×
Ad

ಚಾರಣಿಗರನ್ನು ಕೈ ಬೀಸಿ ಕರೆಯುತ್ತಿದೆ ಚಿಂಚೋಳಿ ಅಭಯಾರಣ್ಯ

Update: 2025-07-28 14:07 IST

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಚ್ಚ ಹಸಿರಿನಿಂದ ಕೂಡಿರುವ ಏಕೈಕ ಪ್ರದೇಶವೆಂದರೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಅರಣ್ಯ ಪ್ರದೇಶ. ಇಲ್ಲಿನ ವಿಶಾಲವಾದ ಸಂಪದ್ಭರಿತ ಅರಣ್ಯ ಪ್ರದೇಶವು ಯಾವ ಮಲೆನಾಡಿಗೂ ಕಡಿಮೆ ಇಲ್ಲ ಎಂದು ತೋರಿಸಿದೆ. ಹಾಗಾಗಿ ಇದು ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ.

ಅರಣ್ಯದಲ್ಲಿ ನೂರಾರು ಜಾತಿಯ ಪಕ್ಷಿ, ಪ್ರಾಣಿ ಸಂಕುಲ ನೋಡುವುದಷ್ಟೇ ಅಲ್ಲದೆ, ವಿವಿಧ ಹೂಬಿಡುವ, ಔಷಧಿ ಗುಣದ ಗಿಡಮೂಲಿಕೆಗಳೂ ಕಂಡುಬರುತ್ತವೆ. ಇಲ್ಲಿ ಸಂಚರಿಸಲು ಆಸಕ್ತರಿಗೆ ಈಗ ಅರಣ್ಯ ಇಲಾಖೆ ಚಾರಣಕ್ಕೂ (ಕಾಲ್ನಡಿಗೆ) ಅವಕಾಶ ಮಾಡಿಕೊಟ್ಟಿದೆ. ಪ್ರವಾಸಿಗರನ್ನು ಚಿಂಚೋಳಿ ವನ್ಯಧಾಮ ಸೆಳೆಯುತ್ತಿವೆೆ.

ದಕ್ಷಿಣ ಭಾರತದ ಮೊದಲ ಒಣ ಭೂ ವನ್ಯಜೀವಿ ಅಭಯಾರಣ್ಯವಾಗಿರುವ ಈ ಪ್ರದೇಶವನ್ನು 2011ರಲ್ಲಿ ಅಭಯಾರಣ್ಯವೆಂದು ಘೋಷಿಸಲಾಗಿದೆ. ಇದು 134.88 ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಎತ್ತಿಪೊತೆ ಜಲಪಾತ, ಮಾಣಿಕಪುರ ಜಲಪಾತ, ಚಂದ್ರಂಪಳ್ಳಿ ಜಲಾಶಯ ಸೇರಿ ಐದು ಸಣ್ಣ ಅಣೆಕಟ್ಟುಗಳು ಇಲ್ಲಿವೆ. ಔಷಧೀಯ ಗಿಡಮೂಲಿಕೆಗಳ ಜೊತೆಗೆ, ರಕ್ತಚಂದನ, ಶ್ರೀಗಂಧದ, ಹೊಳೆಮತ್ತಿ, ಕರಿಮತ್ತಿ, ತೇಗ ಸೇರಿದಂತೆ ಅಕೇಶಿಯಾ ಮರಗಳು ನೋಡಲು ಬಹು ಆಕರ್ಷಣೀಯವಾಗಿವೆ.

