ಅರ್ಹರಿಗೆ ಮೀಸಲಾತಿ ಒದಗಿಸಲು ಸಾಮಾಜಿಕ, ಆರ್ಥಿಕ ಸಮೀಕ್ಷೆಯೊಂದಿಗೆ ಜಾತಿ ಜನಗಣತಿ ಅನಿವಾರ್ಯ
ಇಲ್ಲಿ ಒಟ್ಟಾರೆ ಗಮನಿಸಬೇಕಾದ ಅಂಶ ಏನೆಂದರೆ ಮೇಲೆ ವಿವರಿಸಿರುವಂತೆ ಟೀಕೆ ಮಾಡುವ ಜಾತಿಯವರಿಗೆ ದಲಿತರು, ಹಿಂದುಳಿದ ವರ್ಗದವರಂತೆ ಮೀಸಲಾತಿ ಅತಿ ಅಗತ್ಯ ಯಾ ಅನಿವಾರ್ಯ ಎಂದೇನಿಲ್ಲ. ಅವರಿಗೆ ಅವರ ರಾಜಕೀಯ ಹಿತಾಸಕ್ತಿಯ ರಕ್ಷಣೆ ಮುಖ್ಯ ಎಂದು ತೋರುತ್ತದೆ. ಅದಕ್ಕಾಗಿ ಗೊಂದಲ ಎಬ್ಬಿಸಿ, ಬೆದರಿಸಿ ಸದರಿ ಸಮೀಕ್ಷಾ ವರದಿಯನ್ನು ಮತ್ತಷ್ಟು ದಿನ ವಾಪಸ್ ಕೋಲ್ಡ್ ಸ್ಟೋರೇಜ್‌ಗೆ ಕಳುಹಿಸುವಂತೆ ಸರಕಾರದ ಮೇಲೆ ಒತ್ತಡ ಹೇರುವ ಹುನ್ನಾರವಾಗಿದೆ.
ಕರ್ನಾಟಕ ಸರಕಾರದ ಆದೇಶದಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಉಸ್ತುವಾರಿ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇಲಾಖಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ 2014-16ರಲ್ಲಿ ರಾಜ್ಯದ ಸಮಗ್ರ ಜನ ಸಮುದಾಯಗಳ ‘ಸಾಮಾಜಿಕ, ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿ’ ಕಾರ್ಯವನ್ನು ನಡೆಸಲಾಗಿದೆ. ಮನೆ ಮನೆಗೆ ಭೇಟಿ ಮೂಲಕ ಈ ಸಾಮಾಜಿಕ, ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿ ಕಾರ್ಯ ಮಾಡಲು ಸರಕಾರಿ ಅಧಿಕಾರಿಗಳು ಮತ್ತು ನೌಕರರು ರಾಜ್ಯದ ಶೇ. 98ಕ್ಕಿಂತಲೂ ಹೆಚ್ಚಿನ ಮನೆಗಳಿಗೆ ಭೇಟಿಯಿತ್ತು ಸಮೀಕ್ಷಾ ಪ್ರಶ್ನಾವಳಿ ಮೂಲಕ ಕೇಳಲಾದ ಎಲ್ಲಾ ದತ್ತಾಂಶಗಳನ್ನು ಪಡೆದು ಅವನ್ನು ಆಯೋಗದ ತಂಡ ಹತ್ತಾರು ಸಭೆಗಳನ್ನು ನಡೆಸಿ ಅವನ್ನು ಮತ್ತೆ ಪ್ರತ್ಯೇಕ ವಿಂಗಡಿಸಿ, ಅವನ್ನು ವರದಿಗೆ ಲಗತ್ತಿಸಿ ಸರಕಾರದ ಅವಗಾಹನೆ ಮತ್ತು ಸೂಕ್ತ ಆದೇಶಕ್ಕಾಗಿ ಸರಕಾರಕ್ಕೆ ಸಲ್ಲಿಸಿರುತ್ತಾರೆ. ಸುಮಾರು ಎರಡು ವರ್ಷಗಳಿಗಿಂತಲೂ ಹೆಚ್ಚಿನ ಸಮಯ ನಿರಂತರ ನಿಸ್ವಾರ್ಥ ಸೇವೆ ಮೂಲಕ ಇದರ ಕಾರ್ಯನಿರ್ವಹಣೆಗಾಗಿ ದುಡಿದು ಸರಕಾರಕ್ಕೆ ಸಲ್ಲಿಸಿದಾಗ ಅದಕ್ಕೆ ಶಹಬಾಸ್ ಎನ್ನುವ ಬದಲು ಬರೀ ಟೀಕೆ-ಟಿಪ್ಪಣಿಗಳನ್ನೇ ಅವರು ಕೇಳುವಂತಾಗುತ್ತದೆೆ. ಹೀಗೆ ಒಟ್ಟಾರೆ ಅದು ಯಾವುದೇ ಖಾಸಗಿ ಜಾತಿ ಸಂಘ ಯಾ ಒಕ್ಕೂಟ ಮಾಡಿರುವ ಜನಗಣತಿ ಮತ್ತು ಸಮೀಕ್ಷಾ ಕಾರ್ಯ ಆಗದೆ ಪೂರ್ತಿ ಸರಕಾರಿ ವ್ಯವಸ್ಥೆಯ ನಿಯಂತ್ರಣದಲ್ಲೇ ನಡೆದಿದೆ ಎಂಬುದನ್ನು ಟೀಕಾಕಾರರು ಮೊದಲು ಅರ್ಥ ಮಾಡಿಕೊಳ್ಳ ಬೇಕಾಗಿದೆ. ಹೀಗೆ ಈ ಬಹು ಮಹತ್ವದ ವರದಿಯ ಸರಕಾರದ ಒಪ್ಪಿಗೆಗಾಗಿ ನಾಡಿನ ಶೇ. 