ಬೀದರ್ ಜಿಲ್ಲೆಯ ಸಂಸ್ಕೃತಿಯ ಸಿಂಹಾವಲೋಕನ
ಆದಿಕಾಲದಿಂದಲೂ ಮಾನವನು ಬದುಕುವ ಜತೆಗೆ ಹಲವಾರು ಬದಲಾವಣೆ ಮಾಡಿಕೊಳ್ಳುತ್ತ ಬಂದಿದ್ದಾನೆ. ಈಗ ಈ ಕಾಲದ ಆಧುನಿಕತೆಗೆ ಪರಿವರ್ತನೆಗೊಂಡು ಜೀವನ ನಡೆಸುತಿದ್ದಾನೆ. ಅವನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಏರು-ಪೇರುಗಳನ್ನು ಕಂಡುಕೊಂಡು ಸಾಗಿ ಬಂದಿದ್ದಾನೆ. ಅವನ ಬದುಕು ಗವಿ, ಬಂಡೆ ಮತ್ತು ಮರಗಳ ಆಸರೆಯಲ್ಲಿ ಸಾಗಿ ಬಂದಿತ್ತು. ಅವನು ಈ ಸುದೀರ್ಘ ಕಾಲಾವಧಿಯಲ್ಲಿ ಹಲವಾರು ಬದಲಾವಣೆಗಳೊಂದಿಗೆ ಜೀವನದಲ್ಲಿ ಸುಖ ಮತ್ತು ದುಃಖ ಅನುಭವಿಸಿ ಎದುರಾದ ಸಮಸ್ಯೆಗಳನ್ನು ಸ್ವೀಕರಿಸಿ ಪರಿಹಾರ ಕಂಡುಕೊಂಡು ಬಾಳಿದ್ದಾನೆ. ಅವನು ಗುಡ್ಡ, ಬೆಟ್ಟ, ಕಾಡುಗಳಲ್ಲಿ ಜೀವಿಸುತ್ತಿರುವಾಗಲೇ ಅವನೊಂದಿಗೆ ಅವನ ಆಂತರಿಕ ಭಾವನೆಗಳು ವ್ಯಕ್ತಪಡಿಸಲು ಧ್ವನಿ ಹುಟ್ಟಿಕೊಂಡಿತ್ತು. ಅನಂತರ ಅದು ಭಾಷೆಯಾಗಿ ರೂಪುಗೊಂಡಿತ್ತು. ತಾನು ಹುಟ್ಟು ಹಾಕಿದ ಧ್ವನಿ ಕ್ರಿಯೆ ಪ್ರತಿಕ್ರಿಯೆಗಳ ಫಲಿತಾಂಶಗಳೇ ವಿಚಾರಗಳ ವಿನಿಮಯವಾಯಿತು. ಅದುವೇ ಇಂದಿನ ಈ ಪರಿಯ ಮಾನವನ ಬೆಳವಣಿಗೆಗೆ ನಾಂದಿ ಹಾಡಿತು. ತನ್ನ ನೋವು-ನಲಿವುಗಳನ್ನು ಇತರರಲ್ಲಿ ಹಂಚಿಕೊಳ್ಳುವುದೇ ಮಾನವನ ನಾಗರಿಕತೆಗೆ ಬುನಾದಿಯಾಗಿ ಹಲವಾರು ಸಂಪ್ರದಾಯಗಳು, ಸಂಸ್ಕೃತಿಯ ಆಯಾಮಗಳು ರೂಪು ತಾಳಿದವು. ತನ್ನ ಕಷ್ಟಗಳ ಪರಿಹಾರಕ್ಕಾಗಿ ಯಾವುದೋ ಒಂದು ಶಕ್ತಿಗೆ ಮೊರೆ ಹೋದನು. ಅದುವೇ ಭಕ್ತಿಯಾಗಿ ದೇವರು, ಧರ್ಮ, ಆಧ್ಯಾತ್ಮಿಕ, ಶೀಲ, ಸದಾಚಾರ ಮತ್ತು ಉತ್ತಮ ಸಂಸ್ಕೃತಿಯಾಗಿ ರೀತಿ, ನೀತಿ ನಡವಳಿಕೆಗಳ ಮೂಲವಾಯಿತು. ಅನಂತರ ಪೂಜೆ, ವಿಧಿ ವಿಧಾನ, ಹಬ್ಬ-ಹರಿದಿನ, ಜಾತ್ರೆ ಉತ್ಸವ, ಸಂಗೀತ, ಗಾಯನ, ವಾದ್ಯಗಳು, ನೃತ್ಯ, ಕಲೆ ಮುಂತಾದ ಜಾನಪದ ವಲಯವು ರೂಪುಗೊಂಡಿತ್ತು. ಈ ಎಲ್ಲ ಪ್ರಕಾರಗಳು ವಿಶ್ವದೆಲ್ಲೆಡೆ ಬದುಕಿದ ಮಾನವರ ವಿವಿಧ ರೂಪಗಳ ಯಾನವಾಗಿದೆ. ಅದು ಜನಾಂಗ, ಭಾಷೆ, ಪ್ರದೇಶಗಳಿಗೆ ಭಿನ್ನವಾಗಿ ಬೆಳೆದು ಬಂದಿತ್ತು. ಈ ಎಲ್ಲದರ ಒಂದು ಸಾಂಸ್ಕೃತಿಕ ಅಂಶವೇ ಬೀದರ್ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕದ ಮತ್ತು ಕನ್ನಡ ನಾಡಿನ ವಿವಿಧ ಪ್ರಕಾರದ ಸಾಹಿತ್ಯ, ಸಂಗೀತ, ಕಲೆ, ನೃತ್ಯ, ಜಾನಪದ ಉತ್ಸವ, ಆಹಾರ ಪದ್ಧತಿ, ಉಡುಪು, ವಸ್ತ್ರಾಭರಣ ನಾಗರೀಕತೆಯ ವಿಭಿನ್ನ ಅಂಗಗಳಾದವು.
ಮಾನವನಿಗೆ ಅರಿವು ಉಂಟಾದಂತೆ ಮನೆಗಳನ್ನು ನಿರ್ಮಿಸಿಕೊಂಡು ಅಲೆಮಾರಿತನದಿಂದ ಮುಕ್ತಿ ಹೊಂದಿ ಒಂದೇ ಸ್ಥಳದಲ್ಲಿ ಸ್ಥಾಯಿಯಾಗಿ ನೆಲೆಸಲು ಪ್ರಾರಂಭಿಸಿದ ಸಲುವಾಗಿಯೇ ಊರು, ಪಟ್ಟಣ, ನಗರಗಳು ಹುಟ್ಟಿಕೊಂಡವು. ಅವನು ಗೃಹ ಬಳಕೆಗೆ ಮತ್ತು ನಿರ್ಮಾಣಕ್ಕೆ ಅಗತ್ಯವಾದ ಉಪಕರಣ ನಿರ್ಮಿಸಿದನು. ಇಲ್ಲವೇ ಖರೀದಿಸಲು ಪ್ರಾರಂಭಿಸಿದನು. ಅಂತಹ ನಮ್ಮ ಸಂಸ್ಕೃತಿಯನ್ನು ಹಿಂದೆ ತಿರುಗಿ ನೋಡಿದಾಗ ನಮ್ಮ ಪೂರ್ವಜರು ಬಳಸುತ್ತಿರುವ ಮತ್ತು ನಿರ್ಮಿಸಿರುವ ಅನೇಕ ಪರಿಕರಗಳು ಈಗ ಮಾಯವಾಗಿವೆ. ಅಂತಹವುಗಳಲ್ಲಿ ಚಪ್ಪರು, ಕೊಟ್ಟಿಗೆ, ಗುಡಿಸಲು, ಕೈ ತಟ್ಟಿ, ಸುರ, ಬೆಂಗಟಿ, ಚಂದಿ, ಸೂಜು ಕಟ್ಟಿಗೆ, ಕಂಬ, ತೊಲೆ, ಜಂತಿ, ಚಿಲಕಿ, ಬೆಳಕಿಂಡಿ ಅಲ್ಲದೆ ಗಂಗಾಳು, ತಂಬಿಗೆ, ಚಂಬು, ಮಿಳ್ಳಿ, ಬೊಗೋಣಿ, ಸೌಟು, ಹುಟ್ಟು, ಫುಕಣಿ, ಕಡಚಿ, ಕೊಡ, ಹರಿ, ಫಟಿ, ಬಿಂದಿಗೆ, ಮಗಿ, ಮುಚ್ಚಳ, ಗೊಬ್ಬಿ, ತತ್ರಾಣಿ, ಹೂಜಿ, ರಂಜಣಿಗೆ, ನೆಲು, ಕರಬನ ಗಡಿಗೆಗಳು ಮುಖ್ಯವಾಗಿವೆ. ಅಲ್ಲದೆ ಪ್ರತ್ಯೇಕವಾಗಿ ಹಾಲಿನ ಗಡಿಗೆ, ಮೊಸರಿನ ಕುಳ್ಳಿ, ಮಜ್ಜಿಗೆ ಫಟಿ, ರೇವಗಿ, ಸಿಂಬೆ, ಥಾಳಿ, ಕುಳ್ಳು (ಬೆರಣಿ), ಹಗಿ, ಖರ್ಸಿ, ಗುಮ್ಮಿ, ಮರ ಹೆಂಡೆ ಬುಟ್ಟಿ, ತುರ ಬುಟ್ಟಿ, ರೊಟ್ಟಿ ಬುಟ್ಟಿ, ಹೋಳಿಗೆ ಬುಟ್ಟಿ, ಹಾಲು ಗಡಿಗೆ, ಕಟರಿ, ಸರ್ಚೀಲ, ಢಾಲ್ ಬುಟ್ಟಿ, ಕುರ್ಕುಲಿಗಳು ಇಂದು ಮಾಯವಾಗಿವೆ. ಅಲ್ಲದೆ ಅವರ ಉಡುಗೆಗಳಾದ ಸೀರೆ, ಧೋತರು, ಬಾರಾಬಂದಿ ಅಂಗಿ ರುಮಾಲು, ಪಟ್ಟಿ ರುಮಾಲು, ಚೌಕಾನಿ ರುಮಾಲು, ಪಾವಡು, ಹಫ್ರಮ್ ಅಂಗಿ, ಖಮಿಸ್ ಅಂಗಿ, ತಟ್ಟು, ಚೀಲ, ಗುಂಗಡಿ (ಕಂಬಳಿ), ಕುಂಚಿ, ಟೋಪಿ, ಚೆಸ್ಟರ್ ಟೋಪಿ, ಕುದರೆ ಕುಂಚಿ, ಕುಲಾಯಿ, ಲಂಗ, ಪೋಲಕಾ, ಫಡಕಿ, ಕೌದಿ ಮುಂತಾದ ಹಳೆಯ ಕಾಲದ ಉಡುಪುಗಳು ಇಂದಿಲ್ಲ. ಅಲ್ಲದೆ ಅವರು ಬಳಸುತ್ತಿರುವ ಆಭರಣಗಳಾದ ಹಾಲ್ಗಡಗ, ಮಗುವಿನ ಕರಿಮಣಿ, ಬಿಂದಲಿ, ಅರುಳೆಲೆ, ಗಂಟಿ, ಸರಪಳಿ, ರುಳಿ, ಕಡಗ, ರಟ್ಟಿ ಕಡಗ, ಡಾಬು, ಗೆಜ್ಜೆ ಡಾಬು, ಮುಂಗೈ ದಂಡಿ, ಬೆಂಡೋಲೆ, ಕೋಂಗು, ಲೋಲಕ, ನತ್ತು, ಬುಗುಡಿ, ಜಾಲಿ ನತ್ತು, ಮುತ್ತಿನ ನತ್ತು, ಸುಪಾನಿ, ಕಾಲುಂಗರ, ಬಿಚ್ಚು ಕಾಲುಂಗರ, ಸರ್ಗಿ, ಪಿಲ್ಲೆ, ಮೀನು ಪಿಲ್ಲೆ, ನಾಗ ಮುರ್ಗಿ, ಗುರ್ಮಿ ಖಡ್ಡಿ, ಸುಪಾನಿ, ಲವಂಗ ಕಡ್ಡಿ, ಅಂಟಿನ ಗುಂಡ, ಬರಗಿನ ಗುಂಡ, ತಾಮ್ರದ ಉಂಗುರು, ವಜ್ರದ ಉಂಗುರು, ಬೆಳ್ಳಿ ಉಂಗುರು ಮುಂತಾದವುಗಳು ಇಂದು ಕಾಣೆಯಾಗಿವೆ. ಜೊತೆಗೆ ಆಹಾರ ಪದ್ಧತಿಯಲ್ಲಿಯೂ ತುಂಬ ಬದಲಾವಣೆಯಾಗಿದೆ. ಅಂದಿನ ಕಾಲಘಟ್ಟದ ಆರೋಗ್ಯಕರವಾದ ಆಹಾರಗಳು ಅಂದರೆ ನುಚ್ಚು, ಮಜ್ಜಿಗೆ, ಖಿಚಡಿ, ಅಂಬಲಿ, ಗಂಜಿ, ಕಳವೆ ಬಾನಾ(ಅನ್ನ), ಜೋಳದ ಬಾನಾ, ನವಣೆ, ಬರಗೂ, ಸಾವೆ, ಹಾರಕ, ಕೆಂಪು ಕಳವಿ, ಕರಿ ಕಳವಿ, ಗುಡುಮೆ ಕಳವಿಗಳು ಇಂದು ಇಲ್ಲವಾಗಿವೆ. ಹೆಪ್ಪು ಹಾಕುವುದು, ಫುಂಡಿ ಪಲ್ಯ, ಚಗಚಿ ಪಲ್ಯ, ಕುಕ್ಕೆನ ಪಲ್ಯ, ಕುಸುಬೆ ಪಲ್ಯ, ಕಡಲೆ ಪಲ್ಯ, ಕಲ್ಲು ಸಾಬೂಸಕಿ, ಹುಣಸೆ ಹೂವಿನ ಪಲ್ಯ, ಚಟ್ಟಿ ಚಟ್ನಿ, ಅಗಸೆ, ಎಳ್ಳು, ಕಾರ್ ಎಳ್ಳುಗಳ ಹಿಂಡಿಗಳು ಹಿಂದೆ ಸರಿಯುತ್ತಿವೆ. ಶೇಂಗಾದ ಹೋಳಿಗೆ, ಎಣ್ಣೆ ಹೋಳಿಗೆ, ಗಾರಗಿ, ಪುಟಕುಳಿ, ಕೊಡಬೆಳೆ, ಶೀತನಿ (ಬೆಳಸಿ), ಉಮಗಿ, ಘುಗ್ಗರಿ, ಬೋಳು ಗಡಗೆಯ ಅವರೆಕಾಯಿ ಮುಂತಾದವುಗಳು ತೆರೆಗೆ ಸರಿದಿವೆ. ಹಾಗೆಯೇ ಕೃಷಿಯಲ್ಲಿ ಪರಿವರ್ತನೆಗೊಂಡು ತಿಪ್ಪೆ ಗೊಬ್ಬರು, ಕುರಿ ಹಿಕ್ಕಿ ಗೊಬ್ಬರು, ಬಂಡಿ, ನೊಗ, ಮಿಳಿ, ಹೊಣೆ ಹಗ್ಗ, ಶಾಹಿ ಕೀಲಿ, ನಳಕೆ, ಕುರಗಿ, ನೇಗಿಲು, ಕುಂಟೆ, ಎಡೆ, ಸೋಲು, ದಾವಣಿ, ಕಣ್ಣಿ, ನುಲಕಿ, ಶಣಬು, ಫುಂಡಿ, ತಟ್ಟು, ಜಮಖಾನೆ, ಉಡಿ ಚೀಲಗಳು ಕಣ್ಮರೆಯಾದವು. ಜೊತೆಗೆ ಮಕ್ಕಳು ಹಾಗೂ ಯುವಕ ಯುವತಿಯರ ಆಟಗಳಾದ ಗಿಲ್ಲಿ ಫಣಿ, ಬುಗುರಿ, ವಲಿ ಚಂಡು, ಮರಕೋತಿ, ಚುರ್ಯೋ, ಖೋಖೋ, ಹುತುತಿ (ಕಬ್ಬಡಿ), ಧಪ್ಪನ ಧೂಪ್ಪೆ, ಗೋಲಿ ಆಟ, ಸೋಪಿನ ಗೋಲಿ, ಗಾಜಿನ ಗೋಲಿ, ಹುಲಿಕಟ್ಟು, ಗಾಡ್ಯಾಕಳ್ ಮನೆ, ಕಣ್ಣು ಮುಚ್ಚಾಲೆ, ಜೋಕಾಲಿ, ಪತಂಗ ಹಾರಾಟ, ಪತ್ತದ ಆಟ, ಲಗೋರಿ, ಫುಗುಡಿ, ಗೊಂಬೆ ಆಟ, ಕುಂಟಲಿಪಿ ಮತ್ತು