ಅರಣ್ಯವು ಬ್ಲ್ಯಾಕ್ ಬಕ್, ಕಾಮನ್ ಫಾಕ್ಸ್, ನಾಲ್ಕು ಕೊಂಬಿನ ಹುಲ್ಲೆ, ಹಣ್ಣಿನ ಬಾವಲಿ, ಹೈನಾ, ನೀಲಗಾಯ್, ತೋಳ, ಚುಕ್ಕೆ ಜಿಂಕೆ, ಕಾಡುಕುರಿ, ಕಾಡುಕೋಣ, ಗುಳ್ಳೆ ನರಿ, ಚಿರತೆ, ಕಾಡುಬೆಕ್ಕು, ಮಕಾಕ್ ಕೋತಿ, ಚೌಸಿಂಗಾ, ಮೊಲ ಸೇರಿದಂತೆ ಮುಂತಾದ ಪ್ರಾಣಿಗಳಿಗೆ ನೆಲೆಯಾಗಿದೆ. ಅಲ್ಲದೆ, ಬ್ಲ್ಯಾಕ್ ಡ್ರಾಂಗೊ, ನವಿಲು, ಬ್ಲಾಸಮ್-ಹೆಡೆಡ್ ಪ್ಯಾರಕೀಟ್, ಬ್ಲೂ ಪಿಜನ್, ಬ್ಲ್ಯಾಕ್-ಹೆಡೆಡ್ ಓರಿಯೊಲ್ ಮತ್ತು ಗ್ರೇ ಪಾರ್ಟ್ರಿಡ್ಜ್, ಕಾಡುಕೋಳಿ, ಕಿಂಗ್‌ಫಿಷರ್ ಸೇರಿದಂತೆ ಒಟ್ಟು 160ಕ್ಕೂ ಹೆಚ್ಚು ಹೆಚ್ಚು ಜಾತಿಯ ಪಕ್ಷಿಗಳು ಕಂಡುಬಂದರೆ, 45ಕ್ಕೂ ಹೆಚ್ಚು ಜಾತಿಯ ಪಾತರಗಿತ್ತಿಯೂ ಕಾಣಿಸುತ್ತವೆ.

ಗೊಟ್ಟಂಗೊಟ್ಟ, ನವಿಲುಗುಡ್ಡ, ಮಹಿಶಮ್ಮನ ಬೆಟ್ಟ, ಮಲ್ಲಣ್ಣದೇವರ ಗುಡ್ಡ, ಹಾಥಿಪಗಡಿ, ಚಿಕ್ಕಲಿಂಗದಳ್ಳಿ, ಲಾಲ್ ತಲಾಬ್, ಕೊತ್ವಾಲ್ ನಾಲೆ, ರಾಚೇನಹಳ್ಳ, ಬುರುಗದೊಡ್ಡಿ ನಾಲಾ, ಯಾಕತಪುರ ನಾಲೆ, ಮೂರಕಲ್ ನಾಲೆ, ಬುರುಗದೊಡ್ಡಿ ನಾಲಾ ಹೀಗೆ ಹತ್ತು ಹಲವು ಇಲ್ಲಿನ ನಿಸರ್ಗದ ಬಹು ಆಕರ್ಷಣೀಯ ತಾಣಗಳಾಗಿವೆ.

ಅಭಯಾರಣ್ಯಕ್ಕೆ ಹೋಗುವುದು ಹೇಗೆ?:

ಚಿಂಚೋಳಿ ವನ್ಯಜೀವಿ ಅಭಯಾರಣ್ಯವು ಬೆಂಗಳೂರಿನಿಂದ 609 ಕಿಮೀ, ಹೈದ್ರಾಬಾದ್‌ನಿಂದ 120 ಕಿಮೀ, ಕಲಬುರಗಿಯಿಂದ 100 ಕಿಮೀ, ಬೀದರ್‌ನಿಂದ 62 ಕಿಮೀ, ಕಲಬುರಗಿ ವಿಮಾನ ನಿಲ್ದಾಣದಿಂದ 89 ಕಿಮೀ ದೂರದಲ್ಲಿದೆ. ಇದು ಬೀದರ್‌ನ ಹುಮ್ನಾಬಾದ್ ರೈಲು ನಿಲ್ದಾಣಕ್ಕೆ ಸಮೀಪವಾಗಿದೆ(58 ಕಿಮೀ). ಚಿಂಚೋಳಿ ತಲುಪಲು ಕಲಬುರಗಿ ಅಥವಾ ಹುಮನಾಬಾದ್‌ನಿಂದ ಟ್ಯಾಕ್ಸಿಗಳು ಬಾಡಿಗೆಗೆ ಸಿಗುತ್ತವೆ.

ಬುಕಿಂಗ್ ಹೇಗೆ?: ಸಾರ್ವಜನಿಕರು ಮತ್ತು ಚಾರಣಪ್ರಿಯರು ಟ್ರಕ್ಕಿಂಗ್ ಮಾಡುವುದಕ್ಕಾಗಿ ಆನ್‌ಲೈನ್ ಮತ್ತು ಆಫ್ ಲೈನ್ ಮೂಲಕ ಬುಕಿಂಗ್ ಮಾಡಬಹುದಾಗಿದೆ. aranyavihaara.Karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಟ್ರಕ್ಕಿಂಗ್ ಅನ್ನು ಬುಕ್ ಮಾಡಬಹುದು.

