×
Ad

ಅಡಿಕೆಯಿಂದ ವೈನ್ ತಯಾರಿಸುತ್ತಿರುವ ಶಿವಮೊಗ್ಗ ಮೂಲದ ಮಹಿಳೆ

Update: 2025-11-17 09:06 IST

ಶಿವಮೊಗ್ಗ: ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬಳಸಿ ವೈನ್ ತಯಾರು ಮಾಡಲಾಗುತ್ತಿದೆ.

ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಿಕ್ಕೇರಿ ಗ್ರಾಮದ ಸುಷ್ಮಾ ಎಂಬವರು 2005ರಿಂದಲೇ ಹೋಂ ಮೇಡ್ ವೈನ್ ಮಾಡುವ ಹವ್ಯಾಸ ಇಟ್ಟುಕೊಂಡಿದ್ದರು. ಸ್ನೇಹಿತರು ಹಾಗೂ ಸಣ್ಣಪುಟ್ಟ ಪಾರ್ಟಿಗಳಲ್ಲಿ ಅದನ್ನು ಜನರಿಗೆ ಟೇಸ್ಟ್ ಮಾಡಿಸಿದ್ದರು. ಹೋಂ ಮೇಡ್ ವೈನ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಇದನ್ನು ಉದ್ಯಮಕ್ಕೆ ತರಬೇಕೆಂಬ ಚಿಂತನೆ ನಡೆಸಿದ್ದರು.

ಪುತ್ರ ಆಕರ್ಷನನ್ನು ನೋಡಲು ಅಮೆರಿಕಕ್ಕೆ ಹೋದಾಗ ಅಲ್ಲಿನ ಹಳ್ಳಿಗಳಲ್ಲಿ ಹೇಗೆ ಸ್ವಂತ ಬ್ರ್ಯಾಂಡ್‌ಗಳನ್ನು ಸೃಷ್ಟಿ ಮಾಡಿ ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ತಿಳಿದುಕೊಂಡರು. ಅಮ್ಮನ ಈ ಹವ್ಯಾಸಕ್ಕೆ ಮಗ ಸಾಥ್ ನೀಡಿದ್ದರಿಂದ ಉದ್ಯಮ ರೂಪದಲ್ಲೇ ವೈನ್ ತಯಾರಿಕೆಯನ್ನು ಶುರು ಮಾಡಿದರು.

2021ರಲ್ಲಿ ಪರವಾನಿಗೆ :

ಹೋಂ ಮೇಡ್ ವೈನ್ ತಯಾರಿಸುವುದಕ್ಕಾಗಿ 2019ರಲ್ಲಿ ಲೈಸೆನ್ಸ್ ಪಡೆಯಲು ಮುಂದಾದರು. ಈ ವೇಳೆ ಕೋವಿಡ್ ಇದ್ದ ಕಾರಣಕ್ಕೆ 2021ರಲ್ಲಿ ಪರವಾನಿಗೆ ದೊರೆಯಿತು. ವೈನ್ ಟೆಕ್ನಾಲಜಿ ಓದಿರುವ ಪ್ರೊಫೆಶನಲ್ಸ್ ನೆರವು ಪಡೆದು ಪ್ರೀಮಿಯಂ ಬ್ರ್ಯಾಂಡ್ ವೈನ್‌ಗಳನ್ನು ಉತ್ಪಾದನೆ ಮಾಡಿದರು. ಕರ್ನಾಟಕದಲ್ಲಿ ಮೊದಲು ದ್ರಾಕ್ಷಿ ಹಣ್ಣಿನ ವೈನ್ ಉತ್ಪಾದನೆ ಮಾತ್ರ ಇತ್ತು. ಬೇರೆ ಹಣ್ಣುಗಳಲ್ಲಿ ವೈನ್ ತಯಾರಿಕೆಗೆ ಲೈಸೆನ್ಸ್ ಪಡೆದ ಮೊದಲಿಗರಲ್ಲಿ ಸುಷ್ಮಾ ಸೇರಿದ್ದಾರೆ.

ಆರಂಭದಲ್ಲಿ ನೇರಳೆ, ಪೈನಾಪಲ್, ದ್ರಾಕ್ಷಿ, ಜೇನುತುಪ್ಪಮತ್ತು ಕಿತ್ತಳೆ ಸಿಪ್ಪೆ ಮಿಶ್ರಣದ ವೈನ್, ಜೇನು ತುಪ್ಪ ಮತ್ತು ಶುಂಠಿ ಕಾಂಬಿನೇಶನ್‌ನ ವೈನ್‌ಗಳನ್ನು ತಯಾರು ಮಾಡಿದ್ದೆ. ಅದನ್ನು ಪ್ಯಾಲೆಸ್ ಗ್ರೌಂಡ್, ಸ್ಟಾರ್ ಹೋಟೆಲ್‌ಗಳಲ್ಲಿ ಸಹ ಮಾರಾಟ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎನ್ನುತ್ತಾರೆ ಸುಷ್ಮಾ.

