×
Ad

ನಾಡಹಬ್ಬ ದಸರಾ ಎಂಬ ಪ್ರಜಾಪ್ರಭುತ್ವದ ಪಠ್ಯ

Update: 2025-10-10 12:39 IST

ದಸರಾ ಆಚರಣೆಯು ಖಾಸಗಿ ಧಾರ್ಮಿಕ ಕಾರ್ಯಕ್ರಮವಲ್ಲ, ಬದಲಾಗಿ ಸರಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಒಂದು ಸೆಕ್ಯುಲರ್ ರಾಜ್ಯವು ಧರ್ಮಗಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ, ಧರ್ಮಗಳ ವಿಷಯದಲ್ಲಿ ಸರಕಾರವು ತಟಸ್ಥವಾಗಿರಬೇಕು ಎಂಬ ಅಭಿಪ್ರಾಯವನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯ ದಾಖಲಿಸುವ ಮೂಲಕ ಭಾರತ ಸಂವಿಧಾನದ ಆಶಯದಂತೆ ಜಾತ್ಯತೀತ ರಾಜಕೀಯದ ಸ್ವರೂಪವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟು, ದಿನಬೆಳಗಾದರೆ ಸಂಕುಚಿತ ಧಾರ್ಮಿಕ ನಿರೂಪಣೆಗಳಿಂದ ಸಾಮಾಜಿಕ ಕ್ಷೋಭೆಯನ್ನು ಸೃಜಿಸುತ್ತಿರುವ ಶಕ್ತಿಗಳಿಗೆ ನಮ್ಮದೇ ಸಾಂವಿಧಾನಿಕ ಮೌಲ್ಯಗಳ ಕುರಿತು ಪಾಠವನ್ನು ಮಾಡಿದೆ.

ಈಬಾರಿಯ ದಸರಾ ಹಬ್ಬ ನಾಡಹಬ್ಬದ ಜೊತೆ ಜೊತೆಗೆ ಈ ದೇಶದ ಸಂವಿಧಾನ ಒಪ್ಪಿಕೊಂಡ ಜಾತ್ಯತೀತ ರಾಜ್ಯ-ವ್ಯವಸ್ಥೆಯನ್ನು ಯುವ-ತಲೆಮಾರು ವೈಜ್ಞಾನಿಕವಾಗಿ ಹೇಗೆ ಗ್ರಹಿಸಬೇಕು? ಎಂಬ ಚಾರಿತ್ರಿಕ ಪಠ್ಯವಾಗಿಯೂ ಒದಗಿ ಬಂದಿದೆ. ಈ ಕಾರಣಕ್ಕಾಗಿ ನಾವು ಮೊದಲು ದಸರಾ ಉದ್ಘಾಟಕರನ್ನಾಗಿ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳನ್ನು ಹೇಳಬೇಕಿದೆ. ಅದಕ್ಕಿಂತಲೂ ಹೆಚ್ಚು ಬಾನು ಅವರ ಆಯ್ಕೆಯನ್ನು ನಿರಂತರವಾಗಿ ವಿರೋಧಿಸಿದ ಮತ್ತು ಆ ವಿರೋಧವನ್ನು ಈ ದೇಶದ ಸರ್ವೋಚ್ಚ ನ್ಯಾಯಾಲಯದವರೆಗೂ ತೆಗೆದುಕೊಂಡು ಹೋದ ಶಕ್ತಿಗಳಿಗೂ ನಾವು ಮನಃಪೂರ್ವಕ ಧನ್ಯವಾದ ಅರ್ಪಿಸಬೇಕಿದೆ.

