ಭಾವೈಕ್ಯ ಭಾರತದ ಜೀವಾಳ
ಮನುಷ್ಯ ಸಮಾಜ ಜೀವಿ, ಪರಸ್ಪರಾವಲಂಬಿ. ಸಹಜವಾಗಿಯೇ ಹೊಂದಾಣಿಕೆಯ ಸೂತ್ರವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಬದುಕಬೇಕಾದುದು ಅವನ ಕರ್ತವ್ಯ. ವೈಯಕ್ತಿಕವಾಗಿ ಆಚಾರ, ವಿಚಾರ, ವಿಹಾರಗಳಲ್ಲಿ ವಿಭಿನ್ನನಾಗಿದ್ದರೂ ಸಾಮಾಜಿಕವಾಗಿ ಸರ್ವರನ್ನೂ ಏಕ ರೀತಿಯಲ್ಲಿ ಗೌರವಿಸುವುದು ಆತನ ಏಳ್ಗೆಗೆ ಅವಶ್ಯಕ. ಮನಸ್ಸು ಕಟ್ಟಿ, ಒಗ್ಗೂಡಿಸಿ ಚೈತನ್ಯ ತುಂಬುವ ಕಾರ್ಯ ಸದಾ ಸರ್ವದಾ ನಡೆದು ಬಂದಿದೆ.
ಹಚ್ಚುವುದಾದರೆ ದೀಪ ಹಚ್ಚು, ಬೆಂಕಿ ಹಚ್ಚಬ್ಯಾಡ !
ಆರಿಸುವುದಾದರೆ ಬೆಂಕಿ ಆರಿಸು, ದೀಪ ಆರಿಸಬ್ಯಾಡ!!
ದೀಪ ಹಚ್ಚುವ ಕೆಲಸ ಭಾವೈಕ್ಯತೆ, ಬೆಂಕಿ ಹಚ್ಚುವ ಕೆಲಸ ಕೋಮುವಾದ, ಮನ ಜೋಡಿಸುವ ಕೆಲಸ ಭಾವೈಕ್ಯತೆ, ಮನೆ-ಮನ ಒಡೆವ ಕೆಲಸ ಕೋಮುವಾದ, ಬದುಕು ಕಟ್ಟಿಕೊಡುವುದು ಭಾವೈಕ್ಯತೆ, ಬಾಳು ಮೂರಾಬಟ್ಟೆ ಮಾಡುವುದು ಕೋಮುವಾದ.
ಜೀವಪರ ದನಿ ಭಾವೈಕ್ಯತೆ, ಜೀವ ಹತ್ಯೆ, ರಕ್ತಪಾತ, ವಿಕೃತ ಕೆಲಸ ಕೋಮುವಾದ. ಶಾಂತಿ, ಸಹನೆ ಕೂಡಿ ಬಾಳುವ ಮಂತ್ರ ಭಾವೈಕ್ಯತೆ. ಅಶಾಂತಿ, ಅಸಹನೆ, ಅನ್ಯಾಯ ಕೋಮುವಾದ. ಅಭಿವೃದ್ಧಿ, ವಿಕಾಸ, ಸಮೃದ್ಧಿ ಎಂದರೆ ಭಾವೈಕ್ಯತೆ. ಹಿನ್ನಡೆ, ಮೌಡ್ಯ, ವಿನಾಶದ ಮೂಲ ಕೋಮುವಾದ. ಮನುಜಮತ, ವಿಶ್ವಪಥ, ವಿಶ್ವಶಾಂತಿ ಭಾವೈಕ್ಯತೆ. ಸಂಕುಚಿತತೆ, ಅಸಹಿಷ್ಣುತೆ, ಗೂಂಡಾಗಿರಿ, ಕೋಮುವಾದ. ಉದಾರಚರಿತರಿಗೆ ವಿಶ್ವವೇ ಕುಟುಂಬ. ಬಾವಿಯ ಕಪ್ಪೆಗಳಿಗೆ ಕುಟುಂಬವೇ ವಿಶ್ವ. ಉದಾರರಿಗೆ ಧರ್ಮ ದೇವರನ್ನು ತಲುಪುವ ಪಥ. ಸಂಕುಚಿತ ದೃಷ್ಟಿಯವರಿಗೆ ಹಲವು ಜಾತಿ, ಹಲವು ಮತ. ಗಾಯವ ಮಾಯಿಸುವ ‘ಅಮೃತ’ ಭಾವೈಕ್ಯತೆ. ‘ಮಾಯದ ಗಾಯ’ ನೀಡುವ ಕ್ರೂರತೆ ಕೋಮುವಾದ. ಭಾತೃತ್ವದ ಭಾವನೆಗಳನ್ನು ಅನಾವರಣಗೊಳಿಸುವ ಹಬ್ಬಗಳೀಗೆಲ್ಲಿ ? ಬರೀ ಭೇದದ ಭಾವವೇ ಮೇಲಾಟವಾಗಿದೆ ಎಲ್ಲಿ ನೋಡಿದರಲ್ಲಿ !!
