×
Ad

ಬಲೂನ್ ಮಾರಲು ಬಂದಿದ್ದ ಅಲೆಮಾರಿ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ

ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಸರಕಾರಕ್ಕೆ ಸಾರ್ವಜನಿಕರ ಆಗ್ರಹ

Update: 2025-10-11 14:23 IST

ಮೈಸೂರು : ಮೈಸೂರು ದಸರಾದಲ್ಲಿ ಹೊಟ್ಟೆಪಾಡಿಗಾಗಿ ಬಲೂನ್ ಮಾರಲು ಬಂದಿದ್ದ ಅಲೆಮಾರಿ ಸಮುದಾಯದ ಬಾಲಕಿ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಳವರ್ಗದವರ ಮಾನ-ಪ್ರಾಣದ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲವೇ? ಆ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಸರಕಾರ ಏಕೆ ಮುಂದಾಗಿಲ್ಲ ಎಂಬ ಪ್ರಶ್ನೆ ಪ್ರಗತಿಪರ ಚಿಂತಕರು, ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಅ.9ರಂದು ಬೆಳಗ್ಗೆ ನಗರದ ವಸ್ತುಪ್ರದರ್ಶನ ಮೈದಾನದಲ್ಲಿ ಬಾಲಕಿಯ ಮೃತದೇಹ ದೊರೆತಿದೆ. ಈ ವೇಳೆ ಬಾಲಕಿ ಕೆಳ ಭಾಗದ ಉಡುಪು ಕಳಚಿ ಬಿದ್ದಿದ್ದು, ಮರ್ಮಾಂಗ ಗಾಯಗೊಂಡಿದೆ. ಇದನ್ನು ನೋಡಿದ ತಕ್ಷಣ ಇದೊಂದು ಅತ್ಯಾಚಾರ ಕೊಲೆ ಎಂಬುದು ತಿಳಿದು ಬರುತ್ತದೆ. ಈ ಘಟನೆ ವಿಚಾರ ಗೊತ್ತಾಗುತ್ತಿದ್ದಂತೆ ಮೈಸೂರು ಜನ ಬೆಚ್ಚಿ ಬಿದ್ದಿದ್ದಾರೆ.

ಮೈಸೂರು ದಸರಾಕ್ಕೆ ಎರಡು ವರ್ಗದ ಜನ ಬರುತ್ತಾರೆ. ಒಂದು ಮೈಸೂರಿನಲ್ಲಿ ನಡೆಯುವ ದಸರಾದ ಎಲ್ಲಾ ಕಾರ್ಯಕ್ರಮಗಳು, ವರ್ಣರಂಜಿತ ವಿದ್ಯುತ್ ದೀಪಾಲಂಕಾರಗಳು, ಜಂಬೂ ಸವಾರಿ ಮೆರವಣಿಗೆಯನ್ನು ಕಂಡು ಸಂಭ್ರಮಿಸುವ ಜನವಾದರೆ, ಮತ್ತೊಂದು ವರ್ಗ ದಸರಾದಲ್ಲಿ ಮೂರು ಕಾಸು ಸಂಪಾದನೆ ಮಾಡಿಕೊಳ್ಳಬಹುದು ಎಂದು ರಸ್ತೆ ಬದಿ ವ್ಯಾಪಾರ ಮಾಡುವವರು, ಬಲೂನ್, ಮಕ್ಕಳ ಆಟಿಕೆ ಸೇರಿದಂತೆ ಇನ್ನಿತರ ವ್ಯಾಪಾರ ಮಾಡುವವರಾಗಿದ್ದಾರೆ. ಆದರೆ ದಸರಾ ನೋಡಲು ಬಂದವರು ಸಂಭ್ರಮಿಸಿ ಸಂತೋಷದಿಂದ ಹೋದರೆ, ಬದುಕಿಗಾಗಿ ಬಲೂನ್ ಮಾರಾಟ ಮಾಡಲು ಬಂದ ಅಲೆಮಾರಿ ಸಮುದಾಯ ಬದುಕು ಇಲ್ಲದೆ ತನ್ನ ಹೆತ್ತ ೯ ವರ್ಷದ ಹೆಣ್ಣುಮಗುವಿನ ದಾರುಣ ಸಾವನ್ನು ಕಣ್ಣಾರೆ ಕಂಡು ನೋವಿನಲ್ಲೇ ತನ್ನ ಊರಿನತ್ತ ಹೋಗಬೇಕಾದಂತಹ ಪರಿಸ್ಥಿತಿ ಬಂದಿದೆ.