ಯಾವುದೇ ದೇಶದ ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ಯಶಸ್ಸು ಇರುವುದೇ ‘ಅಲ್ಲಿನ ಜನಸಮುದಾಯಗಳು ತಮ್ಮ ನಡುವೆ ಇದ್ದಿರಬಹುದಾದ ಪರಸ್ಪರ ಭಿನ್ನತೆ ಮತ್ತು ವೈರುಧ್ಯಗಳನ್ನು ಹಿಂಸೆಯ ಆಚೆಗೆ ಚರ್ಚೆ, ಸಂವಾದ, ವಾಗ್ವಾದ ಮತ್ತು ನ್ಯಾಯಿಕ ಹಾದಿಗಳಿಂದ ಹೇಗೆ ಬಗೆಹರಿಸಿಕೊಳ್ಳುತ್ತವೆ ಎನ್ನುವ ವಿವೇಕದಲ್ಲಿ’. ಈ ಅರ್ಥದಲ್ಲಿ ಈ ಬಾರಿಯ ದಸರಾ ನಾಡಹಬ್ಬದ ಆಚೆಗೆ ಪ್ರಜಾಪ್ರಭುತ್ವದ ಮೂಲ ಆಶಯವಾದ ‘ವಾಗ್ವಾದಗಳ’ ಹಬ್ಬವೂ ಆಗಿ ಪರಿಣಮಿಸಿದ್ದು ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾದ ನನಗೆ ಮುಖ್ಯ ಅನ್ನಿಸುತ್ತಿದೆ.

ದಸರಾ ಸುತ್ತಲಿನ ಈ ಎಲ್ಲಾ ಬೆಳವಣಿಗೆಗಳು ಈ ಬಾರಿಯ ದಸರಾ ಉದ್ಘಾಟನೆಯನ್ನು ಸಂಭ್ರಮದ ನಾಡಹಬ್ಬದ ಜೊತೆಗೆ ಒಂದು ರಾಜಕೀಯ ಮತ್ತು ಸಾಂಸ್ಕೃತಿಕ ಪಠ್ಯವಾಗಿ ನೋಡುವ ಸನ್ನಿವೇಶವನ್ನು ಸೃಜಿಸಿದೆ.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಯ್ಕೆ ಘೋಷಣೆಯಾದ ನಂತರ ಹಲವು ವಿರೋಧದ ಧ್ವನಿಗಳು ಬಂದಿವೆ, ಅವುಗಳಲ್ಲಿ ಮುಖ್ಯವಾದ ಮತ್ತು ನ್ಯಾಯಾಲಯದಲ್ಲೂ ದಾಖಲಾದ ವಿರೋಧ ‘ಅವರು ಅನ್ಯಧರ್ಮೀಯರು, ಏಕದೇವತಾ ಆರಾಧಕರಾದ ಅವರು ನಮ್ಮ ದೇವರನ್ನು ಹೇಗೆ ಪೂಜಿಸುತ್ತಾರೆ’ ಎಂಬುದು.

ಈ ಹಿನ್ನೆಲೆಯಲ್ಲಿಯೇ ಅರ್ಜಿದಾರ ಎಚ್.ಎಸ್. ಗೌರವ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಿದ ವಾದವನ್ನು ಗಮನಿಸಬೇಕಿದೆ. ಅವರ ಪ್ರಕಾರ ‘ಯಾವುದೇ ಕಾರ್ಯಕ್ರಮವೊಂದನ್ನು ರಿಬ್ಬನ್ ಕತ್ತರಿಸುವ ಮೂಲಕ’ ಅನ್ಯಧರ್ಮೀಯರು ಉದ್ಘಾಟಿಸುವುದನ್ನು ನಾವು ಜಾತ್ಯತೀತ ಚಟುವಟಿಕೆ ಎನ್ನಬಹುದೇನೋ...! ಆದರೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವರ ಮುಂದೆ ನಡೆಯುವ ಉದ್ಘಾಟನಾ ಪೂಜೆ ಹಿಂದೂಯೇತರರು ಮಾಡಲಾಗದ ಅಗತ್ಯ ಧಾರ್ಮಿಕ ಆಚರಣೆಯಾಗಿದೆ.

ಈ ಹಿನ್ನೆಲೆಯಲ್ಲಿ ‘ಮುಸ್ಲಿಮ್ ಧರ್ಮೀಯರಾದ ಮುಷ್ತಾಕ್ ಅವರನ್ನು ದಸರಾ ಆಚರಣೆಗಳಲ್ಲಿ ಭಾಗವಹಿಸಲು ಆಹ್ವಾನಿಸುವುದು ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ರಕ್ಷಿಸಲ್ಪಟ್ಟ ಹಿಂದೂ ಧಾರ್ಮಿಕ ಆಚರಣೆಗಳನ್ನು ಉಲ್ಲಂಘಿಸುವ ರಾಜಕೀಯವಾಗಿದೆ’ ಎಂಬ ವಾದವನ್ನು ಮಂಡಿಸಿದ್ದರು.