ಕನ್ನಡದ ಮೊದಲ ಉಪಲಬ್ಧ ಗ್ರಂಥ ‘ಕವಿರಾಜಮಾರ್ಗ’ದಲ್ಲಿ ಕಸವರಮೆಂಬುದು ನೆರೆಸೈರಿಸ ಲಾರ್ಪೊಡೆ ಪರ ವಿಚಾರಮುಮಂ, ಪರಧರ್ಮಮುಮಂ ಈ ಮಾತಿನ ಅರ್ಥ; ನಿಜವಾದ ಐಶ್ವರ್ಯವೆಂದರೆ ಪರ ವಿಚಾರಗಳನ್ನು, ಪರ ಧರ್ಮಗಳನ್ನೂ ಸಹಿಸತಕ್ಕದ್ದೇ ಆಗಿದೆ. ಅನ್ಯರ ವಿಚಾರಗಳನ್ನು, ಧರ್ಮಗಳನ್ನು ಸಹಿಸುವುದೇ ನಿಜವಾದ ಸಂಪತ್ತು ಎಂಬ ಸೂಕ್ತಿ ಕನ್ನಡ ನಾಡು, ಧರ್ಮಗಳ ವಿಚಾರದಲ್ಲಿ ಚರಿತ್ರೆಯುದ್ದಕ್ಕೂ ತಾಳಿದ ನಿಲುವಿಗೆ ವ್ಯಾಖ್ಯಾನದಂತಿದೆ.
ಧರ್ಮ, ಅಧ್ಯಾತ್ಮ, ಸಂಸ್ಕೃತಿ ಇವುಗಳೇ ನಿಜವಾದ ಸಂಪತ್ತು ಎಂದು ನಂಬಿಕೊಂಡು ಬಂದ ಪರಂಪರೆ ನಮ್ಮದು. ಅಪೂರ್ವ ಸಂಸ್ಕೃತಿಗಳ ಸಂಗಮ ಇಲ್ಲಿ ಜರುಗಿದೆ. ಅಧ್ಯಾತ್ಮದ ಅಮೃತ ಉಂಡವರಿಗೆ ಮತ್ತೊಂದು ಬೇಕಾಗದು, ಭಾವೈಕ್ಯತೆಯ ಮಹತ್ವ ಅರಿತವರಿಗೆ ಇನ್ನೇನೂ ರುಚಿಸದು.
ಬಾದಾಮಿ ಶಾಸನ ಕ್ರಿ.ಶ 700ರಲ್ಲಿ ಕಪ್ಪೆ ಅರಭಟ್ಟನ ಶಾಸನದಲ್ಲಿ ಉಲ್ಲೇಖಿಸಿದಂತೆ ಕನ್ನಡಿಗರು ‘ಸಾಧುಂಗೆ ಸಾಧು, ಮಾಧುರಂಗೆ ಮಾಧುರಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್, ಮಾಧವನೀತನ್ ಪೆರನಲ್ಲ’ ಎನ್ನುವ ಸ್ವಭಾವದವರು. ‘ಹಲವು ಧರ್ಮಧೇನು ನೀವಹಕ್ಕಾಡುಂಬೋಲು’ ಬಹುಧರ್ಮದ ಕಾಮಧೇನುಗಳಿಗೆ ಕನ್ನಡದ ಪುಣ್ಯಭೂಮಿ ಆಡುಂಬೋಲವಾಗಿ ಕಂಗೊಳಿಸುತ್ತಾ ಬಂದಿದೆ. ಆ ಮೂಲಕ ಧರ್ಮ ಸಾಮರಸ್ಯದ ನೆಲೆಯೆಂಬುದನ್ನು ಸಾಬೀತುಪಡಿಸಿದೆ. ವಿಜಯನಗರ ಸಾಮಾಜ್ಯದ ಎರಡನೆಯ ದೇವರಾಯನು ತನ್ನ ಮುಸ್ಲಿಂ ಯೋಧರಿಗಾಗಿ ಹಂಪಿಯಲ್ಲಿ ಮಸೀದಿ ಕಟ್ಟಿಸಿದ ಉಲ್ಲೇಖ ಸಿಗುತ್ತದೆ.
ನಮ್ಮದು ಸಮ್ಮಿಶ್ರ ಸಂಸ್ಕೃತಿಯ ಪ್ರತಿಬಿಂಬಿತ ಪ್ರದೇಶ. ಇಲ್ಲಿ ಹಲವು ಸಂಸ್ಕೃತಿಗಳ ಸಂಗಮ ಸದಾ ಸರ್ವದಾ ಜರುಗಿದೆ. ನಾನಾ ಬಗೆಯ ರೀತಿ ರಿವಾಜುಗಳು, ನಂಬಿಕೆ ವಿಶ್ವಾಸಗಳು, ಜತೆಜತೆಗೆ ಸಾಗುತ್ತಾ ಬಂದು ಬಹುತ್ವದ ಸಮಾಜ ಸ್ಥಾಪಿತಗೊಂಡಿದೆ.
