ರಾಯಚೂರು: ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಾಲಿ ಶಾಸಕ ಬಸನಗೌಡ ದದ್ದಲ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಬಹುದು ಅಥವಾ ಅವರು ಕ್ಷೇತ್ರ ಬದಲಾವಣೆ ಮಾಡಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಮಾಜಿ ಸಂಸದ ಬಿ.ವಿ. ನಾಯಕ ಕಾಂಗ್ರೆಸ್‌ಗೆ ಮರಳುವ ಸಾಧ್ಯತೆ ಕುರಿತ ಮಾತುಗಳೂ ಕೇಳಿಬರುತ್ತಿದ್ದು, ಕ್ಷೇತ್ರದ ಮುಂದಿನ ರಾಜಕೀಯ ಸಮೀಕರಣಗಳ ಬಗ್ಗೆ ಕುತೂಹಲ ಮೂಡಿದೆ.

ಎರಡು ಬಾರಿ ಶಾಸಕರಾಗಿರುವ ಬಸನಗೌಡ ದದ್ದಲ್ ಅವರು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಆದರೆ, ಸ್ವಪಕ್ಷದ ನಾಯಕರ ನಡುವಿನ ಭಿನ್ನಾಭಿಪ್ರಾಯ, ಒಳಜಗಳ ಹಾಗೂ ಕೆಲವು ಗ್ರಾಮಗಳಲ್ಲಿ ಮೂಲಸೌಕರ್ಯ ಸಮಸ್ಯೆಗಳು ಮುಂದುವರಿದಿರುವುದು ಅವರ ಪಾಲಿಗೆ ಸವಾಲಾಗಿದೆ ಎನ್ನಲಾಗಿದೆ. ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದರೂ ಜನರ ಜ್ವಲಂತ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗುತ್ತಿದೆ.

ಮಾನ್ವಿ, ಸಿರವಾರ ಬರಪೀಡಿತ ಘೋಷಣೆಗೆ ಮನವಿ

ರಾಜ್ಯ ಸರಕಾರ ಬರಪೀಡಿತ ತಾಲೂಕುಗಳ ಮೊದಲ ಪಟ್ಟಿಯಲ್ಲಿ ಸಿರವಾರ ಮತ್ತು ಮಾನ್ವಿ ತಾಲೂಕುಗಳನ್ನು ಕೈಬಿಟ್ಟಿದ್ದ ಸಂದರ್ಭದಲ್ಲಿ ಬಸನಗೌಡ ದದ್ದಲ್ ಅವರು ಈ ಎರಡೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ರಾಯಚೂರು ಗ್ರಾಮೀಣ ಕ್ಷೇತ್ರದ ಜೊತೆಗೆ ಮಾನ್ವಿ ಮತ್ತು ಸಿರವಾರ ತಾಲೂಕುಗಳ ಬಗ್ಗೆಯೂ ಅವರು ಪ್ರಸ್ತಾಪಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಾನ್ವಿ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ ಅವರು ಕಾಂಗ್ರೆಸ್‌ನವರೇ ಆಗಿದ್ದರೂ, ದದ್ದಲ್ ಅವರು ಮಾನ್ವಿ ಮತ್ತು ಸಿರವಾರ ತಾಲೂಕುಗಳ ವಿಚಾರವಾಗಿ ಮನವಿ ಸಲ್ಲಿಸಿರುವುದನ್ನು ಕೆಲವರು ರಾಜಕೀಯ ದೃಷ್ಟಿಯಿಂದಲೂ ವಿಶ್ಲೇಷಿಸುತ್ತಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್ ಸಮಸ್ಯೆ ಎದುರಾದರೆ ಮಾನ್ವಿ ಕ್ಷೇತ್ರದತ್ತ ಮುಖ ಮಾಡಬಹುದು ಎಂಬ ಊಹಾಪೋಹಗಳಿಗೆ ಈ ಬೆಳವಣಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಆದರೆ, ಈ ಮನವಿಯನ್ನೇ ಕ್ಷೇತ್ರ ಬದಲಾವಣೆಯ ಮುನ್ಸೂಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

ಬಿ.ವಿ.ನಾಯಕ ಕಾಂಗ್ರೆಸ್‌ಗೆ ಮರಳಿದರೆ ಲೆಕ್ಕಾಚಾರ ಬದಲು?

ಮಾಜಿ ಸಂಸದ ಬಿ.ವಿ.ನಾಯಕ ಅವರು ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಳಿಕ ಮಾನ್ವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಇದೀಗ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಿ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಚರ್ಚೆ ನಡೆಯುತ್ತಿದೆ.

