×
Ad

ಅಲ್ಪಸಂಖ್ಯಾತ ಇಲಾಖೆಯನ್ನು ನಂಬಿ ಕೆಟ್ಟ ಸಂಶೋಧನಾರ್ಥಿಗಳು

Update: 2025-02-25 12:27 IST

ದೇಶದಲ್ಲಿ ಪಕ್ಷಾತೀತವಾಗಿ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನಗೊಳಿಸಲಾಗುತ್ತಿದೆ. ಇವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ದಮನಗೊಳಿಸಲಾಗುತ್ತಿರುವ ಬೆಳವಣಿಗೆಗಳನ್ನು ನಾವು ದಿನನಿತ್ಯ ಗಮನಿಸುತ್ತಿದ್ದೇವೆ. ಒಂದು ಪಕ್ಷವು ಅಲ್ಪಸಂಖ್ಯಾತರನ್ನು

ನೇರವಾಗಿ ಗುರಿ ಮಾಡಿ ದೇಶದ ಶತ್ರುಗಳಂತೆ ತೋರಿಸಿ ಚುನಾವಣೆ ಗೆಲ್ಲಲು ಹಪಾಹಪಿಸಿದರೆ, ಮತ್ತೊಂದು ಪಕ್ಷವು ಅಲ್ಪಸಂಖ್ಯಾತರಿಗೆ ತನ್ನ ಹೊರತು ಬೇರೆ ಗತಿಯಿಲ್ಲ, ಹೇಗೆಯೇ ಆದರೂ ತನ್ನನ್ನೇ ಬೆಂಬಲಿಸುತ್ತಾರೆ ಎಂಬ ಮಾನಸಿಕತೆಯನ್ನು ಹೊಂದಿದೆ.

ಇತ್ತೀಚೆಗೆ 2025-26ರ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಆಯಾ ಸಮುದಾಯಗಳ ಸಂಸ್ಥೆಗಳು ಮತ್ತು ಮುಖಂಡರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಾಗಿದೆ. ಆದರೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರನ್ನು ಹೊರಗಿಟ್ಟು, ಕೇವಲ ಸಮುದಾಯದ ಹಿನ್ನೆಲೆಯ ಶಾಸಕರು ಮತ್ತು ಸಚಿವರೊಂದಿಗೆ ಮಾತ್ರ ಸಭೆ ನಡೆಸಲಾಗಿದೆ. ಹೋಗಲಿ ಈ ರಾಜಕೀಯ ನಾಯಕರಿಗೆ ಸಮುದಾಯದ ಕೆಳಸ್ತರದ ಜನರ ಬದುಕು ಹೇಗಿದೆ, ಅವರ ಸಮಸ್ಯೆಗಳೇನು ಎಂಬ ಸ್ಪಷ್ಟತೆ ಇದೆಯೇ? ಇದ್ದರೂ ಚುನಾವಣೆಗಳಲ್ಲಿ ಬಳಸಿಕೊಳ್ಳುವ ಹೊರತು ಅವರ ಸಮಸ್ಯೆಗಳಿಗೆ ಕಿವಿಗೊಡುವ ಕೆಲಸ ಮಾಡಿದ್ದಾರೆಯೇ?