ರಾಜಕೀಯವಾಗಿ ಅಖಂಡತೆಯನ್ನು ಸಾಧಿಸಲು ಶ್ರಮ ಪಡುವುದು ಇನ್ನೂ ಸಾಗುತ್ತಲೇ ಬಂದಿದೆ. ನಮ್ಮಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ. ಸಂವಿಧಾನದ ಮುಖೇನ ಸಮಾನತೆ ಇದೆ. ಮಾನಸಿಕವಾಗಿ, ಭಾವನಾತ್ಮಕವಾಗಿ ನಾವೆಲ್ಲರೂ ಒಂದೇ ಎಂಬ ಭಾವನೆ ಮಾತ್ರ ಕೆಲವೇ ವಿಶಾಲ ಮನೋಭಾವನೆಯಳ್ಳ ಮಹಾನುಭಾವರಲ್ಲಿ ಕವಿಗಳಲ್ಲಿ, ಸಂತರಲ್ಲಿ, ಸಮಾಜ ಸುಧಾರಕರಲ್ಲಿ ಇದ್ದದ್ದು ಕಂಡು ಬರುತ್ತದೆ. ಏಕೆಂದರೆ ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂದು ಸಾಹಿತ್ಯ ಬಲವಾಗಿ ಪ್ರತಿಪಾದಿಸುತ್ತದೆಯಾದರೂ ವಾಸ್ತವದಲ್ಲಿ ಅದು ಸಂಭವಿಸಲಿಲ್ಲ.
ಹೀಗೆ ಆಗುವುದಕ್ಕೆ ಬ್ರಿಟಿಷರೇ ಕಾರಣವೆಂದರೆ ಅತಿಶಯೋಕ್ತಿಯಲ್ಲ. ಒಡೆದು ಆಳುವ ನೀತಿ ಅವರ ಉಸಿರಾಗಿತ್ತು. ಅದರಿಂದಾಗಿ ಕೋಮುವಾದಿ ಭಾವನೆಗಳನ್ನು ಒಡಮೂಡಿಸುವುದರಲ್ಲಿ, ಬೆಳೆಸುವುದರಲ್ಲಿ ಆಂಗ್ಲರ ಪಾತ್ರ ಅತಿ ಹೆಚ್ಚಿನದು. ದುರದೃಷ್ಟಕ್ಕೆ ಅದು ದೇಶದ ವಿಭಜನೆಗೆ ಕಾರಣವಾಯಿತಲ್ಲದೇ ನಂತರದ ಸ್ವತಂತ್ರ ಭಾರತದಲ್ಲಿ ಬದುಕುತ್ತಾ ನಾವೆಲ್ಲರೂ ಒಂದೇ ಎಂದು ಹೇಳಿಕೊಂಡರೂ ಭಾವೈಕ್ಯತೆ ಮಾತ್ರ ಸಂಪೂರ್ಣವಾಗಿ ಸಾಧಿಸಲಾಗದ ಕಹಿ ಸತ್ಯವೇ ಆಗಿ ಉಳಿದಿದೆ.
ಭಾವೈಕ್ಯತೆ ಎಂದರೇನು? :
ಭಾವೈಕ್ಯತೆ ಎಂಬ ಪದ ಪ್ರಯೋಗ ಬಳಕೆಯಲ್ಲಿ ಬಂದದ್ದು ಇತ್ತೀಚೆಗೆ 1963 ಇಸವಿಯಲ್ಲಿ ಮತ್ತು 1965ರಲ್ಲಿ, ಹಠಾತ್ತನೆ ನೆರೆಯ ರಾಷ್ಟ್ರಗಳಿಂದ ನಮ್ಮ ದೇಶದ ಮೇಲೆ ಆದ ದಾಳಿಗಳ ಸಂದರ್ಭದಲ್ಲಿ ವಿವಿಧ ಧಾರ್ಮಿಕ ನಂಬಿಕೆ ಮತ್ತು ರೀತಿ ಅನುಸರಿಸುವ ನಾವು ರಾಷ್ಟ್ರದ ರಕ್ಷಣೆಗಾಗಿ ಪ್ರಾಂತೀಯ ಮತ್ತು ಕೋಮುಭೇದ ಭಾವಗಳನ್ನು ಮರೆತು ಒಗ್ಗೂಡಿದೆವು. ದೇಶಕ್ಕೆ ಗಂಡಾಂತರ ಒದಗಿದಾಗ ಮಾತ್ರ ಒಗ್ಗೂಡುವುದು. ಅಪಾಯ ನಿವಾರಿಸಲ್ಪಟ್ಟಾಗ ಮತ್ತೆ ಹಳೆಯ ಜಾಡಿನಲ್ಲಿಯೇ ಸಾಗುವುದು ನಮ್ಮ ಅಭ್ಯಾಸವಾಗಿ ಹೋಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಭೌತಿಕವಾಗಿ ಕಲೆತರೆ ಸಾಲದು, ಭಾವನಾತ್ಮಕವಾಗಿಯೂ ನಮ್ಮಲ್ಲಿ ಹೊಂದಾಣಿಕೆ ಇರಬೇಕಾದುದು ಅಗತ್ಯವೆಂಬ ವಿಚಾರ ಹೊರಹೊಮ್ಮಿತು.
