×
Ad

ಫಲಿತಾಂಶ ಸುಧಾರಣೆಗಾಗಿ ಪ್ರಶ್ನೆಪತ್ರಿಕೆ ಸೋರಿಕೆಯ ಅಕ್ರಮ ಮಾರ್ಗ ಸರಿಯೇ?

Update: 2026-01-18 12:57 IST

ಕಲಿಕೆಯ ದೃಢತೆಯ ಮಾಪನಕ್ಕೆ ಪರೀಕ್ಷೆ ಎಂಬ ಮಾನದಂಡ ಉಂಟು. ವಿಷಯ ಗ್ರಹಿಕೆ, ಅರ್ಥೈಸುವಿಕೆ ಮತ್ತು ಅಭಿವ್ಯಕ್ತಿಯ ಸ್ಕೇಲ್‌ಗಳಿಗೆ ಪ್ರಶ್ನೆಪತ್ರಿಕೆ ಎಂಬ ಟೂಲಿದೆ. ಆ ಮುಖಾಂತರ ಕಲಿಕಾ ಸಾಮರ್ಥ್ಯಗಳ ಮೂಲಕ ಸಾಧಿಸಿಕೊಳ್ಳುವ ವಿಧಾನವೊಂದು ರೂಢಿಯಲ್ಲಿದೆ. ಈ ಪ್ರಶ್ನೆಪತ್ರಿಕೆ ಅತ್ಯಂತ ನಿರ್ಣಾಯಕ. ಇದು ಕಲಿಕಾ ಹಂತಗಳಲ್ಲಿ ಮುಖ್ಯವಾದ ರೋಲ್ ವಹಿಸುತ್ತದೆ. ಪ್ರಶ್ನೆಪತ್ರಿಕೆಯ ಸೋರಿಕೆ ಎಂಬ ಈ ರೂಲ್ ಮತ್ತು ರೋಲ್‌ಗಳನ್ನು ಬ್ರೇಕ್ ಮಾಡಿದ ಪ್ರಕರಣಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತವೆ. ಇದು ಪ್ರಶ್ನೆ ಪತ್ರಿಕೆ ಸೋರಿಕೆಗಿಂತ ನಮ್ಮ ವ್ಯಕ್ತಿತ್ವದ ಮತ್ತು ನಂಬಿಕೆಯ ಸೋರಿಕೆ ಪ್ರಶ್ನೆ.

