ತನ್ನದೇ ಕಾನೂನನ್ನು ತಿರುಚುವ ಸರಕಾರ!
ಡಿಜಿಟಲೈಸ್ ಮಾಡುವುದರಿಂದ ಪಾರದರ್ಶಕತೆ ಇದೆ, ಬೇಗನೆ ಹಣ ಜಮಾ ಆಗುತ್ತದೆ ಎಂದು ಇಷ್ಟೆಲ್ಲ ಸರ್ಕಸನ್ನು ಕೂಲಿಕಾರರ ಮತ್ತು ಪಂಚಾಯತ್‌ಗಳ ಕಡೆಯಿಂದ ಮಾಡಿಸಿದ ಕೇಂದ್ರ ಸರಕಾರ, ತಾನು ಗುಂಡಿ ಒತ್ತುವುದಿಲ್ಲ. ಕೆಲಸ ಮಾಡಿದ ಹದಿನೈದು ದಿನಗಳಲ್ಲಿ ಹಣ ಪಾವತಿಯಾಗಬೇಕು ಎಂದು ಕಾಯ್ದೆಯೇ ಹೇಳುತ್ತಿದ್ದರೂ ಮಾಡದೆ ಸುಮ್ಮನೆ ಇರುತ್ತದೆ. ಕೂಲಿ ಪಾವತಿ ವಿಳಂಬವಾದರೆ ಸರಕಾರ/ಅಧಿಕಾರಿ ದಂಡ ಕೊಡಬೇಕೆಂಬ ನಿಯಮ ಕೂಡ ಕಾನೂನಿನಲ್ಲಿ ಇದೆ. ಆದರೆ ಕಾನೂನು ಮಾಡಿದವರೇ ವಂಚಿಸುತ್ತಿದ್ದರೆ, ಮೊರೆ ಹೋಗುವುದು ಯಾರನ್ನು?
2015ರಿಂದೀಚೆಗೆ ಸರಕಾರವು ಎಲ್ಲಾ ವಿಷಯಗಳಲ್ಲೂ ಡಿಜಿಟಲೀಕರಣವನ್ನು ಜಾರಿಯಲ್ಲಿ ತಂದಿತಷ್ಟೇ. ಜನರಿಗೆ ಅರ್ಥವಾಗಲಿ, ಬಿಡಲಿ, ನೆಟ್‌ವರ್ಕ್ ಇರಲಿ, ಬಿಡಲಿ ನಾಗರಿಕರಿಗೆ ನೀಡುವ ಪ್ರತಿಯೊಂದು ಯೋಜನೆ, ಹಕ್ಕುಗಳನ್ನು ಪಡೆಯಲಿಕ್ಕೂ ಸ್ಮಾರ್ಟ್ ಫೋನು ಬೇಕು, ಆಧಾರ ಜೋಡಣೆ ಬೇಕು, ಒಟಿಪಿ ಬೇಕು. ಅದು ಕಡ್ಡಾಯವಾಯಿತು.
ನಾಗರಿಕರಿಗೆ, ಬಡ ಜನರಿಗೆ, ಅಕ್ಷರಸ್ಥರಲ್ಲದವರಿಗೆ ಕಲಿಯಲು, ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ತುಸು ಅವಕಾಶವನ್ನೂ ನೀಡದೆ ಸರಕಾರವು ಡಿಜಿಟಲೀಕರಣವನ್ನು ಕಡ್ಡಾಯ ಮಾಡಿದೆ. ರೇಶನ್ ಪಡೆಯಲು ಹೆಬ್ಬೆಟ್ಟು ಗುರುತು, ಉದ್ಯೋಗ ಖಾತರಿಗೆ ಆಧಾರ್, ಪೆನ್ಶನ್‌ಗಾಗಿ ಒಟಿಪಿ ಹೀಗೆ ಜನರಿಗರ್ಥವಾಗದ ಭಾಷೆಯನ್ನು ಜಾರಿಯಲ್ಲಿ ತಂದಾಗ ಜನಸಾಮಾನ್ಯರೆಲ್ಲ ಕಕ್ಕಾವಿಕ್ಕಿಯಾಗಬೇಕಾಯಿತು. ಬೇರೆ ದಾರಿಯೂ ಇಲ್ಲ, ಇದನ್ನು ಕಲಿಸುವವರೂ ಇಲ್ಲ. ಸೇವಾ ಕೇಂದ್ರಗಳಿಗೆ, ಖಾಸಗಿ ಆನ್‌ಲೈನ್ ಅಂಗಡಿಗಳಿಗೆ ಎಡತಾಕುವುದೊಂದೇ ಮಾರ್ಗವಾಯಿತು. ಒಂದು ಕಾಲದಲ್ಲಿ ಜೀವಿಸಲು ಆಧಾರವಾಗಿದ್ದ ರೇಶನ್, ಪೆನ್ಶನ್ ಮತ್ತು ಉದ್ಯೋಗ ಖಾತರಿಗಳು ಇಂದು ಕೈಗೆಟುಕುವುದೇ ಕಷ್ಟವಾಗಿ, ಹೋದರೆ ಹೋಗಲಿ ಎನ್ನುವಂತಾಯಿತು. ಅನೇಕ ಜನರು ಅದರ ಸನಿಹ ಸುಳಿಯುವುದನ್ನೇ ಬಿಟ್ಟರು.