ಆಗ Emotional Integration ಎಂಬ ನುಡಿಗಟ್ಟು ಮತ್ತು ಅದರ ವ್ಯಾಖ್ಯೆಯನ್ನು ದೇಶ ಎಲ್ಲ ಭಾಷೆಗಳಿಗೂ ಅನುವಾದಿಸಿ, ‘ಭಾವೈಕ್ಯತೆ’ ಎಂಬುದರ ಅರ್ಥ, ಅದರ ಅಗತ್ಯತೆ ಮತ್ತು ಅನುಸರಣೆಗಳನ್ನು ಜನರಿಗೆ ಮನದಟ್ಟು ಮಾಡಿಕೊಡಲಾಯಿತು. ಪ್ರಸಾರ ಮಾಧ್ಯಮಗಳ ಮೂಲಕ ಭಾವೈಕ್ಯತೆಯ ಧ್ಯೇಯ ಧೋರಣೆಗಳು ಕೆಲ ಮಟ್ಟಿಗಾದರೂ ಅಕ್ಷರಸ್ಥರಿಗೂ, ವಿದ್ಯಾವಂತರಿಗೂ ಅರ್ಥವಾದವು. ಆದರೆ ಅವಿದ್ಯಾವಂತರಿಗಾಗಲೀ ಅದು ಅರ್ಥವಾಗಲಿಲ್ಲ ಎಂದು ಹೇಳಲಾಗದು. ಏಕೆಂದರೆ ಕ್ರಮಬದ್ಧವಾಗಿ ಅನಕ್ಷರಸ್ತರಿಗಾಗಲೀ, ಬುದ್ಧಿಜೀವಿಗಳಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ಜನಸಾಮಾನ್ಯರಿಗೂ ಗ್ರಾಮೀಣರಿಗೂ ಕ್ರಮಾನುಸಾರ ಅರ್ಥವಾಗದೇ ಹೋದರೂ ಅವನ್ನೂ ನೇರವಾಗಿ ಮುಖತಃ ತಿಳಿಯಪಡಿಸುವುದರಿಂದ ಅಥವಾ ಸಿನೆಮಾ, ನಾಟಕ ಮುಂತಾದ ದೃಶ್ಯ ಮಾಧ್ಯಮಗಳ ನೆರವಿನಿಂದ ಹಾಗೆ ಮಾಡುವುದರಿಂದ ಅವು ಸುಲಭವಾಗಿ, ಪರಿಣಾಮಕಾರಿಯಾಗಿ ಆಗುತ್ತವೆ.
ಭಾರತ ದೇಶ ಒಂದು ಅಪೂರ್ವ ಉದ್ಯಾನವನ ಹಲವು ಹೂಗಳ ಅರಳುವಿಕೆ, ಪರಿಮಳ ಬೀರುವಿಕೆಯ ಚೆಲುವಿನ ಚಿತ್ತಾರದ ಬಹುದೊಡ್ಡ ಕ್ಯಾನ್ವಾಸ್, ಕೂಡಿ ಬಾಳಿದರೆ ದೇಶದ ಅಭಿವೃದ್ಧಿ ಶತಃಸಿದ್ಧ! ಇಲ್ಲದಿದ್ದರೆ ಇದು ಎಂದಿಗೂ ಮುಗಿಯದ ಮಹಾಯುದ್ಧ!!
ನಮ್ಮ ನಾಡಿನ ಜೀವನಾಡಿ ಭಾವೈಕ್ಯತೆ, ಅದ್ಭುತ ಶಕ್ತಿ, ಅದು ಅನನ್ಯ ಸಾಂಸ್ಕೃತಿಕ ಸಂಪತ್ತು. ಅನ್ಯೋನ್ಯತೆ ಕಲ್ಲಿಸಿ ನಮ್ಮೆಲ್ಲರ ಮೈಮನದಲ್ಲಿ ಮಿಂಚಿನ ಸಂಚಾರ ಗೈಯುತ್ತಿರುವುದರಿಂದಲೇ ಜನವಾಣಿ, ಕವಿವಾಣಿಯಾಗಿ ‘ಭಾವೈಕ್ಯತೆ’ ಕನ್ನಡ ಸಾಹಿತ್ಯದಲ್ಲಿ ಮೈದಳೆದಿದೆ. ಎಂದೂ ಮರೆಯದಂತೆ ಅಮರವಾಗಿ ಉಳಿದಿದೆ. ಅದು ಚಿರಂತನವಾದ, ಚಿರನೂತನವಾದ. ಚಿರಯೌವ್ವನಿ. ಭಾವೈಕ್ಯವೆಂದರೆ ‘ಸ್ನೇಹಸೇತು’ಭಾವೈಕ್ಯವೆಂದರೆ ಮಾನವ ಬದುಕಿನ ಜೀವ-ಜೀವಾಳ.