ಹುಡುಕುವ ಆಟಗಳು ಮಾಯವಾದವು. ಅಲ್ಲದೆ ಜಾನಪದ ಕಲೆಗಳಾದ ಕಟಬಾವು (ಕಟ ಪುತಲಿ, ತಗಲು ಗೊಂಬೆ), ದೊಡ್ಡಾಟ, ಸಣ್ಣಾಟ, ಡಪ್ಪಿನ ಆಟ, ನಾಟಕ, ಕೋಲಾಟ, ಪೈತ್ರಿ, ಬುಲಾಯಿ, ಶೀಗಿ, ಗೌರಿ, ಕೋತಿ ಆಟ, ಕರಡೆ ಕುಣಿತ, ಹಾವಾಡಿಗ, ಪಗಡೆ, ಚಂಪ, ಜಾತಗಾರ ಆಟ (ಬಹುರೂಪಿ), ಪಾತ್ರದವರ ಆಟ, ಜಾಣಿ, ವಗ್ಗೆ, ಮುರುಳಿ, ಭೂತೇರ ಆಟ, ಚೌಡಕಿ ಮೇಳ, ಗೊಂದಳಿ, ಕಲಗಿ ತುರಾಯಿ, ಹಂತಿ ಹಾಡು, ಮದುವೆ, ಸೊಬಾನೆ, ತೊಟ್ಟಿಲುಗಳ ಹಾಡುಗಳು, ಕೊರವಂಜಿ, ಬಾಳ ಸಂತರು, ಇರ್ಮುಟ್ಟಿ, ಫಕೀರರ ಸವಾಲು, ಸಾರ್ವಯ್ಯನವರು ಇಂದು ಕಾಣದಾಗಿದ್ದಾರೆ.
ಜೊತೆಗೆ ಸಂಪ್ರದಾಯ ಹಾಡುಗಳು ಹಲಗೆ, ಬಾಜೆ, ಕೊಳಲು, ಡಪ್ಪು, ದಮಡಿ, ಘಂಟೆ, ಜಾಂಗ್ಟಿ, ತುಂತುನಿ, ಏಕತಾರಿ, ಮೃದಂಗ, ಚಲ್ಲಮ, ತಾಸೆ, ಹಲಗೆ ಕೋಲು ಮತ್ತು ಛಣಕಿ, ಶಂಖ, ಸಿಟಿ, ತುತ್ತುರಿ, ಪುಂಗಿ ಕಾಲ್ಪೇಟಿ ಮುಂತಾದ ವಾದ್ಯಗಳು ಇಂದು ಕಂಡು ಬರುತ್ತಿಲ್ಲ. ಅಲ್ಲದೆ ಮದುವೆ ಕಾರ್ಯ ಬದಲಾವಣೆಯಾಗಿ ಸುರುಗಿ, ಹಾಲ್ಗುಂಜಿ, ಹಂದರ, ಗೌರ್ ಜಗಲಿ, ಭಾಷಿಂಗ, ಕಂಕಣ, ಸೆರಗು ಸೆಲ್ಯ ಗಂಟು, ಐರಾಣಿ, ಹಾಲ್ಗುಗ್ಗಳು, ಬೀಗರ ಭೇಟಿ, ಬಿಡಕಿ ಮನೆ, ಸೀದದ ಊಟ, ಎಣ್ಣೆ ಎರೆಯುವುದು, ಅರಶಿಣ ಆಟ, ಪತಿ ಪತ್ನಿಯರ ಹೆಸರು ಹೇಳುವುದು, ಅಡಕೆ ಬುಡಿಸುವುದು, ಗದ್ದಿಗೆ, ಮಂಡಲಗಳ ರೀತಿಗಳು ದೂರ ಸರಿದವು. ಅಲ್ಲದೆ ಹಬ್ಬ ಹರಿದಿನಗಳಲ್ಲಿ ಸತ್ಯ ನಾರಾಯಣ ಕಥೆ, ಕೀರ್ತನೆ, ಮಣ್ಣೆತ್ತಿನ ಅಮಾವಾಸ್ಯೆ, ಕೊಟ್ಟಿಗೆ ಹುಣ್ಣಿಮೆ, ಚಟ್ಟಿ ಖಾರಾ, ತೆನೆ ಕಟ್ಟು, ತಳಿರು ತೋರಣ, ಗೋಡೆ ಓರಣ, ಗೋಡೆ ಚಿತ್ರಗಳು, ಮಾಡಾ, ಚಿಮಣಿ, ಕಂದಿಲು, ಬಿಜಲಿ, ಗೋಲ, ದೀವಿಟಿಕೆ, ಹೆಂಡಗಿ, ಕೊದಳಿ ಸುಡುವುದು, ದನ ಕರುಗಳಿಗೆ ಬೆಳಗುವಿಕೆಗಳು ನಿಂತು ಹೋದವು. ಅಲ್ಲದೆ ಜನರ ರಸಿಕತೆ ಹಾಗೂ ನೀತಿಗಾಗಿ ಹೇಳುವ ಕಥೆ, ಒಡಪು, ತಿಳಿಯುವ ಕಥೆಗಳು, ಪಡೆನುಡಿಗಳು, ಒಗಟುಗಳು ಮಾಯವಾದವು. ಹೀಗೆ ನಾವು ನಡೆದು ಬಂದ ದಾರಿಯನ್ನು ಒಮ್ಮೆ ಹಿಂದಕ್ಕೆ ದೃಷ್ಟಿ ಹಾಯಿಸಿ ನೋಡಿದಾಗ ಅತಿ ವಿಜೃಂಭಣೆಯ ಆರೋಗ್ಯಕರವಾದ, ಸಿರಿವಂತವಾದ ಬೀದರ್ ಜಿಲ್ಲೆಯ ಮತ್ತು ಕಲ್ಯಾಣ ಕರ್ನಾಟಕದ ಅನೇಕ ಸಂಸ್ಕೃತಿಯ ಅಂಶಗಳು ಇಂದು ಒಂದೊಂದಾಗಿ ಕಣ್ಮರೆಯಾಗುತ್ತಿರುವುದು ವಿಪರ್ಯಾಸವಾಗಿದೆ. ನಮ್ಮ ಪೂರ್ವಜರು ಸರಳ ಮತ್ತು ನೆಮ್ಮದಿಯ ಬದುಕಿಗಾಗಿ ಗೃಹ ನಿರ್ಮಾಣ ಮತ್ತು ದಿನಬಳಕೆ ವಸ್ತುಗಳೊಂದಿಗೆ ದಿನನಿತ್ಯ ಜೀವಿಸಲು ಉತ್ತಮ ಆಹಾರ ಪದ್ಧತಿ, ಮೈ ಮುಚ್ಚುವ ಉಡುಪುಗಳು ಅಲಂಕಾರಕ್ಕಾಗಿ ಬಳಸಿದ ಚಿನ್ನ, ಬೆಳ್ಳಿ, ತಾಮ್ರ, ಮುತ್ತು, ರತ್ನ, ವಜ್ರ, ವೈಢೂರ್ಯಗಳಿಂದ ಹಿಂದಿನ ಕಾಲದಲ್ಲಿ ಕುಶಲತೆಯಿಂದ ರಚಿಸಿದ ಆಭರಣಗಳಲ್ಲಿ ಈಗ ಕೆಲವು ಉಳಿದುಕೊಂಡು ಕೆಲವು ರೂಪ ಬದಲಾವಣೆ ಮಾಡಿಕೊಂಡು ಮುಂದುವರಿದರೆ ಹಲವಾರು ಸಂಸ್ಕೃತಿಯ ಅಂಗಗಳು ಕಳಚಿ ಹೋದವು. ಮಾನವನ ಅವಿಭಾಜ್ಯ ಅಂಗವಾಗಿ ವ್ಯಾಪಿಸಿಕೊಂಡ ಕನ್ನಡ ನೆಲದ ಗತ ವೈಭವವನ್ನು ಇವು ಬಿಂಬಿಸುತ್ತವೆ. ಅವರ ಜೀವನ ಶೈಲಿಯ ಸಡಗರ ಸಂಭ್ರಮದ ದರ್ಪಣವು ಕೂಡ ಆಗಿವೆ. ಮೇಲೆ ತಿಳಿಸಿದ ಹಲವಾರು ಪರಿಕರಗಳು ಇಂದಿನ ಪೀಳಿಗೆ ಮತ್ತು ಜನಾಂಗಕ್ಕೆ ಹೆಸರು ಅರಿಯದಂತೆ ಮಾಯವಾಗುತ್ತಿರುವುದು ಈ ನೆಲದ ಸಂಸ್ಕೃತಿಗೆ ಒಂದು ಪೆಟ್ಟು ಬಿದ್ದಂತೆ ಸರಿ.