ವಾಸ್ತವದಲ್ಲಿ ಧರ್ಮಗಳ(ರಿಲಿಜಿಯನ್)ಕುರಿತ ಈ ಮಾದರಿಯ ವಾದಗಳು ‘ಧರ್ಮ ಮತ್ತು ಅದರ ಆಚರಣೆಗಳು ಎಂದಿಗೂ ಬದಲಾಗದ ಸಂಗತಿಗಳು, ಧರ್ಮ ಮೂಲತಃ ಯಥಾಸ್ಥಿತಿವಾದಿ’ ಎಂಬ ಪೂರ್ವಾಗ್ರಹದಿಂದ ಹುಟ್ಟುತ್ತವೆ. ಈ ಅರ್ಥದಲ್ಲಿ ಧರ್ಮಗಳನ್ನು ನಿರ್ವಚಿಸಿಕೊಳ್ಳುವ ಕ್ರಮವನ್ನು ನಾವು ಧರ್ಮಗಳ ಕುರಿತ ‘ಸೆಮೆಟಿಕ್ ಕಣ್ಣೋಟ’ ಎನ್ನುತ್ತೇವೆ.

ಆದರೆ ಜಗತ್ತಿನ ಎಲ್ಲಾ ಸಾಮಾಜಿಕ ಸಂಸ್ಥೆಗಳಂತೆ ಧರ್ಮಗಳು, ಅವುಗಳ ಆಚರಣೆಗಳು ಕಾಲದಿಂದ ಕಾಲಕ್ಕೆ ಮಾರ್ಪಾಡಿಗೆ ಒಳಗಾಗುತ್ತಲೇ ಇವೆ, ಅವುಗಳನ್ನು ಪಾಲಿಸುವ ಜನಸಮುದಾಯಗಳು ಕಾಲಕ್ಕೆ ಪೂರಕವಾದ ಬದಲಾವಣೆಗಳನ್ನು ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇಂದು ಯಾವ ಧರ್ಮಗಳೂ ಅವುಗಳ ಆದರ್ಶರೂಪದಲ್ಲಿ ಆಚರಣೆಯಲ್ಲಿಲ್ಲ ಅನ್ನುವ ವಾಸ್ತವ ಈ ಅಂಶವನ್ನು ಪುಷ್ಟೀಕರಿಸುತ್ತದೆ.

ಇಸ್ಲಾಮಿನ ಪ್ರಶ್ನೆಯನ್ನೇ ನೋಡುವುದಾದರೆ ಅಲ್ಲಿರುವ ಕೆಲವು ಸಾಂಸ್ಥಿಕ ಕ್ರಮಗಳನ್ನು ವಿಮರ್ಶಿಸುವ ಮೂಲಕ ಸೂಫಿಸಂ ಎಂಬ ಆಧ್ಯಾತ್ಮಿಕ ಧಾರೆಯೊಂದು ಇಸ್ಲಾಮ್ ಒಳಗೆಯೇ ಚಿಗುರೊಡೆದು ಬೆಳೆದ ಬಗೆಯೇ ಒಂದು ರೋಚಕ ಕಥನ. ಹಾಗೆಯೇ ಆರಂಭದಲ್ಲಿ ಡಾರ್ವಿನ್ ವಿಕಾಸವಾದವನ್ನು ಒಪ್ಪದ/ಕಟುವಾಗಿ ಟೀಕಿಸಿದ ಕ್ರಿಶ್ಚಿಯಾನಿಟಿ 2008 ಹೊತ್ತಿಗೆ ‘ಡಾರ್ವಿನ್ ವಿಕಾಸವಾದದಲ್ಲಿ ಹುರುಳಿದೆ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿತ್ತು.

ನಮ್ಮದೇ ನೆಲದ ಗಾಂಧಿ ‘ಸನಾತನಧರ್ಮ ಅನ್ನುವುದು ಮನುಷ್ಯನ ಕೂಡು ಬದುಕಿಗೆ ಪೂರಕವಾದ, ಉತ್ತಮ ನಡತೆ, ನೈತಿಕತೆ, ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದ ಮತ್ತು ಎಲ್ಲಾ ಧರ್ಮಗಳಿಂದಲೂ ಕಲಿಯಲು ಹಂಬಲಿಸುವ ಸಂಗತಿಯೇ ಹೊರತು ಕೇವಲ ಕಟ್ಟುಕಟ್ಟಳೆಗಳ ಪುಸ್ತಕವಲ್ಲ’ ಎನ್ನುವ ಅಭಿಪ್ರಾಯ ದಾಖಲಿಸಿದ ಸಂಗತಿಗಳು ಧರ್ಮಗಳ ಒಳಗೆ ಇರಬಹುದಾದ ವೈವಿಧ್ಯತೆಯ ಸಂಕೇತ.

