ಬಳ್ಳಾರಿ: ಶೇ.100 ಫಲಿತಾಂಶದ ಶಾಲೆಯಲ್ಲಿ ಸುರಕ್ಷತೆ ಶೂನ್ಯ!
ಬಿರುಕುಬಿಟ್ಟ ಕಟ್ಟಡದಲ್ಲಿ ಭವಿಷ್ಯ ಕಟ್ಟಿಕೊಳ್ಳುತ್ತಿರುವ ಉರ್ದು ಶಾಲೆ ಮಕ್ಕಳು
ಬಳ್ಳಾರಿ: ಒಂದೆಡೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ವೆಚ್ಚ ಮಾಡಲಾಗುತ್ತಿದ್ದರೆ, ಮತ್ತೊಂದೆಡೆ ದಶಕಗಳ ಇತಿಹಾಸ ಹೊಂದಿರುವ ಕೆಲವು ಶಾಲೆಗಳು ಮೂಲಸೌಕರ್ಯ ಕೊರತೆಯಿಂದ ಅಳಿವಿನ ಅಂಚಿಗೆ ತಲುಪಿವೆ. ಇದಕ್ಕೆ ನಗರದ ಕೌಲ್‌ಬಜಾರ್‌ನ ಈದ್ಗಾ ರಸ್ತೆಯ ಹಿರಿಯಾಳ್ಕುಡಂನಲ್ಲಿರುವ ಸರಕಾರಿ ಉರ್ದು ಪ್ರೌಢ ಶಾಲೆ ಉದಾಹರಣೆಯಾಗಿದೆ.
1983ರಲ್ಲಿ ಆರಂಭವಾದ ಈ ಶಾಲೆ ಸುಮಾರು 5.89 ಎಕರೆ ವಿಸ್ತೀರ್ಣದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿಶಾಲವಾದ ಜಾಗವಿದ್ದರೂ ಶಾಲೆಯ ಕಟ್ಟಡ ಮಾತ್ರ ಶಿಥಿಲಾವಸ್ಥೆ ತಲುಪಿದೆ. ಒಟ್ಟು 11 ಕೊಠಡಿಗಳ ಪೈಕಿ ಕೇವಲ ಮೂರು ಕೊಠಡಿಗಳು ಮಾತ್ರ ಬಳಕೆಗೆ ಯೋಗ್ಯವಾಗಿದ್ದು, ಉಳಿದ ಕೊಠಡಿಗಳು ಅಪಾಯದ ಸ್ಥಿತಿಯಲ್ಲಿವೆ.
ಗೋಡೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಮೇಲ್ಛಾವಣಿ ಕುಸಿಯುವ ಹಂತದಲ್ಲಿದೆ. ಮಳೆ ಬಂದಾಗ ಕೊಠಡಿಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಕಿಟಕಿ ಮತ್ತು ಬಾಗಿಲುಗಳೂ ಶಿಥಿಲಗೊಂಡಿವೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲೇ ವಿದ್ಯಾರ್ಥಿಗಳು ಪಾಠ ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಆತಂಕದ ನಡುವೆಯೂ ಪೋಷಕರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಕಳುಹಿಸುತ್ತಿದ್ದಾರೆ.
ಶೇ.100 ಫಲಿತಾಂಶ
ಮೂಲಸೌಕರ್ಯ ಕೊರತೆಯ ನಡುವೆಯೂ ಶಿಕ್ಷಕರ ಬದ್ಧತೆ ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಕಳೆದ ಶೈಕ್ಷಣಿಕ ವರ್ಷದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆ ಶೇ.100ರಷ್ಟು ಫಲಿತಾಂಶ ದಾಖಲಿಸಿದೆ. ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಇದು ಸಾಕ್ಷಿಯಾಗಿದ್ದರೂ, ಇಂತಹ ಸಾಧನೆ ಮಾಡಿದ ಶಾಲೆಗೆ ಸುರಕ್ಷಿತ ಕಟ್ಟಡವೇ ಇಲ್ಲದಿರುವುದು ಶಿಕ್ಷಣ ವ್ಯವಸ್ಥೆಯ ವಿಪರ್ಯಾಸವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಶಾಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಏಳು ಮಂದಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅಪಾಯಕಾರಿ ಕಟ್ಟಡದಲ್ಲೇ ಪ್ರತಿದಿನ ತರಗತಿಗಳು ನಡೆಯುತ್ತಿರುವುದು ಪೋಷಕರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಒಂದೇ ಆವರಣದಲ್ಲಿ ಎರಡು ಚಿತ್ರಣ
ಗಮನಾರ್ಹ ಸಂಗತಿಯೆಂದರೆ, ಇದೇ ಆವರಣದಲ್ಲಿ ಕೆಲವು ವರ್ಷಗಳ ಹಿಂದೆ ಆದರ್ಶ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಅದರ ಪಕ್ಕದಲ್ಲೇ ಇರುವ ಸರಕಾರಿ ಉರ್ದು ಪ್ರೌಢ ಶಾಲೆಯ ಹಳೆಯ ಕಟ್ಟಡ ದುರಸ್ತಿಯಾಗದೆ ಉಳಿದಿದೆ.