ರಾಜೇಂದ್ರ ಸಾಚಾರ್ ಕಮಿಟಿಯು ಭಾರತದಲ್ಲಿ ಮುಸ್ಲಿಮರ ಸ್ಥಿತಿಯು ದಲಿತರ ಸ್ಥಿತಿಗಿಂತ ಹೀನಾಯವಾಗಿದೆ, ಇವರು ತೀರಾ ಕೆಳಸ್ತರದಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿರುವುದನ್ನು ಈ ನಾಯಕರು ಹೇಗೆ ಅರ್ಥ ಮಾಡಿಕೊಂಡಿದ್ದಾರೆ? ಈ ಸಮಿತಿಯ ಅರಿವಾದರೂ ಇದೆಯೇ? ಅರ್ಥ ಮಾಡಿಕೊಂಡಿದ್ದೇ ಆದರೆ ಎಷ್ಟು ಜನ ಸಮುದಾಯದ ನಾಯಕರೆಂದು ಕರೆದುಕೊಂಡ ಮುಖಂಡರಿಗೆ ಇದಕ್ಕಾಗಿ ಶ್ರಮಿಸುವ ಮನಸ್ಸಿದೆ? ಅಲ್ಪಸಂಖ್ಯಾತ ಸಮುದಾಯದ ನಾಯಕರು ತಮ್ಮ ಈ ಶೋಚನೀಯ ಮನಸ್ಥಿತಿಯನ್ನು ಸರಿದೂಗಿಸಿಕೊಂಡು ಸಮುದಾಯದ ಕುರಿತು ನೈಜ ಕಾಳಜಿಯನ್ನು ಸರಕಾರದ ಗಮನಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಕಿವಿ ಹಿಂಡುವ ಕೆಲಸವೂ ಮಾನ್ಯ ಮುಖ್ಯಮಂತ್ರಿಸಿದ್ದರಾಮಯ್ಯ ಅವರಿಂದ ಆಗಬೇಕಿದೆ.

2016-17ರಲ್ಲಿ ಆಡಳಿತದಲ್ಲಿದ್ದ ಇದೇ ಸಿದ್ದರಾಮಯ್ಯನವರ ಸರಕಾರವು ಆಗ ಅಲ್ಪಸಂಖ್ಯಾತ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಅಕ್ರಂ ಪಾಷಾರವರ ಇಚ್ಛಾಶಕ್ತಿಯ ಮೇರೆಗೆ ಪಿಎಚ್.ಡಿ./ಎಂಫಿಲ್ ಅಧ್ಯಯನ ಮಾಡುವ ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾ ವಿದ್ಯಾಥಿಗಳಿಗೆ ಜೆಆರ್‌ಎಫ್ ಮಾದರಿಯಲ್ಲಿ ಮಾಸಿಕ ರೂ. 25,000 ನೀಡುವ ಯೋಜನೆ ಜಾರಿಗೆ ತಂದಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿಯವರ ಸರಕಾರವು ಈ ಫೆಲೋಶಿಪನ್ನು ಮಾಸಿಕ ಕೇವಲ ರೂ. 8,333ಗಳಿಗೆ ಕಡಿತಗೊಳಿಸಿ ವಿದ್ಯಾರ್ಥಿ ವಿರೋಧಿ ಧೋರಣೆ ತೋರಿತ್ತು. ನಂತರ ಬಾಧಿತ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು, ಸಮುದಾಯದ ಮುಖಂಡರು ಮತ್ತು ವಿದ್ಯಾರ್ಥಿ ಸ್ನೇಹಿ ರಾಜಕಾರಣಿಗಳ ಒತ್ತಡದ ಮೇರೆಗೆ ಸರಕಾರ

ರೂ. 25,000 ಮಾಸಿಕ ಫೆಲೋಶಿಪನ್ನು ಮರು ಜಾರಿ ಮಾಡಿತ್ತು. ಆದರೆ ಅದುವರೆಗೂ ಪ್ರವೇಶ ಪಡೆದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಸೂಚಿಸಿ, ನಂತರ ಬರುವ ಯಾವುದೇ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮಾಸಿಕ 8,333 ರೂ. ಮಾತ್ರ ನೀಡಲಾಗುತ್ತದೆ ಎಂಬ ತನ್ನ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಹಾಗೆಯೇ ಉಳಿಸಿಕೊಂಡಿತ್ತು.