ಸಂಘಟನೆಗಳೂ ಸುಸ್ತಾಗುವಷ್ಟು ವಿರೋಧಿಸಿ, ಆಂದೋಲನಗಳನ್ನು ನಡೆಸಿ, ಕೇಳುವವರಿಲ್ಲವೆಂದಾಗ ಕೈಬಿಟ್ಟವು.
ಪರಿಸ್ಥಿತಿ ಹೀಗಿದ್ದಾಗ ಕೆಲವು ಜನಪರ ಐಟಿ ಪರಿಣಿತರಿಗೆ ಇದಕ್ಕೊಂದು ಮಾರ್ಗ ಹುಡುಕಲೇಬೇಕೆನಿಸಿತು. ಇಲ್ಲವೆಂದರೆ ಸಾಮಾಜಿಕ ನ್ಯಾಯದ ಸಂವಿಧಾನದ ಮೂಲ ಆಶಯಕ್ಕೇ ಪೆಟ್ಟು ಬೀಳುವ ಪರಿಸ್ಥಿತಿ. ದೇಶವು ಈ ಎಪ್ಪತ್ತು ವರ್ಷಗಳಲ್ಲಿ ಜನರನ್ನು ಸಾಕ್ಷರರನ್ನಾಗಿಯಂತೂ ಮಾಡಲಿಲ್ಲ, ಈಗ ಸ್ಮಾರ್ಟ್, ಸ್ಮಾರ್ಟ್ ಎನ್ನುತ್ತ ಅನಕ್ಷರಸ್ಥರನ್ನು ಇನ್ನೂ ಪ್ರಪಾತಕ್ಕೆ ದೂಡುತ್ತಿರುವ ಕೆಲಸ ನಡೆದಿರುವಾಗ ಜನರ ಕೈಹಿಡಿದೆತ್ತಲು ಏನಾದರೂ ಮಾಡಲೇಬೇಕು ಎಂಬ ಆಶಯದೊಂದಿಗೆ ಹುಟ್ಟಿಕೊಂಡಿದ್ದು ಲಿಬ್ ಟೆಕ್ ಎನ್ನುವ ಸಂಸ್ಥೆ. ತಂತ್ರಜ್ಞಾನವೂ ಧರ್ಮದಂತೆಯೇ, ಅದು ತಿರುಳನ್ನರಿಯದವರನ್ನು ಈಗಿನಂತೆ ಕಟ್ಟಿಹಾಕಿ ಅಸಹಾಯಕರನ್ನಾಗಿ ಮಾಡಲೂ ಬಹುದು, ಅರಿತುಕೊಂಡರೆ ಬಿಡುಗಡೆಗೆ ಮಾರ್ಗವೂ ಆಗಬಹುದು ಎನ್ನುತ್ತದೆ ಲಿಬ್ ಟೆಕ್. ಆಳುವ ವರ್ಗವು ತಂತ್ರಜ್ಞಾನದ ಮೂಲಕ ಬಡ, ಅನಕ್ಷರಸ್ಥ ಕೂಲಿಕಾರ್ಮಿಕರಿಗೆ ವಂಚನೆ ಮಾಡತೊಡಗಿದರೆ ಅದೇ ತಂತ್ರಜ್ಞಾನವನ್ನರಿತ ಪರಿಣತರು ಮೋಸದ ಜಾಲದ ಒಳಗುಟ್ಟುಗಳನ್ನು ಜನರಿಗೆ ಹೇಳಿಕೊಟ್ಟು, ಅವರನ್ನು ಸಬಲರನ್ನಾಗಿಸಿ ಕಾನೂನು ಮತ್ತು ಸಂವಿಧಾನದ ಆಶಯಗಳನ್ನು ಈಡೇರಿಸಿಕೊಳ್ಳಬಹುದೆನ್ನುವುದೇ ಲಿಬ್ ಟೆಕ್.
ಜನರಿಗೆ ಸ್ಥಳೀಯವಾಗಿಯೇ ಕೆಲಸ ಸಿಗಬೇಕು, ಸ್ಥಳೀಯ ಸಂಪನ್ಮೂಲಗಳು ಹೆಚ್ಚಿ ಮುಂದೆಯೂ ಜನಕ್ಕೆ ಸ್ಥಳೀಯವಾಗಿಯೇ ಕೆಲಸಗಳು ಸಿಗುವಂತಾಗಬೇಕೆಂಬುದು ‘ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ’ ಕಾನೂನಿನ ಮೂಲ ಆಶಯ. ಸ್ಥಳೀಯವಾಗಿ ಜನರಿಗೆ ಉದ್ಯೋಗ ಸಿಗಬಾರದು, ಅವರು ಸದಾ ಶಹರಗಳಲ್ಲಿ ಕಡಿಮೆ ಕೂಲಿಗೆ ದುಡಿಯುವವರಾಗಿ ಸದಾ ಸಿಗುತ್ತಿರಬೇಕು ಎನ್ನುವುದು ಆಳುವವರ ಆಶಯ. ಅಕ್ಷರಜ್ಞಾನ, ತಂತ್ರಜ್ಞಾನ ತಮ್ಮ ಕೈಯಲ್ಲಿರುವುದರಿಂದ ಅದನ್ನು ಬಳಸಿಕೊಂಡು ಆಳುವ ವರ್ಗವು ಕಾನೂನನ್ನು ಜಾರಿಗೊಳಿಸುವ ನೀತಿಯಲ್ಲಿ ಹತ್ತು ಹಲವು ಅಡ್ಡಿಗಳನ್ನಿಡುತ್ತ ಸಾಗಿತು. ಆ ಅಡ್ಡಿಗಳೇನೇನು?
ಉದ್ಯೋಗ ಖಾತರಿಯಲ್ಲಿ ಕೂಲಿಗಳು ತಮ್ಮ ಊರುಗಳಲ್ಲಿ, ಕೆರೆ ಹೂಳೆತ್ತುವುದು, ಭೂಮಿ ಸಮತಟ್ಟುಮಾಡುವುದು ಮುಂತಾದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಕೆಲಸದ ಅಳತೆ, ಅದಕ್ಕೆ ಕೂಲಿ ಇಷ್ಟೇ ತಾನೇ ಇದರಲ್ಲಿರುವುದು? ಆದರೆ ಇದರೊಳಗೆ ತಂದಿರಬಹುದಾದ ಅಡ್ಡಿಗಳನ್ನು ನೋಡಿ: ಕೂಲಿಕಾರರ ಉದ್ಯೋಗ ಚೀಟಿ, ಬ್ಯಾಂಕ್ ಖಾತೆ, ಆಧಾರ್ ಮೂರೂ ಪರಸ್ಪರ ಜೋಡಣೆಯಾಗಿರಬೇಕು. ಅಂದರೆ ಮಾತ್ರ ಉದ್ಯೋಗ. ಕೆಲಸಕ್ಕೆ ಹಾಜರಾತಿಯಲ್ಲಿ ಬದಲಾವಣೆಗಳನ್ನು ತಂದು ಕೆಲಸಕ್ಕೆ ಬಂದವರೆಲ್ಲರ ಫೋಟೊ ದಿನಕ್ಕೆ ಎರಡು ಬಾರಿ ಅಪ್‌ಲೋಡ್ ಆಗಬೇಕು. ಗುಡ್ಡಗಳಲ್ಲಿ, ಕಾಡಿನಲ್ಲಿ, ಹಳ್ಳಗಳಲ್ಲಿ ನೆಟ್‌ವರ್ಕ್ ಬರುವುದಿಲ್ಲ ಎಂಬ ಯಾವ ವಾದವನ್ನೂ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ ಸರಕಾರ. ಡಿಜಿಟಲ್ ಅಂದರೆ ಡಿಜಿಟಲ್, ಅಷ್ಟೇ. ಸ್ಮಾರ್ಟ್ ಫೋನ್ ಕೊಳ್ಳಲಾಗದ ಅದೆಷ್ಟೋ ಮಹಿಳಾ ಕಾಯಕ ಬಂಧುಗಳು ಕೆಲಸವನ್ನೇ ಬಿಡಬೇಕಾಯಿತು.