70ಕ್ಕೂ ಹೆಚ್ಚಿನ ಜನತೆ ಕಾತರದಿಂದ ಕಾಯುತ್ತಿದ್ದಾರೆ ಎಂಬುದನ್ನು ಕೂಡಾ ಟೀಕಾಕಾರರು ಅರ್ಥೈಸಬೇಕಾಗಿದೆ.
ಈ ಸಾಮಾಜಿಕ ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿ ವರದಿ ಕರ್ನಾಟಕ ಸರಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ಸದರಿ ವರದಿಯ ವಿರುದ್ಧ ರಾಜ್ಯದ ಬೇರೆ ಬೇರೆ ಜಾತಿ ಸಂಘಗಳ ಅದರಲ್ಲೂ ವಿಶೇಷವಾಗಿ ಮೇಲ್ಜಾತಿ ಸಂಘ ಸಂಸ್ಥೆಗಳ ಮುಖಂಡರ ಮತ್ತು ಅವರ ಪ್ರಭಾವಿ ರಾಜಕೀಯ ನೇತಾರರ ಟೀಕಾತ್ಮಕ ಹೇಳಿಕೆಗಳು ಪತ್ರಿಕಾ ಮತ್ತು ಇತರ ಮಾಧ್ಯಮದ ಮೂಲಕ ಆಗಾಗ ಪ್ರಕಟ ಆಗುತ್ತಲೇ ಇದೆ.
ಮೇಲ್ಜಾತಿ ಮುಖಂಡರ ಬಹುತೇಕ ಹೇಳಿಕೆಗಳು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರಕಾರ ಅವರ ಸಮುದಾಯದವರಿಗೆ ಅನ್ಯಾಯ ಮಾಡಲು ಮತ್ತು ಕೆಲ ಹಿಂದುಳಿದ ಜಾತಿಯವರನ್ನು ಓಲೈಸಿ ರಾಜಕೀಯವಾಗಿ ಲಾಭಗಳಿಸಲು ಸದರಿ ಜಾತಿ ಜನಗಣತಿಯನ್ನು ದುರುಪಯೋಗ ಮಾಡುವ ಉದ್ದೇಶ ಇದೆ ಎಂಬ ಅರ್ಥದಲ್ಲೇ ಬರುತ್ತಿದೆ. ಈ ತನಕ ಅಂತಹ ಹೇಳಿಕೆಗಳು ರಾಜ್ಯದ ಎರಡು ದೊಡ್ಡ ಸಮುದಾಯದ ಮುಖಂಡರುಗಳಿಂದ ಹೆಚ್ಚಾಗಿ ಕೇಳಿ ಬರುತ್ತಿದ್ದರೆ, ಇದೀಗ ಇತ್ತೀಚೆಗೆ ನಡೆದ ಬ್ರಾಹ್ಮಣರ ಮಹಾ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರ ಮುಖಂಡರು - ಬ್ರಾಹ್ಮಣರನ್ನು ಪರಿಗಣಿಸದೆ ಸದರಿ ಜಾತಿ ಜನಗಣತಿ ನಡೆದಿದೆ ಹಾಗೂ ಅದನ್ನು ವೈಜ್ಞಾನಿಕವಾಗಿ ನಡೆಸಿಲ್ಲ ಎಂದಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾದುದು. ಏಕೆಂದರೆ ಜನಗಣತಿ ಸಂದರ್ಭದಲ್ಲಿ ನಗರ ಪ್ರದೇಶಗಳ ಬಹಳಷ್ಟು ಮನೆಗಳಲ್ಲಿ ಅವರ ಸಮುದಾಯದವರು ಮತ್ತು ಇತರ ಮೇಲ್ಜಾತಿಯವರ ಅಸಹಕಾರ ಧೋರಣೆಯಿಂದಾಗಿಯೇ ಶೇ. 100ರ ಗಣತಿ ಕಾರ್ಯ ಆಗದೆ ಶೇ. 98+ರಷ್ಟು ಆಗಿರುತ್ತದೆ.