ಕಲಬುರಗಿಯಿಂದ ಬಂದ ಅಲೆಮಾರಿ ಸಮುದಾಯ ಬಾಳಿ ಬದುಕಬೇಕಿದ್ದ ಪುಟ್ಟ ಮಗಳ ಸಾವನ್ನು ಕಂಡು ಆಕ್ರೋಶವನ್ನು ವ್ಯಕ್ತಪಡಿಸಲಾಗದೆ, ಮೌನವಾಗಿಯೂ ಇರಲಾಗದೆ ಹೆಣವನ್ನು ಹೊತ್ತುಕೊಂಡು ಯಾರ ಬಳಿಯೂ ನ್ಯಾಯ ಕೇಳಲಾಗದೆ ತಮ್ಮೂರಿನತ್ತ ತೆರಳಿರುವುದು ಅತೀವ ನೋವಿನ ಸಂಗತಿಯಾಗಿದೆ.

ಅಲೆಮಾರಿ ಸಮುದಾಯದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಸೌಜನ್ಯಕ್ಕಾದರೂ ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಂತಾಪ ವ್ಯಕ್ತಪಡಿಸಬೇಕಿತ್ತು. ಜೊತೆಗೆ ಆ ಕುಟುಂಬಕ್ಕೆ ಪರಿಹಾರ ನೀಡಬೇಕಿತ್ತು. ಹತ್ಯೆಯಾದ ಬಾಲಕಿ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ನೀಡಿ ಆ ಸಮುದಾಯದ ಪರ ನಿಲ್ಲಬೇಕು ಎಂಬ ಅಭಿಪ್ರಾಯ ಮೈಸೂರಿನ ಪ್ರಜ್ಞಾವಂತರ ಒಕ್ಕೋರಲಿನ ಆಗ್ರಹವಾಗಿದೆ.

ಬಲೂನ್ ಮಾರಲು ಬಂದಿದ್ದ ಅಲೆಮಾರಿ ಸಮುದಾಯದ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ ಕೊಲೆ ಅಮಾನುಷ ಕೃತ್ಯವಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಈ ಸಮುದಾಯಗಳಿಗೆ ನೆಲೆ ಇಲ್ಲದಿರುವುದು ದುರಂತ. ತಮ್ಮ ಹೊಟ್ಟೆಪಾಡಿಗಾಗಿ ಊರೂರು ಅಲೆಯುತ್ತಾ ಜೀವನ ಸಾಗಿಸುತ್ತಿರುವ ಇವರ ಬದುಕಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ಖಂಡನೀಯ. ಆಳುವ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಆ ಕುಟುಂಬಕ್ಕೆ ಸೂಕ್ತಪರಿಹಾರವನ್ನು ನೀಡುವ ಕೆಲಸ ಮಾಡಬೇಕಿತ್ತು. ಆದರೆ ಆ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಸಮುದಾಯಕ್ಕೆ ಮಾಡಿದ ದ್ರೋಹ. ಈಗಲಾದರೂ ಸರಕಾರ ಆ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರಗತಿಪರ ಚಿಂತಕ ಲೇಖಕ ಸಿ.ಹರಕುಮಾರ್ ಆಗ್ರಹಿಸಿದ್ದಾರೆ.