ಆದರೆ ತಾವು ಅಧಿಕಾರದಲ್ಲಿಲ್ಲ, ಈಗಿನ ಬಿಜೆಪಿಯವರು ಅಲ್ಪಸಂಖ್ಯಾತ ವಿರೋಧಿ ನಿಲುವು ಹೊಂದಿದವರು, ಹಾಗಾಗಿ ಸಿದ್ದರಾಮಯ್ಯರವರ ಈ ಯೋಜನೆಯನ್ನು ಉಳಿಸಿಕೊಳ್ಳಲು ಸದ್ಯಕ್ಕೆ ಸಾಧ್ಯವಿಲ್ಲ, ನಾವು ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಯಥಾವತ್ತಾಗಿ ಮತ್ತೆ ಜಾರಿಗೆ ಮಾಡುತ್ತೇವೆ ಎಂದಿದ್ದ ಕಾಂಗ್ರೆಸ್‌ನ ಈಗಿನ ಸಚಿವರು, ಶಾಸಕರು ಈಗ ಬಾಯಿಮುಚ್ಚಿ ಕುಳಿತಿದ್ದು ಕಂಫರ್ಟ್ ರೆನ್‌ನಲ್ಲಿ ಇದ್ದಂತಿದೆ. ಮಾತ್ರವಲ್ಲದೆ ಈಗಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರು, ಸರಕಾರ ನೀಡಿದ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿದ್ದೇವೆ. ಅಲ್ಲದೆ, ವಿದ್ಯಾರ್ಥಿಗಳಿಗೆ ದಕ್ಷವಾಗಿ ವಿದ್ಯಾರ್ಥಿ ವೇತನ ಹಂಚಿದ್ದೇವೆ ಎಂದು ತಮ್ಮ ಬೆನ್ನು ತಟ್ಟಿಕೊಂಡಿದ್ದಾರೆ. ಆದರೆ ಇದೇ ತಿಂಗಳ ದಿನಾಂಕ 12ರ ವಾರ್ತಾಭಾರತಿ ಪತ್ರಿಕೆಯಲ್ಲಿ ‘ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಿಡುಗಡೆ ಮಾಡಿದ ಅನುದಾನ ವೆಚ್ಚ ಮಾಡದ ಅಲ್ಪಸಂಖ್ಯಾತರ ಇಲಾಖೆ’ ಎಂಬ ಶೀರ್ಷಿಕೆಯಲ್ಲಿ ದತ್ತಾಂಶಗಳ ಸಹಿತ ಸುದ್ದಿ ಪ್ರಕಟವಾಗಿದೆ. ಅಲ್ಪಸಂಖ್ಯಾತರ ಅನುಭವ ಮತ್ತು ಮಾನ್ಯ ಸಚಿವರ ಹೇಳಿಕೆಯ ಕುರಿತು ಹೇಳಬಹುದಾದರೆ ಇದನ್ನು ವಿತಂಡವಾದ ಎಂದೇ ಕರೆಯಬೇಕಾಗುತ್ತದೆ.

ಕರ್ನಾಟಕದಲ್ಲಿ ಪ್ರಸಕ್ತ ಕೇವಲ 170ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಷ್ಟೇ ಪಿಎಚ್.ಡಿ. ಸಂಶೋಧನೆಗೆ ದಾಖಲಾತಿ ಹೊಂದಿದ್ದು, ಪೂರ್ವಾನ್ವಯವಾಗುವಂತೆ ಈ ವಿದ್ಯಾರ್ಥಿಗಳಿಗೆ ಹಳೆಯ ಮಾದರಿಯಲ್ಲೇ ಫೆಲೋಶಿಪ್ ನೀಡಬೇಕಿದೆ. ಸ್ಥಳೀಯ ಮುಖಂಡರಿಂದ ಹಿಡಿದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಅವರನ್ನು ಒಳಗೊಂಡಂತೆ ಅನೇಕ

