ಮೈಸೂರಿನಲ್ಲಿ ವೈಭವದ ದಸರಾ ಜಂಬೂ ಸವಾರಿ
ಮೆರವಣಿಗೆಯಲ್ಲಿ ಸಾಗಿದ ಕಲಾತಂಡಗಳು, ಸರಕಾರದ ಸಾಧನೆ ಬಿಂಬಿಸುವ ಸ್ತಬ್ಧಚಿತ್ರಗಳು
ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವೈಭವದ ಜಂಬೂಸವಾರಿ ಮೆರವಣಿಗೆಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಚಾಮುಂಡೇಶ್ವರಿ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 8ನೇ ಬಾರಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ದಾಖಲೆ ಬರೆದಿದ್ದಾರೆ.
ಮಧ್ಯಾಹ್ನದ ನಂತರ ಸುರಿದ ತುಂತುರು ಮಳೆಯಲ್ಲಿ 415ನೇ ವಿಜಯದಶಮಿ ಮೆರವಣಿಗೆ ಅದ್ಧೂರಿಯಾಗಿ ಸಾಗಿತು. ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಕಲಾತಂಡಗಳು, ಸರಕಾರದ ಸಾಧನೆಯ ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಅತ್ಯಾಕರ್ಷಕವಾಗಿದ್ದವು. ಲಕ್ಷಾಂತರ ಜನರು ದಸರಾ ಜಂಬೂ ಸವಾರಿಯನ್ನು ಕಣ್ತುಂಬಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ 4.42 ರ ಶುಭ ಕುಂಭ ಲಗ್ನದಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಕೂಡಲೇ ಆನೆಗಳು ಸೊಂಡಲೆತ್ತಿ ನಮಸ್ಕಾರ ಮಾಡಿದವು. ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆ ನುಡಿಸಿತು. ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸಲಾಯಿತು.
ಹೈಕೋರ್ಟ್ ಮುಖ್ಯ ನ್ಯಾಯಾಧೀಶ ವಿಭು ಬಖ್ರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್ ಪುಷ್ಪಾರ್ಚನೆ ಮಾಡಿದರು.
ಬಳಿಕ ರಾಜಬೀದಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ಆನೆಯು ಚಿನ್ನದ ಅಂಬಾರಿ ಹೊತ್ತು ಕುಮ್ಕಿ ಆನೆಗಳಾದ ಕಾವೇರಿ, ರೂಪ ಜೊತೆ ಹೆಜ್ಜೆ ಹಾಕುತ್ತ ಜನಸ್ತೋಮದತ್ತ ಬರುತ್ತಿದ್ದಂತೆಯೇ ಜೈ ಚಾಮುಂಡೇಶ್ವರಿ ಘೋಷಣೆ ಮೊಳಗಿತು. ಆಶ್ವರೋಹಿ ಪಡೆ, ನಾದಸ್ವರ, ಕಮಾಂಡೊ ಪಡೆಯ ಬಿಗಿಭದ್ರತೆಯಲ್ಲಿ ಸಾಗಿತು.
ನಿಶಾನೇ ಆನೆ ಗೋಪಿ ನೇತೃತ್ವದ ಮಹೇಂದ್ರ, ಲಕ್ಷ್ಮೀ, ಗಜೇಂದ್ರ, ಪ್ರಶಾಂತ, ಸುಗ್ರೀವ, ಭೀಮ, ಕಂಜನ್, ಏಕಲವ್ಯ ಆನೆಗಳು ಹೆಜ್ಜೆ ಹಾಕಿದವು.
ಇದಕ್ಕೂ ಮೊದಲು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಐರಾವತ ಬಸ್‌ನಲ್ಲಿ ಅರಮನೆಗೆ ಆಗಮಿಸಿದ ಮುಖ್ಯಮಂತ್ರಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಂದಿ ಧ್ವಜ ಪೂಜೆ ಮಾಡಿದರು. ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು.
ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ, ರಾಷ್ಟ್ರಧ್ವಜ ತಯಾರಿಕ ಕೇಂದ್ರ ಗರಗ ಕಲಘಟಗಿ, ನವಲಗುಂದ, ಬದನವಾಳು ನೂಲುವ ಪ್ರಾಂತ್ಯ, ಸಮಾಜ ಕಲ್ಯಾಣ ಇಲಾಖೆಯ ಜ್ಞಾನವೇ ದಿವ್ಯ ಜ್ಯೋತಿ, ಸ್ತಬ್ಧ ಚಿತ್ರಗಳು ಗಾಂಧೀಜಿ ಬಿಂಬಿಸಿದವು. ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ, ಗ್ಯಾರಂಟಿ ಯೋ ಜನೆಯ ಪ್ರತಿಬಿಂಬಿಸುವ ಶಕ್ತಿ ಯೋಜನೆ, ಅನ್ನ ಭಾಗ್ಯ ಸ್ತಬ್ಧ ಚಿತ್ರಗಳು ಸೇರಿದಂತೆ ಒಟ್ಟು 58 ಸ್ತಬ್ಧ ಚಿತ್ರಗಳು, ನೂರಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು 6ನೇ ಬಾರಿಗೆ ಹೊತ್ತ ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯವಾಗಿ ಹೆಜ್ಜೆಹಾಕುವ ಮೂಲಕ ಒಟ್ಟು 9 ಆನೆಗಳು ಅರಮನೆ, ಜಯಚಾಮರಾಜ ವೃತ್ತ, ಕೃಷ್ಣರಾಜೇಂದ್ರ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಆರ್.ಎಂ.ಸಿ ವೃತ್ತ, ಬಂಬೂಬಜಾರ್ ಮೂಲಕ ಸಾಗಿ ಬನ್ನಿಮಂಟಪ ತಲುಪಿತು.
ಗಮನ ಸೆಳೆದ ಗಾಂಧೀಜಿ ಸ್ತಬ್ಧಚಿತ್ರಗಳು :
ಅ.2 ಮಹಾತ್ಮಾ ಗಾಂಧಿ ಜಯಂತಿ ದಿನದಂದೇ ವಿಜಯದಶಮಿ ಜಂಬೂ ಸವಾರಿ ನಡೆಯುತ್ತಿರುವುದು ವಿಶೇಷವಾಗಿದೆ.ಜಂಬೂ ಸವಾರಿ ಮೆರವಣಿಗೆಯಲ್ಲಿ ಮಹಾತ್ಮಾ ಗಾಂಧೀಜಿ ಅವರ ಕಾರ್ಯಚಟುವಟಿಕೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು ದಸರಾ ಮೆರವಣಿಗೆಯಲ್ಲಿ ಗಮನ ಸೆಳೆದವು.
ನಾಡಹಬ್ಬ ದಸರಾ ಜನರ ಹಬ್ಬ. ಜನರು ಖುಷಿಯಾದರೆ ಸರಕಾರವೂ ಖುಷಿಯಾಗುತ್ತದೆ. ಜನರ ಆಶೀರ್ವಾದದಿಂದ 8ನೇ ಬಾರಿ ಜಂಬೂಸವಾರಿಗೆ ಚಾಲನೆ ನೀಡಿದ್ದೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
8ನೇ ಬಾರಿಗೆ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿ ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ :
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ 8ನೇ ಬಾರಿ ಚಾಲನೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ 2013 ರಿಂದ 2018 ರ ಐದು ವರ್ಷಗಳ ಆಡಳಿತಾವಧಿಯಲ್ಲಿ 5 ಬಾರಿ ವಿಜಯ ದಶಮಿ ಜಂಬೂಬಸವಾರಿ ಮೆರವಣಿಗೆಗೆ ಚಾಲನೆ ನೀಡಿದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ 2023 ರಿಂದ 2025ರ ಅವಧಿಯಲ್ಲಿ 3 ಬಾರಿ ಜಂಬೂ ಸವಾರಿಗೆ ಚಾಲನೆ ನೀಡಿ ಒಟ್ಟು 8 ಬಾರಿ ದಸರಾ ಜಂಬೂ ಸವಾರಿ ಮೆರವಣಿಗೆಯನ್ನು ಉದ್ಘಾಟಿಸಿಸುವ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಬಾರಿ ದಸರಾ ಜಂಬೂ ಸವಾರಿಯನ್ನು ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.
ರಸ್ತೆಯ ಇಕ್ಕೆಲಗಳಲ್ಲಿ ಜಂಬೂ ಸವಾರಿ ವೀಕ್ಷಿಸಿದ ಜನರು :
ಜಂಬೂ ಸವಾರಿ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರುವ ತುಂಬಿದ್ದ ಸಾವಿರಾರು ಮಂದಿ ಸಾಂಸ್ಕೃತಿಕ ಕಲಾತಂಡಗಳು, ಸ್ತಬ್ಧ ಚಿತ್ರಗಳ ಜೊತೆಗೆ ಕ್ಯಾಪ್ಟನ್ ಅಭಿಮನ್ಯು ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಇರಿಸಿದ್ದ ಶ್ರೀಚಾಮುಂಡೇಶ್ವರಿ ಮೂರ್ತಿಯನ್ನು ಕಣ್ತುಂಬಿಕೊಂಡರು.