ಮುದ್ದೇಬಿಹಾಳ: ಕೃಷ್ಣಾ ನಾರಾಯಣಪುರ ಪ್ರದೇಶದಲ್ಲಿ ಆಲಮಟ್ಟಿ ಎಡದಂಡೆ ಕಾಲುವೆ ನೀರನ್ನು ನಂಬಿಕೊಂಡು ವಿವಿಧ ಬೆಳೆಗಳನ್ನು ಬೆಳೆದಿರುವ ರೈತರು, ಇದೀಗ ನೀರಿನ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಾಲುವೆಯ ಕೊನೆಯ ಭಾಗದಲ್ಲಿರುವ ರೈತರ ಜಮೀನುಗಳಿಗೆ ಸಮರ್ಪಕ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಬೆಳೆ ಕಟಾವಿನ ನಿರೀಕ್ಷೆಯಲ್ಲಿದ್ದ ರೈತರು ಆತಂಕಕ್ಕೀಡಾಗಿದ್ದಾರೆ.

ಪ್ರತಿ ಎಕರೆಗೆ ಸುಮಾರು 40 ಸಾವಿರ ರೂ.ಗೂ ಅಧಿಕ ವೆಚ್ಚ ಮಾಡಿ ಬೆಳೆ ಬೆಳೆದಿರುವ ರೈತರು, ಬೆಳೆ ಕಾಳು ಕಟ್ಟುವ ಹಂತದಲ್ಲಿ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಿರಂತರವಾಗಿ ನೀರು ಹರಿಸುವ ಅಗತ್ಯವಿದ್ದು, ಒಂದು ದಿನವೂ ಸಮರ್ಪಕವಾಗಿ ನೀರು ಸಿಗದಿದ್ದರೆ ಇಳುವರಿ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕೋಳೂರು ಮುಖ್ಯ ಕಾಲುವೆಯಿಂದ ಸುಮಾರು 15 ಕಿ.ಮೀ. ವ್ಯಾಪ್ತಿಯ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪಬೇಕಿದೆ. ಆದರೆ ಹಡಗಲಿ, ಬೈಲಕೂರ, ಮದರಿ, ಗರಸಂಗಿ ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂದು ರೈತರು ದೂರಿದ್ದಾರೆ. 16ನೇ ಔಟ್‌ಲೆಟ್-2 ಮೂಲಕ ಅಗತ್ಯ ಪ್ರಮಾಣದಲ್ಲಿ ನೀರು ಹರಿಸಿ ಕೆಳಭಾಗದ ರೈತರಿಗೂ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆದ ಹತ್ತಿ, ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಕಾಲುವೆ ನೀರನ್ನು ನಂಬಿಕೊಂಡು ಬೆಳೆ ಬೆಳೆದಿರುವ ರೈತರಿಗೆ ನೀರು ಸಿಗದಿರುವುದು ಮತ್ತಷ್ಟು ಸಂಕಷ್ಟ ತಂದಿದೆ.

ಇದಲ್ಲದೆ, ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿವೆ. ಕಾಲುವೆ ಸ್ವಚ್ಛಗೊಳಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕಾಲುವೆಯ ಕೊನೆಯ ಹಂತದವರೆಗೂ ಸಮರ್ಪಕವಾಗಿ ನೀರು ತಲುಪುವಂತೆ ಸಂಬಂಧಪಟ್ಟ ಕೆಬಿಜೆಎನ್‌ಎಲ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಲಭ್ಯವಿರುವ ನೀರನ್ನು ಸಮರ್ಪಕವಾಗಿ ಹಂಚಿಕೆ ಮಾಡಿ ಕೆಳಭಾಗದ ಪ್ರತಿಯೊಬ್ಬ ರೈತರ ಜಮೀನಿಗೂ ತಲುಪಿಸುವ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಂದೇನವಾಝ್ ಕುಮಸಿ

contributor