ಇಂಡಿ, ಅ.12: ಮಳೆ ಕೊರತೆ ಹಾಗೂ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಆಘಾತ ನೀಡಿದೆ. ತಾಲೂಕಿನ ತಡವಲಗಾ ಮತ್ತು ಅರ್ಜುನಗಿ ಗ್ರಾಮಗಳಲ್ಲಿ ವಿದ್ಯುತ್ ಅವಘಡದಿಂದ ಒಟ್ಟು 16 ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮವಾಗಿದ್ದು, ರೈತ ಕುಟುಂಬಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಹಾಗೂ ವಿವಿಧ ರೈತಪರ ಸಂಘಟನೆಗಳು ಜೋಡಗುಡಿ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದವು. ಹೋರಾಟದ ಫಲವಾಗಿ ಕೃಷ್ಣಾ ಮೇಲ್ದಂಡೆ ಕಾಲುವೆಯಿಂದ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಈ ನಡುವೆ ರೈತರು ವಾರ್ಷಿಕ ಬೆಳೆಯಾದ ಕಬ್ಬನ್ನು ಬೆಳೆದಿದ್ದು, ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ವರ್ಷವಿಡೀ ಶ್ರಮಿಸಿದ್ದರು. ಇನ್ನೇನು ಕಬ್ಬನ್ನು ಕಾರ್ಖಾನೆಗಳಿಗೆ ಕಳುಹಿಸುವ ಹಂತದಲ್ಲಿದ್ದಾಗ ಬೆಂಕಿ ಅವಘಡ ಸಂಭವಿಸಿರುವುದು ರೈತರನ್ನು ಕಂಗಾಲಾಗಿಸಿದೆ.

ತಡವಲಗಾದಲ್ಲಿ 10 ಎಕರೆ ಬೆಳೆ ನಾಶ: ತಾಲೂಕಿನ ತಡವಲಗಾ ಗ್ರಾಮದಲ್ಲಿ ಅಕ್ಟೋಬರ್ 7ರಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ರೈತರಿಗೆ ಸೇರಿದ ಒಟ್ಟು 10 ಎಕರೆ ಕಬ್ಬು ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಅಮ್ಜಾದ್ ಖಾನ್ ಕಳಾವಂತ ಅವರ 3 ಎಕರೆ, ಅಬ್ಬಾಸಾಲಿ ಕಳಾವಂತ ಅವರ 2 ಎಕರೆ ಹಾಗೂ ಜನತಾಬಿ ಕಳಾವಂತ ಅವರ 5 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ.

ಅರ್ಜುನಗಿಯಲ್ಲಿ 6 ಎಕರೆ ಕಬ್ಬು ಭಸ್ಮ: ಅರ್ಜುನಗಿ ಗ್ರಾಮದಲ್ಲಿಯೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಮಾರು 6 ಎಕರೆ ಕಬ್ಬು ಬೆಳೆ ಸುಟ್ಟುಹೋಗಿದೆ. ಗ್ರಾಮದ ಸುರೇಶ್, ಗೀರಮಲ್ಲ, ಹಂಜಗಿ ಮಾಳಪ್ಪ ಹಾಗೂ ಹಂಜಗಿ ಕಾಂತಪ್ಪ ಸೇರಿದಂತೆ ಸಹೋದರರಿಗೆ ಸೇರಿದ ಸರ್ವೆ ನಂಬರ್ 30/123ರ ಭಾಗದ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ನಾಶವಾಗಿದೆ. ಇದರಿಂದ ರೈತ ಕುಟುಂಬಗಳಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ.

ಈಗಾಗಲೇ ಮಳೆ ಕೊರತೆ ಮತ್ತು ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಕೈಗೆ ಬಂದ ಬೆಳೆ ಬೆಂಕಿಗೆ ಆಹುತಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಬೆಳೆ ನಷ್ಟದ ಸಮರ್ಪಕ ವರದಿ ಸಿದ್ಧಪಡಿಸಿ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕ್ಷಣಾರ್ಧದಲ್ಲಿ ನಾಶವಾಗಿರುವುದು ಅತ್ಯಂತ ನೋವಿನ ಸಂಗತಿ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿ ನ್ಯಾಯಯುತ ಪರಿಹಾರ ಒದಗಿಸಬೇಕು. ಅಧಿಕಾರಿಗಳು ವಿಳಂಬ ಮಾಡದೆ ಸೂಕ್ತ ಕ್ರಮ ಕೈಗೊಳ್ಳಬೇಕು.

-ಅಬ್ಬಾಸಲಿ ಕಳವಂತ, ತಡವಲಗಾ ರೈತ

ನಿಂತ ಕಬ್ಬು ಸುಟ್ಟ ಪ್ರಕರಣಗಳಿಗೆ ಪರಿಹಾರ ನೀಡುವುದು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ವಿದ್ಯುತ್ ಅವಘಡದಿಂದ ಬೆಳೆ ಹಾನಿಯಾಗಿದ್ದರೆ ರೈತರು ನೇರವಾಗಿ ಹೆಸ್ಕಾಂ ಕಚೇರಿಗೆ ಲಿಖಿತ ದೂರು ಸಲ್ಲಿಸಬೇಕು. ಹೆಸ್ಕಾಂ ಅಧಿಕಾರಿಗಳು ಪರಿಶೀಲಿಸಿ ನಮ್ಮ ಇಲಾಖೆಗೆ ಸೂಚಿಸಿದ ಬಳಿಕ ಸ್ಥಳ ಪರಿಶೀಲನೆ ನಡೆಸಿ, ಹಾನಿಯ ಪ್ರಮಾಣದ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುತ್ತದೆ

-ಮಹದೇವಪ್ಪ ಎವೊರ್, ಉಪ ನಿರ್ದೇಶಕರು ಕೃಷಿ ಇಲಾಖೆ ಇಂಡಿ

ಬೆಂಕಿ ಅವಘಡದಿಂದ ನಷ್ಟಕ್ಕೊಳಗಾದ ರೈತರಿಗೆ ಸರ್ಕಾರ ತುರ್ತಾಗಿ ಪರಿಹಾರ ನೀಡಬೇಕು. ಯಾವುದೇ ವಿಳಂಬ ಮಾಡದೆ ಸೂಕ್ತ ಪರಿಹಾರ ಒದಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ವಿದ್ಯುತ್ ಇಲಾಖೆಯ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು

-ಬಿ.ಡಿ ಪಾಟೀಲ

ಜೆಡಿಎಸ್ ತಾಲೂಕು ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಯಭೀಮ ಸೋ ಸಿಂಗೆ

contributor