂತ್ರಿ ಬ್ಯಾಟ್ ಬೀಸಿದರು. ಈಗಿರುವ ಪ್ರಶ್ನೆ, ಯಾರು ಅಧ್ಯಕ್ಷರಾದರು; ಹೇಗೆ ಅಧ್ಯಕ್ಷರಾದರು ಎನ್ನುವುದಲ್ಲ. ಪಿಸಿಸಿ ಅಧ್ಯಕ್ಷರು ತಮ್ಮ ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವರೇ ಎನ್ನುವುದಷ್ಟೇ.

ಹರಿಪ್ರಸಾದ್ ನಿನ್ನೆ, ಮೊನ್ನೆಯವರಲ್ಲ. ಕಾಂಗ್ರೆಸ್‌ಗೆ ಹಳಬರು. ಐದು ದಶಕಕ್ಕೂ ಹೆಚ್ಚು ಕಾಲ ಪಕ್ಷಕ್ಕಾಗಿ ದುಡಿದವರು. 1990ರಲ್ಲಿ ಮೊದಲ ಸಲ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2004, 2013, 2014ರಲ್ಲೂ ಮೇಲ್ಮನೆಯಲ್ಲಿದ್ದರು. 2020ರಿಂದ ವಿಧಾನ ಪರಿಷತ್ ಸದಸ್ಯ. ವಿರೋಧ ಪಕ್ಷದ ನಾಯಕರೂ ಆಗಿದ್ದರು. ಅವರ ಪಕ್ಷ ನಿಷ್ಠೆ ಪ್ರಶ್ನಿಸಲಾಗದು. ಪಕ್ಷಕ್ಕೆ ದ್ರೋಹ ಬಗೆದವರಲ್ಲ. ಪಕ್ಷ ಬಿಟ್ಟು ಆಚೀಚೆ ಹೋದವರಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಬೇರೆ ಬೇರೆ ಸಮಯದಲ್ಲಿ 19 ರಾಜ್ಯಗಳ ಹೊಣೆ ಹೊತ್ತಿದ್ದವರು. ಪಕ್ಷದ ಒಳಹೊರಗನ್ನು ಅರಿತವರು. ಹೈಕಮಾಂಡ್‌ಗೆ ಆಪ್ತರು. ಯಾವಾಗಲೋ ಸೂಕ್ತ ಸ್ಥಾನಮಾನ ಸಿಗಬೇಕಿತ್ತು. ಅವಕಾಶ ಸಿಗಲಿಲ್ಲವೆಂದು ಕೊರಗಿದವರಲ್ಲ, ಮರುಗಿದವರಲ್ಲ. ಗೊಣಗಿದವರಲ್ಲ. ಕೊನೆಗೂ ಪಕ್ಷದ ನಾಯಕತ್ವ ಹುಡುಕಿಕೊಂಡು ಬಂದಿದೆ.