ಧರ್ಮಗಳ ಅಂತರ್ಯದಲ್ಲಿ ನಿರಂತರವಾಗಿರುವ ಈ ಚಲನೆಯನ್ನು ಗುರುತಿಸದೇ ‘ಸೆಮೆಟಿಕ್’ ಮಾದರಿಯಲ್ಲಿಯೇ ಧರ್ಮವನ್ನು ಗ್ರಹಿಸಿ ಅದನ್ನು ವಿಮರ್ಶಿಸಲು ಹೊರಡುವುದೇ ‘ಆಧುನಿಕ ಧಾರ್ಮಿಕ ಮೂಲಭೂತವಾದದ’ ಮೂಲ ಲಕ್ಷಣವಾಗಿದೆ.

ಈ ಮೂಲಭೂತವಾದ ಮೊದಲ ಹಂತದಲ್ಲಿ ತನ್ನ ವಿರೋಧಿ ಧರ್ಮವನ್ನು ಅತ್ಯಂತ ಸಾಂಪ್ರದಾಯಿಕವಾದ, ಯಾವ ಬದಲಾವಣೆಗೂ ಒಗ್ಗದ, ತನ್ನ ಲೋಕದೃಷ್ಟಿಯೇ ಶ್ರೇಷ್ಠ, ತಾನು ಪ್ರತಿಪಾದಿಸುವುದೇ ಅಂತಿಮ ಸತ್ಯ ಎಂಬ ಸೆಮೆಟಿಕ್ ಮಾದರಿಯಲ್ಲಿ ಗುರುತಿಸುತ್ತದೆ, ನಂತರ ತಾನೇ ಸೃಷ್ಟಿಸಿಕೊಂಡ ತನ್ನ ವಿರೋಧಿ ಧರ್ಮದ ಗುಣಲಕ್ಷಣಗಳನ್ನು ಕಟುವಾಗಿ ವಿಮರ್ಶಿಸುವ ‘ಸೆಮೆಟಿಕ್ ಧಾರ್ಮಿಕತೆ ವಿರೋಧಿ ತರ್ಕವೊಂದನ್ನು’ ಸೃಷ್ಟಿಸಿಕೊಂಡು ಧಾರ್ಮಿಕ ವಿರೋಧಿ ನಿರೂಪಣೆಗಳನ್ನು ಸೃಷ್ಟಿಸುವ ಮೂಲಕ ತನ್ನ ರಾಜಕೀಯ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುತ್ತದೆ.

ಧರ್ಮಗಳ ಕುರಿತ ಈ ಮಾದರಿಯ ಸಂಕುಚಿತ ಸಂಕಥನದ ಮೂಲ 19ನೇ ಶತಮಾನದಲ್ಲಿ ನಾಝಿಗಳು ಯಹೂದಿಗಳ ವಿರುದ್ಧ ಹೂಡಿದ ‘ಜನಾಂಗೀಯವಾದಿ’ ನಿಲುವುಗಳಲ್ಲಿದೆ ಎನ್ನುವ ಸಂಗತಿಯನ್ನು ಹಲವಾರು ರಾಜಕೀಯ ಚಿಂತಕರು ವ್ಯವಸ್ಥಿತವಾಗಿ ಸಾಬೀತುಪಡಿಸಿದ್ದಾರೆ.