ಒಂದೇ ಆವರಣದಲ್ಲಿರುವ ಸುಸಜ್ಜಿತ ಹೊಸ ಕಟ್ಟಡ ಮತ್ತು ಶಿಥಿಲಗೊಂಡ ಹಳೆಯ ಶಾಲಾ ಕಟ್ಟಡದ ನಡುವಿನ ವ್ಯತ್ಯಾಸ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬಳ್ಳಾರಿ ನಗರದಲ್ಲಿರುವ ಹಲವು ಸರಕಾರಿ ಉರ್ದು ಶಾಲೆಗಳ ಕಟ್ಟಡಗಳು ಸಹ ದುರಸ್ತಿಗೆ ಕಾಯುತ್ತಿರುವುದು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ಪ್ರಶ್ನಿಸುವಂತಾಗಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುವ ಈ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಸರಕಾರ ವಿಫಲವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಹೊಸ ಕಟ್ಟಡಕ್ಕೆ ಅನುಮೋದನೆ
ಯಾವುದೇ ಅನಾಹುತ ಸಂಭವಿಸುವ ಮೊದಲು ಶಾಲಾ ಕಟ್ಟಡವನ್ನು ತಾಂತ್ರಿಕವಾಗಿ ಪರಿಶೀಲಿಸಿ, ಶಿಥಿಲ ಕೊಠಡಿಗಳನ್ನು ತೆರವುಗೊಳಿಸಬೇಕು. ಹೊಸ ಕಟ್ಟಡದ ಕಾಮಗಾರಿಯನ್ನು ಶೀಘ್ರ ಆರಂಭಿಸಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಲಿಕಾ ವಾತಾವರಣ ಕಲ್ಪಿಸಬೇಕು ಎಂಬುದು ಪೋಷಕರು ಮತ್ತು ಸಾರ್ವಜನಿಕರ ಆಗ್ರಹವಾಗಿದೆ.
ಶೇ.100 ಫಲಿತಾಂಶ ದಾಖಲಿಸಿದ ಶಾಲೆಗೆ ಸುರಕ್ಷಿತ ಕಟ್ಟಡ ಒದಗಿಸುವುದು ಕೇವಲ ಅಭಿವೃದ್ಧಿಯ ವಿಷಯವಲ್ಲ; ಅದು ಮಕ್ಕಳ ಜೀವ ಮತ್ತು ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯೂ ಆಗಿದೆ. ಸಂಬಂಧಿಸಿದ ಇಲಾಖೆ ತುರ್ತು ಕ್ರಮ ಕೈಗೊಂಡು ಐತಿಹಾಸಿಕ ಸರಕಾರಿ ಉರ್ದು ಪ್ರೌಢಶಾಲೆಯನ್ನು ಉಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಸರಕಾರಿ ಉರ್ದು ಪ್ರೌಢ ಶಾಲೆಯ ಕಟ್ಟಡದ ಸ್ಥಿತಿಯ ಬಗ್ಗೆ ಇಲಾಖೆಯ ಗಮನವಿದೆ. ಶಾಲೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಎಂಆರ್‌ಸಿ ವತಿಯಿಂದ ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರೆತಿದೆ. ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ತಕ್ಷಣ ಕಾಮಗಾರಿ ಆರಂಭವಾಗಲಿದ್ದು, ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಶೈಕ್ಷಣಿಕ ವಾತಾವರಣ ಒದಗಿಸುವ ಉದ್ದೇಶದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
-ಸಿದ್ದಲಿಂಗ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ಬಳ್ಳಾರಿ ಪಶ್ಚಿಮ ವಲಯ
ಶಾಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 11 ಕೊಠಡಿಗಳ ಪೈಕಿ ಕೇವಲ ಮೂರು ಕೊಠಡಿಗಳು ಮಾತ್ರ ಸ್ವಲ್ಪಮಟ್ಟಿಗೆ ಬಳಕೆಗೆ ಯೋಗ್ಯವಾಗಿವೆ. ಉಳಿದ ಕೊಠಡಿಗಳು ಶಿಥಿಲಗೊಂಡಿವೆ. ಏಳು ಮಂದಿ ಶಿಕ್ಷಕರು ಇಂತಹ ಪರಿಸ್ಥಿತಿಯಲ್ಲೂ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ. ಹೊಸ ಕಟ್ಟಡಕ್ಕೆ ಅನುಮೋದನೆ ದೊರೆತಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂಬ ನಿರೀಕ್ಷೆಯಿದೆ.
-ಜಮೀಲ್ ಅಹ್ಮದ್, ಮುಖ್ಯಗುರು,
ಸರಕಾರಿ ಉರ್ದು ಪ್ರೌಢಶಾಲೆ, ಹಿರಿಯಾಳ್ಕುಡಂ