×
Ad

ಗುಂಡಿಗಳ ಗೂಡಾದ ರಾಷ್ಟ್ರೀಯ ಹೆದ್ದಾರಿ

ವಿಜಯಪುರ-ಇಂಡಿ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚಾರ

Update: 2026-03-05 14:19 IST

ವಿಜಯಪುರ: ಹೆಸರಿಗೆ ರಾಷ್ಟ್ರೀಯ ಹೆದ್ದಾರಿ, ಆದರೆ ಈ ದಾರಿಯಲ್ಲಿ ಸಂಚರಿಸಬೇಕಾದರೆ, ಸಾಮಾನ್ಯ ವಾಹನಗಳು ಸಾಲಲ್ಲ. ಗುಡ್ಡಗಾಡುಗಳ ಮೇಲೆ ಸಂಚರಿಸುವ ಆಫ್ ರೋಡ್ ವಾಹನಗಳು ಅಥವಾ ಗದ್ದೆಯಲ್ಲಿ ಸಂಚರಿಸುವಂತಹ ಟ್ರ್ಯಾಕ್ಟರ್‌ಗಳು ಇದ್ದರೆ ಮಾತ್ರ ಇಲ್ಲಿ ಸಂಚರಿಸಬಹುದು. ಅಂತಹ ಪರಿಸ್ಥಿತಿ ವಿಜಯಪುರದಿಂದ ಇಂಡಿ ಪಟ್ಟಣದ ನಡುವಿನ ದಾರಿಯದ್ದು.

ರಸ್ತೆಯಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಗಳ ಮೇಲೆಯೇ ರಸ್ತೆಯನ್ನು ಮಾಡಿದ್ದಾರೋ ಎಂಬುದು ಇಲ್ಲಿನ ವಾಹನ ಸವಾರರ ಯಕ್ಷ ಪ್ರಶ್ನೆ. ಇಲ್ಲಿ ಸಂಚರಿಸುವುದೆಂದರೆ ಒಂದರ್ಥದಲ್ಲಿ ಸರ್ಕಸ್ ಮಾಡಿದ ಅನುಭವ.

ದೊಡ್ಡ ದೊಡ್ಡ ಸರಕು ಸಾಗಾಣೆ ವಾಹನಗಳು ಈ ತಗ್ಗು ಗುಂಡಿಯಲ್ಲಿ ಸಾಗುವಾಗ ಮಗುಚಿ ಬೀಳುತ್ತದೆಯೋ ಎಂಬಂತೆ ಭಾಸವಾಗಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವುದು ಇಲ್ಲಿ ಸಾಮಾನ್ಯ. ಈ ಭಾಗದಲ್ಲಿ 20 ಕಿಲೋ ಮೀಟರ್ ಸಂಚಾರ ಮಾಡಬೇಕಾದರೆ ಕನಿಷ್ಠ 2 ಗಂಟೆ ಸಮಯ ಬೇಕು.

ಈ ರಸ್ತೆಯಲ್ಲಿ ವಿಜಯಪುರದಿಂದ ನಾಗಠಾಣದ ಸಂಚಾರ ಮಾಡಲು ವಾಹನ ಸವಾರರು ಹರಸಾಹಸ ಮಾಡುವಂತಾಗಿದೆ. ಈ ಮೊದಲು ರಾಜ್ಯ ಹೆದ್ದಾರಿ ಇದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಇದೀಗ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿದರೂ ಕಾಮಗಾರಿ ಗಗನ ಕುಸುಮ. ಒಂದು ವರ್ಷದಿಂದ ಕಾಮಗಾರಿ ನಡೆಯತ್ತಲೇ ಇದ್ದು ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ.

ಒಂದು ಕಡೆ ಹಾಳಾದ ರಸ್ತೆ. ಮತ್ತೊಂದೆಡೆ ಧೂಳಿನ ಆರ್ಭಟ. ಇದರ ನಡುವೆ ವಾಹನ ಸವಾರರದ್ದು ನಿತ್ಯ ಪರದಾಟ. ಇಲ್ಲಿ ಸಂಚಾರ ಮಾಡುವಾಗ ಮಾಸ್ಕ್ ಕಡ್ಡಾಯ ಹಾಕಬೇಕು ಎನ್ನುವಂತಾಗಿದೆ. ನಾಗಠಾಣ, ಅಲಿಯಾಬಾದ್, ಅಥರ್ಗ ಸೇರಿದಂತೆ ಹಲವು ಊರಿಗೆ ತೆರಳಲು ಈ ಬವಣೆ ನಿತ್ಯ ಅನುಭವಿಸಲೇಬೇಕಾಗಿದೆ.