ಐಕ್ಯತೆಯ ಮಧುರಗಾನ ಹಾಡುವ ಭಾರತೀಯರಾದ ನಮಗೆಲ್ಲ ಭಾವೈಕ್ಯವೆಂದರೆ ಪರಮಾರ್ಥ, ಭಾವೈಕ್ಯ ಮೈಗೂಡಿಸಿಕೊಳ್ಳುವುದು ಎಂದರೆ ಮನುಷ್ಯನಾಗುತ್ತಾ ಹೋಗುವ ಪ್ರಕ್ರಿಯೆ.
ನಮ್ಮಲ್ಲಿಯ ತೊಳಲಾಟಕ್ಕೆ, ತುಮುಲಕ್ಕೆ, ಹತಾಶೆಗೆ ಮದ್ದು, ಭಾವೈಕ್ಯತೆ ನಮ್ಮ ವಿಕಾಸಕ್ಕೆ, ಏಳಿಗೆಗೆ ಗುರಿ ಮುಟ್ಟುವಲ್ಲಿ ಏಣಿಯೆಂದರೆ ಭಾವೈಕ್ಯತೆ ವೇದ, ಉಪನಿಷತ್ತು, ಬೈಬಲ್, ಕುರ್‌ಆನ್, ಪವಿತ್ರ ಗ್ರಂಥಗಳ ಉಸಿರು ಭಾವೈಕ್ಯತೆ. ಕನ್ನಡ ನಾಡಿನ ಬರಹಗಾರರ ಜೀವ ಸ್ಪಂದನ. ಕವಿಗಳ ಆತ್ಮ, ಲೇಖಕರ ವೇದನುಡಿ, ಮಠ, ಮಂದಿರ, ಮಸೀದಿ, ಚರ್ಚು, ಗುರುದ್ವಾರಗಳ ಅಂತರ್ಧ್ವನಿ ಭಾವೈಕ್ಯತೆ. ಶ್ರೀ ರಾಮಕೃಷ್ಣರ ಕನಸು, ವಿವೇಕಾನಂದರ ನನಸು, ವೀರಶೂರರ ಆಶಯ, ಮಹಾತ್ಮಾ ಗಾಂಧೀಜಿಯವರ ಬದುಕಿನ ಮರ್ಮ, ಆದಿಲ್ ಶಾಹಿಗಳ ಧರ್ಮವೇ ಭಾವೈಕ್ಯತೆ. ತತ್ವ-ಪದಕಾರರ ತತ್ವಪದಗಳ ತತ್ವವೇ ಭಾವೈಕ್ಯತೆ. ಎಲ್ಲ ಮಹಾತ್ಮರ- ನಡೆ, ನುಡಿ ಜೀವನದ ಅಂತಃ ಸತ್ವವೇ - ಭಾವೈಕ್ಯತೆ. ನನ್ನ ವಿಷಯದ ಕೇಂದ್ರಬಿಂದು ಕನ್ನಡ ಸಾಹಿತ್ಯದ ಗದ್ಯ ಪದ್ಯಗಳ ಹೆಗ್ಗುರಿ, ಅಂತರಾತ್ಮ ಭಾವೈಕ್ಯತೆ. ಈ ಮನುಷ್ಯನ ಅಂತರಂಗ ಭಾವೈಕ್ಯತೆಯಾದರೆ ಬಹಿರಂಗದ ನಡೆ ಸೌಹಾರ್ದತೆಯಾಗುತ್ತದೆ.
ಈ ನಾಡಿನ ಮಡಿಲ ಮಕ್ಕಳಾಗಿ- ಸೂಫಿಗಳು, ಸಂತರು, ದಾಸರು, ಶರಣರು, ತತ್ವಜ್ಞಾನಿಗಳು ಸಾಧಕರಾಗಿ ಈ ಮಿಂಚಿದ್ದಾರೆಂದರೆ ಆ ಮಿಂಚಿನ ಬೆಳಕೇ ಭಾವೈಕ್ಯತೆ ಅದರ ಪ್ರತಿಫಲನವೇ ಸಮರಸ. ದ.ರಾ.ಬೇಂದ್ರೆಯವರು ಹೇಳಿರುವಂತೆ ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ.
ಭಾವೈಕ್ಯತಾ ಜೀವಿಗಳೆಂದರೆ ವಸುದೈವ ಕುಟುಂಬಿಗಳು ಪರರ ನೋವಿಗೆ ಮಿಡಿಯುವ ಜೀವಿಗಳು, ಶ್ರೀ ಧವವೈದ್ಯರು. ನಾವೆಲ್ಲ ರೋಗಗ್ರಸ್ಥರು, ಆತುರರು ಕೋಮುವ್ಯಾಧಿಯಿಂದ ಗುಣ ಕಾಣಬೇಕಾದರೆ ಸೌಹಾರ್ದವೆಂಬ - ಅಮೃತಭಾಜನಗೈದು ಜೀರ್ಣಿಸಿಕೊಳ್ಳುವುದು ಉಚಿತ.
