ನೂತನ ತಾಲೂಕಾದರೂ ಇಲ್ಲ ಸೌಲಭ್ಯ; ಆಲಮೇಲಕ್ಕೆ ಬೇಕಿದೆ ಬಸ್ ಡಿಪೊ
ಆಲಮೇಲ: ವಿಜಯಪುರ ಜಿಲ್ಲೆಯ ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವ ಆಲಮೇಲ ಪಟ್ಟಣವು ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ವರ್ಷಗಳೇ ಕಳೆದರೂ, ಇಲ್ಲಿಯವರೆಗೆ ಸ್ವಂತ ಬಸ್ ಡಿಪೊ ಹೊಂದಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುತ್ತಮುತ್ತಲ ನೂರಾರು ಹಳ್ಳಿಗಳ ಸಂಪರ್ಕ ಕೊಂಡಿಯಾಗಿರುವ ಈ ಭಾಗಕ್ಕೆ ಪ್ರತ್ಯೇಕ ಡಿಪೊ ಮಂಜೂರಾತಿ ಈಗ ಅನಿವಾರ್ಯವಾಗಿದೆ.
ಆಲಮೇಲವು ಭೌಗೋಳಿಕವಾಗಿ ಮಹಾರಾಷ್ಟ್ರದ ಗಡಿಗೆ ಹತ್ತಿರದಲ್ಲಿದೆ. ಪ್ರತಿನಿತ್ಯ ಇಲ್ಲಿಂದ ಸಾವಿರಾರು ವಿದ್ಯಾರ್ಥಿಗಳು, ನೌಕರರು ಮತ್ತು ವ್ಯಾಪಾರಸ್ಥರು ವಿಜಯಪುರ, ಸಿಂದಗಿ, ಕಲ್ಬುರ್ಗಿ ಹಾಗೂ ಸೊಲ್ಲಾಪುರಕ್ಕೆ ಸಂಚರಿಸುತ್ತಾರೆ. ಆದರೆ, ಇಲ್ಲಿ ಬಸ್ ಡಿಪೊ ಇಲ್ಲದ ಕಾರಣ ಪಕ್ಕದ ಸಿಂದಗಿ ಅಥವಾ ಇಂಡಿ ಡಿಪೊಗಳಿಂದ ಬರುವ ಬಸ್‌ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಬಸ್‌ಗಳು ಲಭ್ಯವಾಗದೆ ಜನರು ಪರದಾಡುವಂತಾಗಿದೆ.
ಸರಕಾರಿ ಜಮೀನು ಲಭ್ಯ: ಯಾವುದೇ ಒಂದು ಬಸ್ ಡಿಪೊ ನಿರ್ಮಾಣಕ್ಕೆ ವಿಶಾಲವಾದ ಜಾಗದ ಅಗತ್ಯವಿರುತ್ತದೆ. ಆಲಮೇಲ ಪಟ್ಟಣದ ವ್ಯಾಪ್ತಿಯಲ್ಲಿ ಡಿಪೊ ನಿರ್ಮಾಣಕ್ಕೆ ಪೂರಕವಾದ ಸಾಕಷ್ಟು ಸರಕಾರಿ ಜಮೀನು ಲಭ್ಯವಿದೆ. ಜಾಗದ ಕೊರತೆಯ ನೆಪ ಹೇಳಲು ಇಲ್ಲಿ ಅವಕಾಶವಿಲ್ಲದಿದ್ದರೂ, ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಜಮೀನು ಮಂಜೂರಾತಿ ಪ್ರಕ್ರಿಯೆಗೆ ಚಾಲನೆ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. ಲಭ್ಯವಿರುವ ಸರಕಾರಿ ಜಮೀನನ್ನೇ ಬಳಸಿಕೊಂಡು ಡಿಪೊ ನಿರ್ಮಿಸಿದರೆ ಸರಕಾರಕ್ಕೆ ಭೂಸ್ವಾಧೀನದ ಹೊರೆಯೂ ತಪ್ಪಲಿದೆ.