ಎಸಿ ಹೊಂದಿರುವ ಕಾರುಗಳ ಸವಾರರು ಕಿಟಕಿಗಳನ್ನು ಮುಚ್ಚಿ ಆಮೆ ವೇಗದಲ್ಲಿ ಸಂಚರಿಸಿಯಾದರೂ ಗುರಿ ಮುಟ್ಟಬಹುದು. ಆದರೆ, ಬೈಕ್ ಸವಾರರ ಕಷ್ಟ ಹೇಳಿದರೂ ಮುಗಿಯುವಂತದ್ದಲ್ಲ.

ವರ್ಗಾವಣೆಗೆ ಅರ್ಜಿ ಮಾಡುವ ಪರಿಸ್ಥಿತಿ

ಅಲಿಯಾಬಾದ್, ನಾಗಠಾಣ ಸೇರಿದಂತೆ ಅನೇಕ ಗ್ರಾಮಗಳಿಗೆ ಬ್ಯಾಂಕ್, ಸರಕಾರಿ ಶಾಲೆ ಮೊದಲಾದ ಕಡೆ ಹೋಗುವವರು ಈ ರಸ್ತೆಯ ನಿತ್ಯ ಹೈರಾಣದಿಂದ ತಾಪತ್ರಯ ಅನುಭವಿಸುವಂತಾಗಿದೆ. ಹೀಗಾಗಿ ಈ ರಸ್ತೆಯ ಸಹವಾಸದಿಂದ ಬೇರೆ ಕಡೆ ವರ್ಗಾವಣೆ ಮಾಡಿಬಿಡಿ ಎಂದು ತಮ್ಮ ಕಾರ್ಯವ್ಯಾಪ್ತಿಯ ಇಲಾಖೆಗಳಿಗೆ ಅನೇಕ ನೌಕರರು ಅರ್ಜಿ ಸಲ್ಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ರಸ್ತೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ.

ನಾವು ಈ ರಸ್ತೆಯಿಂದ ನಿತ್ಯವು ನೋವು ಅನುಭವಿಸುವಂತಾಗಿದೆ. ಈ ರಸ್ತೆಯ ಸಹವಾಸದಿಂದ ಬೇರೆ ಕಡೆ ವರ್ಗಾವಣೆ ಮಾಡಿಬಿಡಲು ಇಲಾಖೆಗೆ ಪತ್ರ ಬರೆಯಲಾಗಿದೆ. ರಸ್ತೆ ಸಮಸ್ಯೆಯಿಂದ ಹಲವಾರು ಜನರಿಗೆ ತೊಂದರೆ ಆಗಿದೆ. ನಾವು ಸರಕಾರಿ ಕೆಲಸ ಮಾಡುವುದರಿಂದ ಸರಕಾರದ ವಿರುದ್ಧ ಮಾತನಾಡಬಾರದು, ಆದರೆ ಇಂತಹ ದೊಡ್ಡ ಸಮಸ್ಯೆ ಇದೆ. ಇದು ಜಿಲ್ಲಾ ಉಸ್ತುವಾರಿಗಳಿಗೆ ಸಮಸ್ಯೆ ಕಾಣುತ್ತಿಲ್ಲವೇ?

-ಸರಕಾರಿ ನೌಕರ

ನಿತ್ಯ ನಾನು ಈ ರಸ್ತೆಯ ಮೇಲೆ ಸಂಚರಿಸುತ್ತೇನೆ. ಆದರೆ ಆಗುವ ಹೈರಾಣ ಅಷ್ಟಿಷ್ಟಲ್ಲ, ಈ 20 ಕೀ.ಮೀ. ಕ್ರಮಿಸುವಲ್ಲಿ ನನ್ನ ಪರಿಸ್ಥಿತಿ ತುಂಬಾ ಗೋಳಿನಿಂದ ಕೂಡಿರುತ್ತದೆ, ಕೂಡಲೇ ಈ ರಸ್ತೆಗೆ ಅಭಿವೃದ್ಧಿಗೊಳಿಸಬೇಕು. ಇದು ನನ್ನ ಮಾತ್ರ ಸಮಸ್ಯೆಯಲ್ಲ, ನನ್ನಂತಹ ನೂರಾರು ಜನರ ಸಮಸ್ಯೆ.

- ಯಾಸೀನ ಆಸಂಗಿ, ವಿಜಯಪುರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor

Similar News