ಮುಂದೆ ಆದುದನ್ನು ನೋಡಿ; ಎಲ್ಲಾ ಸ್ಮಾರ್ಟ್ ಆಗಿರುವಾಗ ಕೆಲಸದ ಕೂಲಿ ಹಣವೂ ಸ್ಮಾರ್ಟ್ ಆಗಿ ಕೂಲಿಕಾರರ ಖಾತೆಗೆ ಬಂದು ಬೀಳಬೇಕಿತ್ತಲ್ಲವೇ? ಹಾಗಾಗಲಿಲ್ಲ, ಆಗುತ್ತಿಲ್ಲ. ಹದಿನೈದು ದಿನಗಳಿಗೆ ಬರಬೇಕಾಗಿದ್ದ ಸಂಬಳ ತಿಂಗಳು, ಮತ್ತೂ ಎರಡು ತಿಂಗಳು ಕಳೆದರೂ ಬರುತ್ತಲೇ ಇಲ್ಲ. ಫೆಬ್ರವರಿಯಲ್ಲಿ ದುಡಿದವರು ಇದುವರೆಗೂ ತಮ್ಮ ಕೂಲಿಹಣಕ್ಕಾಗಿ ಕಾಯುತ್ತಲೇ ಇದ್ದಾರೆ. ಹೀಗೇಕೆ ಆಗುತ್ತಿದೆಯೆಂದು ಲಿಬ್‌ಟೆಕ್ ಅಧ್ಯಯನ ನಡೆಸಿತು. ದೇಶಾದ್ಯಂತ ಒಂದು ಕೋಟಿ ಕೂಲಿಕಾರರ ಎಮ್.ಐ.ಎಸ್. -ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡಿದವರ ಸಂಪೂರ್ಣ ವಿವರ ಇರುವ ಪಟ್ಟಿ- ಇದನ್ನು ತೆಗೆದರೆ ಒಂದು ಪಂಚಾಯತ್‌ನ ಕೂಲಿಕಾರರ ಚೀಟಿಗಳ ವಿವರದಿಂದ ಹಿಡಿದು ಬ್ಯಾಂಕ್ ಖಾತೆ, ಆಧಾರ್ ಜೋಡಣೆ, ಅಳತೆ, ಕೆಲಸ ಮಾಡಿದ ವಿವರಗಳು ದೊರೆಯುತ್ತವೆ. ಒಂದು ಕೋಟಿ ಕೂಲಿಕಾರರ ಎಮ್.ಐ.ಎಸ್.ಗಳನ್ನು ಅಧ್ಯಯನ ಮಾಡಿದಾಗ ಗೊತ್ತಾಗಿದ್ದು, ಪಂಚಾಯತ್‌ಗಳು ಕೆಲಸ ಮುಗಿಯುತ್ತಲೇ ಎಲ್ಲಾ ವಿವರ ಹಾಕಿ, ಹಾಜರಾತಿ ತುಂಬಿ ಪಿಡಿಒ ಮತ್ತು ಅಧ್ಯಕ್ಷರು ತಮ್ಮ ಥಂಬ್ (ಒಪ್ಪಿಗೆಯ ಸಹಿ) ಕೊಟ್ಟು ಮೇಲಕ್ಕೆ ಕಳಿಸುತ್ತಾರೆ. ಸೀದಾ ಅದು ಕೇಂದ್ರ ಸರಕಾರದ ಖಾತೆಗೆ ಹೋಗುತ್ತದೆ. ಅಲ್ಲಿನವರು ಒಂದು ಗುಂಡಿ ಒತ್ತಿದರೆ ಸಾಕು. ಟಪಕ್ಕೆಂದು ಕೂಲಿಕಾರರ ಖಾತೆಗಳಿಗೆ ಹಣ ಜಮಾ ಆಗಬೇಕು.