ದಸರಾ ಆಚರಣೆಯು ಖಾಸಗಿ ಧಾರ್ಮಿಕ ಕಾರ್ಯಕ್ರಮವಲ್ಲ, ಬದಲಾಗಿ ಸರಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಒಂದು ಸೆಕ್ಯುಲರ್ ರಾಜ್ಯವು ಧರ್ಮಗಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ, ಧರ್ಮಗಳ ವಿಷಯದಲ್ಲಿ ಸರಕಾರವು ತಟಸ್ಥವಾಗಿರಬೇಕು ಎಂಬ ಅಭಿಪ್ರಾಯವನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯ ದಾಖಲಿಸುವ ಮೂಲಕ ಭಾರತ ಸಂವಿಧಾನದ ಆಶಯದಂತೆ ಜಾತ್ಯತೀತ ರಾಜಕೀಯದ ಸ್ವರೂಪವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟು, ದಿನಬೆಳಗಾದರೆ ಸಂಕುಚಿತ ಧಾರ್ಮಿಕ ನಿರೂಪಣೆಗಳ ಮೂಲಕ ಸಾಮಾಜಿಕ ಕ್ಷೋಭೆಯನ್ನು ಸೃಜಿಸುತ್ತಿರುವ ಶಕ್ತಿಗಳಿಗೆ ನಮ್ಮದೇ ಸಾಂವಿಧಾನಿಕ ಮೌಲ್ಯಗಳ ಕುರಿತು ಪಾಠವನ್ನು ಮಾಡಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುತ್ತಾ ಆಡಿದ ‘‘ನನ್ನ ಧಾರ್ಮಿಕ ನಂಬಿಕೆಗಳು, ಜೀವನ ದರ್ಶನಗಳು ಯಾವತ್ತೂ ಜೀವಪರವಾಗಿದೆ, ಹಿಂಸೆಯ ಜ್ವಾಲೆಯಲ್ಲಿ ಸುಡುತ್ತಿರುವ ಜಗತ್ತಿಗೆ ಅಕ್ಷರವೇ ಆಸರೆ! ಹಾಗಾಗಿಯೇ ನಾವು ಅಸ್ತ್ರಗಳಿಂದಲ್ಲ ಅಕ್ಷರಗಳಿಂದ ಬದುಕು ಗೆಲ್ಲಬಹುದು, ಹಗೆಗಳಿಂದ ಅಲ್ಲ ಪ್ರೀತಿಯಿಂದ ಬದುಕನ್ನು ಅರಳಿಸಬಹುದು’’ ಎಂಬ ಮಾತುಗಳು ಈ ಕಾಲಕ್ಕೆ ಬೇಕಾದ ತಿಳಿವಿನ ಪ್ರತೀಕದಂತಿವೆ.

ಕಾಕತಾಳೀಯ ಎಂಬಂತೆ ಈ ಬಾರಿ ದಸರಾ ಮತ್ತು ಗಾಂಧಿ ಜಯಂತಿ ಒಟ್ಟಿಗೆ ಬಂತು! ದಸರೆಯ ಸಂಭ್ರಮ, ಗಾಂಧಿ ಮತ್ತು ನಮ್ಮ ಸಂವಿಧಾನ ಸೂಚಿಸಿದ ‘ಧಾರ್ಮಿಕ ವಿವೇಕ’ವನ್ನು ಮಾನ್ಯ ನ್ಯಾಯಾಲಯ ಎತ್ತಿಹಿಡಿಯುವ ಮೂಲಕ ದಸರಾ ಕೇವಲ ಹಬ್ಬವಾಗಿ, ಆಚರಣೆಯಾಗಿ ಮುಗಿದು ಹೋಗಲು ಬಿಡದೆ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಕಥನವಾಗಿ ರೂಪಿಸಿದೆ.

ಈ ಎಲ್ಲಾ ಸಂಗತಿಯ ನಡುವೆ ತಿಳಿ ಹಳದಿ ಸೀರೆ, ಅದಕ್ಕೊಪ್ಪುವ ಹಸಿರು ರವಿಕೆ, ಮೈಸೂರು ಮಲ್ಲಿಗೆ ಮುಡಿದು ದಸರಾ ಉದ್ಘಾಟಿಸಿದ ಬಾನು ಎಂಬ ಚೆಂದದ ಚಿತ್ರ ಮತ್ತು ಅವರು ಆಡಿದ ತಾಯ್ತನದ ಮಾತುಗಳು ತಲೆಮಾರುಗಳ ಪಾಲಿಗೆ ಈ ನೆಲದ ಜಾತ್ಯತೀತ ಪರಂಪರೆಯ ಕುರಿತು ಹೆಮ್ಮೆ ಪಡುವ ರೂಪಕವಾಗಿ ಉಳಿದು ಹೋಗಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಕಿರಣ್ ಎಂ. ಗಾಜನೂರು

contributor

Similar News