ವಕೀಲ ಪುನೀತ್ ಮಾತನಾಡಿ, ಅಲೆಮಾರಿ ಸಮುದಾಯದ ಬಾಲಕಿ ಮೇಲೆ ನಡೆದ ಈ ಪೈಶಾಚಿಕ ಕೃತ್ಯ ಇಡೀ ಮೈಸೂರಿಗೆ ಕೆಟ್ಟ ಹೆಸರು ತಂದಿದೆ. ಇದರಿಂದ ಮೈಸೂರಿನ ಮಾನ ಹರಾಜಾಗಿದೆ. ಮುಂಜಾಗ್ರತವಾಗಿ ಎಚ್ಚರಿಕೆಯಿಂದ ಇರಬೇಕಾದ ಪೊಲೀಸ್ ಆಡಳಿತ ವಿಫಲವಾಗಿದೆ. ಆ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ಕೆಲಸವನ್ನು ಸರಕಾರ ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಸಾಮಾಜಿಕ ನ್ಯಾಯದ ಪರವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವ ಬಾಲಕಿ ಕುಟುಂಬಕ್ಕೆ ಧೈರ್ಯ ತುಂಬಬೇಕು. ಸಚಿವ ಸಂಪುಟದ ಸದಸ್ಯರನ್ನು ಕಳುಹಿಸಿ ಅವರಿಗೆ ನೆರವಾಗಬೇಕು. ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿ ಆ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯಮಾಡಬೇಕು. ಈ ಕುಟುಂಬಕ್ಕೆ ಆರ್ಥಿಕವಾಗಿ ನೆರವಾದರೆ ಅವರ ಆತ್ಮ ಸ್ಥೈರ್ಯ ತುಂಬಿದಂತೆ ಎಂದು ವಕೀಲ ಪುಟ್ಟಸಿದ್ದೇಗೌಡ ಹೇಳಿದ್ದಾರೆ.

ಮೈಸೂರಿನಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ, ಕೊಲೆಯಂತಹ ಘಟನೆ ನಡೆದಿರುವುದು ಅತ್ಯಂತ ದುರದೃಷ್ಟಕರ, ಪ್ರತಿ ದಸರಾಗೂ ಇಂತಹ ಅಲೆಮಾರಿ ಸಮುದಾಯ ಹೊಟ್ಟೆಪಾಡಿಗಾಗಿ ಮೈಸೂರಿಗೆ ಬರುತ್ತದೆ. ಅವರ ರಕ್ಷಣೆ ಜಿಲ್ಲಾಡಳಿತದ ಜವಾಬ್ದಾರಿ. ಆ ವರ್ಗವರು ತಂಗಲು ಸರಕಾರಿ ಶಾಲೆ ಅಥವಾ ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಬೇಕಿತ್ತು. ಆದರೆ ಅದ್ಯಾವುದನ್ನು ಮಾಡದೆ ಇರುವ ಕಾರಣ ಒಬ್ಬ ಅಲೆಮಾರಿ ಬಾಲಕಿಯನ್ನು ಕಳೆದುಕೊಳ್ಳಬೇಕಾಯಿತು. ಈ ಹೆಣ್ಣುಮಗು ಎಲ್ಲರ ಮನೆಯ ಮಗಳು ಎಂದು ತಿಳಿದುಕೊಂಡು ಸರ್ಕಾರ ಕೂಡಲೇ ೫೦ ಲಕ್ಷ ರೂ. ಪರಿಹಾರವನ್ನು ಆ ಕುಟಂಬಕ್ಕೆ ನೀಡಬೇಕು. ಈ ಸಂಬಂಧ ವಿಧಾನಸಭಾ ಅದಿವೇಶನದಲ್ಲಿ ಒತ್ತಾಯಿಸುತ್ತೇನೆ.

-ಟಿ.ಎಸ್.ಶ್ರೀವತ್ಸ, ಶಾಸಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನೇರಳೆ ಸತೀಶ್ ಕುಮಾರ್

contributor

Similar News