ಆದರೆ ಹಾಗಾಗುವುದಿಲ್ಲ. ಡಿಜಿಟಲೈಸ್ ಮಾಡುವುದರಿಂದ ಪಾರದರ್ಶಕತೆ ಇದೆ, ಬೇಗನೆ ಹಣ ಜಮಾ ಆಗುತ್ತದೆ ಎಂದು ಇಷ್ಟೆಲ್ಲ ಸರ್ಕಸ್‌ನ್ನು ಕೂಲಿಕಾರರ ಮತ್ತು ಪಂಚಾಯತ್‌ಗಳ ಕಡೆಯಿಂದ ಮಾಡಿಸಿದ ಕೇಂದ್ರ ಸರಕಾರ, ತಾನು ಗುಂಡಿ ಒತ್ತುವುದಿಲ್ಲ. ಕೆಲಸ ಮಾಡಿದ ಹದಿನೈದು ದಿನಗಳಲ್ಲಿ ಹಣ ಪಾವತಿಯಾಗಬೇಕು ಎಂದು ಕಾಯ್ದೆಯೇ ಹೇಳುತ್ತಿದ್ದರೂ ಮಾಡದೆ ಸುಮ್ಮನೆ ಇರುತ್ತದೆ. ಕೂಲಿ ಪಾವತಿ ವಿಳಂಬವಾದರೆ ಸರಕಾರ/ಅಧಿಕಾರಿ ದಂಡ ಕೊಡಬೇಕೆಂಬ ನಿಯಮ ಕೂಡ ಕಾನೂನಿನಲ್ಲಿ ಇದೆ. ಆದರೆ ಕಾನೂನು ಮಾಡಿದವರೇ ವಂಚಿಸುತ್ತಿದ್ದರೆ, ಮೊರೆ ಹೋಗುವುದು ಯಾರನ್ನು? ಜನವರಿ ಮಧ್ಯದಲ್ಲಿ ಮುಗಿದ ಕೆಲಸಕ್ಕೆ ಜನವರಿ 30ರ ಹೊತ್ತಿಗೆ ಪಂಚಾಯತ್‌ನಿಂದ ಹಣ ವರ್ಗಾವಣೆಯ ವರದಿ ಹೋಗಿದ್ದರೂ ಫೆಬ್ರವರಿ 15ರವರೆಗೆ ಕೇಂದ್ರ ಸರಕಾರವು ಗುಂಡಿ ಒತ್ತುವುದಿಲ್ಲ.
ಲಿಬ್ ಟೆಕ್ ಮಾಡಿದ ಈ ಅಧ್ಯಯನವನ್ನಾಧರಿಸಿ ‘ಸ್ವರಾಜ್ ಇಂಡಿಯಾ’ ಕೂಲಿಕಾರರ ಪರವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತು. ವಿನಾಕಾರಣ ಕೂಲಿಕಾರರ ಕೂಲಿ ಪಾವತಿ ಮಾಡದೆ, ಅದಕ್ಕೆ ತಾನು ಕೊಡಬೇಕಾದ ದಂಡವನ್ನೂ ಲೆಕ್ಕ ಹಾಕದೆ ಸರಕಾರ ವಂಚಿಸುತ್ತಿದೆ ಎಂದು. ಇದನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯ, ಸರಕಾರಕ್ಕೆ ಛೀಮಾರಿ ಹಾಕಿ 15 ದಿನಗಳಲ್ಲಿ ಕೂಲಿಪಾವತಿ ಆಗಬೇಕೆಂದು ತೀರ್ಪು ಕೊಟ್ಟಿತು.
2023ರಲ್ಲಿ ಒಮ್ಮೆಗೇ ಜಾತಿವಾರು ಹಣ ಸಂದಾಯ ಮಾಡುವುದೆಂದು ಸರಕಾರ ತೀರ್ಮಾನಿಸಿತು. ಅದಾವ ಶ್ರೇಯಸ್ಸಾಗುತ್ತದೆ ಎಂದು ಇಂಥ ತೀರ್ಮಾನಕ್ಕೆ ಬಂತೋ, ಭಗವಂತನೇ ಬಲ್ಲ. ಆದರೆ ಈ ಉಪಾಯಕ್ಕೆ ತಣ್ಣೀರು ಬಿದ್ದಾಗ ಸರಕಾರ ಆರಿಸಿಕೊಂಡಿದ್ದು ‘ಆಧಾರ್ ಬೇಸ್ಡ್ ಪೇಮೆಂಟ್’ ಪದ್ಧತಿಯನ್ನು. ಅಂದರೆ ಬ್ಯಾಂಕ್, ಉದ್ಯೋಗ ಚೀಟಿ ಮತ್ತು ಆಧಾರ್ ಮೂರೂ ಪರಸ್ಪರ ಜೋಡಣೆ ಆಗಿದ್ದರೆ, ಆಗಿದ್ದಾಗ ಮಾತ್ರ ನಿಮ್ಮ ಖಾತೆಗೆ ನೇರ ಹಣ ಬಂದು ಬೀಳುತ್ತದೆ. ಆಗಿಲ್ಲವೆಂದರೆ, ನಿಮ್ಮದಷ್ಟೇ ಅಲ್ಲ, ನಿಮ್ಮ ಇಡೀ ಗುಂಪಿನ ಕೂಲಿಪಾವತಿ ಆಗುವುದಿಲ್ಲ. ದೇಶದ ಒಟ್ಟು ಕೆಲಸಗಾರರಲ್ಲಿ ಶೇ. 27.5 ಜನರು ಮತ್ತು ಈಗಾಗಲೇ ಸಾಕಷ್ಟು ಕೆಲಸ ಮಾಡುತ್ತಲೇ ಇದ್ದವರಲ್ಲಿ ಶೇ. 5ನೇ 1ಭಾಗ ಜನರು ಕೆಲಸ ಪಡೆಯಲು ಅನರ್ಹರಾದರು. ಹೇಗಿದೆ ತಂತ್ರ? ಈ ತಂತ್ರದ ಉದ್ದೇಶವೇನಿರಬಹುದು? ಕೂಲಿಕಾರರ ಗುಂಪಿನಲ್ಲಿ ಒಬ್ಬರ ಆಧಾರ್ ಜೋಡಣೆ ಆಗಿಲ್ಲವೆಂದರೂ ಇಡೀ ಗುಂಪಿಗೆ ಹಣ ಬರುವುದಿಲ್ಲ. ಹಣಬರುವುದಿಲ್ಲವೆಂದರೆ ಕೆಲಸಕ್ಕೆ ಹೋಗುವಂತಿಲ್ಲ. ಆ ಒಬ್ಬರ ಆಧಾರ್ ಜೋಡಣೆ ಆಗುವವರೆಗೆ ಗುಂಪಿನವರೆಲ್ಲರೂ ಮನೆಯಲ್ಲಿ ಕೂರಬೇಕು, ಇಲ್ಲವೇ ಕೆಲಸ ಹುಡುಕಿ ಬೇರೆಡೆ ಹೋಗಬೇಕು.
