×
Ad

ಮೊರಾರ್ಜಿ ವಸತಿ ಶಾಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ

Update: 2025-11-23 12:25 IST

ಹೊಸಪೇಟೆ : ನಗರದ ಹೊರಭಾಗದ ಜಂಭುನಾಥ ರಸ್ತೆಯಲ್ಲಿರುವ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಕುಡಿಯುವ ನೀರಿಗಾಗಿ ನಿತ್ಯವು ಹಾಹಾಕಾರ ಅನುಭವಿಸುವ ದುಸ್ಥಿತಿ ಒಂದೆಡೆಯಾದರೆ, ಶುದ್ಧ ಕುಡಿಯುವ ನೀರಿನ ವಾಟರ್ ಕ್ಯಾನ್‌ಗಳನ್ನು ಹೊರಗಿನಿಂದ ಖರೀದಿಸಿ ಮಕ್ಕಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅಧಿಕಾರಿಗಳು ಪರದಾಡುತ್ತಿರುವ ಪ್ರಸಂಗ ಹೊಸಪೇಟೆಯಲ್ಲಿ ನಡೆಯುತ್ತಿದೆ.

6 ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಲು ಅವಕಾಶವಿರುವ ಈ ವಸತಿ ಶಾಲೆಯಲ್ಲಿ 190 ಬಾಲಕಿಯರ ಸಹಿತ ಒಟ್ಟು 420 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಸತಿ ಶಾಲೆಗೆ ಮುಖ್ಯವಾಗಿ ಇರಬೇಕಾದ ವಾರ್ಡನ್ ಇಲ್ಲ. ಎರಡು ವರ್ಷಗಳಿಂದ ವಾರ್ಡನ್ ಹುದ್ದೆ ಖಾಲಿ ಇದೆ. 19 ಶಿಕ್ಷಕರು ಇರಬೇಕಾದ ಶಾಲೆಯಲ್ಲಿ 17 ಶಿಕ್ಷಕರಿದ್ದಾರೆ. 8 ಖಾಯಂ ಶಿಕ್ಷಕರು ಹೊರತುಪಡಿಸಿದರೆ, ಉಳಿದವರೆಲ್ಲಾ ಅತಿಥಿ ಶಿಕ್ಷಕರು. ಕಾಲೇಜು ಕಟ್ಟಡ ಕಾಮಗಾರಿ ಪುರ್ಣಗೊಂಡಿದ್ದರೂ ಇನ್ನು ಹಸ್ತಾಂತರವಾಗದ ಹಿನ್ನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಪ್ರೌಢಶಾಲಾ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಇರಬೇಕಾದಂತಹ ಪರಿಸ್ಥಿತಿ ಇದೆ. ತರಗತಿಗಳು ನಡೆಸಲು ತೊಂದರೆಯಾದ ಹಿನ್ನೆಲೆಯಲ್ಲಿ ಹಸ್ತಾಂತರವಾಗದ ಕಾಲೇಜು ಕಟ್ಟಡದಲ್ಲಿಯೇ ಒಂದು ಭಾಗದಲ್ಲಿ ಪಿಯುಸಿ ತರಗತಿಗಳನ್ನು ನಡೆಸಲಾಗುತ್ತಿದೆ. ವಸತಿ ಶಾಲೆಯಲ್ಲಿ 420 ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಸೇರಿ 450 ಜನರಿದ್ದರೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕುಡಿಯುವ ನೀರನ್ನು ಪ್ರತಿ ದಿನ ಹೊರಗಡೆಯಿಂದ ಕ್ಯಾನ್‌ಗಳ ಮೂಲಕ ತರಲಾಗುತ್ತಿದೆ. ಭೋಜನಾಲಯದಲ್ಲಿ ಕೈತೊಳೆಯಲು ಅಳವಡಿಸಲಾಗಿರುವ ಪೈಪ್‌ಗಳು ಕಿತ್ತು ಹೋಗಿ ನೀರು ಬೇಕಾಬಿಟ್ಟಿ ಹರಿಯುವುದು ಕಂಡು ಬರುತ್ತಿದೆ.

ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಭೇಟಿ ನೀಡುವ ಮೂಲಕ ವಸತಿ ಶಾಲೆಗೆ ಬೇಕಾಗಿರುವ ಶಾಶ್ವತ ಕುಡಿಯುವ ನೀರು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಕಲ್ಪಿಸಬೇಕಾಗಿದೆ.

ನಮ್ಮ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರತಿ ದಿನ ಹೊರಗಡೆಯಿಂದ ಕ್ಯಾನ್ ಗಳಲ್ಲಿ ನೀರು ತಂದು ಬಳಸಲಾಗುತ್ತಿದೆ. ಕರೆಂಟ್ ಕೈಕೊಟ್ಟರೆ ಜನರೇಟರ್ ವ್ಯವಸ್ಥೆ ಇಲ್ಲ. ತಾತ್ಕಾಲಿಕ ಚಾರ್ಜರ್ ಬಲ್ಬ್ ಗಳನ್ನು ಅಳವಡಿಸಲಾಗಿದೆ. ಕಟ್ಟಡ ಕಾಮಗಾರಿ ಸ್ಥಗಿತ, ಶಿಕ್ಷಕರು ಹಾಗೂ ವಾರ್ಡನ್ ಕೊರತೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ನಮಗೆ ಹಸ್ತಾಂತರ ಮಾಡುವುದು ಮಾತ್ರ ಬಾಕಿ ಇದೆ.

-ಪರಶುರಾಮ ತಲೆವಾಡ, ಪ್ರಾಂಶುಪಾಲ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹೊಸಪೇಟೆ

ನಮ್ಮ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೊರಗಡೆಯಿಂದ ಕ್ಯಾನ್‌ಗಳಲ್ಲಿ ತರುವ ನೀರನ್ನು ಕುಡಿಯಬೇಕಾಗಿದೆ. ಕರೆಂಟ್ ಹೋದರೆ ಕತ್ತಲೆಯಲ್ಲಿ ಇರಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜನರೇಟರ್ ವ್ಯವಸ್ಥೆ ಕಲ್ಪಿಸಬೇಕಾಗಿದೆ.

-ಕವನ, ದ್ವಿತೀಯ ಪಿಯುಸಿ ವಿದ್ಯಾರ್ಥಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ್ ಗೌಸ್, ವಿಜಯನಗರ

contributor

Similar News