ತಾಲೂಕಿನ ಮೂಲೆ ಮೂಲೆಗಳಿಂದ ನೂರಾರು ವಿದ್ಯಾರ್ಥಿಗಳು ಇಲ್ಲಿನ ಕಾಲೇಜುಗಳಿಗೆ ಬರುತ್ತಾರೆ. ಸಂಜೆ ವೇಳೆಗೆ ಹಳ್ಳಿಗಳಿಗೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿನಿಯರು ಮತ್ತು ಪೋಷಕರು ಆತಂಕ ಎದುರಿಸುತ್ತಿದ್ದಾರೆ. ನಮ್ಮದೇ ಡಿಪೊ ಇದ್ದರೆ ಗ್ರಾಮೀಣ ಭಾಗದ ರೂಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಈಗಾಗಲೇ ಈ ಕುರಿತು ಸರಕಾರದ ಮೇಲೆ ಒತ್ತಡ ಹೇರುತ್ತಿವೆ. ಲಭ್ಯವಿರುವ ಸರಕಾರಿ ಜಮೀನನ್ನು ಗುರುತಿಸಿ, ಡಿಪೊ ನಿರ್ಮಾಣಕ್ಕೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಬೇಕಿದೆ. ಈ ಭಾಗದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಾರಿಗೆ ಇಲಾಖೆಯ ಮೇಲೆ ಒತ್ತಡ ತಂದು ಈ ಯೋಜನೆಗೆ ಚಾಲನೆ ನೀಡಬೇಕಿದೆ.
ಬೇಡಿಕೆಗಳು ಏನು?
<ರಾತ್ರಿ ವಾಸ್ತವ್ಯದ ಬಸ್‌ಗಳು: ಹಳ್ಳಿಗಳಿಂದ ಆಲಮೇಲಕ್ಕೆ ಬರುವ ಬಸ್‌ಗಳು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡುವಂತಾಗಬೇಕು.
<ಹೊಸ ಬಸ್ ನಿಲ್ದಾಣದ ನವೀಕರಣ: ಡಿಪೊ ಜೊತೆಗೆ ಹಳೆಯ ಬಸ್ ನಿಲ್ದಾಣವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು.
<ದೂರದ ಊರುಗಳಿಗೆ ನೇರ ಸಂಪರ್ಕ: ಬೆಂಗಳೂರು, ಮಂಗಳೂರು, ಮುಂಬೈ ಮತ್ತು ಹೈದ್ರಾಬಾದ್‌ನಂತಹ ನಗರಗಳಿಗೆ ಆಲಮೇಲದಿಂದಲೇ ನೇರ ಬಸ್ ಸಂಚಾರ ಆರಂಭವಾಗಬೇಕು.
ಆಲಮೇಲ ತಾಲೂಕಾದ ನಂತರ ವಾಹನಗಳ ಒತ್ತಡ ಹೆಚ್ಚಿದೆ. ಪಟ್ಟಣದಲ್ಲಿ ಡಿಪೊ ನಿರ್ಮಾಣಕ್ಕೆ ಬೇಕಾದ ಸರಕಾರಿ ಜಮೀನು ಲಭ್ಯವಿದ್ದರೂ ವಿಳಂಬ ಮಾಡುತ್ತಿರುವುದು ಸರಿಯಲ್ಲ. ನಮಗೆ ಪ್ರತ್ಯೇಕ ಡಿಪೊ ಮಂಜೂರಾದರೆ ಸಾರಿಗೆ ವ್ಯವಸ್ಥೆ ಸುಧಾರಿಸುವುದಲ್ಲದೆ, ಸ್ಥಳೀಯವಾಗಿ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ.
ವಿಜಯಕುಮಾರ ಅಕ್ಕಲಕೋಟ, ಸ್ಥಳೀಯ ನಿವಾಸಿ
ಆಲಮೇಲಕ್ಕೆ ಬಸ್ ಡಿಪೊ ಮಂಜೂರು ಮಾಡುವಂತೆ ಈಗಾಗಲೇ ಹಲವು ಬಾರಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕ ಹಿತರಕ್ಷಣಾ ಸಮಿತಿಗಳ ವತಿಯಿಂದ ಸರ್ಕಾರಕ್ಕೆ ಮತ್ತು ಸಾರಿಗೆ ಇಲಾಖೆಗೆ ಅಧಿಕೃತ ಮನವಿ ಸಲ್ಲಿಸಲಾಗಿದೆ. ಪಟ್ಟಣದಲ್ಲಿ ಡಿಪೊ ನಿರ್ಮಾಣಕ್ಕೆ ಬೇಕಾದಷ್ಟು ಸರಕಾರಿ ಜಮೀನು ಲಭ್ಯವಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ.
ಮಹಾದೇವ ಬಿರಾದಾರ, ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ಸೇವಾ ಸಮಿತಿ