ಕನ್ನಡ ಸಾರಸತ್ವ ಲೋಕ ಭಾವೈಕ್ಯತೆಯಿಂದ ಸಮೃದ್ಧಗೊಂಡಿದೆ. ಸಮಾಜದಲ್ಲಿ ಚಾಪೆಯ ಕೆಳಗೆ ಹರಿಯುವ - ನೀರಿನಂತೆ ಜೀವಂತವಿರುವ ಅಸ್ಪೃಶ್ಯತೆ, ತಟ್ಟುಮುಟ್ಟು, ಮೇಲು ಕೀಳು, ಪವಿತ್ರ ರಕ್ತ, ವರ್ಣಾಶ್ರಮ, ಲಿಂಗಭೇದ, ನೀತಿ ಇತ್ಯಾದಿ ಇತ್ಯಾದಿಗೆ ಕುಠಾರ ಪ್ರಾಯವಾದ ಭಾವೈಕ್ಯತೆ ಬದುಕಿದೆಯೆಂತಲೇ ನಾವೆಲ್ಲ ಬದುಕಿದ್ದೇವೆ. ಮುಮುಕ್ಷುಗಳು, ಮೋಕ್ಷಾಪೇಕ್ಷಿಗಳು ಅರಿಯಬೇಕಾದ ಮೊದಲ ಸೂತ್ರ, ಆದ್ಯಮಂತ್ರವೆಂದರೆ ಭಾವೈಕ್ಯತೆಯಾಗಿದೆ.
ಜಾತಿ, ಮತ, ಪಂಥ, ಪಂಗಡಗಳ ಮೇರೆ ಮೀರಿ ಜ್ಞಾನದ ಶಿಖರವ ತುತ್ತತುದಿ ಏರಿ, ಆಧ್ಯಾತ್ಮದ ಮಕರಂದ ಹೀರಿ, ಪ್ರೀತಿ ಪ್ರೇಮವನು ಎಲ್ಲರಿಗೂ ನೀಡಿ ಅಮರರಾದವರೆಂದರೆ ಭಾವೈಕ್ಯತಾ ಜೀವಿಗಳು, ಈಗೇನಾದರೂ ನಮ್ಮ ನಮ್ಮಲ್ಲಿಯ ಅಪನಂಬಿಕೆ, ಅವಿಶ್ವಾಸ ಅಳಿದು, ಭಾವೈಕ್ಯದ ಬೀಜ ಮೊಳಕೆಯೊಡೆದು ಹೆಮ್ಮರವಾಗಿ ಫಲ-ಪುಷ, ನೆರಳು, ಆಶ್ರಯ ನೀಡುತ್ತಿದೆಯೆಂದರೆ ಅದರ ಹಿಂದೆ ಸಜ್ಜನ, ಸಾಧು, ಸತ್ಪುರುಷರ ಅಪಾರ ಶ್ರಮವಿದೆ. ಅಪ್ರತಿಮ ತ್ಯಾಗವಿದೆ. ಅಪೂರ್ವ ಬಲಿದಾನವಿದೆ. ಸಂಪೂರ್ಣ ಪುಣ್ಯಕರ್ಮವಿದೆ. ಸೂಫಿಗಳು, ಶರಣರು, ದಾಸರು, ಸಂತರು, ಮಹಾತ್ಮರು ಅದಕ್ಕಾಗಿ ನಿತ್ಯ ನಿರಂತರ ದುಡಿದಿದ್ದಾರೆ. ತುಡಿದಿದ್ದಾರೆ. ಮಾನವ ಸಂಬಂಧಗಳ ಕೊಂಡಿಯಾಗಿ ಚಿಂತನ ಪಾವನಗೊಳಿಸಿದ್ದಾರೆ.
ಕ್ರಿ.ಶ. 1550 ರ ಪುರಂದರದಾಸರು ‘ಯಾವ ಕುಲವಾದರೇನು ಆತ್ಮಭಾವ ಅರಿತ ಮೇಲೆ’ ಎಂದರು. ‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಿಕೊಳ್ಳಲುಬೇಡಿ ಹುಚ್ಚಪ್ಪಗಳಿರಾ’ ಎಂದರು.
ಕನಕದಾಸರು ಪ್ರಶ್ನಿಸಿರುವಂತೆ ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು. ನೀವು ಬಲ್ಲಿರಾ ಬಲ್ಲಿರಾ ! ? ಆತ್ಮ ಯಾವ ಕುಲ ? ಜೀವ ಯಾವ ಕುಲ ? ಸತ್ವೇಂದ್ರಿಯಗಳು ಯಾವ ಕುಲ ಪೇಳಿರಯ್ಯ ? ಆತನೊಲಿದ ಮೇಲೆ ಯಾತರ ಕುಲವಯ್ಯಾ ?
ಜನಪದ ತ್ರಿಪದಿಗಳಲ್ಲಿ ಜಾತಿ ಸೂತಕವಿಲ್ಲ, ಮುಟ್ಟು ಮೈಲಿಗೆಯಿಲ್ಲ, ಮುಡಿಚೆಟ್ಟ ಮೊದಲಿಗೆ ಇಲ್ಲೆಂದನವ್ವ ಬಸವಣ್ಣ , ತನ್ನಂಗ ನೋಡಿದರ ಭಿನ್ನಿಲ್ಲ, ಭೇದಿಲ್ಲ ತನ್ನಂಗ ತನ್ನ ಮಗಳಂಗ ತನ್ನಂಗ ತನ್ನ ಮಗನಂಗ ? ನೋಡಿದರ ಕಣ್ಣ ಮುಂದೈತಿ ಕೈಲಾಸ ? ಈ ರೀತಿಯಲ್ಲಿದೆ.