ನಾಯಕರನ್ನು ಭೇಟಿಯಾಗಿ ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳ ಸಮಸ್ಯೆ ಹೇಳಿಕೊಂಡರೂ ಬಹುಶ: ಯಾರೂ ಈ ಬಗ್ಗೆ ಧ್ವನಿ ಎತ್ತಿದಂತಿಲ್ಲ ಅಥವಾ ಅವರ ಧ್ವನಿಗೆ ಬೆಲೆ ಸಿಕ್ಕಂತಿಲ್ಲ. ಮುಖ್ಯವಾಗಿ ಸ್ವತಃ ಮಾನ್ಯ ಅಲ್ಪಸಂಖ್ಯಾತ ಸಚಿವ ಝಮೀರ್ ಅಹ್ಮದ್ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಲ್ಲದೆ, ಬಿಜಾಪುರದಲ್ಲಿ ಒಬ್ಬ ವಿದ್ಯಾರ್ಥಿನಿಯು ಸಾರ್ವಜನಿಕ ಸಭೆಯಲ್ಲಿಯೇ ನೇರವಾಗಿ ಮಾಧ್ಯಮಗಳ ಮುಂದೆ ಈ ಕುರಿತು ಪ್ರಶ್ನಿಸಿದಾಗ ‘‘ಈ ವಿಷಯ ನನ್ನ ಗಮನದಲ್ಲಿದ್ದು, ಶೀಘ್ರದಲ್ಲಿ ಹಿಂದಿನಂತೆಯೇ ಅಲ್ಪಸಂಖ್ಯಾತ ಸಮುದಾಯದ ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ ರೂ.25,000 ನೀಡುವಂತೆ ಮರುಜಾರಿ ತರುತ್ತೇವೆ’’ ಎಂದಿದ್ದರು. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಾದ ತಿದ್ದುಪಡಿಯೇ ಈಗಲೂ ಜಾರಿಯಲ್ಲಿದೆ. ಮಾತ್ರವಲ್ಲ ಇದರ ಪ್ರಕಾರವೂ ಸರಿಯಾದ ಸಮಯಕ್ಕೆ ಫೆಲೋಶಿಪ್ ಸಿಗದೆ ವಿದ್ಯಾರ್ಥಿಗಳು ಸಂಕಟ ಅನುಭವಿಸುತ್ತಿದ್ದಾರೆ. ಸಂಬಂಧಿತ ವಿದ್ಯಾರ್ಥಿಗಳು ಹತಾಶೆಯಿಂದ ಮಾತನಾಡುತ್ತಿರುವುದು ಸಮಸ್ಯೆಯ ತೀವ್ರತೆಯನ್ನು ಅರಿಯಬಹುದು.

ಹೀಗಾಗಿ ಪಿಎಚ್.ಡಿ. ಅಧ್ಯಯನಕ್ಕೆ ಈ ಯೋಜನೆಯನ್ನೇ ನಂಬಿ ಬಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವರ ಸಂಶೋಧನೆಯು ಹಗ್ಗದ ಮೇಲಿನ ನಡಿಗೆಯಾಗಿದೆ. ಹಲವು ವಿದ್ಯಾರ್ಥಿ ಕುಟುಂಬಗಳ ಆರ್ಥಿಕ ಹಿನ್ನೆಲೆಯು ತೀರಾ ಕೆಳಮಟ್ಟದಲ್ಲಿರುವ ಕಾರಣ ಮನೆಯವರ ನೆರವು ಪಡೆಯಲಾಗದು. ಇವರ ಸಮಸ್ಯೆಗಳಿಗೆ ಕಿವಿಗೊಟ್ಟರೆ ಮಾನವೀಯತೆ ಹೊಂದಿರುವ ಮಾನ್ಯ ಸಚಿವರಿಗೆ ಅರ್ಥವಾಗಬಹುದು. ಸರಕಾರದ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತಂದರೆ ಈ ವಿದ್ಯಾರ್ಥಿಗಳ ತಲೆಮಾರು ಉಸಿರಾಡುತ್ತದೆ, ಶಿಕ್ಷಣ ಲಭಿಸುತ್ತದೆ. ಕಾಂಗ್ರೆಸ್ ಬಿಜೆಪಿಯ ಪ್ರತಿರೂಪ ಎಂಬ ಅನುಭವವು ವಿದ್ಯಾರ್ಥಿಗಳ ಪಾಲಿಗೆ ಸುಳ್ಳಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ದಾದಾ ಹಯಾತ್ ಬಾವಾಜಿ

contributor

Similar News