ಸರಕಾರ, ಟಿ.ಬಿ.ಬೋರ್ಡ್ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ
ಬೇಸಿಗೆ ವೇಳೆ ಕ್ರಸ್ಟ್‌ಗೇಟ್‌ಗಳ ಅಳವಡಿಕೆಗೆ ಸೂಕ್ತ ಸಮಯ. ಆಗ ಟಿ.ಬಿ.ಡ್ಯಾಂನಲ್ಲಿ ನೀರಿನ ಸಂಗ್ರಹವು ಕಡಿಮೆ ಇತ್ತು. ಈ ಅವಧಿಯೊಳಗೆ ಗೇಟ್ ಅಳವಡಿಕೆ ಮಾಡುತ್ತಾರೆ ಎಂಬ ಆಶಾಭಾವನೆ ಜಲಾಶಯ ವ್ಯಾಪ್ತಿಯ ರೈತರಲ್ಲಿತ್ತು. ಅದನ್ನು ಟಿ.ಬಿ.ಬೋರ್ಡ್ ಅಧಿಕಾರಿಗಳು ಹಾಗೂ ಆಳುವ ಸರಕಾರಗಳು ಹುಸಿಗೊಳಿಸಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ವಿಜಯನಗರ: ಕಲ್ಯಾಣ ಕರ್ನಾಟಕದ ಜೀವನಾಡಿ ರಾಜ್ಯದ ಎರಡನೇ ಅತೀ ದೊಡ್ಡ ಜಲಾಶಯ ತುಂಗಭದ್ರಾ ಜಲಾಶಯದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಟಿ.ಬಿ. ಬೋರ್ಡ್‌ನ ಅಧಿಕಾರಿಗಳು ಹಾಗೂ ಸರಕಾರದ ನಿರ್ಲಕ್ಷ್ಯ ಧೋರಣೆ ರೈತರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
2024ರ ಅಗಸ್ಟ್ ತಿಂಗಳಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿತ್ತು. ಇದರಿಂದಾಗಿ ಹೊಸಪೇಟೆ ಸೇರಿದಂತೆ ಕಲ್ಯಾಣ ಕರ್ನಾಟಕ,ಆಂಧ್ರ ಹಾಗೂ ತೆಲಂಗಾಣ ಭಾಗದ ರೈತರು ಸಾಕಷ್ಟು ಆತಂಕ ಪಡುವಂತಾಗಿತ್ತು. ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದ ತಂಡ ಮುತುವರ್ಜಿ ವಹಿಸಿ ಡ್ಯಾಂಗೆ ತಾತ್ಕಾಲಿಕ ಸ್ಟಾಪ್ ಲಾಗ್ ಅಳವಡಿಸಲು ಮುಂದಾಗಿತ್ತು.
ನಂತರ ಕೇಂದ್ರದ ತಜ್ಞರ ತಂಡ ಡ್ಯಾಂಗೆ ಭೇಟಿ ನೀಡಿ 75 ವರ್ಷ ಹಳೆಯದಾದ ತುಂಗಭದ್ರಾ ಜಲಾಶಯದ ಭದ್ರತೆಗೆ 33ಗೇಟ್‌ಗಳ ಸುರಕ್ಷತಾ ಕ್ರಮದ ಬಗ್ಗೆ ಪರಿಶೀಲನೆ ನಡೆಸಿ ಎಲ್ಲ ಗೇಟ್ ಗಳನ್ನ ಬದಲಾಯಿಸಬೇಕು ಎಂದು ವರದಿ ಸಲ್ಲಿಸಿತ್ತು. ರಾಜ್ಯ ಸರಕಾರ ಬೇಸಿಗೆ ವೇಳೆ 19ನೇ ಗೇಟ್ ಅಳವಡಿಸುವ ಭರವಸೆ ನೀಡಿತ್ತು. 10 ತಿಂಗಳ ಅವಧಿ ಇದ್ದರೂ ಮೂರು ರಾಜ್ಯಗಳ ಸರಗಕಾರಗಳು ಹಾಗೂ ಟಿ.ಬಿ.ಬೋರ್ಡ್ ಅಧಿಕಾರಿಗಳು ಗೇಟ್ ಅಳವಡಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುವುದನ್ನು ಬಿಟ್ಟು ನಿರ್ಲಕ್ಷ್ಯ ವಹಿಸಿದ್ದರಿಂದ 10 ತಿಂಗಳು ಕಳೆದರೂ ಇದುವರೆಗೂ ಗೇಟ್ ಬದಲಾಯಿಸಿಲ್ಲ ಎಂಬುದು ರೈತ ಮುಖಂಡರ ಆರೋಪವಾಗಿದೆ.