(ನ್ಯಾಶನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ-ಎನ್.ಪಿ.ಸಿ.ಐ. ಇದರಲ್ಲಿ ಇಡೀ ದೇಶದ ಎಲ್ಲಾ ಜನರ ಬ್ಯಾಂಕ್ ಖಾತೆ ಮತ್ತು ಅದಕ್ಕೆ ಜೋಡಣೆಯಾದ ಆಧಾರ್ ದಾಖಲೆ ಇದೆ. ಹಾಗೆಯೇ ಒಂದೊಂದು ಬ್ಯಾಂಕ್‌ನಲ್ಲಿಯೂ ಜನರ ಉದ್ಯೋಗ ಚೀಟಿ-ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಆಗಿರುವ ಪಟ್ಟಿ ಇದೆ. ಬ್ಯಾಂಕಿಗೂ ಎನ್.ಪಿ.ಸಿ.ಐ.ಗೂ ಜೋಡಣೆ ಮಾಡುವ ಒಂದು ಆ್ಯಪ್ ಕೂಡ ಇದೆ. ಹಣ ವರ್ಗಾವಣೆ ಮಾಡುವಾಗ ಬ್ಯಾಂಕ್ ತನ್ನಲ್ಲಿರುವ ಪಟ್ಟಿಯನ್ನು ಎನ್.ಪಿ.ಸಿ.ಐ.ಯೊಂದಿಗೆ ಹಂಚಿಕೊಳ್ಳುತ್ತದೆ. ಆ ಪಟ್ಟಿಯಲ್ಲಿರುವ ಹೆಸರಿನಲ್ಲಿ ಒಂದೇ ಒಂದು ಸ್ಪೆಲಿಂಗ್ ತಪ್ಪಾದರೂ ಆ ಗುಂಪಿಗೆ ಹಣ ಹೋಗುವುದಿಲ್ಲ ಅಥವಾ ಇವರ ಬಳಿ ಇರುವ ಆಧಾರ್‌ಗೆ ಜೋಡಣೆಯಾಗಿರುವ ಇನ್ನಾವುದೋ ಖಾತೆಗೆ ಜಾರಿಬಿಡುತ್ತದೆ.)
ಉದ್ಯೋಗ ಚೀಟಿಗಳನ್ನು ಕಿತ್ತು ಹಾಕುವ ಇನ್ನೊಂದು ಅಭಿಯಾನವನ್ನು ಸರಕಾರ ಆರಂಭಿಸಿತು. ಲಿಬ್ ಟೆಕ್ ಮಾಡಿರುವ ಅಧ್ಯಯನದ ಪ್ರಕಾರ, ಈಗಾಗಲೇ 10 ಕೋಟಿ, 43 ಲಕ್ಷ ಉದ್ಯೋಗ ಚೀಟಿಗಳು ಕಿತ್ತು ಹಾಕಲ್ಪಟ್ಟಿವೆ. ಉದ್ಯೋಗ ಖಾತರಿಯಲ್ಲಿ ದುಡಿಯಲು ನೋಂದಣಿ ಮಾಡಿಸಿದವರ ಸಂಖ್ಯೆ ಸಾಕಷ್ಟು ಹೆಚ್ಚಾಗುತ್ತಿದ್ದರೂ ವರ್ಷದಲ್ಲಿ ಕೆಲಸ ಸಿಗುವಲ್ಲಿ ಸಾಕಷ್ಟು ಇಳಿಕೆಯಾಗಿದೆ. ದುಡಿಯುವ ಒಂದೊಂದು ಮನೆಯಲ್ಲಿ ಕೂಡ ಒಟ್ಟು ದುಡಿದವರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತದೆ ರಾಷ್ಟ್ರಮಟ್ಟದಲ್ಲಿ ಸರ್ವೇ ಮಾಡಿದ ಲಿಬ್‌ಟೆಕ್. ಉದ್ಯೋಗ ಚೀಟಿಗಳನ್ನು ಕೊಟ್ಟಿದ್ದೂ ಇದೇ ಸರಕಾರವೇ. ಈಗ ಬೇಡವೆಂದು ಕಿತ್ತುಹಾಕುವುದೂ ಇದೇ ಸರಕಾರವೇ. ಯಾವ ಕಾರಣಕ್ಕೆ ಕಿತ್ತು ಹಾಕಲಾಗಿದೆ ಎಂಬ ಪ್ರಶ್ನೆಗೆ; ಸಾವು, ಊರು ಬಿಟ್ಟು ಹೋಗಿದ್ದು ಒಪ್ಪಬಹುದಾದ ಕಾರಣವಾಗಿದ್ದರೆ, ಅವರಿಗೆ ಕೆಲಸ ಮಾಡಲು ಮನಸ್ಸಿಲ್ಲ, ಕೆಲಸ ಮಾಡಿಲ್ಲ, ಅಥವಾ ‘ಬೇರೆ ಕಾರಣಗಳು’ ಎಂದೂ ಕೂಡ ಬರೆಯಲಾಗಿದೆ. ಬೇರೆ ಕಾರಣಗಳೇನಿರಬಹುದು? ಊಹೆ ನಿಮ್ಮದು.