ಈಗ ಪರೀಕ್ಷಾ ಕಾಲ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಒಂದಲ್ಲ ಒಂದು ರೀತಿಯ, ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪೂರ್ವ ಸಿದ್ಧತಾ ಪರೀಕ್ಷೆಗಳಾಗಿರಲಿ ಅಥವಾ ವಾರ್ಷಿಕ ಪರೀಕ್ಷೆಗಳಾಗಿರಲಿ ನಡೆಸುವುದೇ ಬಹುದೊಡ್ಡ ಚಾಲೆಂಜ್ ಆಗುತ್ತಿದೆ. ಯಾವುದೋ ಒಂದು ಮೂಲೆಯಲ್ಲಿ ಯಾವುದೋ ಒಬ್ಬ ವ್ಯಕ್ತಿಯಿಂದ ಪ್ರಶ್ನೆಪತ್ರಿಕೆ ಸೋರಿಕೆ ಆಗುತ್ತಿರುವುದು ತಲೆನೋವು ತಂದಿಡುತ್ತಿದೆ. ಇದೇನು ಹೊಸದಾದ ವಿಷಯವೇನಲ್ಲ. ಈಗಾಗಲೇ ಸಾಕಷ್ಟು ಬಾರಿ ಇಂತಹ ಪ್ರಕರಣಗಳು ಸುದ್ದಿ ಮಾಡಿ ಸದ್ದು ಮಾಡಿವೆ. ನಿಯಂತ್ರಣ ಮತ್ತು ಕಡಿವಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಸುಧಾರಿತ ಕ್ರಮಗಳನ್ನು ಅನುಷ್ಠಾನಗೊಳಿಸಿದಾಗಲೂ ಪ್ರಶ್ನೆಪತ್ರಿಕೆ ಸೋರಿಕೆಯ ಭೂತ ಶಿಕ್ಷಣ ಇಲಾಖೆಯನ್ನು ಕಾಡುತ್ತಿದೆ. ಅನೇಕ ಸಾರಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಕುರಿತಾಗಿ ಆರು ಜನ ಶಿಕ್ಷಕರನ್ನು ಬಂಧಿಸಲಾಗಿದೆ. ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವುದು ಒಳ್ಳೆಯ ಬೆಳವಣಿಗೆ. ಆದರೆ ಅದು ಪ್ರಯೋಜನ ಆಗಬೇಕಾದರೆ, ಒಂದು ಪ್ರಶ್ನೆಪತ್ರಿಕೆ ರಾಜ್ಯದ ಎಲ್ಲಾ ಮಕ್ಕಳ ಭವಿಷ್ಯವನ್ನು ನಿರ್ಧರಿಸುವಂತಹದ್ದು. ಕೇವಲ ಒಂದು ಶಾಲೆಯ ಮಕ್ಕಳಿಗಷ್ಟೇ ಸೀಮಿತವಾದದ್ದಲ್ಲ ಎಂಬ ಅರಿವು ಮತ್ತು ನೈತಿಕತೆ ಬಹಳ ಮುಖ್ಯವಾಗುತ್ತದೆ. ಇದು ಅರ್ಥವಾಗದೆ ಹೋದರೆ ಈ ಸೋಲು ಎಲ್ಲಾ ಕ್ರಮಗಳನ್ನು ತಲೆಕೆಳಗು ಮಾಡಿ ಬಿಡಬಹುದು. ಬೇಲಿಯೇ ಎದ್ದು ಹೊಲ ಮೇಯಬಾರದು ಎಂದು ಹೇಳಿಕೊಡುವವರು ಬೇಲಿಗಳಾಗಬೇಕೇ ವಿನಃ ಹೊಲವನ್ನು ಭಕ್ಷಿಸಿದರೆ ಹೇಗೆ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುವಂತೆ ಮಾಡುತ್ತಿದೆ. ಇಲಾಖೆ ಫಲಿತಾಂಶವನ್ನು ನಿರೀಕ್ಷಿಸುವುದು ಸಹಜ. ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೇ ವಿನಃ ಹೀಗೆ ಅಡ್ಡದಾರಿಗಳಲ್ಲಿ ನಡೆಯುವುದಲ್ಲ! ಒತ್ತಡಕ್ಕೆ ಸಿಲುಕಿ ಕೆಟ್ಟ ಪರಂಪರೆಗಳನ್ನು ಹುಟ್ಟು ಹಾಕುವುದು ಶ್ರೇಯಸ್ಕರವಲ್ಲ.

ಜ್ಞಾನ ಕೇಂದ್ರಗಳಾದ ಶಾಲೆಗಳಲ್ಲಿ ಹಾಗೂ ಶಿಕ್ಷಣ ವಲಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ಅದರಲ್ಲೂ ಶಿಕ್ಷಕರಿಂದ ಆಗುತ್ತಿರುವುದು ಮತ್ತಷ್ಟು ಕಳವಳಕಾರಿಯಾದದ್ದು. ಗಂಭೀರವಾದ ಸಮಸ್ಯೆಯಾಗಿ ಚರ್ಚೆಗೊಳಗಾಗುತ್ತಿದೆ. ಈ ನಡೆ ಚಿಂತೆಗೆ ಹಚ್ಚುತ್ತಿದೆ. ಪರೀಕ್ಷೆ ವ್ಯವಸ್ಥೆಯ ಬೇರನ್ನು ಅಲಗಾಡಿಸುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿ ಸಮುದಾಯದ ಆತ್ಮವಿಶ್ವಾಸಕ್ಕೆ ಆಘಾತದ ಪೆಟ್ಟು ನೀಡುತ್ತಿದೆ. ಯಾರೋ ಒಬ್ಬರು ಮಾಡುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಜ್ಞಾನ ಮತ್ತು ನೈತಿಕತೆ ಎರಡು ಒಟ್ಟಾಗಿರಬೇಕು. ಅವು ಎರಡು ಬೇರೆ ಬೇರೆಯಾದರೆ ಇಂತಹ ಎಡರು ತೊಡರುಗಳನ್ನು ಎದುರಿಸಬೇಕಾಗುತ್ತದೆ. ಸೋರಿಕೆ ಎಂಬುದು ಸ್ವಾರ್ಥ ಮತ್ತು ದ್ರೋಹದ ಕೆಲಸ.