ಈ ಹಿನ್ನೆಲೆಯಲ್ಲಿ ಸದರಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿಯು ಪೂರ್ತಿ ಕ.ರಾ.ಹಿಂ. ವರ್ಗಗಳ ಆಯೋಗದ ಮೇಲುಸ್ತುವಾರಿಯಲ್ಲೇ ನಡೆದಿದ್ದರೂ ಆ ಗಣತಿ ಕಾರ್ಯವು ರಾಜ್ಯದಾದ್ಯಂತ ರಾಜ್ಯ ಸರಕಾರದ ಅತ್ಯುನ್ನತ ಅಧಿಕಾರಿ, ಮಾನ್ಯ ಮುಖ್ಯ ಕಾರ್ಯದರ್ಶಿಯವರ ನಿರ್ದೇಶನದಂತೆ ಎಲ್ಲಾ ಹಂತದಲ್ಲೂ ಸರಕಾರಿ ನೌಕರರ ಭಾಗವಹಿಸುವಿಕೆಯಿಂದಲೇ ನಡೆದಿರುವಾಗ ಅದು ಅಧಿಕೃತ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಂಬುದನ್ನು ನಾಡಿನ ಸಮಗ್ರ ಜನಸಮುದಾಯ ಅದರಲ್ಲೂ ಟೀಕಾಕಾರರು ಅವಶ್ಯವಾಗಿ ಅರಿತು ಕೊಳ್ಳ ಬೇಕಾಗಿದೆ.
ಈ ಲೇಖನದ ಲೇಖಕ ಸದರಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ಮಾನ್ಯ ಶ್ರೀ ಮುನಿರಾಜು, ಮಾಜಿ ಶಾಸಕ ಮತ್ತು ಶ್ರೀ ಸಿದ್ಧಲಿಂಗಯ್ಯ ನೇತೃತ್ವದ ಆಯೋಗ)ದ ಸದಸ್ಯನಾಗಿ ಐದು ವರ್ಷ ಈ ಹಿಂದೆ 2002ರಿಂದ 2006ರ ವರೆಗೆ ಸೇವೆ ಸಲ್ಲಿಸಿರುವುದೇ ಅಲ್ಲದೆ ಸದರಿ ಸಮೀಕ್ಷೆಯ (ಸೂಕ್ತ ಪ್ರಶ್ನಾವಳಿ ತಯಾರಿ, ಪ್ರಾಯೋಗಿಕ ಸಮೀಕ್ಷೆ ಮತ್ತು ಜನ ಗಣತಿ ಇತ್ಯಾದಿ) ಆರಂಭಿಕ ಸಿದ್ಧತೆ ಮಾಡಿದವರಲ್ಲಿ ಓರ್ವ ರಾಗಿದ್ದರು. ಮೀಸಲಾತಿಗಾಗಿ ಹೊಸ ಕೋರಿಕೆಗಳ ಸೇರ್ಪಡೆ ಮತ್ತು ತೆಗೆದು ಹಾಕುವ ಕಾರ್ಯದಲ್ಲಿ ಕಂಡು ಬರುತ್ತಿದ್ದ ದೊಡ್ಡ ತೊಡಕು ಎಂದರೆ ಅಗತ್ಯ ಬೇಕಾಗಿರುವ ಪೂರಕ ದತ್ತಾಂಶಗಳ ಕೊರತೆ ಎಂಬುದನ್ನು ಮನಗಂಡ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳು ಚರ್ಚಿಸಿ ಆಗಿನ ಸರಕಾರದ ಉಪ ಮುಖ್ಯಮಂತ್ರಿ ಮತ್ತು ವಿತ್ತ ಸಚಿವರೂ ಆಗಿದ್ದ ಮಾನ್ಯ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸದರಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿಯ ಅಗತ್ಯತೆಯ ಬಗ್ಗೆ ವಿವರಿಸಿ, ಸಮೀಕ್ಷಾ ಕಾರ್ಯನಿರ್ವಹಿಸಲು ಬೇಕಾದ ರೂ. 