×
Ad

ದಲಿತರಿಗೆ ಅಂಬೇಡ್ಕರ್ ನಡೆ ಆದರ್ಶವಾಗಬೇಕಾಗಿದೆ

Update: 2025-05-15 11:48 IST

ತುಮಕೂರು ಜಿಲ್ಲೆಯ ಕವಣದಾಲ ಗ್ರಾಮದ ರಾಮಾಂಜನೇಯ ದೇಗುಲವನ್ನು ಪ್ರವೇಶಿಸಿದ್ದ ದಲಿತ ಯುವಕನನ್ನು ಸ್ಥಳೀಯ ದಲಿತೇತರ ಜಾತಿಯ ಜನರು ಹೊರಕ್ಕೆ ಕಳಿಸಿರುವ ಘಟನೆ ನಡೆದಿದೆ. ಬ್ರಾಹ್ಮಣರು ಹಾಗೂ ಶೂದ್ರರು ಪೂಜಿಸುವ ದೇವಾಲಯಗಳಿಗೆ ದಲಿತರ ಪ್ರವೇಶ ನಿರಾಕರಿಸಿರುವುದು ಜಾತಿಪದ್ಧತಿ ಹಾಗೂ ಅಸ್ಪಶ್ಯತೆಯ ದುಷ್ಟ ಆಚರಣೆಯ ಭಾಗವಾಗಿದೆ. ಭಾರತದ ಸಂವಿಧಾನವು ಅಸ್ಪಶ್ಯತೆಯನ್ನು ನಿಷೇಧಿಸಿದ್ದರೂ ಈ ಅಮಾನವೀಯ ಆಚರಣೆ ಎಗ್ಗಿಲ್ಲದಂತೆ ನಡೆಯುತ್ತಿದೆ. ಇದಕ್ಕೆ ಕಾರಣ ಹಿಂದೂ ಧರ್ಮದ ಜಾತಿಪದ್ಧತಿ ನೀತಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಭಾರತದ ದಲಿತೇತರ ಜಾತಿಗಳು ಅಸ್ಪಶ್ಯತೆ ಆಚರಣೆಯಂತಹ ರೋಗದಿಂದ ವಿಮೋಚನೆಗೊಳ್ಳಬೇಕೆಂಬ ಮತ್ತು ದಲಿತರು ತಮ್ಮ ಘನತೆಯನ್ನು ಮರಳಿ ಪಡೆಯಬೇಕೆಂಬ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಿಗೆ, ದೇಗುಲಗಳಿಗೆ ಮತ್ತು ಶಾಸನಸಭೆ ಪ್ರವೇಶ ಹೋರಾಟವನ್ನು ಅಂಬೇಡ್ಕರ್‌ರವರು ಕೈಗೊಂಡರು. ಈ ಮೂರು ರೀತಿಯ ಹೋರಾಟಗಳಲ್ಲಿ ದೇಗುಲ ಪ್ರವೇಶ ಹೋರಾಟವನ್ನು ಮಧ್ಯದಲ್ಲಿಯೇ ಕೈಬಿಟ್ಟು, ಇನ್ನೆಂದಿಗೂ ದಲಿತರು ದೇಗುಲಪ್ರವೇಶ ಹೋರಾಟ ಕೈಗೊಳ್ಳಬಾರದು ಎಂದು ಕರೆ ಕೊಟ್ಟರು. ಬುದ್ಧನನ್ನು ಲಕ್ಷಾಂತರ ಅನುಯಾಯಿಗಳೊಂದಿಗೆ ಅಪ್ಪಿಕೊಂಡರು. ಈ ಬೆಳವಣಿಗೆಯನ್ನು ನಾವು ಈ ಕೆಳಗಿನಂತೆ ಸಂಕ್ಷಿಪ್ತವಾಗಿ ಗಮನಿಸಬಹುದಾಗಿದೆ.

