ಡಾಂಬರ್ ದರ ಹೆಚ್ಚಳ;ಅರ್ಧದಲ್ಲೇ ನಿಂತ ರಸ್ತೆ ಕಾಮಗಾರಿ
ಹುಮನಾಬಾದ್-ಭಾಲ್ಕಿ ರಸ್ತೆ ದುರವಸ್ಥೆ; ಅಪಘಾತಗಳ ಭೀತಿ ಹೆಚ್ಚಳ
ಹುಮನಾಬಾದ್ : ಡಾಂಬರ್ ದರ ಹೆಚ್ಚಾಗಿದಕ್ಕೆ ಹುಮನಾಬಾದ್-ಭಾಲ್ಕಿ ನಡುವಿನ ಮುಖ್ಯರಸ್ತೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದ್ದು, ಇದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗಿದ್ದು, ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದ ಬಸ್ ನಿಲ್ದಾಣದಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿ ಈ ಮುಖ್ಯರಸ್ತೆಯಿದ್ದು, ಸದ್ಯ ಮರಣ ಶಾಸನವಾಗಿ ಪರಿಣಮಿಸಿದೆ. ಕೆಟ್ಟಿರುವ ರಸ್ತೆಯನ್ನು ವ್ಯವಸ್ಥಿತವಾಗಿ ಸರಿಪಡಿಸುವ ಬದಲು, ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ, ಇನ್ನರ್ಧ ಭಾಗದ ಕಾಮಗಾರಿ ಮಾಡಿಲ್ಲ.
ಈ ರಸ್ತೆಯಲ್ಲಿ ದಿನಾಲು ನೂರಾರು ವಾಹನಗಳು ಓಡಾಡುತ್ತವೆ. ಭಾಲ್ಕಿಯಿಂದ ಹುಮನಾಬಾದ್‌ಗೆ ಹೋಗಲು ಈ ರಸ್ತೆ ಬಳಸಬೇಕು. ಈ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ದಿನ ಬೆಳಗಾದರೆ ಅಪಘಾತಗಳು ಸಂಭವಿಸುತ್ತಿವೆ.
ಈ ರಸ್ತೆಯ ಕಾಮಗಾರಿ ಬಹುತೇಕ ಮುಗಿದಿದ್ದು, ದುಬಲಗುಂಡಿ ಗ್ರಾಮದ ಹತ್ತಿರ ಅರ್ಧ ಕಿಲೋಮೀಟರ್ ಕಾಮಗಾರಿ ಮಾಡಬೇಕಿದ್ದು, ಡಾಂಬರು ಹಾಕಿ ಉಳಿದರ್ಧ ಭಾಗ ಹಾಗೆಯೇ ಬಿಡಲಾಗಿದೆ. ರಸ್ತೆಯ ಒಂದು ಬದಿಯಲ್ಲಿ ಸಂಪೂರ್ಣವಾದ ರಸ್ತೆ ಮಾಡಲಾಗಿದ್ದು, ಮತ್ತೊಂದು ಬದಿಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಒಂದು ಬದಿಯಲ್ಲಿ ಸಂಪೂರ್ಣವಾಗಿ ತಗ್ಗು ಬಿದ್ದಿದ್ದು, ವಾಹನ ಸವಾರರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ. ಹೊಸಬರು ವಾಹನ ಚಲಾಯಿಸಿದರೆ ಅಪಘಾತ ಗ್ಯಾರಂಟಿ ಎನ್ನುತ್ತಾರೆ ಸ್ಥಳೀಯರು.
ಡಾಂಬರ್ ದರ ಏರಿಕೆ ಹಾಗೂ ಮಳೆಯ ನೆಪ ಹೇಳಿ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದರೆ, ಇತ್ತ ಸಾರ್ವಜನಿಕರು ರಸ್ತೆ ಯಲ್ಲಿ ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಯಾವುದೇ ಪ್ರಾಣಹಾನಿ ಸಂಭವಿಸುವ ಮುನ್ನ ಈ ಅರ್ಧಕ್ಕೆ ನಿಂತ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ.
ಡಾಂಬರ್ ದರದಲ್ಲಿ ಏರಿಳಿತವಾಗುತ್ತಿರುವುದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ಸದ್ಯಕ್ಕೆ ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ. ಜೊತೆಗೆ ಮಳೆಗಾಲ ಇರುವುದರಿಂದ ಡಾಂಬರು ಹಾಕಿದರೆ ಹಾಳಾಗುತ್ತದೆ. ಮಳೆ ಕಡಿಮೆಯಾಗಿ ಡಾಂಬರ್ ದರ ನಿಯಂತ್ರಣಕ್ಕೆ ಬಂದ ತಕ್ಷಣವೇ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತೇವೆ.
-ವೆಂಕಟರಾವ್ ಸಿಂಧೆ ಎಇಇ, ಲೋಕೋಪಯೋಗಿ ಇಲಾಖೆ
ಹುಮನಾಬಾದ್-ಭಾಲ್ಕಿ ರಸ್ತೆ ತೀರಾ ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಡಾಂಬರೀಕರಣದ ನೆಪ ಹೇಳಿ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ತಕ್ಷಣವೇ ಈ ಕಾಮಗಾರಿ ಪೂರ್ಣಗೊಳಿಸಿ ಅಪಘಾತ ತಡೆಯಬೇಕು. ಇಲ್ಲದಿದ್ದರೆ ರಸ್ತೆ ತಡೆ ನಡೆಸಿ, ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
-ವಿರೇಶ್ ರೆಡ್ಡಿ
ಕರವೇ ತಾಲೂಕು ಅಧ್ಯಕ್ಷ