ಹುಮನಾಬಾದ್: ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ತಾಲೂಕಿನ ಮಾಣಿಕ ನಗರದಲ್ಲಿ 2 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ವಿಜ್ಞಾನ ಕೇಂದ್ರ ಉದ್ಘಾಟನೆಗೊಂಡು ವರ್ಷಗಳೇ ಕಳೆದರೂ ವಿದ್ಯಾರ್ಥಿಗಳ ಬಳಕೆಗೆ ಲಭ್ಯವಾಗಿಲ್ಲ. ಸುಸಜ್ಜಿತ ಕಟ್ಟಡ ಅನಾಥವಾಗಿ ಉಳಿದಿದ್ದು, ಕುಡುಕರ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಧೂಳು ಹಿಡಿಯುತ್ತಿದ್ದು, ಸುತ್ತಮುತ್ತ ಕಂಟಿ ಗಿಡಗಳು ಬೆಳೆದು ಆವರಣ ಪಾಳು ಬಿದ್ದಿದೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲ. ಉದ್ಘಾಟನೆಯ ಬಳಿಕ ಮುಖ್ಯದ್ವಾರಕ್ಕೆ ಹಾಕಿರುವ ಬೀಗ ತೆರೆಯದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಜ್ಞಾನ ಕಲಿಕೆಗೆ ಪೂರಕವಾಗಬೇಕಿದ್ದ ಕೇಂದ್ರದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸಾಮಗ್ರಿಗಳೂ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಕಟ್ಟಡದ ಆವರಣದಲ್ಲಿ ಬಿಯರ್ ಬಾಟಲಿಗಳು ಬಿದ್ದಿದ್ದು, ರಾತ್ರಿ ವೇಳೆ ಕುಡುಕರ ಅಡ್ಡೆಯಾಗಿ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಕೇಂದ್ರ ನಿರ್ಲಕ್ಷ್ಯಕ್ಕೆ ಒಳಗಾಗಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಕಟ್ಟಡದ ಆವರಣ ಸ್ವಚ್ಛಗೊಳಿಸಿ, ವಿದ್ಯುತ್ ಸಂಪರ್ಕ ಮತ್ತು ಭದ್ರತಾ ವ್ಯವಸ್ಥೆ ಕಲ್ಪಿಸಿ, ವಿಜ್ಞಾನ ಕೇಂದ್ರವನ್ನು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜ್ಞಾನ ಕೇಂದ್ರದ ಕಟ್ಟಡ ಹಸ್ತಾಂತರವಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದ್ದರೂ ಇನ್ನೂ ಆರಂಭವಾಗದಿರುವುದಕ್ಕೆ ಅಧಿಕಾರಿಗಳು ಉತ್ತರಿಸಬೇಕು. ಕಟ್ಟಡದ ಸುತ್ತಮುತ್ತ ಹುಲ್ಲು ಬೆಳೆದಿದ್ದು, ವಿದ್ಯುತ್ ಸಂಪರ್ಕವೂ ಇಲ್ಲ. ವಿಜ್ಞಾನಕ್ಕೆ ಸಂಬಂಧಿಸಿದ ಸಾಮಗ್ರಿಗಳ ಕೊರತೆಯೂ ಇದೆ. ಕೂಡಲೇ ಕೇಂದ್ರವನ್ನು ಸ್ವಚ್ಛಗೊಳಿಸಿ ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಳಿಸಬೇಕು ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಶಶಿಕಾಂತ್ ಡಾಂಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸೈಯದ್ ಮೋಸಿನ್ ಅಲಿ

contributor