2.0 ಕೋಟಿ (ಆಗಿನ ಅಂದಾಜಿನಂತೆ) ಕೋರಿಕೆಯನ್ನೂ ಮುಂದಿಟ್ಟೆವು. ವಿಸ್ತೃತ ಚರ್ಚೆಯ ನಂತರ ಕೋರಿಕೆಯನ್ನು ಮನ್ನಿಸಿದ ಸಿದ್ದರಾಮಯ್ಯನವರು ರಾಜ್ಯಸರಕಾರದಿಂದ ಎಷ್ಟು ಸಾಧ್ಯವೋ ಅಷ್ಟು ಕೊಡುವ ಭರವಸೆ ಕೊಟ್ಟು ಕೇಂದ್ರ ಸರಕಾರಕ್ಕೂ ಬೇಡಿಕೆ ಮಂಡಿಸಲು ಸಲಹೆ ನೀಡಿದ್ದೇ ಅಲ್ಲದೆ ಅವರ ಪೂರಕ ಕೋರಿಕೆ ಪತ್ರವನ್ನೂ ಕೇಂದ್ರದ ವಿತ್ತಸಚಿವರಿಗೆ ಕಳುಹಿಸಿದರು. ಅದೇ ಸಂದರ್ಭದಲ್ಲಿ (ಅಕ್ಟೋಬರ್ 2004) ಅಖಿಲ ಭಾರತ ಹಿಂದುಳಿದ ವರ್ಗಗಳ ಆಯೋಗದ ಪ್ರಾಯೋಜಕತ್ವದಲ್ಲಿ ದಿಲ್ಲಿಯ ವಿಜ್ಞಾನ ಭವನದಲ್ಲಿ ಎಲ್ಲಾ ರಾಜ್ಯ ಆಯೋಗಗಳ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದ ಕರ್ನಾಟಕ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಕೇಂದ್ರ ವಿತ್ತ ಸಚಿವ ಮಾನ್ಯ ಚಿದಂಬರಂ ಅವರನ್ನು ಭೇಟಿಯಾಗಿ ರಾಜ್ಯ ಆಯೋಗದ ಮನವಿ ಮತ್ತು ಸಿದ್ದರಾಮಯ್ಯನವರು ಬರೆದ ಪತ್ರದ ಕಾಪಿಯನ್ನು ಮಂಡಿಸಿದೆವು. ಅವರು ಪೂರಕವಾಗಿ ಸ್ಪಂದಿಸಿದ್ದೇ ಅಲ್ಲದೆ ಮುಂದೆ ಕೇಂದ್ರ ಸರಕಾರದಿಂದ ರೂ. 1.25 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದರು. ಕೇಂದ್ರ ಸರಕಾರದಿಂದ ಸದರಿ ಅನುದಾನ ಬಿಡುಗಡೆಯಾದ ಕೂಡಲೇ ಕಾರ್ಯಪ್ರವೃತ್ತರಾದ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ವಿಷಯ ತಜ್ಞರ ಸಹಕಾರದಿಂದ ಪ್ರಶ್ನಾವಳಿ ರಚಿಸಿ ನಾಲ್ಕು ಕಂದಾಯ ವಿಭಾಗಗಳ ಒಂದೊಂದು ಜಿಲ್ಲೆಯ ಎರಡೆರಡು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಜನಗಣತಿ ಮತ್ತು ಸಮೀಕ್ಷಾ ಕಾರ್ಯವನ್ನು ಪ್ರಾಯೋಗಿಕ ನೆಲೆಯಲ್ಲಿ ನಡೆಸಿದ್ದರು ಕೂಡಾ. ಆದರೆ ಅಷ್ಟರಲ್ಲಿ 20-20 ಅಧಿಕಾರ ಹಂಚಿಕೆ ರಾಜಕಾರಣದ ಫಲವಾಗಿ ಧರಂ ಸಿಂಗ್ ನೇತೃತ್ವದ ಸರಕಾರ ಪತನವಾಗಿ ಕುಮಾರ ಸ್ವಾಮಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂತು. ಮುಂದೆ 2006ರ ಮಧ್ಯಾವಧಿಯಲ್ಲಿ ಸದರಿ ಸಮೀಕ್ಷೆ ಮತ್ತು ಜಾತಿ ಜನಗಣತಿ ಬಗ್ಗೆ ಸಹಮತ ಇರದ ಕಾರಣ ಕುಮಾರ ಸ್ವಾಮಿ ಸರಕಾರ ಕ.ರಾ.ಹಿಂ. ವರ್ಗಗಳ ಆಯೋಗವನ್ನು ಬರ್ಕಾಸ್ತು ಮಾಡಿರುವುದರ ಪರಿಣಾಮ ಅಂದಿನ ಆಯೋಗ ಆರಂಭಿಸಿದ ಸದರಿ ಸಮೀಕ್ಷಾ ಮತ್ತು ಜನಗಣತಿ ಕಾರ್ಯ ಅಲ್ಲೇ ನಿಲುಗಡೆಯಾಯಿತು.
ಮುಂದೆ 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೆ ಹೊಸದಾಗಿ ಮಾನ್ಯ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಹೊಸ ಆಯೋಗ ರಚಿಸಿದರು. ಕಾಂತರಾಜು ಅಧ್ಯಕ್ಷತೆಯ ಆಯೋಗವು ಇತರ ಕಾರ್ಯಗಳನ್ನು ಬದಿಗಿಟ್ಟು ಈ ಸಾಮಾಜಿಕ, ಆರ್ಥಿಕ ಸಮೀಕ್ಷಾ ಮತ್ತು ಜನಗಣತಿ ಕಾರ್ಯ ನಿರ್ವಹಿಸಲು ಪೂರ್ಣ ತೊಡಗಿಸಿಕೊಂಡಿದ್ದರಿಂದ ಈ ಮಹತ್ತರ ಕಾರ್ಯವನ್ನು 2017ರ ಕೊನೆಯಲ್ಲಿ ಪೂರ್ಣಗೊಳಿಸುವಲ್ಲಿ ಅವರು ಯಶಸ್ವಿಯಾದರು. ಈ ಕಾರಣಕ್ಕೆ ಕಾಂತರಾಜು ಮತ್ತು ಅವರ ಆಯೋಗದ ಎಲ್ಲಾ ಸದಸ್ಯರು ಅಭಿನಂದನಾರ್ಹರು. ಆದರೆ ಅಷ್ಟರಲ್ಲೆ 2018ರ ವಿಧಾನಸಭಾ ಚುನಾವಣೆ ನಡೆಯಲಿದ್ದ ಕಾರಣ ಕಾಂತರಾಜು ಆಯೋಗದ ವರದಿಗೆ ಬಿಡುಗಡೆಯ ಭಾಗ್ಯ ದೊರೆಯಲಿಲ್ಲ. ಆದರೂ ಸದರಿ ಸಮೀಕ್ಷೆ ಮತ್ತು ಜನಗಣತಿಯ ಕೆಲವೊಂದು ಅಂಕೆ ಸಂಖ್ಯೆಗಳು ಅನಧಿಕೃತ ಮೂಲದಿಂದ ಹೊರಬಂದಾಗ ಮೇಲ್ಜಾತಿ ಸಂಘ/ಒಕ್ಕೂಟದ ಮತ್ತು ರಾಜಕೀಯ ನಾಯಕರು ಸದರಿ ಸಮೀಕ್ಷೆ ಮತ್ತು ಜನಗಣತಿಯ ಅಂಕೆ ಸಂಖ್ಯೆಗಳು ಎಲ್ಲವೂ ಸುಳ್ಳು ಅಥವಾ ನಂಬಿಕಾರ್ಹ ಅಲ್ಲ ಎಂದು ಯಾವ ರೀತಿ ದೂಷಣೆಗೆ ಒಳಗಾಯಿತು ಎಂಬುದು ಇದೀಗ ಎಲ್ಲರಿಗೂ ತಿಳಿದಿರುವ ವಿಚಾರ. ಅವರು ಯಾವ ಕಾರಣಗಳಿಗಾಗಿ ಅವು ನಂಬಲರ್ಹ ಅಲ್ಲ ಎಂದು ವಾದಿಸುತ್ತಿದ್ದಾರೆ ಎಂಬುದನ್ನು ಅವಲೋಕಿಸೋಣ.