ಕಳೆದ ವರ್ಷ ಉತ್ತಮವಾದ ಮಳೆಯಾದ ಹಿನ್ನೆಲೆ ಡ್ಯಾಂ ಗೇಟ್ ಒಡೆದಾಗ ಅಧಿಕ ಪ್ರಮಾಣದ ನೀರು ಪೋಲಾಗಿದ್ದರೂ ಸ್ಟಾಪ್‌ಲಾಗ್ ಅಳವಡಿಕೆ ಬಳಿಕ ಮತ್ತೆ ನೀರು ಡ್ಯಾಂಗೆ ಹರಿದು ಬಂದಿತ್ತು. ಈ ವರ್ಷ ಈಗಾಗಲೇ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬರುತ್ತಿರುವ ಹಿನ್ನೆಲೆ 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯಕ್ಕೆ ಜೂನ್ ತಿಂಗಳ ಮಧ್ಯದಲ್ಲಿಯೇ 47 ಟಿಎಂಸಿ ನೀರು ಸಂಗ್ರಹವಾಗಿದೆ.
ಈಗ 19ನೇ ಕ್ರಸ್ಟ್‌ಗೇಟ್‌ನ ಎಲಿಮೆಂಟ್ಸ್ ಗಳನ್ನ ಗದಗ ಜಿಲ್ಲೆಯ ಅಡವಿ ಸೋಮಾಪುರದಲ್ಲಿ ತಯಾರಿಸಿ ಡ್ಯಾಂ ಬಳಿ ತಂದು ನಿಲ್ಲಿಸಲಾಗಿದೆ. ಎಲಿಮೆಂಟ್ಸ್ ಬಂದರೂ ಸಹ ಡ್ಯಾಂನಲ್ಲಿ ನೀರು ಸಂಗ್ರಹವಾಗಿದ್ದರಿಂದ ಸ್ಟಾಪ್‌ಲಾಗ್ ಅಳವಡಿಸಿರೋ 19ನೇ ಗೇಟ್‌ನ ಜಾಗಕ್ಕೆ ಕ್ರಸ್ಟ್ ಗೇಟ್ ಅಳವಡಿಸೋದು ಬಹುತೇಕ ಅನುಮಾನವಾಗಿದೆ. ಟಿಬಿ ಬೋರ್ಡ್ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಪರಿಣಾಮ ಕಾಲಹರಣ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೂರು ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ರಕ್ಷಣೆ ಮಾಡುವುದು ಜಲಾಶಯದ ಅಧಿಕಾರಿಗಳು, ಜನಪ್ರತಿನಿಧಿಗಳು, ಮೂರು ರಾಜ್ಯಗಳು ಹಾಗೂ ಟಿ.ಬಿ.ಬೋರ್ಡ್‌ನ ಅಧಿಕಾರಿಗಳ ಹೊಣೆಯಾಗಿದೆ.
ತುಂಗಾಭದ್ರಾ ಡ್ಯಾಂ ಗೇಟ್ ಕಟ್ ಆಗಿದ್ದು ಯಾಕೆ.?, ಅದರ ವೈಫಲ್ಯಕ್ಕೆ ಕಾರಣ ಯಾರು ಎಂದು ಇದುವರೆಗೂ ಟಿ.ಬಿ.ಬೋರ್ಡ್‌ನ ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ. ಈಗ ಗೇಟ್ ಅಳವಡಿಕೆಗೆ ಮೀನಾಮೇಷ ಎಣಿಸುತ್ತಿದೆ. ಮತ್ತೊಮ್ಮೆ ಡ್ಯಾಂ ಭರ್ತಿಯಾಗಿ ದೊಡ್ಡ ಅನಾಹುತ ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಎಂದು ರೈತ ಮುಖಂಡರು ಪ್ರಶ್ನಿಸಿದ್ದಾರೆ.
ಅಹಮದಾಬಾದ್ ಕಂಪೆನಿಯೊಂದು ಈಗಾಗಲೇ 33 ಕ್ರಸ್ಟ್‌ಗೇಟ್‌ಗಳ ಅಳವಡಿಕೆಗೆ ಗುತ್ತಿಗೆ ಪಡೆದು ಜವಾಬ್ದಾರಿ ತೆಗೆದುಕೊಂಡಿದೆ. ಸದ್ಯಕ್ಕೆ 19ನೇ ಗೇಟ್ ಎಲಿಮೆಂಟ್ಸ್ ಡ್ಯಾಂಗೆ ಬಂದಿಳಿದಿವೆ. ಈ 19ನೇ ಕ್ರಸ್ಟ್‌ಗೇಟ್ ಯಾವಾಗ ಅಳವಡಿಸಲಾಗುತ್ತದೆ. ಇನ್ನುಳಿದ ಗೇಟ್‌ಗಳನ್ನು ಯಾವಾಗ ಬದಲಾವಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.