ತಲಿಸ್ವಾ ಬ್ರ್ಯಾಂಡ್

ಮೂಲತಃ ಕೃಷಿ ಕುಟುಂಬದಿಂದ ಬಂದು ಹೋಂ ಮೇಡ್ ವೈನ್ ಉದ್ದಿಮೆ ಸ್ಥಾಪಿಸಿರುವ ಸುಷ್ಮಾ ಅವರು ಕಿಕ್ಕೇರಿ ಫಾರ್ಮ್ ಫುಡ್ ಆಂಡ್ ಬಿವರೇಜಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ‘ತಲಿಸ್ವಾ’ ಎಂಬ ಬ್ರ್ಯಾಂಡ್ ಸೃಷ್ಟಿಸಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ.

‘ಫಾರೆಸ್ಟ್ ಪೈಪರ್’

ಹಸಿ ಅಡಿಕೆ ಜತೆ ವೀಳ್ಯದೆಲೆ ಮಿಶ್ರಣದ ಉಂಡೆಗಳನ್ನು ಮಾಡಿ ಬೀಡಾ ರೀತಿ ಬಳಸುತ್ತಿದ್ದ ಸುಷ್ಮಾ ಅವರಿಗೆ ಅದನ್ನು ವೈನ್ ಮಾಡಬಹುದು ಎಂಬ ಯೋಚನೆ ತಲೆಗೆ ಬಂದಿದೆ. ತಮ್ಮ ಸ್ವಂತ ರೆಸಿಪಿಯನ್ನೇ ಈಗ ವೈನ್ ಆಗಿ ಪರಿವರ್ತಿಸಿದ್ದಾರೆ. ಅದಕ್ಕೆ ‘ಫಾರೆಸ್ಟ್ ಪೈಪರ್’ಎಂದು ಹೆಸರು ಇಟ್ಟಿದ್ದಾರೆ. ಹಸಿ ಅಡಿಕೆ ಜತೆ ವೀಳ್ಯದೆಲೆ, ಜೇನು ತುಪ್ಪ ಬೆರೆಸಿ ವೈನ್ ತಯಾರಿಸಿದ್ದಾರೆ. 2024ರಲ್ಲಿ ಜನರಿಗೆ ಪರಿಚಯಿಸಿದ ಅವರು, ಉತ್ತಮ ಪ್ರತಿಕ್ರಿಯೆ ಸಿಕ್ಕ ಕಾರಣಕ್ಕೆ ಬಾಟಲ್ ರೂಪದಲ್ಲಿ ಮಾರುಕಟ್ಟೆಗೆ ತಂದರು. ಮೊದಲ ಹಂತದಲ್ಲಿ 3,500 ಬಾಟಲ್ ಉತ್ಪಾದನೆ ಮಾಡಿದ್ದು, ಎಲ್ಲವೂ ಖಾಲಿಯಾಗಿದೆ. 1 ವರ್ಷದಿಂದ ವಿವಿಧ ವೇದಿಕೆಗಳಲ್ಲಿ ಪರಿಚಯಿಸಲಾಗಿದೆ.

ಮೊದಲಿನಿಂದಲೂ ಹೋಂ ಮೇಡ್ ವೈನ್ ತಯಾರಿಸುವ ಹವ್ಯಾಸ ಇತ್ತು. ಮಗ, ಪತಿ ಸಹಕಾರದಿಂದ ಉದ್ದಿಮೆಯಾಗಿದೆ. 6 ಮಾದರಿಯ ವೈನ್‌ಗಳನ್ನು ಪರಿಚಯಿಸಲಾಗಿದೆ. ಅಡಿಕೆ, ವೀಳ್ಯದೆಲೆ ಮಿಶ್ರಣದ ವೈನ್ ಜನ ಇಷ್ಟಪಟ್ಟಿದ್ದಾರೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಯೋಜನೆ ಇದೆ.

-ಸುಷ್ಮಾ ಸಂಜಯ್, ಎಂಡಿ, ಕಿಕ್ಕೇರಿ ಫಾರ್ಮ್ ಫುಡ್ ಆಂಡ್ ಬಿವರೇಜಸ್ ಕಂಪೆನಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರತ್ ಪುರದಾಳ್

contributor

Similar News