ವಿಧಾನಸಭೆ ಚುನಾವಣೆಗೆ ಉಳಿದಿರುವುದು ಇನ್ನು ಎರಡು ವರ್ಷ. 2027ರ ಮಾರ್ಚ್‌ನಲ್ಲಿ ಬಜೆಟ್ ಮಂಡನೆಯಾದರೆ ರಾಜ್ಯ ಚುನಾವಣೆ ‘ಮೂಡ್’ಗೆ ಜಾರಲಿದೆ. ಅಷ್ಟರೊಳಗೆ ಪಕ್ಷ ಸಂಘಟಿಸಬೇಕು. ಮಂದಗತಿಯ ಆಡಳಿತಕ್ಕೆ ‘ಸಾಣೆ’ ಹಿಡಿಯಬೇಕು. ಸರಕಾರ- ಪಕ್ಷ ಸಮನ್ವಯದಲ್ಲಿ ಕೆಲಸ ಮಾಡಬೇಕು. ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರ ಮಧ್ಯೆ ಹೊಂದಾಣಿಕೆ ಬೇಕು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು ಪಡೆಯಿತು. 1989ರ ಬಳಿಕ ಅತೀ ಹೆಚ್ಚು ಅಂದರೆ, 135 ಸ್ಥಾನ ಗೆದ್ದಿತು. ಬಿಜೆಪಿ ಅಧಿಕಾರ ಕಳೆದುಕೊಂಡಿದ್ದಷ್ಟೇ ಅಲ್ಲ, ಕುಸಿದಿದ್ದು 66 ಸ್ಥಾನಗಳಿಗೆ. ಜೆಡಿಎಸ್‌ಗೆ ದಕ್ಕಿದ್ದು 19 ಸ್ಥಾನ. ಕಾಂಗ್ರೆಸ್ ಶೇ. 42.88ರಷ್ಟು ಮತ ಗಳಿಸಿತು. 2018ರಲ್ಲಿ ಗಳಿಸಿದ್ದಕ್ಕಿಂತ ಶೇ. 4.74ರಷ್ಟು ಹೆಚ್ಚು. ಆಗ ಸಿಕ್ಕಿದ್ದು 80 ಸೀಟುಗಳು. ವಿಧಾನಸಭೆ ಒಟ್ಟು ಸ್ಥಾನ 224. ಅಹಿಂದ ಜತೆ ಮೇಲ್ಜಾತಿಯವರೂ ವೋಟು ಕೊಟ್ಟರು. ಆಗ ಸಿದ್ದರಾಮಯ್ಯ ಬಿಡುವಿಲ್ಲದೆ ರಾಜ್ಯಾದ್ಯಂತ ಓಡಾಡಿದರು. ಡಿಕೆಶಿ ಸಾಥ್ ಕೊಟ್ಟರು. ಖರ್ಗೆಯವರ ಶ್ರಮ ಕಡಿಮೆ ಇರಲಿಲ್ಲ.

ಕಾಂಗ್ರೆಸ್ ಕೈಲಿ ಅಧಿಕಾರ ಇಲ್ಲದಿದ್ದಾಗ ಡಿಕೆಶಿ ಅಧ್ಯಕ್ಷರಾಗಿದ್ದರು. ಆರೂವರೆ ವರ್ಷದ ಬಳಿಕ ಅಧ್ಯಕ್ಷ ಸ್ಥಾನ ಬಿಟ್ಟಿದ್ದಾರೆ. ಈಗ ಪಕ್ಷ ಅಧಿಕಾರದಲ್ಲಿದೆ. ಹರಿಪ್ರಸಾದ್‌ಗಿದು ಪ್ಲಸ್ ಪಾಯಿಂಟ್. ಅಧಿಕಾರವಿಲ್ಲದಾಗ ಪಕ್ಷ ಕಟ್ಟುವುದಕ್ಕೂ ಅಧಿಕಾರ ಇದ್ದಾಗ ಪಕ್ಷ ಕಟ್ಟುವುದಕ್ಕೂ ವ್ಯತ್ಯಾಸವಿದೆ. ಅಧಿಕಾರ ಇಲ್ಲದಿದ್ದರೆ ಪಕ್ಷ ಉಳಿಯುವುದು ಕಷ್ಟ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಮಹಾರಾಷ್ಟ್ರದಲ್ಲಿ ಶಿವಸೇನೆ (ಯುಬಿಟಿ) ಹೋಳಾದ ಉದಾಹರಣೆಗಳು ಕಣ್ಣ ಮುಂದಿವೆ. ಸಾಂದರ್ಭಿಕವಾಗಿ ಈ ವಿಷಯ ಪ್ರಸ್ತಾಪಿಸಲಾಗಿದೆ ಅಷ್ಟೇ. ಮುಂಬರುವ ವಿಧಾನಸಭೆ ಚುನಾವಣೆ ಸೋತರೆ ರಾಜ್ಯದಲ್ಲಿ ಕಾಂಗ್ರೆಸ್‌ಗೂ ಈ ಗತಿ ಬರಬಹುದು. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಒಡೆದು, ಬೆಂಬಲಿಗರ ಜತೆ ಬಿಜೆಪಿ ಸೇರಿ ಎನ್‌ಡಿಎ ಸರಕಾರದಲ್ಲಿ ಸಚಿವರಾಗಿಲ್ಲವೇ?