ಮತೀಯ ಸಾಮರಸ್ಯ ರಕ್ತಗತ ಮಾಡಿಕೊಂಡ ‘ನಾವು ಒಂದು, ನಾವು ಬಂಧು’ ಎಂದು ಸಾರುವ ಸಾವಿರದ ಸಾವಿರ ಸಾವಿರ ಪದ್ಯಗಳು ಜನಪದದಲ್ಲಿವೆ. ಸಂಸ್ಕೃತಿಯು ಎಲ್ಲರಿಂದ ಎಲ್ಲರಿಗೂ ದೊರೆತ ಕೊಡುಗೆ. ಅದು ಸಂಯುಕ್ತವಾದುದು. ಸಂಪರ್ಕ ವ್ಯವಸ್ಥೆಯು ರಾಷ್ಟ್ರಗಳ ಮತ್ತು ಜನತೆಯ ಗೂಢ ಐಕ್ಯತೆಗೆ ಕಾರಣವಾಗಿ ಅವರ ಸಂಸ್ಕೃತಿ ವಿಧಿವಿಧಾನ ಹಾಗೂ ಮನೋಭಾವನೆಗಳನ್ನು ಒಗ್ಗೂಡಿಸಿದೆ. ಸಂಸ್ಕೃತಿಯು ಸಾರ್ವತ್ರಿಕ ಪ್ರಯತ್ನದ ಫಲವಾದ ಸಾರ್ವತ್ರಿಕ ಪರಂಪರೆಯಾಗಿದೆ. ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಕನ್ನಡವನ್ನು ಜಾತ್ಯತೀತ ಭಾಷೆಯನ್ನಾಗಿ ಬೆಳೆಸಿದ ಕನ್ನಡ ಚಿಂತನಕಾರರು, ತತ್ವಪದಕಾರರು, ಕವಿಗಳು, ಲೇಖಕರು, ಕತೆಗಾರರು, ಕಾದಂಬರಿಕಾರರು, ಕನ್ನಡ ಚಳುವಳಿಗಾರರನ್ನು ಇಡಿಯಾಗಿ ನೆನೆಯಬೇಕು. ತಮ್ಮ ಕ್ರಿಯಾಶೀಲತೆ, ಚಿಂತನಶೀಲತೆ, ವೈಚಾರಿಕತೆ, ವೈಜ್ಞಾನಿಕತೆಯಿಂದ ಕನ್ನಡವನ್ನು ಬೆಳಗಿದ್ದಾರೆ.
ಸಮಕಾಲೀನ ಸಂದರ್ಭ ಮತ್ತೆ ಮರುಜೀವ ಕೇಳುತ್ತಿದೆ. ಮತ್ತೆ ತತ್ವ ನವೀನತೆ ಬೇಡುತ್ತಿದೆ. ಮತ್ತೆ ಮತ್ತೆ ಸೌಹಾರ್ದದ ಸೆಲೆಯುಕ್ಕಿಸುವ ಚಿಲುಮೆಗಳ ಉದ್ಭವ ನಿರೀಕ್ಷಿಸುತ್ತಿದೆ. ದೇಶದಲ್ಲಿ ತಲೆಯೆತ್ತಿರುವ ಕೋಮುವಾದ ಎಲ್ಲದಕ್ಕೂ ಅಡ್ಡಿಯುಂಟು ಮಾಡುತ್ತಿದೆ. ವಿಕಾಸಕ್ಕಂತೂ ಅದು ತಡೆ ಗೋಡೆಯೇ ಸರಿ. ಸಾಮಾಜಿಕ ಸ್ಪಂದನವಾಗಿ ಉಂಟಾಗುವ ಸಾತ್ವಿಕ ಆಕ್ರೋಶ, ಪರಿಣಾಮಕಾರಿಯಾದ ಸಾಹಿತ್ಯರೂಪದಲ್ಲಿ ವಿಜೃಂಭಿಸಬೇಕಾಗಿದೆ. ಅಂತಃಕರಣದೊಂದಿಗಿನ ಆಕ್ರೋಶ ಭಾವೈಕ್ಯತೆಯ ಭಾವುಕತೆಯೊಂದಿಗೆ ಸಾಹಿತ್ಯ ರೂಪ ತಳೆಯಬೇಕಾಗಿದೆ. ಈಗಂತೂ ಕೈಗೆಟುಕದ ಆಕಾಶದ ನಕ್ಷತ್ರವಾಗಿರುವ ಭಾವೈಕ್ಯತೆ ಭೂಮಿಯ ಬೆಳಕಾಗಬೇಕಾಗಿದೆ. ಹಾಗಾದರೆ ವಿಶ್ವದ ತುಂಬ ಶಾಂತಿ ನೆಲೆಸಿ ವಿಶ್ವಬಂಧುತ್ವ, ವಿಶ್ವಮಾನವತ್ವಕ್ಕೆ ನಾಂದಿಯಾಗುತ್ತದೆ.
ಜಗವಿಂದು ಮನೆಯಂಗಳವಾಗೆ ಜನವಿಂದು ಒಂದಾಗಬೇಕು |
ಘನ ತಿಮಿರದ ಮನದಂಗಳದಾಗೆ ಸಾಹಿತ್ಯದಿಂ ಸೌಹಾರ್ದ ಬೆಳಗಬೇಕು |
ವಿಶ್ವದ ಮೂಲೆ ಮೂಲೆಯ ನೋವು ನಮ್ಮೆದೆಯ ನೋವಾಗಬೇಕು |
ನಳನಳಿಸಿ ಎಲ್ಲಿ ನಲಿದರೂ ಜೀವ ನಮ್ಮೊಲಮೆಯದಕೆ ತಾಗಬೇಕು |
ಮಥಿಸಿ ಮನ ಮನವ ಸಮರಸವ ಸುರಿಸಬೇಕು ನಮ್ಮ ಹೃದಯ ಬೆಸುಗೆಯ ಪ್ರೀತಿ ನವ ವಿಶ್ವ ಕಟ್ಟಬೇಕು !
ಅರಿತಿದ್ದು ಅತಿ ಕಡಿಮೆ ದೇಶ, ಭಾಷೆ, ದೇವ ದೇವನಾದೇಶ ?
ಅರಿವಿನ ಹರವು ವಿಸ್ತರಿಸಿ ಗೊನೆಯಂತೆ ಬಾಗಿ ಕೊನೆ ಮುಟ್ಟಬೇಕು.
ಬದುಕು ಹಸನಾಗಿಸಿ ಆತ್ಮ ಹೊಳೆಯಿಸುವ, ಭಾವೈಕ್ಯ ತಿಳಿಹೇಳಿ ಕಂದಕವ ಮುಚ್ಚುವ ಸಾಹಿತ್ಯದಿಂ ಸೌಹಾರ್ದ ಬೆಳಗಬೇಕು.
ವಿಶ್ವವೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬ ಎಂಬ ಅಂತಃಶಕ್ತಿಯ ಆಕರ್ಷಣೆ ಸದಾ ಸರ್ವದಾ ಬಲಗೊಳ್ಳಬೇಕು. ಭಾರತ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಬೇಕು. ಭಾವೈಕ್ಯತೆ ಮಾನವೀಯ ಮೌಲ್ಯಗಳ ಒಟ್ಟು ಮೊತ್ತ, ಭಾವೈಕ್ಯತೆ ಭಾವುಕತೆಯೂ ಹೌದು, ಅದು ಹೃದಯಕ್ಕೆ ಸಂಬಂಧಿಸಿದುದು. ಮನುಷ್ಯ ಮೂಲತಃ ಭಾವಜೀವಿ. ಅದು ಅವನ ಸಹಜ ಪ್ರಕೃತಿ. ಸ್ವಭಾವ, ಹೃದಯವಂತಿಕೆ ಇಲ್ಲದಿರುವಾಗ ಬುದ್ಧಿವಂತಿಕೆ ಎಷ್ಟಿದ್ದರೂ ಪ್ರಯೋಜನವಿಲ್ಲ. ಪ್ರಪಂಚ ಪರಿವರ್ತಿಸುವ ಮೊದಲು ನಮ್ಮ-ನಮ್ಮ ಮನಸ್ಸನ್ನು ಪರಿವರ್ತಿಸಿಕೊಳ್ಳಬೇಕು. ಸಾಹಿತ್ಯ ಭಂಡಾರದಲ್ಲಿ ಭಾವೈಕ್ಯತೆ ಉಸುರಿದ ಬಂಗಾರದ ಎಲೆಗಳು ಬಹಳಷ್ಟು ಇವೆ. ಒಂದು ನಿಧಿಯೇ ಇದೆ. ಅದರ ಮೇಲೊಂದು ಬೀರಿದ ಪಕ್ಷಿನೋಟ ಮಾತ್ರ ಈ ಲೇಖನ.
ಜಾತಿಹೀನನಾ ಮನೆಯ ಜ್ಯೋತಿ ತಾ ಹೀನವೇ ?
ಜಾತಿ - ವಿಜಾತಿಯೆನ್ನಬೇಡ ದೇವನೊಲಿದಾತನೇ
ಜಾತ ಸರ್ವಜ್ಞ ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು
ಸುಡುವಾಗ್ನಿಯೊಂದೇ ಇರುತಿರಲು, ಕುಲಗೋತ್ರ
ನಡುವೆ ಎತ್ತಣದು ಸರ್ವಜ್ಞ
ಇಷ್ಟು ಸಾಕಲ್ಲವೇ ನಮಗೆ ಕಣ್ಣು ತೆರೆಸಲು? ಭಾವೈಕ್ಯತೆ ಮೆರೆಯಲು?