ಗೋಗಿ ಗ್ರಾಮದಲ್ಲಿ ಅಪಾಯಕಾರಿ ಸೇತುವೆ : ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ
ಶಹಾಪೂರ ತಾಲೂಕಿನ ಗೋಗಿ(ಕೆ)-ಗೋಗಿ(ಪಿ) ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ದಿನನಿತ್ಯ ಸಾವಿರಾರು ಜನ ಸಂಚರಿಸುತ್ತಿದ್ದು, ವಾಹನ ಸವಾರರು ತಮ್ಮ ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಗೋಗಿ(ಕೆ) ಹಾರಣಗೇರಾ, ದರ್ಶನಾಪುರ, ಜಮಖಂಡಿ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಇಲ್ಲಿ ಹಲವಾರು ವರ್ಷಗಳ ಹಿಂದೆ ಸೇತುವೆಯೊಂದನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇಂದು ಆ ಸೇತುವೆಗೆ ಯಾವುದೇ ರೀತಿಯ ತಡೆಗೊಡೆಯನ್ನು ನಿರ್ಮಿಸಿಲ್ಲ. ದಿನನಿತ್ಯ ಸಾವಿರಾರು ಜನರು ಪ್ರೌಢಶಾಲೆ, ಪೊಲೀಸ್ ಠಾಣೆ, ಪಂಚಾಯತ್, ಆಸ್ಪತ್ರೆ, ಅಂಚೆ ಕಚೇರಿ, ಇನ್ನಿತರ ಪ್ರಮುಖವಾದ ಉದ್ದೇಶ ಕ್ಕಾಗಿ ಈ ಸೇತುವೆಯನ್ನು ಅವಲಂಬಿಸಿದ್ದಾರೆ. ಆದರೆ ಸೇತುವೆಗೆ ತಡೆಗೋಡೆ ನಿರ್ಮಿಸಿಲ್ಲದ ಕಾರಣ ಶಾಲಾ ವಿದ್ಯಾರ್ಥಿಗಳು ಆಯತಪ್ಪಿ ಬೀಳುವ ಭೀತಿ ಎದುರಾಗಿದೆ.
ಅಷ್ಟೇ ಅಲ್ಲದೆ ಸೇತುವೆ ಸಮೀಪ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದ್ದು, ಇದಕ್ಕೆ ಸುರಕ್ಷಿತ ಕ್ರಮವಾಗಿ ಯಾವುದೇ ಆವರಣವನ್ನು ನಿರ್ಮಾಣ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಾಗರಿಕರು ಸಂಬಂಧಪಟ್ಟ ಇಲಾಖೆಗಳಾದ ಜೆಸ್ಕಾಂ, ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಆದಷ್ಟು ಶೀಘ್ರ ಸೇತುವೆಗೆ ತಡೆಗೋಡೆ ನಿರ್ಮಾಣ ಮಾಡಬೇಕು. ಜೊತೆಗೆ ಟ್ರಾನ್ಸ್‌ಫಾರ್ಮರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.