ಸಿದ್ದರಾಮಯ್ಯನವರ ರಾಜೀನಾಮೆಯಿಂದ ಅಹಿಂದ ವರ್ಗ ಹೇಗೆ ವರ್ತಿಸುತ್ತದೆ ಎಂದು ಹೇಳುವುದು ಕಷ್ಟ. ಹರಿಪ್ರಸಾದ್ ಹಿಂದುಳಿದ ಈಡಿಗ ಜಾತಿಯವರು. ಹೈಕಮಾಂಡ್ ಲೆಕ್ಕಾಚಾರಗಳು ಸರಿಯಾದರೆ ಮುಂದಿನ ಚುನಾವಣೆಯಲ್ಲಿ ಅಹಿಂದ ಮತಗಳು ಚದುರದಿರಬಹುದು. ಈ ಸಮುದಾಯದ ಮತಗಳು ಹರಿದು ಹಂಚಿಹೋಗದಂತೆ ಹಿಡಿದಿಡುವ ಜವಾಬ್ದಾರಿ ಅಧ್ಯಕ್ಷರ ಮೇಲಿದೆ. ಅದನ್ನು ಮಾಡುವ ತಾಕತ್ತೂ ಇದೆ. ಜಾರಕಿಹೊಳಿ ಭವಿಷ್ಯದ ಅಹಿಂದ ನಾಯಕ ಎಂದು ಯತೀಂದ್ರ ಕೊಟ್ಟ ‘ಜಡ್ಜ್ ಮೆಂಟ್’ ಹುಸಿಗೊಳಿಸುವ ಅವಕಾಶ ಹರಿಪ್ರಸಾದ್‌ಗೆ ಸಿಕ್ಕಿದೆ. ‘ಯಾರಿಗಿಂತಲೂ ತಾವೇನು ಕಡಿಮೆಯಿಲ್ಲ. ಅಹಿಂದ ಯಾರ ಜಾಗೀರು ಅಲ್ಲ’ ಎಂದು ನಿರೂಪಿಸಬೇಕಿದೆ. ಹರಿಪ್ರಸಾದ್ ಅವರಿಗೆ ದಿಲ್ಲಿ ರಾಜಕಾರಣ ಗೊತ್ತು. ಹಳ್ಳಿ ರಾಜಕಾರಣದ ಅನುಭವವಿಲ್ಲ. ಇದು ಅವರ ದೌರ್ಬಲ್ಯ. ಉಳಿದಿರುವ ಸಮಯದಲ್ಲಿ ಹಳ್ಳಿಗಳನ್ನು ಸುತ್ತಬೇಕಿದೆ. ಜನರ ನಡುವೆ ಹೋಗಬೇಕಿದೆ. ಸಮಸ್ಯೆಗಳನ್ನು ಕೇಳಬೇಕಿದೆ. ಸರಕಾರ ಜಾರಿಗೊಳಿಸಿರುವ ಗ್ಯಾರಂಟಿಗಳ ಬಗ್ಗೆ ಸಚಿವರಾಗಲೀ, ಶಾಸಕರಾಗಲೀ ಮಾತಾಡುತ್ತಿಲ್ಲ. ಫಲಾನುಭವಿಗಳೇ ಗ್ಯಾರಂಟಿ ವಿರುದ್ಧ ಮಾತಾಡುತ್ತಿದ್ದಾರೆ. ಈ ಗೊಂದಲ ನಿವಾರಣೆ ಮಾಡಬೇಕಿದೆ. ಹಣದುಬ್ಬರ, ಬೆಲೆ ಏರಿಕೆ ಜನರ ಬದುಕನ್ನು ಸುಡುತ್ತಿದೆ. ಆ ಬಗ್ಗೆ ಚಳವಳಿ ರೂಪಿಸಬೇಕಿದೆ. ಇಷ್ಟು ದಿನ ನಾಯಕತ್ವಕ್ಕಾಗಿ ಕಿತ್ತಾಟ ನಡೆಯಿತು. ಖಾತೆಗಳ ಕಚ್ಚಾಟ ಮುಗಿಯಿತು. ಸಂಪುಟ ಪೂರ್ಣ ವಿಸ್ತರಣೆಯಾಗಿಲ್ಲ. ವಿಸ್ತರಣೆ ಇನ್ಯಾವ ಬಿಕ್ಕಟ್ಟು ಸೃಷ್ಟಿಸುವುದೋ?

