ಆಗಸ್ಟ್ 15ರಿಂದ ಬೆಲ್ಜಿಯಮ್- ನೆದರ್‌ಲ್ಯಾಂಡ್ಸ್‌ನಲ್ಲಿ ಹಾಕಿ ವಿಶ್ವಕಪ್ ಟೂರ್ನಿ
51 ವರ್ಷಗಳ ಕನಸು ನನಸಾಗಿಸುವ ವಿಶ್ವಾಸದಲ್ಲಿ ಭಾರತ ತಂಡ
ಹಾಕಿ ವಿಶ್ವಕಪ್ ಇದೇ ತಿಂಗಳ 15ರಿಂದ 30ರವರೆಗೆ ಬೆಲ್ಜಿಯಮ್ ಹಾಗೂ ನೆದರ್‌ಲ್ಯಾಂಡ್ಸ್‌ನ ಜಂಟಿ ಆಶ್ರಯದಲ್ಲಿ ನಡೆಯಲಿದೆ. ಇದೇ ಮೊದಲ ಬಾರಿ ಪುರುಷರ ಹಾಗೂ ಮಹಿಳೆಯರ ಹಾಕಿ ವಿಶ್ವಕಪ್ ಟೂರ್ನಿಗಳು ಏಕಕಾಲದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷ.
ಹಾಕಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ. ಆದರೆ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡ ಒಂದು ಬಾರಿ ಮಾತ್ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
1975ರಲ್ಲಿ ಮಲೇಶ್ಯದಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತ್ತು. ಆ ಬಳಿಕ ಭಾರತ ತಂಡವು ಹಾಕಿ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಲಿಲ್ಲ. ಮಹಿಳೆಯರ ತಂಡವು ಒಂದು ಬಾರಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನ ಅಷ್ಟಕಷ್ಟೇ. ಇಲ್ಲಿ ಕ್ರಿಕೆಟ್‌ಗಿರುವ ಹುಚ್ಚು, ಪ್ರೇಮ,ಆರ್ಥಿಕ ಪ್ರೋತ್ಸಾಹ ಹಾಕಿ ಕ್ರೀಡೆಗಿಲ್ಲ. ನಾಮ್‌ಕೆವಾಸ್ತೆಗೆ ಮಾತ್ರ ಭಾರತದಲ್ಲಿ ಹಾಕಿಯು ರಾಷ್ಟ್ರೀಯ ಕ್ರೀಡೆಯಾಗಿದೆ.
ನಾಲ್ಕು ಬಾರಿ ಭಾರತವು ಹಾಕಿ ವಿಶ್ವಕಪ್ ಆತಿಥ್ಯವನ್ನು ವಹಿಸಿದ್ದರೂ ಕೂಡ ಟ್ರೋಫಿ ಭಾಗ್ಯ ಒಲಿದಿದ್ದು ಮಲೇಶ್ಯದಲ್ಲಿ. ಭಾರತವು ಹಾಕಿ ವಿಶ್ವಕಪ್ ಮುಡಿಗೇರಿಸಿಕೊಂಡು 51 ವರ್ಷಗಳು ಕಳೆದಿದೆ. 1975ರ ಬಳಿಕ ಭಾರತಕ್ಕೆ ಹಾಕಿ ವಿಶ್ವಕಪ್ ಕೇವಲ ಕನಸಾಗಿಯೇ ಉಳಿದಿದೆ.
ಆಗಸ್ಟ್ 15ರಿಂದ ಬೆಲ್ಜಿಯಮ್ ಹಾಗೂ ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ವಿಶ್ವ್ವಾಸದಲ್ಲಿದ್ದು, ನಾಯಕ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಅತ್ಯುತ್ತಮ ಬಲಿಷ್ಠ ತಂಡವನ್ನೇ ಭಾರತ ಈ ಬಾರಿಯ ವಿಶ್ವಕಪ್‌ಗೆ ಆಯ್ಕೆ ಮಾಡಿದೆ.
<1971ರಲ್ಲಿ ಆರಂಭಗೊಂಡ ಹಾಕಿ ವಿಶ್ವಕಪ್: ಅಂತರ್‌ರಾಷ್ಟ್ರೀಯ ಹಾಕಿ ಒಕ್ಕೂಟವು 1971ರಲ್ಲಿ ಮೊದಲ ಬಾರಿ ಹಾಕಿ ವಿಶ್ವಕಪ್ ಅನ್ನು ಸ್ಪೇನ್‌ನ ಬಾರ್ಸಿಲೋನದಲ್ಲಿ ಆಯೋಜಿಸಿತ್ತು. 1971,1973 ಹಾಗೂ 1975ರ ಹಾಕಿ ವಿಶ್ವಕಪ್ ಆವೃತ್ತಿಯೂ ಎರಡು ವರ್ಷಕೊಮ್ಮೆ ನಡೆದಿತ್ತು. ಇದಾದ ಬಳಿಕ 1978ರಿಂದ ನಾಲ್ಕು ವರ್ಷಗಳಿಗೊಮ್ಮೆ ಹಾಕಿ ವಿಶ್ವಕಪ್ ನಡೆಯುತ್ತಿದೆ. ಆದರೆ ಮಹಿಳಾ ಹಾಕಿ ವಿಶ್ವಕಪ್ 1974ರಲ್ಲಿ ಆರಂಭಗೊಂಡಿತ್ತು. ಸ್ಪೇನ್‌ನ ಬಾರ್ಸಿಲೋನದಲ್ಲಿ ನಡೆದ ಚೊಚ್ಚಲ ಹಾಕಿ ವಿಶ್ವಕಪ್‌ನಲ್ಲಿ ಭಾರತವು ಕಂಚಿನ ಪದಕವನ್ನು ಗೆದ್ದಿತು. ಸೆಮಿಫೈನಲ್‌ನಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು 2-1 ಗೋಲುಗಳ ಅಂತರದಿಂದ ಸೋಲು ಕಂಡಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕೀನ್ಯಾ ವಿರುದ್ಧ 2-1 ಗೋಲುಗಳ ಅಂತರದಿಂದ ಗೆದ್ದು ಕಂಚಿನ ಪದಕ ಪಡೆದುಕೊಂಡಿತ್ತು. 1971ರ ಚೊಚ್ಚಲ ವಿಶ್ವಕಪ್ ನಲ್ಲೇ ಪಾಕಿಸ್ತಾನ ತಂಡವು ಆತಿಥೇಯ ಸ್ಪೇನ್ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ 1-0 ಗೋಲುಗಳ ಅಂತರದಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ ಚೊಚ್ಚಲ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೆಮಿಫೈನಲ್ ನಲ್ಲಿ ಸೋಲು ಕಂಡ ಭಾರತ ತಂಡವು 1973ರಲ್ಲಿ ನೆದರ್‌ಲ್ಯಾಂಡ್ಸ್‌ನಲ್ಲಿ ಎರಡನೇ ವಿಶ್ವಕಪ್ ನಲ್ಲಿ ಪಾಕಿಸ್ತಾನಕ್ಕೆ ಸೆಮಿಫೈನಲ್‌ನಲ್ಲೇ ತಿರುಗೇಟು ನೀಡಿತು.
ಭಾರತವು ಸೆಮಿ ಫೈನಲ್ ಪಂದ್ಯದಲ್ಲಿ 1-0 ಗೋಲುಗಳ ಅಂತರದಿಂದ ಪಾಕಿಸ್ತಾನ ತಂಡವನ್ನು ಮಣಿಸಿ 1973ರಲ್ಲಿ ಮೊದಲ ಬಾರಿ ಹಾಕಿ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿತು. ಆದರೆ ಫೈನಲ್ ನಲ್ಲಿ ಆತಿಥೇಯ ನೆದರ್‌ಲ್ಯಾಂಡ್ಸ್ ವಿರುದ್ಧ ಸೋಲು ಕಂಡಿತು. ನಿಗದಿತ ಸಮಯದಲ್ಲಿ ಎರಡು ತಂಡಗಳು 2-2ರಿಂದ ಸಮಬಲ ಸಾಧಿಸಿದ್ದವು. ಪೆನಾಲ್ಟಿ ಶೂಟೌಟ್ ನಲ್ಲಿ ನೆದರ್‌ಲ್ಯಾಂಡ್ಸ್ ತಂಡವು 4-2 ಗೋಲುಗಳ ಅಂತರದಿಂದ ಗೆದ್ದು ಹಾಕಿ ವರ್ಲ್ಡ್ ಕಪ್ ತನ್ನದಾಗಿಸಿಕೊಂಡಿತು.