ಫಲಿತಾಂಶಕ್ಕಾಗಿ ಅಕ್ರಮ ಮಾರ್ಗಗಳನ್ನು ಹಿಡಿದು ನಡೆಯುವುದು ಸರಿಯಾದದ್ದಲ್ಲ. ಮಕ್ಕಳನ್ನು ದಾರಿ ತಪ್ಪಿಸಬಾರದು. ಫಲಿತಾಂಶ ಸುಧಾರಣೆಗಾಗಿ ಇಲಾಖೆ ಹತ್ತಾರು ಉಪಕ್ರಮಗಳನ್ನು ಜಾರಿಗೆ ತಂದಿದೆ. ವಿಶೇಷ ತರಗತಿ, ಪರಿಹಾರ ಬೋಧನೆ, ದತ್ತು ಯೋಜನೆ, ಫೋನ್-ಇನ್ ಕಾರ್ಯಕ್ರಮ, ಅವೇಕಿಂಗ್ ಕಾಲ್, ಗುಂಪು ಅಧ್ಯಯನ, ರಸಪ್ರಶ್ನೆ, ಪೋಷಕರ ಸಭೆ, ಪ್ರಗತಿ ಪರಿಶೀಲನೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದೆಷ್ಟೋ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಬದಿಗಿರಿಸಿಕೊಂಡು ಮಕ್ಕಳ ಉನ್ನತಿಗಾಗಿ ಶ್ರಮಿಸುತ್ತಾರೆ. ನಿರಂತರವಾಗಿ ದುಡಿಯುತ್ತಾರೆ. ಅವರ ಬೆವರಿಗೆ ಒಂದು ಬೆಲೆ ಇದೆ. ಮಕ್ಕಳ ಪರಿಶ್ರಮವೂ ಇದೆ. ಹೀಗಿರುವಾಗ ಸೋರಿಕೆ ಎಂಬುದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ!

ಒಬ್ಬ ಶಿಕ್ಷಕನ ಪರಿಶ್ರಮವನ್ನು ಇನ್ನೊಬ್ಬ ಶಿಕ್ಷಕ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಒಂದೇ ವರ್ಗದ ಕಲಿಕಾ ಸ್ವರೂಪವುಳ್ಳ ಮಕ್ಕಳಿಲ್ಲ. ಕೌಟುಂಬಿಕ ಪರಿಸರ ಮತ್ತು ಸಾಮಾಜಿಕ ಸ್ಥಿತಿ ಭಿನ್ನ-ಭಿನ್ನವಾದವು. ಇವರಲ್ಲಿ ಕಲಿಕೆಯನ್ನು ಊರ್ಜಿತಗೊಳಿಸುವ ಪ್ರಕ್ರಿಯೇನು ಹೇಳಿದಷ್ಟು ಸುಲಭವಲ್ಲ. ಸಮನ್ವಯ ಸಾಧಿಸುವ ಪ್ರಯತ್ನದ ಹಿಂದೆ ಶಿಕ್ಷಕರ ಪಾತ್ರ ಹಿರಿದು. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಹಲವಾರು ಕನಸುಗಳನ್ನು ಹೊತ್ತು ಸಾಗುತ್ತಿರುವ ಅವರ ಉತ್ಸಾಹಗಳ ಮೇಲೆ ಇಂತಹ ಘಟನೆಗಳು ಅವರ ಕಲಿಕಾ ಭಂಗಕ್ಕೆ ದೊಡ್ಡ ಪೆಟ್ಟು ನೀಡಿದಂತಾಗುತ್ತದೆ. ಹಗಲು ರಾತ್ರಿ ಎನ್ನದೆ ಪೋಷಕರ ಮತ್ತು ಶಿಕ್ಷಕರ ಒತ್ತಾಸೆಗಳನ್ನು ಅರಗಿಸಿಕೊಂಡು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಶ್ರಮವನ್ನು ಗೌರವಿಸಬೇಕು. ಅವರ ಪ್ರಾಮಾಣಿಕ ಓದನ್ನು ಸಮ್ಮತಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಎಲ್ಲಪ್ಪ ಜಿ. ಬಾಗಲಕೋಟೆ

contributor

Similar News