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಡಿಕೆಶಿ ಸಂಪುಟದಲ್ಲಿ ಬಹುತೇಕ ಹಳಬರೇ ಇದ್ದಾರೆ. ಯು.ಟಿ. ಖಾದರ್, ಯತಿಂದ್ರ ಹೊಸಬರು. ಖಾದರ್ ಹಿಂದೆ ಸಚಿವರಾಗಿದ್ದವರು. ಇದೊಂದು ರೀತಿಯಲ್ಲಿ ‘ಬಾಟಲ್ ಹೊಸದು. ಮದ್ಯ ಹಳೆಯದು’ ಎನ್ನುವಂತಿದೆ. ಮೂರು ವರ್ಷ ಸಿದ್ದರಾಮಯ್ಯನವರ ಸಂಪುಟದಲ್ಲಿದ್ದ ಸಚಿವರ ಕಾರ್ಯಕ್ಷಮತೆ ಒರೆಗೆ ಹಚ್ಚಿಲ್ಲ. ಈ ಕೆಲಸ ಹರಿಪ್ರಸಾದ್ ಹೆಗಲ ಮೇಲಿದೆ. ಅದಕ್ಷ ಸಚಿವರ ಕಿವಿ ಹಿಂಡಬೇಕಿದೆ. ಹಾಗಾದರೆ ಮಾತ್ರ ಸರಕಾರಕ್ಕೆ, ಪಕ್ಷಕ್ಕೆ ಒಳ್ಳೆ ಹೆಸರು ಬರುತ್ತದೆ. ಇಲ್ಲದಿದ್ದರೆ ಬಿಜೆಪಿಗೆ ಕಲಿಸಿದ ಪಾಠವನ್ನೇ ಮತದಾರರು ಕಾಂಗ್ರೆಸ್‌ಗೂ ಕಲಿಸುವುದು ನಿಶ್ಚಿತ.

‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಹರಿಪ್ರಸಾದ್ ಮುಂದಿರುವ ‘ಪೆಡಂಭೂತ’. ಇದನ್ನು ಎದುರಿಸಿದರೆ ಚುನಾವಣೆ ಗೆದ್ದಂತೆ. ಬಿಜೆಪಿಯಲ್ಲಿ ಎಸ್‌ಐಆರ್ ಜವಾಬ್ದಾರಿ ನಿಭಾಯಿಸಲು ಬದ್ಧ ಕಾರ್ಯಕರ್ತರ ಪಡೆ ಇದೆ. ಆದರೆ, ಕಾಂಗ್ರೆಸ್‌ಗೆ ತಳಮಟ್ಟದ ಕಾರ್ಯಕರ್ತರಿಲ್ಲ. ಮತದಾರರ ಪಟ್ಟಿಯಿಂದ ತೆಗೆಯುವ ಪ್ರತೀ ಹೆಸರು ಪರಿಶೀಲಿಸಬೇಕು. ಈ ಹೊಣೆ ಹೊರಲು ‘ಬೂತ್ ಮಟ್ಟದ ಏಜೆಂಟ್’ (ಬಿಎಲ್‌ಎ) ಬೇಕು. ಸತ್ತವರು, ಊರು ಬಿಟ್ಟವರು, ಎರಡು ಅಥವಾ ಹೆಚ್ಚಿನ ಕಡೆ ಹೆಸರಿದ್ದವರನ್ನು ತೆಗೆದರೆ ಪರವಾಗಿಲ್ಲ. ಅರ್ಹರ ಹೆಸರುಗಳನ್ನು ಕೈಬಿಟ್ಟರೆ ನೋಡುವವರು ಯಾರು? ಕೇಳುವವರು ಯಾರು? ‘ಎಸ್‌ಐಆರ್ ಪ್ರಕ್ರಿಯೆಯಿಂದ ಸಮಸ್ಯೆ ಆಗುವುದಿಲ್ಲ’ ಎಂದು ವಾದಿಸುವವರಿದ್ದಾರೆ. ಕೇರಳ, ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶದ ಮೇಲೆ ಎಸ್‌ಐಆರ್ ಪರಿಣಾಮ ಬೀರಿಲ್ಲವೆಂದು ಹೇಳುವವರಿದ್ದಾರೆ. ಬಿಹಾರ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಆಗಿರುವ ಪರಿಣಾಮಗಳ ಬಗ್ಗೆ ಅವರ ಬಳಿ ಉತ್ತರವಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಸಮಿತಿಗಳಿಲ್ಲ. ಪ್ರದೇಶ ಕಾಂಗ್ರೆಸ್ ಸಮಿತಿ ಪುನರ‌್ರಚನೆ ಆಗಿಲ್ಲ. ಪರಂಪರಾಗತವಾಗಿ ಕಾಂಗ್ರೆಸ್ ಬೆಂಬಲಿಸಿರುವ ಮತದಾರರಿಂದಾಗಿ ಈ ಪಕ್ಷ ಉಳಿದುಕೊಂಡಿದೆ. ‘ಅಧಿಕಾರ ಬೇಕು; ಜವಾಬ್ದಾರಿ ಬೇಡ’ ಎಂಬ ಧೋರಣೆ ಕಾರ್ಯಕರ್ತರದ್ದು. ನಾಯಕರ ಹಿಂದೆ ಬಾಲಂಗೋಚಿ ರೀತಿ ಸುತ್ತಾಡುವ, ಪ್ರಚಾರಪ್ರಿಯ ಕಾರ್ಯಕರ್ತರೇ ಹೆಚ್ಚು. ಪಕ್ಷ ಸಂಘಟನೆಗೆ ದುಡಿಯುವವರಿಲ್ಲ. ನಾಯಕರಿಗೆ ಜೈಕಾರ ಹಾಕಿ, ವೇದಿಕೆಗಳಲ್ಲಿ ಫೋಟೊಗೆ ಪೋಸ್ ಕೊಟ್ಟು ಹೋಗುವವರೇ ಎಲ್ಲ. ಬೆಂಗಳೂರು ಅರಮನೆ ಮೈದಾನದಲ್ಲಿ ಹರಿಪ್ರಸಾದ್ ಅಧಿಕಾರ ತೆಗೆದುಕೊಳ್ಳುತ್ತಿದ್ದಾಗ, ‘ಡಿ.ಕೆ, ಡಿ.ಕೆ’ ಎಂದು ಕೂಗಿದ ಕಾರ್ಯಕರ್ತರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗದರಿಸಿ, ಬೆವರಿಳಿಸಿದ ಪ್ರಸಂಗ ಇದಕ್ಕೆ ತಾಜಾ ಉದಾಹರಣೆ.