ಮೇಲ್ವರ್ಗದ ನಾಯಕರಿಗೆ ಅನಾಯಾಸವಾಗಿ ಲಭಿಸುತ್ತಿದ್ದ ರಾಜ್ಯಾಡಳಿತದ ಚುಕ್ಕಾಣಿ ತಮ್ಮ ಕೈ ತಪ್ಪಬಹುದೆಂಬ ಆತಂಕವಿದೆ.
1956ರಿಂದ ಇದುವರೆಗೆ ಮೈಸೂರು/ಕರ್ನಾಟಕ ರಾಜ್ಯಾಡಳಿತದ ಚುಕ್ಕಾಣಿ ಹಿಡಿದಿರುವವರಲ್ಲಿ ಮೇಲ್ವರ್ಗದ ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣರ ಪೈಕಿಯವರೇ ಒಟ್ಟು ಸುಮಾರು 50 ವರ್ಷಗಳ ಕಾಲ ಆಡಳಿತ ನಡೆಸಿದ್ದರೆ, ಹಿಂದುಳಿದ ವರ್ಗದವರಾದ ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಸಿದ್ದರಾಮಯ್ಯನವರು ಒಟ್ಟು 10 ವರ್ಷ ಮತ್ತು ಶೋಷಿತ ವರ್ಗಗಳ ಹಿತೈಷಿಯಾಗಿದ್ದ ದೇವರಾಜ ಅರಸು ಮತ್ತು ಧರಂ ಸಿಂಗ್ (ಒಟ್ಟು 9 ವರ್ಷ), ಅವರೆಲ್ಲರನ್ನು ಒಟ್ಟಾಗಿ ಪರಿಗಣಿಸಿದರೆ 19 ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ ಎಂದಾಗುತ್ತದೆ.
ಲಿಂಗಾಯತ ಮತ್ತು ಒಕ್ಕಲಿಗರು ತಮ್ಮ ಜಾತಿ ಸಂಖ್ಯಾ ಬಲವನ್ನು ಏರಿಸಿ ಹೇಳುತ್ತಿದ್ದಾರೆಯೇ?
ವೀರಶೈವ ಲಿಂಗಾಯತರು ತಮ್ಮ ಸಂಖ್ಯಾಬಲ ಶೇ. 20-22 ಎಂದು ಪ್ರತಿಪಾದಿಸುತ್ತಿದ್ದರೆ, ಒಕ್ಕಲಿಗರು ತಾವು 18-20ರಷ್ಟು ಇದ್ದೇವೆ ಎಂದು ಹೇಳುತ್ತಿದ್ದಾರೆ. ಲಿಂಗಾಯತರ ಮತ್ತು ಒಕ್ಕಲಿಗರ ನಿಜ ಸಂಖ್ಯಾಬಲ ಅವರು ಮೇಲೆ ಪ್ರತಿಪಾದಿಸುವಂತೆ ಇರದೆ ಅದು ಅವರು ಹೇಳುತ್ತಿರುವ ಸಂಖ್ಯೆಯ ಅರ್ಧಾಂಶದ ಆಸುಪಾಸಿನಲ್ಲಿದೆ ಎಂದು ತಿಳಿದು ಬರುತ್ತದೆ. ನಿಖರ ಸಂಖ್ಯಾಬಲ ಸರಕಾರ ಸದರಿ ವರದಿ ಬಿಡುಗಡೆಯಾದಾಗ ಗೊತ್ತಾಗುತ್ತದೆ.
ಇದೀಗ ಕರ್ನಾಟಕ ಸರಕಾರ ಮತ್ತು ಕ.ರಾ. ಹಿಂದುಳಿದ ವರ್ಗಗಳ ಆಯೋಗದ ಮೇಲುಸ್ತುವಾರಿಯಲ್ಲಿ ನಡೆದ ಸದರಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿಯ ವರದಿಯನ್ನು ಬಿಡುಗಡೆಗೊಳಿಸಿದರೆ ತಮ್ಮ ನಿಜ ಸಂಖ್ಯಾಬಲ ಗೊತ್ತಾಗಿ ಎಲ್ಲಿ ತಮ್ಮ ರಾಜಕೀಯ ಹಿತಾಸಕ್ತಿಗೆ ಕುತ್ತು ಬರುವುದೇ ಎಂಬ ಆತಂಕ ಬಹುಷ: ಮೇಲಿನ ಎಲ್ಲಾ ಮೇಲ್ಜಾತಿ ಸಮುದಾಯದವರನ್ನು ಕಾಡುತ್ತಿರ ಬಹುದೇ ?
ಇಂದ್ರ ಸಹಾನಿ ದಾವೆ - ಸುಪ್ರೀಂ ಕೋರ್ಟಿನ 1992ರ ತೀರ್ಪಿನಿಂದ ಮೀಸಲಾತಿ ಬಗ್ಗೆ ಈ ಕೆಳಗಿನ ಮುಖ್ಯಾಂಶಗಳನ್ನು ಗಮನಿಸಬಹುದು: ಅವುಗಳು - ಹಿಂದುಳಿದ ವರ್ಗಗಳಿಗೆ ಕನಿಷ್ಠ 27ಶೇ. ಮೀಸಲಾತಿ ನಿಗದಿ. ಎಲ್ಲಾ ವರ್ಗಗಳ ಒಟ್ಟು ಮೀಸಲಾತಿ ಶೇ. 50ಕ್ಕೆ ಸೀಮಿತವಾಗಿರಬೇಕು. ಆರ್ಥಿಕವಾಗಿ ಬಲಿಷ್ಠರಿಗೆ ಕೆನೆ ಪದರ ನೀತಿ ಮೂಲಕ ಮಿತಿ ಹೇರುವುದು. ಅಂತೆಯೇ ಮೀಸಲಾತಿಗೆ ಹೊಸ ಸೇರ್ಪಡೆ ಮತ್ತು ರದ್ದತಿ ಮತ್ತು ಮೀಸಲಾತಿ ವರ್ಗಗಳ ಕಲ್ಯಾಣ ಕಾರ್ಯಗಳ ಅನುಷ್ಠಾನದ ಮೇಲುಸ್ತುವಾರಿ ನೋಡಿ ಕೊಳ್ಳಲು ಮತ್ತು ಕಾಲ ಕಾಲಕ್ಕೆ ಸಮೀಕ್ಷೆ ಮತ್ತು ಜನಗಣತಿ ನಡೆಸುವರೆ ಈ ಎಲ್ಲಾ ರಾಜ್ಯಗಳಲ್ಲೂ ಹಿಂದುಳಿದ ವರ್ಗಗಳ ಖಾಯಂ ಆಯೋಗಗಳನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಮೇಲಿನ ತೀರ್ಪಿನ ಮೂಲಕ ಸಲಹೆ. ಹೀಗೆ ದೇಶದ ಎಲ್ಲಾ ರಾಜ್ಯಗಳಲ್ಲೂ ಸದರಿ ಹಿಂದುಳಿದ ವರ್ಗಗಳ ಆಯೋಗ ಅಸ್ತಿತ್ವಕ್ಕೆ ಬರಲು ಕಾರಣವಾಯಿತು ಅಲ್ಲದೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿಚಾರದಲ್ಲಿ ಸಮಸ್ಯೆಗಳು ಎದುರಾದಾಗ ಮೇಲಿನ ತೀರ್ಪು ಸಿದ್ಧ ಪರಿಹಾರ ನೀಡುವ ಸೂತ್ರದಂತೆ ಕೂಡಾ ನೆರವಾಗುತ್ತಿದೆ.