ಅಂಬೇಡ್ಕರ್‌ರವರ ಪ್ರತ್ಯಕ್ಷ/ಪರೋಕ್ಷ ಸಮ್ಮತಿಯಲ್ಲಿ 1927ರಿಂದಲೇ ಮಹಾರಾಷ್ಟ್ರದಲ್ಲಿ ಅಸ್ಪಶ್ಯರಿಂದ ಒಟ್ಟು ಮೂರು ದೇಗುಲಕ್ಕೆ ಪ್ರವೇಶ ಹೋರಾಟ ನಡೆದವು. 1. ಅಮರಾವತಿಯ ಅಂಬಾದೇವಿ ದೇವಾಲಯ 2. ಪೂನಾದ ಪಾರ್ವತಿ ದೇವಾಲಯ 3. ನಾಸಿಕ್ ಕಾಳಾರಾಮ ದೇವಾಲಯ. ಈ ಮೂರೂ ಹೋರಾಟವನ್ನು ಅಲ್ಲಿನ ಸ್ಥಳೀಯ ದಲಿತ ನಾಯಕರು ಸಂಘಟಿಸಿದ್ದರು. ಅಂಬೇಡ್ಕರ್‌ರವರು ಹೋರಾಟದ ಆರಂಭಿಕ ಹಂತದಲ್ಲಿ ಉಪಸ್ಥಿತರಿದ್ದರಷ್ಟೆ, ಯಾವುದಕ್ಕೂ ನಾಯಕತ್ವ ವಹಿಸಿಕೊಳ್ಳಲಿಲ್ಲ. ಹಾಗೆಂದು ಆರಂಭದಲ್ಲಿ ಈ ಹೋರಾಟಗಳನ್ನು ವಿರೋಧಿಸಲಿಲ್ಲ. ಏಕೆಂದರೆ ಆಧುನಿಕ ಭಾರತದಲ್ಲಿ ನಡೆದ ಮೊದಲ ಅಸ್ಪಶ್ಯರ ದೇವಾಲಯ ಪ್ರವೇಶ ಹೋರಾಟ ಗಳು ಇವಾಗಿದ್ದವು. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ, ಗಾಂಧಿಯವರು ಈ ಮೂರೂ ಹೋರಾಟಗಳಲ್ಲಿ ಪಾಲ್ಗೊಳ್ಳಲಿಲ್ಲ. ಕಾಂಗ್ರೆಸಿಗರು ಆರಂಭದಲ್ಲಿ ಹಿಂದೂ ಮೇಲ್ಜಾತಿಗಳು ಮತ್ತು ಅಸ್ಪಶ್ಯರ ನಡುವೆ ಸಂಧಾನ ಮಾಡಲು ಯತ್ನಿಸಿ ತಟಸ್ಥರಾದರು. ಆದರೆ ಹಿಂದೂ ಸನಾತನವಾದಿಗಳು ಅಸ್ಪಶ್ಯರ ಹೋರಾಟದ ವಿರುದ್ಧವಾಗಿ ಹಿಂದೂ ಮೇಲ್ಜಾತಿಗಳಿಗೆ ಸಹಾಯ ಮಾಡಿದರು.

ಮೊದಲನೇ ಹೋರಾಟದಲ್ಲಿ ಇಬ್ಬರು ಅಸ್ಪಶ್ಯ ವೃದ್ಧರನ್ನು ಮೇಲ್ಜಾತಿಗಳು ಥಳಿಸಿ ಜೈಲಿಗೆ ಕಳಿಸಿದರು. ಅಸ್ಪಶ್ಯರ ಪರವಾಗಿ ತಿಂಗಳಾನುಗಟ್ಟಲೆ ದೇವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರವೂ ಅಸ್ಪಶ್ಯರಿಗೆ ಪ್ರವೇಶ ದೊರಕಲಿಲ್ಲ. ಎರಡು ವರ್ಷಗಳ ಕಾಲ ಗುಟುಕು ಜೀವ ಇಟ್ಟುಕೊಂಡಿದ್ದ ಹೋರಾಟವು ನಂತರ ತಣ್ಣಗಾಗಿತ್ತು.