<1975ರಲ್ಲಿ ಒಲಿಯಿತು ಚೊಚ್ಚಲ ವಿಶ್ವಕಪ್
1971ರಲ್ಲಿ ತೃತೀಯ ಸ್ಥಾನ ಹಾಗೂ 1973ರಲ್ಲಿ ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಭಾರತ ತಂಡವು 1975ರಲ್ಲಿ ಚೊಚ್ಚಲ ಹಾಕಿ ವಿಶ್ವಕಪ್ ಜಯಿಸಿತು. 1975ರಲ್ಲಿ ಮಲೇಶ್ಯದ ಕೌಲಾಲಂಪುರದಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತವು ಬಿ ಗುಂಪಿನಲ್ಲಿ ಪ್ರಥಮ ಸ್ಥಾನ ಪಡೆದು ಸೆಮಿಫೈನಲ್‌ನಲ್ಲಿ ಆತಿಥೇಯ ಮಲೇಶ್ಯ ವಿರುದ್ಧ 3-2 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು. ಪಶ್ಚಿಮ ಜರ್ಮನಿ ವಿರುದ್ಧ 5-1 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದ ಪಾಕಿಸ್ತಾನ ತಂಡವು ತನ್ನ ಎರಡನೇ ವಿಶ್ವಕಪ್ ಪ್ರಶಸ್ತಿಯ ವಿಶ್ವಾಸದಲ್ಲಿತ್ತು. ಅಜಿತ್ ಪಾಲ್ ಸಿಂಗ್ ನೇತೃತ್ವದ ಭಾರತ ತಂಡವು 2-1 ಗೋಲುಗಳ ಅಂತರದಿಂದ ಗೆದ್ದು ಚೊಚ್ಚಲ ಹಾಕಿ ವಿಶ್ವಕಪ್ ಮುಡಿಗೇರಿಸಿಕೊಂಡಿತು. ಭಾರತದ ಚಾಂಪಿಯನ್ ತಂಡದಲಿ ್ಲ
ಕನ್ನಡಿಗರಾದ ಕೊಡಗಿನ ವಿ.ಪಿ. ಗೋವಿಂದ ಹಾಗೂ ಪಿ.ವಿ. ಕಾಳಯ್ಯಅವರು ಸ್ಥಾನ ಪಡೆದಿದ್ದು, ಮತ್ತೊಂದು ವಿಶೇಷವಾಗಿತ್ತು. 1971,1973 ಮತ್ತು 1975ರ ಹಾಕಿ ವಿಶ್ವಕಪ್ ಭಾರತದ ಪಾಲಿಗೆ ಸುವರ್ಣಯುಗವಾಗಿತ್ತು. ಅಲ್ಲಿಂದೀಚೆಗೆ ಭಾರತ ಹಾಕಿ ತಂಡವು ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲೇ ಹೋರಾಟ ಅಂತ್ಯಗೊಳಿಸುತ್ತಿದೆ.
<ಆಗಸ್ಟ್ 19ಕ್ಕೆ ಭಾರತ ಮತ್ತು ಪಾಕಿಸ್ತಾನ ಕಾದಾಟ
ಈ ಬಾರಿಯ ಹಾಕಿ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಲೀಗ್ ಹಂತದಲ್ಲಿ ಮುಖಾಮುಖಿಯಾಗಲಿವೆೆ. ಡಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಎರಡು ತಂಡಗಳ ಹೈವೋಲ್ಟೇಜ್ ಪಂದ್ಯಕ್ಕೆ ಹಲವು ಇತಿಹಾಸವಿದೆ. ಚೊಚ್ಚಲ ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಸೋಲು ಕಂಡಿತು ಹಾಗೂ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನು ಭಾರತವು ಪಾಕಿಸ್ತಾನವನ್ನು ಮಣಿಸಿ ಗೆದ್ದಿರುವುದು ಇತಿಹಾಸ.
ಭಾರತ ಮತ್ತು ಪಾಕಿಸ್ತಾನ ನಡುವೆ ಒಟ್ಟು 183 ಹಾಕಿ ಪಂದ್ಯಗಳು ನಡೆದಿವೆ. ಇದರಲ್ಲಿ ಪಾಕಿಸ್ತಾನ 82 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 69 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 32 ಪಂದ್ಯಗಳು ಡ್ರಾ ಆಗಿವೆ. ಪಾಕಿಸ್ತಾನ 407 ಗೋಲುಗಳನ್ನು ಗಳಿಸಿದ್ದರೆ, ಭಾರತ 390 ಗೋಲುಗಳನ್ನು