ಸಾಮಾಜಿಕ, ಆರ್ಥಿಕ ಸಮೀಕ್ಷೆಯೊಂದಿಗೆ ಜಾತಿ ಜನಗಣತಿ ಆಗದೆ ನ್ಯಾಯಬದ್ಧ ಮೀಸಲಾತಿ ಅಸಾಧ್ಯ
ಹೌದು, ಹೊಸದಾಗಿ ಒಂದು ಅರ್ಹ ಜಾತಿಗೆ ಮೀಸಲಾತಿ ಒದಗಿಸಲು ಅವರ ಜಾತಿಯ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆ ಮತ್ತು ಅವರ ಒಟ್ಟು ಸಂಖ್ಯಾಬಲ ನಿರ್ಣಾಯಕವಾಗುತ್ತದೆ. ಅಂತಹ ಅನೇಕ ಪ್ರಕರಣಗಳು ಕೆಳಗಿನ ಕೋರ್ಟ್ ನಿಂದ ಹೈಕೋರ್ಟ್, ಸುಪ್ರೀಂ ಕೋರ್ಟಿನ ವರೆಗೂ ಹೋಗಿ ಮೇಲಿನ ದತ್ತಾಂಶಗಳ ಕೊರತೆಯ ಕಾರಣದಿಂದ ತಿರಸ್ಕೃತಗೊಂಡ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲೇ ಇದೆ ಎಂಬುದನ್ನೂ ಸದರಿ ಟೀಕಾಕಾರರು ಅರ್ಥೈಸಬೇಕಾಗಿದೆ.
ಇನ್ನೊಂದು ಕಾನೂನಾತ್ಮಕ ವಿಷಯವನ್ನು ಬಹು ಮುಖ್ಯವಾಗಿ ಗಮನಿಸಬೇಕಾಗಿದೆ. ಸದರಿ ಸಾಮಾಜಿಕ ಆರ್ಥಿಕಸಮೀಕ್ಷೆ ಮತ್ತು ಜಾತಿ ಜನಗಣತಿಯ ವಿಚಾರ ಮೇಲಿನ ಸುಪ್ರೀಂ ಕೋರ್ಟಿನ ತೀರ್ಪಿನಲ್ಲೇ ಉಲ್ಲೇಖ ಆಗಿರುವುದರಿಂದ ಒಂದು ವೇಳೆ ಸರಕಾರ ಒತ್ತಡಕ್ಕೆ ಒಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕಿದಲ್ಲಿ ಅದರಿಂದ ಸಮಸ್ಯೆಗೆ ಒಳಗಾದವರು ಹೈಕೋರ್ಟ್ ಯಾ ಸುಪ್ರೀಂ ಕೋರ್ಟಿನ ಮೊರೆ ಹೋದಲ್ಲಿ ಅವರಿಗೆ ಖಂಡಿತ ನ್ಯಾಯ ದೊರಕ ಬಹುದು.
ಹೀಗೆ ಇಲ್ಲಿ ಒಟ್ಟಾರೆ ಗಮನಿಸಬೇಕಾದ ಅಂಶ ಏನೆಂದರೆ ಮೇಲೆ ವಿವರಿಸಿರುವಂತೆ ಟೀಕೆ ಮಾಡುವ ಜಾತಿಯವರಿಗೆ ದಲಿತರು, ಹಿಂದುಳಿದ ವರ್ಗದವರಂತೆ ಮೀಸಲಾತಿ ಅತಿ ಅಗತ್ಯ ಯಾ ಅನಿವಾರ್ಯ ಎಂದೇನಿಲ್ಲ. ಅವರಿಗೆ ಅವರ ರಾಜಕೀಯ ಹಿತಾಸಕ್ತಿಯ ರಕ್ಷಣೆ ಮುಖ್ಯ ಎಂದು ತೋರುತ್ತದೆ. ಅದಕ್ಕಾಗಿ ಗೊಂದಲ ಎಬ್ಬಿಸಿ, ಬೆದರಿಸಿ ಸದರಿ ಸಮೀಕ್ಷಾ ವರದಿಯನ್ನು ಮತ್ತಷ್ಟು ದಿನ ವಾಪಸ್ ಕೋಲ್ಡ್ ಸ್ಟೋರೇಜ್‌ಗೆ ಕಳುಹಿಸುವಂತೆ ಸರಕಾರದ ಮೇಲೆ ಒತ್ತಡ ಹೇರುವ ಹುನ್ನಾರವಾಗಿದೆ.