ಬಿ.ವಿ.ನಾಯಕ ಅವರ ಕಾಂಗ್ರೆಸ್ ಮರುಪ್ರವೇಶದ ಕುರಿತು ರಾಜ್ಯಮಟ್ಟದ ನಾಯಕರೊಂದಿಗೆ ಮಾತುಕತೆ ನಡೆದಿದೆ ಎನ್ನಲಾಗಿದ್ದರೂ, ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಜಿಲ್ಲಾ ಮಟ್ಟದಲ್ಲಿ ಪಕ್ಷದ ಜವಾಬ್ದಾರಿ ಹೊಂದಿದ್ದ ಅವಧಿಯಲ್ಲಿ ಬಿಜೆಪಿ ಸೇರುವುದಿಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಸೇರಿ ಮಾನ್ವಿಯಿಂದ ಸ್ಪರ್ಧಿಸಿದ್ದರು ಎಂಬುದನ್ನು ಹಿರಿಯ ಕಾರ್ಯಕರ್ತರು ನೆನಪಿಸುತ್ತಿದ್ದಾರೆ. ರಾಜಕೀಯದಲ್ಲಿ ಕೊನೆಯ ಕ್ಷಣದವರೆಗೂ ಏನು ಬೇಕಾದರೂ ಆಗಬಹುದು ಎಂಬುದು ಅವರ ಅಭಿಪ್ರಾಯ.

ಒಂದು ವೇಳೆ ಬಿ.ವಿ.ನಾಯಕ ಕಾಂಗ್ರೆಸ್‌ಗೆ ಮರಳಿ ರಾಯಚೂರು ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದರೆ ಬಸನಗೌಡ ದದ್ದಲ್ ಅವರಿಗೆ ಪಕ್ಷದೊಳಗೆ ಪೈಪೋಟಿ ಎದುರಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ದದ್ದಲ್ ಅವರು ಮಾನ್ವಿ ಕ್ಷೇತ್ರದಿಂದ ಟಿಕೆಟ್ ಕೇಳುವ ಸಾಧ್ಯತೆಯೂ ಇದೆ ಎಂಬ ಚರ್ಚೆ ನಡೆಯುತ್ತಿದೆ.

ಬಸನಗೌಡ ದದ್ದಲ್ ಅವರು ಮಾನ್ವಿ ಕ್ಷೇತ್ರದ ಜನರ ಅಭಿಪ್ರಾಯವನ್ನು ಅರಿಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದ್ದರೂ, ಕ್ಷೇತ್ರ ಬದಲಾವಣೆ ಕುರಿತು ಅವರು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಚುನಾವಣೆಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶ ಇರುವುದರಿಂದ ಪಕ್ಷಗಳ ಮೈತ್ರಿ, ಅಭ್ಯರ್ಥಿಗಳ ಆಯ್ಕೆ ಹಾಗೂ ಸ್ಥಳೀಯ ರಾಜಕೀಯ ಬೆಳವಣಿಗೆಗಳು ಹಲವು ಬದಲಾವಣೆಗಳಿಗೆ ಕಾರಣವಾಗಬಹುದು.

ಒಟ್ಟಿನಲ್ಲಿ, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಹಾಲಿ ಶಾಸಕ ಬಸನಗೌಡ ದದ್ದಲ್ ಅವರ ರಾಜಕೀಯ ಭವಿಷ್ಯ, ಮಾಜಿ ಸಂಸದ ಬಿ.ವಿ.ನಾಯಕ ಅವರ ಮುಂದಿನ ನಡೆ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯ ಪರಿಣಾಮಗಳ ಬಗ್ಗೆ ಈಗಿನಿಂದಲೇ ಚರ್ಚೆ ಆರಂಭವಾಗಿದೆ.

ಮಾನ್ವಿ ಕ್ಷೇತ್ರದತ್ತ ದದ್ದಲ್ ಚಿತ್ತ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ವಿರುದ್ಧ ಬಸನಗೌಡ ದದ್ದಲ್ ಗೆಲುವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದ್ದರಿಂದ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆದಿತ್ತು. ಆದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿದು ಮೈತ್ರಿ ಅಭ್ಯರ್ಥಿ ಕಣಕ್ಕಿಳಿದರೆ ಕಾಂಗ್ರೆಸ್‌ಗೆ ಸವಾಲು ಎದುರಾಗಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಬಸನಗೌಡ ದದ್ದಲ್ ಅವರು ಕ್ಷೇತ್ರದ ರಾಜಕೀಯ ಪರಿಸ್ಥಿತಿಯನ್ನು ಅರಿಯಲು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ. ಇದೇ ವೇಳೆ ಅವರು ಮೂಲತಃ ಮಾನ್ವಿ ತಾಲೂಕಿನವರಾಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ಮಾನ್ವಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ, ಕ್ಷೇತ್ರ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor