ಸ್ವಂತ ಸೂರಿಲ್ಲದೆ, ದಿಕ್ಕಿಲ್ಲದೆ ಬದುಕುವ ತಾಯಿ-ಮಗಳು

►ತಾಯಿಗೆ ಮಾಶಾಸನ, ಮಗಳಿಗೆ ಆಧಾರ್ ಇಲ್ಲ: ಮಳೆಗೆ ಸೋರುವ ಶೆಡ್ ►ಮುರಿದ ತಗಡಿನ ಆಸರೆಯಲ್ಲೇ ಸಾಗುತ್ತಿದೆ ಬದುಕು

Update: 2026-07-24 07:34 IST

ಕೊಪ್ಪಳ: ನಗರದಲ್ಲಿ ಸುರಿದ ಮಳೆ ರೈತರಿಗೆ ಸಂತಸ ಮೂಡಿಸಿದರೂ, ಸರಿಯಾದ ನೆಲೆಯಿಲ್ಲದ್ದಕ್ಕೆ ಆಶ್ರಯ ಲೇಔಟ್‌ನಲ್ಲಿರುವ ತಾಯಿ ಮತ್ತು ಮಗಳ ಜೀವನದಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡು ಪರಿಹಾರಕ್ಕಾಗಿ ಅಂಗಲಾಚಿ ಬೇಡಿಕೊಳ್ಳುವ ದೃಶ್ಯ ಮಾತ್ರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕಾಣದಿರುವುದು ಸೋಜಿಗತನವೋ ಅಥವಾ ಆಡಳಿತದ ದುರವಸ್ಥೆಗೆ ಹಿಡಿದ ಕೈಗನ್ನಡಿವೋ ಎಂಬಂತೆ ಒಂದು ನಿದರ್ಶನವಾಗಿ ನಿಂತಿದೆ.

ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಗೂ ಸಂಜೆಯಾದ ನಂತರ ವಿಶ್ರಾಂತಿಯಿಂದ ಮಲಗಲು ಒಂದು ಪುಟ್ಟ ಗುಡಿಸಲು ಇರುತ್ತದೆ. ಆದರೆ ಘನತೆಯಿಂದ ಬದುಕುಬೇಕಾದ ಮಾನವ ಮಾತ್ರ ಸುಂದರ ನೆಲೆಯಿಲ್ಲದೆ ಪರಿತಪಿಸುತ್ತಾನೆ ಎಂಬುದಕ್ಕೆ ನಿರ್ಮಿತಿ ಕೇಂದ್ರದ ಸಮೀಪದ ಆಶ್ರಯ ಲೇಔಟ್‌ನಲ್ಲಿ ಭರಮವ್ವ ಹಾಗೂ ಅವರ ಮಗಳು ಉದಾಹರಣೆಯಾಗಿ ಕಾಣುತ್ತಾರೆ.

ಕಳೆದ 40 ವರ್ಷಗಳಿಂದ ಸ್ವಂತ ಸೂರಿಲ್ಲದೆ ಮುರಿದ ತಗಡಿನ ಮನೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇಬ್ಬರು ಮಲಗಲು ಸಾಕಾಗುವಷ್ಟು ಮಾತ್ರ ಜಾಗವಿದ್ದು, ಮಳೆ ಬಂದು ನೀರು ಸೋರುವಾಗ ಪುಸ್ತಕಗಳು ಹಾಗೂ ಅಗತ್ಯ ವಸ್ತುಗಳನ್ನು ರಕ್ಷಿಸಲು ನಿತ್ಯ ಹರಸಾಹಸ ಮಾಡುತ್ತಿದ್ದಾರೆ. ವಸ್ತುಗಳನ್ನು ನೆನೆಯದಂತೆ ಮುಚ್ಚಿಟ್ಟು, ಒಳಗೆ ನಿಲ್ಲಲು ಜಾಗವಿಲ್ಲದೆ ತಾಯಿ ಮತ್ತು ಮಗಳು ಮಳೆಯಲ್ಲೇ ನೆನೆಯುತ್ತ ನಿಂತಿರುವ ದೃಶ್ಯ ಮನಕಲುಕುವಂತೆ ಮಾಡುತ್ತದೆ.

ಭರಮ್ಮರಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗಳಿಗೆ ಮದುವೆ ಮಾಡಿಕೊಟ್ಟಿದ್ದು, ಇನ್ನೋರ್ವ ಮಗಳು ಹುಲಿಗೆಮ್ಮ ಕುಟುಂಬದ ಬಡತನದ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸವನ್ನು 8ನೇ ತರಗತಿಗೆ ಕೈಬಿಟ್ಟರು. ಈಗ ಕೆಲಸಕ್ಕೆ ಹೋಗಿ ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಸರಕಾರದ ಆಧಾರ ಇಲ್ಲದ್ದಕ್ಕೆ ಸಿಗುತ್ತಿಲ್ಲ ಆಧಾರ: ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಹೋದರೆ ದಾಖಲಾತಿ ಸರಿಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇದಲ್ಲದೆ ಇದುವರೆಗೂ ಸರಕಾರದಿಂದ ನೀಡಲಾಗುವ ವೃದ್ಯಾಪ್ಯ, ವಿಧವಾ ವೇತನವಾಗಲಿ ಇವರಿಗೆ ದೊರೆತಿಲ್ಲ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಕೂಡ ಇವರ ಕೈಹಿಡಿದಿಲ್ಲ. ಈ ಬಡ ವೃದ್ಧೆ ಭರಮಮ್ಮಳಿಗೆ ಮಾಶಾಸನ ಮತ್ತು ಗೃಹಲಕ್ಷ್ಮಿ ಹಣ ದೊರೆತರೆ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ತೀವ್ರ ಸಂಕಷ್ಟದಲ್ಲಿರುವ ಭರಮವ್ವ ಕುಟುಂಬಕ್ಕೆ ಶಾಶ್ವತ ವಸತಿ ಕಲ್ಪಿಸುವಂತೆ ಹಾಗೂ ಇಂತಹ ನಿರ್ಗತಿಕ ಕುಟುಂಬಗಳ ಸಮಸ್ಯೆಗಳತ್ತ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಒಂದು ವರ್ಷದಿಂದ ಕುಟುಂಬಕ್ಕಿಲ್ಲ ಪಡಿತರ

ತೀವ್ರ ಬಡತನದಿಂದ ಬಳಲುತ್ತಿರುವ ಈ ಕುಟುಂಬಕ್ಕೆ ಕಳೆದ ಒಂದು ವರ್ಷದಿಂದ ಯಾವುದೇ ಪಡಿತರ ಸಿಕ್ಕಿಲ್ಲ. ದುಡಿದು ಮನೆಗೆ ಬೇಕಾದ ಅಗತ್ಯಸಾಮಾನುಗಳನ್ನು ಖರೀದಿಸಿ ತಿನ್ನಬೇಕಾದ ಪರಿಸ್ಥಿತಿ ಎದುರಾಗಿದೆ. ಒಂದು ವರ್ಷದಿಂದ ರೇಷನ್ ಇಲ್ಲ, ವಿಚಾರಿಸಿದರೆ ಕಾರ್ಡ್ ರದ್ದು ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಭರಮಮ್ಮ ತಮ್ಮ ದುಃಖ ವ್ಯಕ್ತ ಪಡಿಸಿದ್ದಾರೆ. ಇದಲ್ಲದೆ ಮಾಹಿತಿ ಕೊರತೆಯಿಂದ ಗ್ಯಾಸ್ ಸಿಲಿಂಡರ್ ಸಹ ಬುಕ್ ಆಗುವುದಿಲ್ಲ. ಬೇರೆ ಕಡೆಯಿಂದ ಅಧಿಕ ಬೆಲೆಗೆ ಸಿಲಿಂಡರ್ ಖರೀದಿಸಿ ಅಡುಗೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ ಎನ್ನುತ್ತಾರೆ ತಾಯಿ ಹಾಗೂ ಮಗಳು.

ನಮಗೆ ಯಾವುದೇ ಹೊಲ-ಮನಿ ಇಲ್ಲ. ನಿತ್ಯ ದುಡಿದು ತಿನ್ನಬೇಕು. ನನ್ನ ಮಗಳು ದುಡಿದರೆ ಮಾತ್ರ ಮನೆ ಸಾಗುತ್ತದೆ. ಒಂದು ವರ್ಷದಿಂದ ರೇಷನ್ ಸಹ ಬಂದಿಲ್ಲ. ಕೇಳಿದ್ರೆ ರದ್ದು ಮಾಡಿದ್ದಾರೆ ಅಂದ್ರು. ಬೇರೆಯವರ ಜಾಗದಲ್ಲಿ ಇದ್ದೇವೆ ಅವರು ಬಿಡಿ ಅಂದಾಗ ಬಿಡಬೇಕು. ನಮಗೆ ಇರಕ್ಕೆ ಆಸರೆ ಸಿಕ್ಕರೆ ಸಾಕು. ಮತ್ತೇನೂ ಬೇಡ.

-ಭರಮಮ್ಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಡಿ ಅಖೀಲ್ ಉಡೇವು

contributor

Similar News