ಬಾಣಂತಿಯರ ವಾರ್ಡ್‌ಗೆ ಹೊಸ ಯುಪಿಎಸ್, ಇನ್ವರ್ಟರ್
‘ವಾರ್ತಾಭಾರತಿ’ ವರದಿಗೆ ಮರುದಿನವೇ ಸ್ಪಂದಿಸಿದ ಆರೋಗ್ಯ ಇಲಾಖೆ
ಬಳ್ಳಾರಿ/ಸಿರುಗುಪ್ಪ : ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯದಿಂದ ಬಾಣಂತಿಯರು ಹಾಗೂ ನವಜಾತ ಶಿಶುಗಳು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ದೊರೆತಿದೆ. ಈ ಕುರಿತು ಅಕ್ಟೋಬರ್ 9ರಂದು ‘ವಾರ್ತಾಭಾರತಿ’ಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು, ಮರುದಿನವೇ ವಾರ್ಡ್‌ಗೆ ಹೊಸ ಯುಪಿಎಸ್ ಮತ್ತು ಇನ್ವರ್ಟರ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ.
ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಬಾಣಂತಿಯರು ಹಾಗೂ ಹಸುಗೂಸುಗಳು ತೊಂದರೆ ಅನುಭವಿಸುತ್ತಿರುವ ಕುರಿತು ‘ವಾರ್ತಾಭಾರತಿ’ ವರದಿ ಬೆಳಕು ಚೆಲ್ಲಿತ್ತು. ವರದಿಯ ಬೆನ್ನಲ್ಲೇ ತಾಲೂಕು ಆರೋಗ್ಯಾಧಿಕಾರಿ ಡಾ. ಬಸವರಾಜ ದಮ್ಮೂರು ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾರ್ಡ್‌ಗಳಿಗೆ ಪ್ರತ್ಯೇಕ ಯುಪಿಎಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದರು.
ಅಧಿಕಾರಿಗಳ ಸೂಚನೆಯಂತೆ ಶನಿವಾರ ಹೊಸ ಯುಪಿಎಸ್ ಹಾಗೂ ಇನ್ವರ್ಟರ್ ಅಳವಡಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಮಕೃಷ್ಣ ತಿಳಿಸಿದ್ದಾರೆ. ಈ ಮೂಲಕ ‘ವಾರ್ತಾಭಾರತಿ’ ವರದಿಗೆ ಆರೋಗ್ಯ ಇಲಾಖೆ ತ್ವರಿತವಾಗಿ ಸ್ಪಂದಿಸಿದ್ದು, ಬಾಣಂತಿಯರು ಹಾಗೂ ನವಜಾತ ಶಿಶುಗಳ ಸುರಕ್ಷತೆಗೆ ಅಗತ್ಯವಾದ ವಿದ್ಯುತ್ ಬ್ಯಾಕಪ್ ವ್ಯವಸ್ಥೆ ಕಲ್ಪಿಸಲಾಗಿದೆ.