ಈ ಬಗ್ಗೆ ಪಂಚಾಯತ್‌ಗೆ ಹೋಗಿ ವಿಚಾರಿಸಿದರೆ ಅವರಿಗೆ ಕಾರ್ಡ್ ಗಳು ಕಿತ್ತು ಹೋಗಿದ್ದು ಗೊತ್ತೇ ಇರುವುದಿಲ್ಲ! ವಿಚಿತ್ರವೆಂದರೆ ದಿನಬೆಳಗಾದಾಗೊಮ್ಮೆ ನಿಯಮಗಳನ್ನು ಬದಲಾಯಿಸುತ್ತಿರುವ, ಹೊಸ ಹೊಸ ನಿಯಮಗಳನ್ನು ಹೇರುತ್ತಿರುವ ಕೇಂದ್ರ ಸರಕಾರವು ಯಾತಕ್ಕಾಗಿ ತಾನಿದನ್ನು ಮಾಡುತ್ತಿರುವೆನೆಂದು ಹೇಳುವುದಿರಲಿ, ಅವನ್ನು ಜಾರಿಯಲ್ಲಿ ತರಬೇಕಾದ ತಳಮಟ್ಟದ ಅಧಿಕಾರಿಗಳಿಗೆ ಸರಿಯಾದ ತರಬೇತಿ ಕೊಡುವ ಬಗ್ಗೆಯೂ ವಿಚಾರ ಮಾಡಿಲ್ಲ. ಯಾವ ನಿಯಮ ಯಾತಕ್ಕೆ ಬಂತು, ಅದನ್ನು ನಿಭಾಯಿಸುವುದು ಹೇಗೆಂಬುದು ಬಹುತೇಕ ಅಧಿಕಾರಿಗಳಿಗೆ ಗೊತ್ತೇ ಇಲ್ಲ. ಇವರು ತಳ ಮಟ್ಟದಲ್ಲಿ ಕೆಲಸ ಮಾಡಬೇಕಾದವರು.
2023-24ರಲ್ಲಿ ಕೇವಲ ಶೇ. 7 ಜನರು ಮಾತ್ರ ನೂರು ದಿನಗಳ ಹಾಜರಿಯನ್ನು ಪೂರೈಸುವುದು ಸಾಧ್ಯವಾಯಿತು. ಏನೋ ಒಂದು ಕುಂಟು ನೆಪ ಹೇಳಿ ಪಶ್ಚಿಮ ಬಂಗಾಳದಲ್ಲಿ 3 ವರ್ಷದಿಂದ ಯಾರೊಬ್ಬರಿಗೂ ಕೆಲಸ ಕೊಡುತ್ತಿಲ್ಲ. ಉದ್ಯೋಗ ಖಾತರಿಗೆ ಪ್ರತಿವರ್ಷ 2.64 ಲಕ್ಷ ಕೋಟಿ ಹಣವನ್ನು ಮೀಸಲಿಡಬೇಕೆಂದು ನಾಗರಿಕ ಸಂಘಟನೆಗಳು ಕೇಳುತ್ತಿದ್ದರೂ ಸರಕಾರ ಇಟ್ಟಿದ್ದು ಕೇವಲ 86,000 ಕೋಟಿ ಹಣ. ಗ್ರಾಮೀಣ ಜನರಿಗೆ ಉದ್ಯೋಗ ಕೊಡುವ ಈ ಕಾನೂನನ್ನು ಜಾರಿಗೊಳಿಸಲು ಸರಕಾರಕ್ಕೆ ಅದೆಷ್ಟು ಆಸಕ್ತಿ ಇದೆಯೆಂದು ಹೇಳಲು ಇವಿಷ್ಟು ನಿದರ್ಶನಗಳು ಸಾಕಲ್ಲವೇ?