ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಷ್ಟೇ ಪ್ರಮುಖವಾದದ್ದು ನಾಗರಿಕ ಸಮಾಜದ ಜಾಗೃತ ಧ್ವನಿ. ಜನಸಾಮಾನ್ಯರ ಬದುಕಿಗೆ ಕಂಟಕ ತರುವ, ಸಾಂವಿಧಾನಿಕ ಹಕ್ಕನ್ನು ಕಸಿಯುವ ಹಾಗೂ ಪರಿಸರ ನಾಶಕ್ಕೆ ಕಾರಣವಾಗುವ ಯೋಜನೆಗಳನ್ನು ವಿರೋಧಿಸುವುದು, ಅದಕ್ಕಾಗಿ ಬೀದಿಗೆ ಇಳಿದು ಹೋರಾಡುವುದು ಮತ್ತು ಆಡಳಿತ ವರ್ಗವನ್ನು ಧೈರ್ಯವಾಗಿ ಪ್ರಶ್ನಿಸುವುದು ಪ್ರಜಾಪ್ರಭುತ್ವದ ಪರಮೋಚ್ಚ ಕರ್ತವ್ಯವೇ ಹೊರತು ಅಪರಾಧವಲ್ಲ. ಆದರೆ, ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಇಂತಹ ನ್ಯಾಯಯುತ ಪ್ರಶ್ನೆಗಳನ್ನು ಎತ್ತುವ ನಾಗರಿಕರನ್ನು, ವಿಜ್ಞಾನಿಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಪರಿಸರವಾದಿಗಳನ್ನು ‘ಎಡಪಂಥೀಯರು’, ‘ದೇಶದ್ರೋಹಿಗಳು’ ಅಥವಾ ‘ಅಭಿವೃದ್ಧಿ ವಿರೋಧಿಗಳು’ ಎಂದು ಹಣೆಪಟ್ಟಿ ಕಟ್ಟಿ ಧ್ವನಿ ಅಡಗಿಸುವ ಯೋಜಿತ ಅಜೆಂಡಾ ಮತ್ತು ಮನಸ್ಥಿತಿ ಬೆಳೆಯುತ್ತಿರುವುದು ತೀವ್ರ ಆತಂಕಕಾರಿ ಸಂಗತಿಯಾಗಿದೆ.

ಪ್ರಜಾಪ್ರಭುತ್ವ ಎಂದರೆ ಕೇವಲ ಐದು ವರ್ಷಕ್ಕೊಮ್ಮೆ ಮತದಾನ ಮಾಡುವುದಷ್ಟೇ ಅಲ್ಲ. ಸರಕಾರದ ಪ್ರತಿಯೊಂದು ನಿರ್ಧಾರವನ್ನು ವಿಮರ್ಶಾತ್ಮಕವಾಗಿ ನೋಡುವುದು. ದೇಶದ ನೈಸರ್ಗಿಕ ಸಂಪನ್ಮೂಲಗಳು ಕೆಲವೇ ಕೆಲವು ಉದ್ಯಮಪತಿಗಳ ಮತ್ತು ಶ್ರೀಮಂತರ ಪಾಲಾಗುತ್ತಿದ್ದರೆ, ಅದನ್ನು ವಿರೋಧಿಸುವುದು ಪ್ರತಿಯೊಬ್ಬ ಸತ್ಪ್ರಜೆಯ ಧರ್ಮ. ಪರಿಸರ ನಾಶದಿಂದ ಉಂಟಾಗುವ ಹವಾಮಾನ ವೈಪರೀತ್ಯ, ಜಲಕ್ಷಾಮ ಹಾಗೂ ಭೂಕುಸಿತಗಳ ಅಂತಿಮ ಬಲಿಪಶುಗಳು ಅದೇ ಸಾಮಾನ್ಯ ಜನರು. ತಮ್ಮ ಬದುಕಿನ ಹಕ್ಕಿಗಾಗಿ ಹಾಗೂ ಭವಿಷ್ಯದ ಪೀಳಿಗೆಯ ಉಳಿವಿಗಾಗಿ ಹೋರಾಡುವ ಜನಸಾಮಾನ್ಯರನ್ನು ‘ದೇಶದ್ರೋಹಿ’ ಎಂದು ಕರೆಯುವುದು, ಸಂವಿಧಾನದ ಮೂಲ ವ್ಯಾಖ್ಯಾನವನ್ನೇ ತಿರುಚಿದಂತೆ.