ಎರಡನೆಯ ಹೋರಾಟವನ್ನು ಹಿರಿಯ ಅಸ್ಪಶ್ಯ ನಾಯಕರಾಗಿದ್ದ ಶಿವರಾಮ್‌ಜಾನ್ಬಾ ಕಾಂಬ್ಳೆ ಸಂಘಟಿಸಿದ್ದರು. ಹಲವು ಬ್ರಾಹ್ಮಣೇತರ ಹಾಗೂ ಉದಾರವಾದಿ ಬ್ರಾಹ್ಮಣ ನಾಯಕರು ಕೈಜೋಡಿಸಿದ್ದರು. ನಾಲ್ವರು ಮಹಿಳೆಯರೂ ಸೇರಿದಂತೆ 12 ಸತ್ಯಾಗ್ರಹಿಗಳ ಗುಂಪು ದೇಗುಲವಿರುವ ಬೆಟ್ಟದ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ ಮೇಲ್ಜಾತಿಗಳು ಅವರನ್ನು ಥಳಿಸಲು ಆರಂಭಿಸಿದರು. ಚಂಬಾರ್ ನಾಯಕ ರಾಜಬೋಜ್ ಸೇರಿದಂತೆ ಹಲವು ಅಸ್ಪಶ್ಯರನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿಕೊಳ್ಳಲಾಯಿತು. ದೇವಾಲಯದ ಬಾಗಿಲುಗಳನ್ನು ಮುಚ್ಚಿದರು. ಅಂದಿನಿಂದ ಹಗಲಿರುಳು ನಾಲ್ಕು ತಿಂಗಳುಗಳ ಕಾಲ 5 ಜನ ಅಸ್ಪಶ್ಯರ ತಂಡವು ಮುಚ್ಚಿದ ದೇವಾಲಯದ ಬಾಗಿಲ ಬಳಿ ಸತ್ಯಾಗ್ರಹಕ್ಕೆ ಕುಳಿತುಕೊಂಡಿತು. ನಾಲ್ಕು ತಿಂಗಳಾದರೂ ಯಾರು ಗಮನಹರಿಸದ ಪರಿಣಾಮವಾಗಿ ಸತ್ಯಾಗ್ರಹ ಅಂತ್ಯಗೊಂಡಿತು.

ಅಸ್ಪಶ್ಯರ ದೇವಾಲಯ ಪ್ರವೇಶ ಹೋರಾಟಕ್ಕೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಹೋರಾಟ ನಾಸಿಕ್ ಕಾಳಾರಾಮ ದೇವಾಲಯ ಪ್ರವೇಶ ಹೋರಾಟವಾಗಿದೆ. 1930ರಿಂದ 1934ರವರೆಗೆ ಸುಮಾರು 5 ವರ್ಷಗಳ ಕಾಲ ಈ ಸತ್ಯಾಗ್ರಹ ನಡೆಯಿತು. ಈ ಸತ್ಯಾಗ್ರಹದಲ್ಲಿ ಅಂಬೇಡ್ಕರ್‌ಹೀಗೆ ನುಡಿದಿದ್ದರು:

‘‘ನಿಮ್ಮ ಸಮಸ್ಯೆಗಳು ದೇವಾಲಯ ಪ್ರವೇಶದಿಂದ ಪರಿಹಾರವಾಗುವುದಿಲ್ಲ. ರಾಜಕೀಯ, ಆರ್ಥಿಕತೆ, ಶಿಕ್ಷಣ, ಧರ್ಮ-ಎಲ್ಲವೂ ಸಮಸ್ಯೆಯ ಭಾಗವಾಗಿವೆ. ಇಂದಿನ ಸತ್ಯಾಗ್ರಹ ಹಿಂದೂ ಮನಸ್ಸಿಗೆ ಹಾಕಿರುವ ಸವಾಲಾಗಿದೆ. ಹಿಂದೂಗಳು ನಮ್ಮನ್ನು ಮನುಷ್ಯರೆಂದು ಪರಿಗಣಿಸಲು ಸಿದ್ಧರಿದ್ದಾರೋ ಇಲ್ಲವೋ ಎಂಬುದನ್ನು ಇಂದು ಕಂಡುಕೊಳ್ಳಲಿದ್ದೇವೆ... ದೇವಾಲಯದಲ್ಲಿರುವ ದೇವರು ಕಲ್ಲಿನಿಂದಾಗಿದೆ ಎಂಬುದು ನಮಗೆ ತಿಳಿದಿದೆ. ದರ್ಶನ ಮತ್ತು ಪೂಜೆ ನಮ್ಮ ಸಮಸ್ಯೆಗಳನ್ನು ಪರಿಹರಿಸಲಾರವು. ಆದರೂ ಹಿಂದೂಗಳ ಮನಸ್ಸಿನಲ್ಲಿ ಬದಲಾವಣೆ ತರಲು ನಾವು ಪ್ರಯತ್ನಿಸುತ್ತೇವೆ ಮತ್ತು ಪ್ರಾರಂಭಿಸುತ್ತೇವೆ.’’