ಗಳಿಸಿದೆ. ಆದರೆ. ಪ್ರಸಕ್ತ ಪರಿಸ್ಥಿತಿಯನ್ನು ನೋಡಿದರೆ ಭಾರತೀಯ ಹಾಕಿ ತಂಡವು ಬಲಿಷ್ಠವಾಗಿ ಕಾಣುತ್ತಿದೆ. ಈ ವರ್ಷ ಭಾರತವು ಪ್ರೊ ಲೀಗ್‌ನಲ್ಲಿ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿತ್ತು. ಮೊದಲ ಪಂದ್ಯವನ್ನು 4-3 ಅಂತರದಿಂದ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲಿ 7-1 ಅಂತರದಿಂದ ಸೋಲಿಸಿತ್ತು. ಆದರೆ ಇಡೀ ಹಾಕಿ ವಿಶ್ವಕಪ್ ನಲ್ಲಿ ಪಾಕಿಸ್ತಾನವು ನಾಲ್ಕು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಭಾರತ ಕೇವಲ ಒಂದು ಬಾರಿ ಮಾತ್ರ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
<ನೀಲಿಯಿಂದ ಕೇಸರಿಗೆ ಜರ್ಸಿ ಬಣ್ಣ ಬದಲಾವಣೆ
ಹಾಕಿ ವಿಶ್ವಕಪ್‌ಗಾಗಿ ಹಾಕಿ ಇಂಡಿಯಾವು ಪುರುಷ ಮತ್ತು ಮಹಿಳಾ ರಾಷ್ಟ್ರೀಯ ತಂಡಗಳಿಗೆ ಹೊಸ ಜರ್ಸಿಯನ್ನು ಅನಾವರಣಗೊಳಿಸಿದೆ. ಈ ಬಾರಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣವನ್ನು ಬದಲಾಯಿಸಿ ಕೇಸರಿ ಬಣ್ಣದ ಜರ್ಸಿ ಪರಿಚಯಿಸಲಾಗಿದೆ. ಜರ್ಸಿ ಬಣ್ಣ ಬದಲಾವಣೆಗೆ ಭಾರತ ಹಾಕಿ ತಂಡದ ವೀರೇನ್ ರಸ್ಕಿನ್ಹಾ ಸಹಿತ ಹಲವು ಮಾಜಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಭಾರತೀಯ ಹಾಕಿ ತಂಡದ ಗುರುತು ಮತ್ತು ಪರಂಪರೆ ಯಾವಾಗಲೂ ‘ನೀಲಿ’ ಬಣ್ಣದೊಂದಿಗೆ ಬೆಸೆದುಕೊಂಡಿದೆ. ನಾನು ವರ್ಷಗಳ ಕಾಲ ನೀಲಿ ಜರ್ಸಿಯನ್ನು ಹೆಮ್ಮೆಯಿಂದ ಧರಿಸಿದ್ದೇನೆ. ಅಭಿಮಾನಿಗಳು ಸಹ ನಮ್ಮ ತಂಡವನ್ನು ನೀಲಿ ಬಣ್ಣದಲ್ಲೇ ನೋಡಲು ಬಯಸುತ್ತಾರೆ. ಇದ್ದಕ್ಕಿದ್ದಂತೆ ಕೇಸರಿ ಬಣ್ಣಕ್ಕೆ ಬದಲಾಯಿಸಲು ಕಾರಣವೇನು’’ ಎಂದು ರಸ್ಕಿನ್ಹಾ ಪ್ರಶ್ನಿಸಿದ್ದಾರೆ. ಅಲ್ಲದೆ ಜರ್ಸಿ ಬಣ್ಣ ಬದಲಾವಣೆಗೆ ರಾಜಕೀಯ ಮುಖಂಡರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
<ಬಣ್ಣ ಬದಲಾವಣೆಗೆ ತಾಂತ್ರಿಕ ಕಾರಣ ನೀಡಿದ ಹಾಕಿ ಇಂಡಿಯಾ : ಪ್ರಸ್ತುತ ಅಂತರ್‌ರಾಷ್ಟ್ರೀಯ ಹಾಕಿ ಪಂದ್ಯಗಳ ಮೈದಾನಗಳು ನೀಲಿ ಬಣ್ಣದಲ್ಲೇ ಇರುವುದರಿಂದ, ನಮ್ಮ ನೀಲಿ ಸಮವಸ್ತ್ರವು ಮೈದಾನದ ಬಣ್ಣದೊಂದಿಗೆ ಬೆರೆತುಹೋಗುತ್ತಿದೆ. ಆಟಗಾರರ ಸ್ಪಷ್ಟತೆ ಮತ್ತು ಗೋಚರತೆಯ ಮೇಲೆ ಪರಿಣಾಮ ಬೀರುತ್ತಿತ್ತು. ಕೋಚ್‌ಗಳು ಮತ್ತು ಆಟಗಾರರ ಶಿಫಾರಸಿನ ಮೇರೆಗೆ ಕೇಸರಿ ಬಣ್ಣವನ್ನು ಅಂತಿಮಗೊಳಿಸಲಾಯಿತು. ಕೇಸರಿ ನಮ್ಮ ರಾಷ್ಟ್ರಧ್ವಜದ ಬಣ್ಣವಾಗಿದ್ದು ಧೈರ್ಯ, ತ್ಯಾಗ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತ ಎಂದು ಹೇಳಿದೆ.