ಜಗತ್ತಿನಾದ್ಯಂತ ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿಹಿಡಿಯಲು ಜನ ಸಮುದಾಯಗಳು ಸರಕಾರದ ವಿರುದ್ಧ ಧ್ವನಿ ಎತ್ತಿದ ಇತಿಹಾಸವಿದೆ. ಇತ್ತೀಚೆಗೆ ಫ್ರಾನ್ಸ್ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಖಾಸಗೀಕರಣ ಮತ್ತು ಸುಧಾರಣೆಗಳ ವಿರುದ್ಧ ಹಾಗೂ ವಿದ್ಯಾರ್ಥಿ-ಶಿಕ್ಷಕರ ಹಕ್ಕುಗಳ ರಕ್ಷಣೆಗಾಗಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರು ಬೀದಿಗೆ ಇಳಿದು ಹೋರಾಟ ನಡೆಸಿದರು. ಈ ಬೃಹತ್ ಪ್ರತಿಭಟನೆಯು ಸರಕಾರದ ಏಕಪಕ್ಷೀಯ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ಮಾಡಿತೇ ಹೊರತು, ಅಲ್ಲಿನ ಸರಕಾರ ಪ್ರತಿಭಟನಾಕಾರರನ್ನು ‘ದೇಶದ್ರೋಹಿಗಳು’ ಎಂದು ಮುದ್ರೆಯೊತ್ತಿ ಜೈಲಿಗಟ್ಟಲಿಲ್ಲ.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೂಲತತ್ವವೇ ‘ಅಸಹಕಾರ’ ಮತ್ತು ‘ಪ್ರಶ್ನಿಸುವಿಕೆ’. ಬ್ರಿಟಿಷರ ಆಡಳಿತವನ್ನು ಪ್ರಶ್ನಿಸಿದ ‘ಸ್ವದೇಶಿ ಚಳವಳಿ’ಯನ್ನು ಅಂದು ಬ್ರಿಟಿಷರು ದೇಶದ್ರೋಹ ಎಂದೇ ಕರೆದಿದ್ದರು. ಸ್ವತಂತ್ರ ಭಾರತದಲ್ಲಿ ನಡೆದ ‘ಚಿಪ್ಕೋ ಚಳವಳಿ’, ‘ನರ್ಮದಾ ಬಚಾವೋ ಆಂದೋಲನ’ ಅಥವಾ ಕರ್ನಾಟಕದಲ್ಲಿ ನಡೆದ ‘ಅಪ್ಪಿಕೋ ಚಳವಳಿ’ಗಳ ಉದ್ದೇಶ ಕಾಡು ಮತ್ತು ನದಿಗಳನ್ನು ರಕ್ಷಿಸುವುದಾಗಿತ್ತು. ಇವುಗಳನ್ನು ಅಭಿವೃದ್ಧಿ ವಿರೋಧಿ ಎನ್ನಲು ಸಾಧ್ಯವೇ?

ಯಾವುದೇ ಒಂದು ಕಲ್ಯಾಣ ರಾಜ್ಯದಲ್ಲಿ ಆಡಳಿತಾರೂಢ ಸರಕಾರಗಳು ಕೈಗೊಳ್ಳುವ ಯೋಜನೆಗಳು ಕೆಲವೇ ಕೆಲವು ಕಾರ್ಪೊರೇಟ್ ಶಕ್ತಿಗಳ ಲಾಭಕ್ಕಾಗಿ ಜನಸಾಮಾನ್ಯರನ್ನು ಎತ್ತಂಗಡಿ ಮಾಡುವಂತಿದ್ದರೆ, ಅದನ್ನು ಪ್ರಶ್ನಿಸುವುದು ನಾಗರಿಕ ಸಮಾಜದ ಕರ್ತವ್ಯ. ಆದರೆ, ಈ ಧ್ವನಿಯನ್ನು ಅಡಗಿಸಲು ‘ಎಡಪಂಥೀಯ’ ಅಥವಾ ‘ರಾಷ್ಟ್ರವಿರೋಧಿ’ ಎಂಬ ಹಣೆಪಟ್ಟಿಗಳನ್ನು ಬಳಸುವುದು ಆಡಳಿತಗಾರರ ವೈಫಲ್ಯವನ್ನು ಮುಚ್ಚಿಹಾಕುವ ಸುಲಭ ತಂತ್ರವಾಗಿದೆ.

ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದಿದ್ದಾಗ, ವ್ಯಕ್ತಿತ್ವ ಹರಣ ಮಾಡುವುದು ಮತ್ತು ಭಯದ ವಾತಾವರಣ ನಿರ್ಮಿಸುವುದು ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಕಂಟಕ. ವಿಚಾರವಾದ, ಪರಿಸರ ಕಾಳಜಿ ಮತ್ತು ಜನಪರ ನಿಲುವುಗಳು ಯಾವುದೇ ಒಂದು ನಿರ್ದಿಷ್ಟ ಸಿದ್ಧಾಂತಕ್ಕಷ್ಟೇ ಸೀಮಿತವಲ್ಲ. ಅವು ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳು.

ನೂರಾರು ದಿನಗಳ ಕಾಲ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಶಾಂತಿಯುತ ಹೋರಾಟವು ಭಾರತೀಯ ಪ್ರಜಾಪ್ರಭುತ್ವದ ದೃಢತೆಯನ್ನು ಜಗತ್ತಿಗೆ ಸಾರಿತು. ಅಂತಿಮವಾಗಿ ಸರಕಾರವು ಮಣಿದು ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು. ಇದು ಭಾರತದ ಜನಸಾಮಾನ್ಯರ ಸಾಮೂಹಿಕ ಶಕ್ತಿಗೆ ಸಾಕ್ಷಿಯಾಯಿತು. ಆದರೂ, ಇಂತಹ ಹೋರಾಟಗಳ ಹಾದಿ ಸುಲಭವಾಗಿರಲಿಲ್ಲ. ಪ್ರತಿಭಟನಾಕಾರರ ಮೇಲೆ ದೇಶದ್ರೋಹದ ಆರೋಪಗಳು, ಮಾಧ್ಯಮಗಳಲ್ಲಿ ಅವರ ವಿರುದ್ಧ ಅಪಪ್ರಚಾರ ಮತ್ತು ಕಾನೂನು ಸುವ್ಯವಸ್ಥೆಯ ನೆಪದಲ್ಲಿ ದಮನಕಾರಿ ಕ್ರಮಗಳು ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಗಂಭೀರ ಕಳವಳ ಮೂಡಿಸಿದವು.

ಫ್ರೆಂಚ್ ಕ್ರಾಂತಿಯ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲ ತತ್ವಗಳನ್ನು ಇಂದಿಗೂ ತಮ್ಮ ರಕ್ತದಲ್ಲಿ ಉಳಿಸಿಕೊಂಡಿರುವ ಫ್ರಾನ್ಸ್ನ ನಾಗರಿಕರ ಹೋರಾಟಕ್ಕೂ ಭಾರತೀಯರ ಹೋರಾಟದ ಸಂಸ್ಕೃತಿಯಲ್ಲಿನ ವ್ಯತ್ಯಾಸಗಳು ಸಾಕಷ್ಟಿವೆ.

ಫ್ರಾನ್ಸ್ನಲ್ಲಿ ಬಲವಾದ ಕಾರ್ಮಿಕ ಸಂಘಟನೆಗಳಿದ್ದು, ಅವು ಕರೆ ನೀಡುವ ಮುಷ್ಕರಗಳು ಇಡೀ ದೇಶವನ್ನು ಒಟ್ಟಿಗೆ ನಿಲ್ಲಿಸುತ್ತವೆ. ಆದರೆ ಭಾರತದಲ್ಲಿ ಅಸಂಘಟಿತ ಕ್ಷೇತ್ರದ ಕಾರ್ಮಿಕರ ಸಂಖ್ಯೆ ದೊಡ್ಡದಿದ್ದು, ಒಗ್ಗಟ್ಟಿನ ಕೊರತೆ ಹಾಗೂ ರಾಜಕೀಯ ವಿಭಜನೆಯಿಂದಾಗಿ ಬಲವಾದ ಸಾಮೂಹಿಕ ಪ್ರತಿಭಟನೆಗಳು ಕೆಲವೊಮ್ಮೆ ದುರ್ಬಲಗೊಳ್ಳುತ್ತವೆ.

ಫ್ರಾನ್ಸ್ನಲ್ಲಿ ನಾಗರಿಕರ ಪ್ರತಿಭಟನಾ ಹಕ್ಕನ್ನು ಪ್ರಜಾಪ್ರಭುತ್ವದ ಆಧಾರಸ್ತಂಭವೆಂದು ಒಪ್ಪಿಕೊಳ್ಳಲಾಗಿದೆ. ಇದಕ್ಕೆ ಹೋಲಿಸಿದರೆ, ಭಾರತದಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಸೆಕ್ಷನ್ 144, ಇಂಟರ್ನೆಟ್ ನಿಷೇಧ ಮತ್ತು ತಡೆಗೋಡೆಗಳ (ಬ್ಯಾರಿಕೇಡ್) ಬಳಕೆ ಹೆಚ್ಚಾಗುತ್ತಿರುವುದು ಆತಂಕಕಾರಿ.

ಅಲ್ಲಿಯ ಮಾಧ್ಯಮಗಳು ಸರಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡುತ್ತವೆ. ಆದರೆ ಭಾರತದಲ್ಲಿ ಕಾರ್ಪೊರೇಟ್ ಮಾಧ್ಯಮಗಳ ಪ್ರಭಾವದಿಂದಾಗಿ ಜನರ ನಿಜವಾದ ಸಮಸ್ಯೆಗಳು ಮತ್ತು ಪ್ರತಿಭಟನೆಗಳು ಮೂಲೆಗುಂಪಾಗುತ್ತಿವೆ.

ಪ್ರಸ್ತುತ ದಿನಗಳಲ್ಲಿ ಜನ ಸಾಮಾನ್ಯರ ಹೋರಾಟವನ್ನು ದೇಶದ್ರೋಹ ಎಂದು ಕರೆಯುವ ಹಿಂದಿನ ಮನಸ್ಥಿತಿಯನ್ನು ನಾವು ಅರಿಯಬೇಕಿದೆ. ಇವುಗಳಲ್ಲಿ ಪ್ರಮುಖವಾದದ್ದು ರಾಷ್ಟ್ರೀಯತೆ ಮತ್ತು ಸರಕಾರದ ನಡುವಿನ ಸಮೀಕರಣ. ಆಡಳಿತ ನಡೆಸುವ ಸರಕಾರ ಅಥವಾ ರಾಜಕೀಯ ಪಕ್ಷವನ್ನು ‘ದೇಶ’ ಎಂದೇ ಬಿಂಬಿಸುವುದು. ಸರಕಾರವನ್ನು ವಿರೋಧಿಸುವುದು ಎಂದರೆ ದೇಶವನ್ನು ವಿರೋಧಿಸಿದಂತೆ ಎಂಬ ತಪ್ಪು ಕಲ್ಪನೆಯನ್ನು ಸೃಷ್ಟಿಸಲಾಗುತ್ತಿದೆ. ಇದರಿಂದಾಗಿ ಸರಕಾರದ ವಿರುದ್ಧದ ಯಾವುದೇ ಟೀಕೆಯನ್ನು ದೇಶದ ವಿರುದ್ಧದ ಅಪರಾಧದಂತೆ ಬಿಂಬಿಸಲು ಅನುಕೂಲವಾಗುತ್ತದೆ.

ಇನ್ನು ರಾಜಕೀಯ ಧ್ರುವೀಕರಣ. ಇಂದಿನ ರಾಜಕೀಯ ವಾತಾವರಣದಲ್ಲಿ ನಮ್ಮವರು ಮತ್ತು ವಿರೋಧಿಗಳು ಎಂದು ವಿಭಜಿಸುವ ಪ್ರವೃತ್ತಿ ಹೆಚ್ಚಾಗಿದೆ. ಸರಕಾರದ ನೀತಿಗಳನ್ನು ಟೀಕಿಸುವವರನ್ನು ವಿರೋಧಿ ಗುಂಪಿಗೆ ಸೇರಿಸಿ, ಅವರನ್ನು ಸಮಾಜದಲ್ಲಿ ಅನುಮಾನದ ಕಣ್ಣಿನಿಂದ ನೋಡುವಂತೆ ಮಾಡುವ ರಾಜಕೀಯ ತಂತ್ರ ಇದು.