ಅಂಬೇಡ್ಕರ್‌ರವರು ದೇಗುಲ ಪ್ರವೇಶ ಹೋರಾಟದಲ್ಲಿ ಭಾಗವಹಿಸಲು ಮನಸ್ಸು ಮಾಡಿದ್ದು, ಅಸ್ಪಶ್ಯರು ಹಿಂದೂಗಳಂತೆಯೇ ಮನುಷ್ಯರೆಂಬುದನ್ನು ಹಿಂದೂಗಳು ಒಪ್ಪಿಕೊಳ್ಳುವ ಮನಸ್ಸು ಮಾಡುವರೇ ಎಂಬ ಸವಾಲನ್ನು ಹಾಕಲು ಮಾತ್ರವಾಗಿತ್ತು. ದೇವರ ಬಗೆಗಿನ ಭಕ್ತಿಯು ಅಸ್ಪಶ್ಯರ ಬದುಕನ್ನು ಎಂದಿಗೂ ಬದಲು ಮಾಡದು ಎಂಬುದು ಅವರಿಗೆ ತಿಳಿದಿತ್ತು.

ನಾಸಿಕ್ ಸತ್ಯಾಗ್ರಹ ಆರಂಭವಾದ ಒಂದು ತಿಂಗಳ ನಂತರ ಕಾಳಾರಾಮ ರಥೋತ್ಸವ ನಡೆಯಿತು. ದೇವಾಲಯದ ಅಧಿಕಾರಿಗಳೊಂದಿಗಿನ ಮಾತುಕತೆಯ ಪ್ರಕಾರ ರಥವನ್ನು ಎಳೆಯಲು ಅಸ್ಪಶ್ಯರಿಗೂ ಅವಕಾಶ ನೀಡಬೇಕೆಂದು ತೀರ್ಮಾನವಾಗಿತ್ತು. ಆದರೆ ರಥೋತ್ಸವ ಆರಂಭವಾದಾಗ ಅಸ್ಪಶ್ಯರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಅಸ್ಪಶ್ಯರು ಇದರ ವಿರುದ್ಧ ಅಲ್ಲಿಯೇ ಪ್ರತಿಭಟಿಸಿದ ಕಾರಣ ಅವರ ಮೇಲೆ ಸನಾತನವಾದಿಗಳು ಹಲ್ಲೆ ಮಾಡಿದರು. ದೇವಾಲಯವನ್ನು ಮುಚ್ಚಿದರು. ಅಲ್ಲಿಂದ 5 ವರ್ಷಗಳ ಕಾಲ ಅಸ್ಪಶ್ಯರ ಸಣ್ಣ ಗುಂಪು ಪ್ರವೇಶಕ್ಕಾಗಿ ದೇಗುಲದ ಮುಂದೆಯೇ ಸತ್ಯಾಗ್ರಹಕ್ಕೆ ಮನೆ, ಕೆಲಸ ಬಿಟ್ಟು ಕುಳಿತುಕೊಂಡಿತು. ಹಿಂದೂ ಮೇಲ್ಜಾತಿಗಳ ಮನಸ್ಸು ಕರಗಲಿಲ್ಲ. ಆದರೂ ಸತ್ಯಾಗ್ರಹ ಮುಂದುವರಿಸುವುದಾಗಿ ಗಾಯಕ್ವಾಡ್‌ರವರು ಬರೆದ ಪತ್ರಕ್ಕೆ ಅಂಬೇಡ್ಕರ್‌ರವರು ಹೀಗೆ ಉತ್ತರಿಸಿದ್ದರು.