ಇಲ್ಲದಿದ್ದರೆ ಆಫ್ ಲೈನ್ ಮೂಲಕ 9686044408 ಸಂಖ್ಯೆಗೆ ಸಂಪರ್ಕಿಸಿ, ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಎಲ್ಲಿಂದ ಎಲ್ಲಿಯವರೆಗೆ ಚಾರಣ?

ಪ್ರಕೃತಿಯ ಚಾರಣಕ್ಕೆ ಎರಡು ಪ್ರತ್ಯೇಕ ಪಥಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಒಂದು 8 ಕಿ.ಮೀ. ಉದ್ದದ ಚಾರಣವಾದರೆ, ಇನ್ನೊಂದು 4 ಕಿ.ಮೀ. ಉದ್ದದ ಕಿರು ಚಾರಣವಾಗಿದೆ.

ಚಂದ್ರಂಪಳ್ಳಿ ನಿಸರ್ಗ ಧಾಮ-ಗೊಟ್ಟಂಗೊಟ್ಟ ಕ್ಯಾಂಪ್‌ವರೆಗೆ 8 ಕಿ.ಮೀ.ವರೆಗಿರುವ ಚಾರಣದಲ್ಲಿ 12ರಿಂದ 18 ವರ್ಷದವರಿಗೆ 100 ರೂ., 18 ವರ್ಷ ಮೇಲ್ಪಟ್ಟವರಿಗೆ 200 ರೂ. ನಿಗದಿಪಡಿಸಿದರೆ, ಚಂದ್ರಂಪಳ್ಳಿ ನಿಸರ್ಗ ಶಿಬಿರದಿಂದ - ಚಂದ್ರಂಪಳ್ಳಿ ಅಣೆಕಟ್ಟುವರೆಗೆ 4 ಕಿ.ಮೀ. ಚಾರಣದಲ್ಲಿ 12ರಿಂದ 18 ವರ್ಷದವರಿಗೆ 50 ರೂ. 18 ವರ್ಷ ಮೇಲ್ಪಟ್ಟವರಿಗೆ 100 ರೂ. ದರ ನಿಗದಿಪಡಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಚಾರಣಿಗರು ನೇರವಾಗಿ ಚಂದ್ರಂಪಳ್ಳಿ ಗ್ರಾಮದ ಅಣೆಕಟ್ಟಿಗೆ ಬರಬೇಕು.

ಸದ್ಯ, ದಿನಕ್ಕೆ 100 ಜನ ಚಾರಣಿಗರಿಗೆ ಅವಕಾಶ ನೀಡಲಾಗುತ್ತಿದೆ. ಕಾಡಿನಲ್ಲಿ ಚಾರಣ ಪ್ರಿಯರಿಗೆ ಅಗತ್ಯ ಮಾರ್ಗದರ್ಶನ ಮತ್ತು ಮಾಹಿತಿ ನೀಡಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರವಾಸಿಗರಿಗೆ ಟೆಂಟ್ ಹೌಸ್, ಶೌಚಾಲಯ ವ್ಯವಸ್ಥೆಯೂ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಪ್ರಕೃತಿಧಾಮವು ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿನ ವೀಕ್ಷಣೆ, ಚಾರಣಕ್ಕೆ ಅರಣ್ಯ ಇಲಾಖೆಯು ಅನೇಕ ಸೌಲಭ್ಯ ನೀಡುತ್ತಿದೆ.

-ಸಿದ್ದಾರೂಢ ಹೊಕ್ಕುಂದಿ, ಉಪ ವಲಯ ಅರಣ್ಯಾಧಿಕಾರಿ, ಚಿಂಚೋಳಿ

ಅನೇಕ ಪ್ರಾಣಿ, ಪಕ್ಷಿ ಸಂಕುಲ ಹಾಗೂ ಸಸ್ಯ ಪ್ರಬೇಧಗಳನ್ನು ಒಳಗೊಂಡಿರುವ ಚಿಂಚೋಳಿ ವನ್ಯಜೀವಿ ಅಭಯಾರಣ್ಯದಲ್ಲಿ ಟ್ರಕ್ಕಿಂಗ್ ಪ್ರಾರಂಭಿಸಲಾಗಿದ್ದು, ರಾಜ್ಯ, ಪಕ್ಕದ ರಾಜ್ಯದ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.

-ಸುಮಿತ್ ಪಾಟೀಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಲಬುರಗಿ ಪ್ರಾದೇಶಿಕ ವಿಭಾಗ

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ದಸ್ತಗೀರ ನದಾಫ್ ಯಳಸಂಗಿ

contributor

Similar News