ಮೊನ್ನೆ ವಿಧಾನ ಪರಿಷತ್ ಚುನಾವಣೆ ಮುಗಿದಿದೆ. ಬಿಜೆಪಿ, ಜೆಡಿಎಸ್‌ನಿಂದ ಅಡ್ಡ ಮತದಾನವೂ ಆಗಿದೆ. ಕಾಂಗ್ರೆಸ್ ಮೇಲುಗೈ ಪಡೆದಿದೆ. ಇನ್ನು ಉಳಿದಿರುವುದು ಹಿರಿಯೂರು ಹಾಗೂ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ. ಈ ಚುನಾವಣೆ ಡಿಕೆಶಿ ಮತ್ತು ಹರಿಪ್ರಸಾದ್ ಇಬ್ಬರಿಗೂ ಅಗ್ನಿ ಪರೀಕ್ಷೆ. ಇವೆರಡೂ ಮೂಲತಃ ಕಾಂಗ್ರೆಸ್ ಕ್ಷೇತ್ರಗಳು. ಅಧಿಕಾರದಲ್ಲಿರುವ ಪಕ್ಷಕ್ಕೆ ಉಪಚುನಾವಣೆ ಗೆಲ್ಲುವುದು ದೊಡ್ಡ ವಿಷಯವಲ್ಲ. ಸೋತರಷ್ಟೇ ಸುದ್ದಿ. ಸದ್ಯಕ್ಕಿರುವುದು ಸಂಪುಟ ವಿಸ್ತರಣೆ ಸರ್ಕಸ್. ಎಲ್ಲ ಜಾತಿ, ಧರ್ಮ, ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರಕಿಸಬೇಕು. ಕೇವಲ ಮುಖ್ಯಮಂತ್ರಿಗಷ್ಟೇ ಅಲ್ಲ, ಅಧ್ಯಕ್ಷರಿಗೂ ಒತ್ತಡವಿರುತ್ತದೆ. ಸಂಪುಟದಲ್ಲಿ ಅವಕಾಶ ಸಿಗದಿದ್ದರೆ ನಿಗಮ-ಮಂಡಳಿ ಮತ್ತಿತರ ಕಡೆ ಅವಕಾಶ ದೊರಕಿಸಬೇಕಿದೆ. ಈ ಪ್ರಕ್ರಿಯೆಯಲ್ಲಿ ಅಧ್ಯಕ್ಷರನ್ನು ಡಿಕೆಶಿ ವಿಶ್ವಾಸಕ್ಕೆ ತೆಗೆದುಕೊಳ್ಳವರೇ? ಹರಿಪ್ರಸಾದ್ ಅಧಿಕಾರ ಚಲಾಯಿಸುವರೇ? ಎಲ್ಲ ಪ್ರಶ್ನೆಗಳಿಗೂ ಸಂಪುಟ ವಿಸ್ತರಣೆ ಬಳಿಕ ಉತ್ತರ ಸಿಗಲಿದೆ.

ಸಿದ್ದರಾಮಯ್ಯ ಸದ್ಯಕ್ಕೆ ಹರಿಪ್ರಸಾದ್ ಅವರ ಬೆನ್ನಿಗಿದ್ದಾರೆ. ಹೀಗಾಗಿ, ಡಿಕೆಶಿ ಕ್ಯಾಂಪ್‌ಗಿಂತ ಹರಿಪ್ರಸಾದ್ ಕ್ಯಾಂಪ್ ಪ್ರಬಲವಾಗಿರುವಂತೆ ಕಾಣುತ್ತಿದೆ. ಹೈಕಮಾಂಡ್ ನಾಯಕರು ಡಿಕೆಶಿ ಬೆಂಬಲಕ್ಕಿರುವುದರಿಂದ ಯಾರು ಹೆಚ್ಚು, ಯಾರು ಕಡಿಮೆ ಎಂದು ತೂಕ ಹಾಕುವುದು ಕಷ್ಟ. ಶಿವಕುಮಾರ್ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ರಾಜ್ಯಭಾರ ಕಷ್ಟವಲ್ಲ. ಒಟ್ಟಾರೆ ಡಿಕೆಶಿ ಹಾಗೂ ಬಿಕೆಎಚ್ ಭಿನ್ನಾಭಿಪ್ರಾಯವಿಲ್ಲದೆ ಒಮ್ಮತದಿಂದ ಕೆಲಸ ಮಾಡಿದರೆ ಎರಡು ವರ್ಷದಲ್ಲಿ ‘ಜಾದು’ ಮಾಡಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹೊನಕೆರೆ ನಂಜುಂಡೇಗೌಡ

contributor

Similar News