‘‘ಮುಂಬರುವ ರಾಮನವಮಿ ದಿನದಂದು ನಾಸಿಕ್ ಕಾಳಾರಾಮ್ ಮಂದಿರದಲ್ಲಿ ದಮನಿತ ವರ್ಗಗಳು ಸತ್ಯಾಗ್ರಹವನ್ನು ಪ್ರಾರಂಭಿಸುವ ಔಚಿತ್ಯದ ಬಗ್ಗೆ ನನ್ನ ಅಭಿಪ್ರಾಯಗಳನ್ನು ಕೇಳಿರುವುದಕ್ಕೆ ನಾನು ನಿಮಗೆ ಆಭಾರಿಯಾಗಿದ್ದೇನೆ. ಅಂತಹ ಕ್ರಮವು ಖಂಡಿತವಾಗಿಯೂ ಅನಪೇಕ್ಷಿತವಾಗಿದೆ ಹಾಗೂ ಇದನ್ನು ಕೇವಲ ಮುಂದೂಡಬಾರದು ಬದಲಾಗಿ ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಈ ಸತ್ಯಾಗ್ರಹದ ಜನಕರಲ್ಲಿ ಒಬ್ಬನಾದ ವ್ಯಕ್ತಿಯಿಂದ ಇಂತಹ ಮಾತುಗಳು ಕೇಳಿಬರುತ್ತಿರುವುದು ವಿಚಿತ್ರ ಹಾಗೂ ಆಶ್ಚರ್ಯಕರವಾಗಿ ಕಾಣಬಹುದು. ಆದರೆ ಈ ಮುಂಚೂಣಿಯ ಬದಲಾವಣೆಯನ್ನು ಘೋಷಿಸಲು ನಾನು ಹೆದರುವುದಿಲ್ಲ. ನಾನು ದೇವಾಲಯ ಪ್ರವೇಶ ಚಳವಳಿಯನ್ನು ಪ್ರಾರಂಭಿಸಿದ್ದು ಏಕೆಂದರೆ, ಯಾವ ವಿಗ್ರಹಗಳನ್ನು ಅಸ್ಪಶ್ಯ ವರ್ಗಗಳು ಪೂಜಿಸಬಾರದೆಂದು ತಡೆಯಲಾಗಿತ್ತೋ ಅವುಗಳನ್ನು ಪೂಜಿಸುವಂತಾಗಬೇಕಿತ್ತು ಅಥವಾ ದೇವಾಲಯ ಪ್ರವೇಶ ಅವರನ್ನು ಹಿಂದೂ ಸಮಾಜದ ಸಮಾನ ಸದಸ್ಯರನ್ನಾಗಿ ಮತ್ತು ಅದರ ಅವಿಭಾಜ್ಯ ಅಂಗವಾಗಿ ಮಾಡುತ್ತದೆ ಎಂದು ನಾನು ನಂಬಿದ್ದೆ. ಇದುವರೆಗಿನ ಈ ಪ್ರಕರಣದ ಸ್ವರೂಪಕ್ಕೆ ಸಂಬಂಧಿಸಿದಂತೆ, ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಲು ಸಮ್ಮತಿಸುವ ಮೊದಲು ಹಿಂದೂ ಸಮಾಜ ಮತ್ತು ಹಿಂದೂ ಧರ್ಮಶಾಸ್ತ್ರವನ್ನು ಸಂಪೂರ್ಣವಾಗಿ ಕೂಲಂಕಷವಾಗಿ ಪರಿಶೀಲಿಸಬೇಕೆಂದು ದಮನಿತ ವರ್ಗಕ್ಕೆ ನಾನು ಸಲಹೆ ನೀಡುತ್ತೇನೆ. ದಮನಿತ ವರ್ಗಕ್ಕೆ ಶಕ್ತಿ ತುಂಬಲು ಮತ್ತು ಅವರಿಗಿರುವ ಸ್ಥಾನದ ಬಗ್ಗೆ ಅರಿವು ಮೂಡಿಸಲು ಇರುವ ಅತ್ಯುತ್ತಮ ಮಾರ್ಗವೆಂದು ಭಾವಿಸಿದ ಕಾರಣಕ್ಕಾಗಿ ನಾನು ದೇವಾಲಯ ಪ್ರವೇಶ ಸತ್ಯಾಗ್ರಹವನ್ನು ಪ್ರಾರಂಭಿಸಿದೆ. ನಾನದನ್ನು ಸಾಧಿಸಿದ್ದೇನೆ ಎಂದು ನಂಬುತ್ತೇನೆ. ಆದ್ದರಿಂದ ನನಗೀಗ ದೇವಾಲಯ ಪ್ರವೇಶದಿಂದ ಯಾವುದೇ ಪ್ರಯೋಜನವಿಲ್ಲ. ದಮನಿತ ವರ್ಗವು ರಾಜಕೀಯ ಮತ್ತು ಶಿಕ್ಷಣದ ಮೇಲೆ ತಮ್ಮ ಶಕ್ತಿ ಮತ್ತು ಸಂಪನ್ಮೂಲಗಳನ್ನು ಕೇಂದ್ರೀಕರಿಸಬೇಕೆಂದು ನಾನು ಬಯಸುತ್ತೇನೆ ಹಾಗೂ ಈ ಎರಡರ ಮಹತ್ವವನ್ನು ಅರಿತುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ’’.