ಅಧಿಕಾರದಲ್ಲಿರುವವರಿಗೆ ತಮ್ಮ ನೀತಿಗಳ ಬಗ್ಗೆ ಯಾವುದೇ ಸಾರ್ವಜನಿಕ ಚರ್ಚೆ ಅಥವಾ ಟೀಕೆಗಳು ಇಷ್ಟವಾಗುವುದಿಲ್ಲ. ಪ್ರಶ್ನೆಗಳು ಎದ್ದಾಗ ಅದಕ್ಕೆ ತಾರ್ಕಿಕವಾಗಿ ಉತ್ತರಿಸುವ ಬದಲು, ಪ್ರಶ್ನಿಸುವವರ ವ್ಯಕ್ತಿತ್ವವನ್ನು ಹತ್ತಿಕ್ಕಲು ಅಥವಾ ಅವರ ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ದೇಶದ್ರೋಹ ಎಂಬ ಲೇಬಲ್ ಅನ್ನು ಅಸ್ತ್ರವಾಗಿ ಬಳಸಲಾಗುತ್ತದೆ.

ಇದಕ್ಕೆ ಮಾಧ್ಯಮಗಳ ಪಾತ್ರ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವ ಇದೆ. ಮುಖ್ಯವಾಹಿನಿಯ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸರಕಾರದ ಪರವಾದ ಒಲವನ್ನು ಬಿತ್ತುತ್ತಾ, ಭಿನ್ನಾಭಿಪ್ರಾಯಗಳನ್ನು ‘ರಾಷ್ಟ್ರವಿರೋಧಿ’ ಕೃತ್ಯಗಳೆಂದು ಬಿಂಬಿಸುವ ಟ್ರೆಂಡ್ ಸೃಷ್ಟಿಸಲಾಗುತ್ತಿದೆ. ಇದು ಜನರ ಸಾಮೂಹಿಕ ಮನೋಭಾವದ ಮೇಲೆ ತೀವ್ರ ಪ್ರಭಾವ ಬೀರುತ್ತದೆ.

ಪ್ರಶ್ನಿಸುವ ಧ್ವನಿಗಳನ್ನು ಹತೋಟಿಗೆ ತರುವುದು ಅಥವಾ ಹತ್ತಿಕ್ಕುವಂತೆ ಮಾಡುವುದು ದೇಶಪ್ರೇಮವಲ್ಲ. ಬದಲಿಗೆ, ದೇಶದ ಸಂಪತ್ತನ್ನು ಕೆಲವೇ ಶ್ರೀಮಂತರ ಕೈಗೆ ನೀಡದೆ, ಪರಿಸರ ಹಾಗೂ ಜನಸಾಮಾನ್ಯರ ಹಕ್ಕುಗಳನ್ನು ಎತ್ತಿಹಿಡಿಯುವುದೇ ನಿಜವಾದ ರಾಷ್ಟ್ರಭಕ್ತಿ. ಸರಕಾರಗಳು ಬರುತ್ತವೆ, ಹೋಗುತ್ತವೆ; ಆದರೆ ದೇಶದ ನೆಲ, ಜಲ, ಸಂವಿಧಾನ ಮತ್ತು ಪ್ರಜೆಗಳು ಶಾಶ್ವತ. ಆದ್ದರಿಂದ, ಆಡಳಿತ ವರ್ಗವನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟುವ ಮನಸ್ಥಿತಿಯನ್ನು ಸಮಾಜವು ತಕ್ಷಣವೇ ತಿರಸ್ಕರಿಸಬೇಕಿದೆ. ಹಕ್ಕುಗಳಿಗಾಗಿ ಹೋರಾಡುವ ಧ್ವನಿಗಳು ಜೀವಂತವಾಗಿದ್ದಾಗ ಮಾತ್ರ ಪ್ರಜಾಪ್ರಭುತ್ವವು ಸಶಕ್ತವಾಗಿ ಉಳಿಯಲು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸುರೇಂದ್ರ ಪೈ ಭಟ್ಕಳ

contributor