ಅಂಬೇಡ್ಕರ್‌ರವರು ಮುಂದೆ ನಡೆದ ಯಾವುದೇ ದೇಗುಲ ಪ್ರವೇಶಗಳಲ್ಲಿ ಪಾಲ್ಗೊಳ್ಳಲಿಲ್ಲ. 1935ರಷ್ಟೊತ್ತಿಗೆ ದೇವಾಲಯ ಪ್ರವೇಶ ಹೋರಾಟಗಳು ನಿಷ್ಪ್ರಯೋಜಕವೆಂದು ಸಾಬೀತಾಗಿದ್ದವು. ಹಿಂದೊಮ್ಮೆ ದಲಿತ ಸಂಘರ್ಷ ಸಮಿತಿಯ ಹೋರಾಟಗಾರರಿಗೆ ದೇಗುಲ ಪ್ರವೇಶ ಸಿಗದೇ ಇದ್ದಾಗ, ದೇಗುಲದ ಕಡೆ ಮುಖ ಮಾಡಿ ‘ದೇವರೇ ನಿನಗೆ ನಮ್ಮ ದರ್ಶನ ಮಾಡುವ ಭಾಗ್ಯವಿಲ್ಲ’ ಎಂದು ತಿರುಗಿ ನೋಡದೆ ಬಂದಿದ್ದರಂತೆ. ಈ ನಡೆ ನಮಗೆಲ್ಲ ಆದರ್ಶವಾಗಬೇಕಿದೆ. ಬಾಬಾಸಾಹೇಬರನ್ನು ದೇಗುಲದ ಹೊರಗೆ ನಿಲ್ಲಿಸಿ ಮೌಂಟ್‌ಬ್ಯಾಟನ್‌ನನ್ನು ಒಳಗೆ ಬಿಟ್ಟುಕೊಂಡ, ಬಾಬು ಜಗಜೀವನ್ ರಾಮ್‌ಜಿಯವರು ಉದ್ಘಾಟಿಸಿದ ದೇವರ ಮೂರ್ತಿಯನ್ನು ನಂತರ ಗೋಗಂಜಲದಿಂದ ಶುಭ್ರಗೊಳಿಸಿ ಪವಿತ್ರಗೊಳಿಸಿಕೊಂಡ ದೇವಾಲಯಗಳು ದಲಿತರಿಗೆ ಅಗತ್ಯವಿಲ್ಲ. ಬ್ರಾಹ್ಮಣರು ಮತ್ತು ಶೂದ್ರರು ಪೂಜಾರಿಕೆ ಮಾಡುವ ದೇವರಂತೆಯೇ ದಲಿತರ ದುಗ್ಗಮ್ಮ, ಮಾರಮ್ಮರಂತಹ ಹೆಣ್ಣು ದೇವರುಗಳಿವೆ. ಅದಕ್ಕಿಂತಲೂ ಹೆಚ್ಚಾಗಿ ಬುದ್ಧಗುರು ತನ್ನ ಕೈಚಾಚಿ ಅಪ್ಪುಗೆಗೆ ಕಾಯುತ್ತಿದ್ದಾನೆ. ಹೀಗಿರುವಾಗ ಧಾರ್ಮಿಕ ವಿಚಾರದಲ್ಲಿಯೂ ಮೇಲ್ಜಾತಿ ದಾಸ್ಯದಲ್ಲಿ ಬದುಕುವುದಕ್ಕಿಂತ ದಲಿತರು ಸ್ವಾಭಿಮಾನಿಗಳಾಗಿ ದೇಗುಲಗಳನ್ನು ಬಹಿಷ್ಕರಿಸುವುದೇ ಸೂಕ್ತ. ದಲಿತರ ಮುಂದಿನ ಮಕ್ಕಳು ಈ ಅವಮಾನವನ್ನು ಅನುಭವಿಸುವುದು ಬೇಡ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಿಕಾಸ್ ಆರ್. ಮೌರ್ಯ

contributor

Similar News