ಎಸ್ಐಆರ್ ಕುರಿತ ಸಿದ್ದರಾಮಯ್ಯ ಹೇಳಿಕೆ: ಬಿಜೆಪಿಯ ದುರುದ್ದೇಶಗಳ ಬಗ್ಗೆ ಕಾಂಗ್ರೆಸ್ ಯಾಕೆ ಕುರುಡಾಗಿದೆ ?
"ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್ ಅನ್ನು ಒಂದು ರಾಜಕೀಯ ವಿಷಯವಾಗಿ ಪರಿಗಣಿಸುವುದಿಲ್ಲ ಮತ್ತು ಅದರ ಸುತ್ತ ರಾಜಕೀಯ ಮಾಡುವುದಿಲ್ಲ. ಬದಲಿಗೆ ಯಾವೊಬ್ಬ ಅರ್ಹ ಮತದಾರರೂ ಮತಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದಷ್ಟೇ ನಮ್ಮ ಕಾಳಜಿ" ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋಮವಾರ(ಜ.19) ಬೆಳಗಾವಿಯಲ್ಲಿ ಹೇಳಿದ್ದಾರೆ.
ಎಸ್ಐಆರ್ ಮಾಡುತ್ತಿರುವುದು ಸಾಮಾನ್ಯರ ಬಳಿ ಇರುವ ಯಾವ ದಾಖಲೆಗಳನ್ನೂ ಒಪ್ಪದಿರುವುದು ಮತ್ತು ಜನಸಾಮಾನ್ಯರು ಕೊಡಲಾಗದ ದಾಖಲೆಗಳನ್ನೂ ಕೇಳುವುದು, ಕಾನೂನುಬಾಹಿರವಾಗಿ ಎಸ್ಐಆರ್ ನಲ್ಲಿ ನಾಗರಿಕತ್ವ ಪರಿಶೀಲನೆಯ ಅಂಶಗಳನ್ನು ಸೇರಿಸಿರುವುದು. ಈಗಾಗಲೇ ಆ ನಿಟ್ಟಿನಲ್ಲಿ 11 ರಾಜ್ಯಗಳಲ್ಲಿ 6.5 ಕೋಟಿ ಮತದಾರರನ್ನು ಪ್ರಾಥಮಿಕ ಹಂತದಲ್ಲೇ ಹೊರಗಿಟ್ಟಿರುವುದು, ಮ್ಯಾಪಿಂಗ್ ಆಗಿದ್ದರೂ ಪಶ್ಚಿಮ ಬಂಗಾಳದಲ್ಲಿ logical discrepancy ಹೆಸರಲ್ಲಿ 1.3 ಕೋಟಿ ಜನರಿಗೆ ನೋಟಿಸ್ ನೀಡಲಾಗಿದೆ. ಇವೆಲ್ಲವೂ ಎಸ್ಐಆರ್ ಉದ್ದೇಶವೇ ಸಂಭಾವ್ಯ ಬಿಜೆಪಿ ವಿರೋಧಿ ಮತದಾರರ ಮತದಾನದ ಮತ್ತು ನಾಗರಿಕತ್ವದ ಹಕ್ಕು ಹರಣ ಮಾಡುವುದು ಎಂಬುದು ಜಗಜ್ಜಾಹೀರಾಗಿದೆ.
ಎಸ್ಐಆರ್ ದುರುಳತನ ಎಷ್ಟಿದೆಯೆಂದರೆ ಸುಪ್ರೀಂ ಕೋರ್ಟ್ ಕೂಡ ಎಸ್ಐಆರ್ ಸಾಮಾನ್ಯರಿಗೆ ಕೊಡುತ್ತಿರುವ ಕಿರುಕುಳವನ್ನು ಆಗಾಗ ಗಮನಕ್ಕೆ ತೆಗೆದುಕೊಳ್ಳಲೇ ಬೇಕಾಗಿದೆ. ಹೀಗಿರುವಾಗ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಎಸ್ಐಆರ್ ಹಿಂದಿನ ಬಿಜೆಪಿಯ ಫ್ಯಾಶಿಸ್ಟ್ ದುರುದ್ದೇಶಗಳ ಬಗ್ಗೆ ಹೇಗೆ ಕುರುಡಾಗಿರಲು ಸಾಧ್ಯ?
ಕರ್ನಾಟಕದ ದಮನಿತ ಜನತೆ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದದ್ದು ಫ್ಯಾಶಿಸ್ಟ್ ನೀತಿಗಳನ್ನು ರದ್ದುಗೊಳಿಸಲೆಂದಲ್ಲವೇ? ಹಾಗಿದ್ದಲ್ಲಿ ಎಸ್ಐಆರ್ ಅನ್ನು ಕಾಂಗ್ರೆಸ್ ವಿರೋಧಿಸದೆ ಬಿಜೆಪಿಯ ಫ್ಯಾಶಿಸ್ಟ್ ದಾಳಿಗೆ ಕರ್ನಾಟಕದ ದಮನಿತ ಜನರನ್ನು ಬಲಿ ಮಾಡುತ್ತಿರುವುದು ಜನದ್ರೋಹವಲ್ಲವೇ?
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದವರು, ಬಿಜೆಪಿಗೆ ವಿರುದ್ಧವಾಗಿ ಕಾಂಗ್ರೆಸ್ ಅನಿವಾರ್ಯ ಎಂದು ವಾದಿಸುವವರು ವಿರೋಧಿಸಬೇಕಲ್ಲವೇ?
ಕನಿಷ್ಠ ಸುಪ್ರೀಂ ಕೋರ್ಟ್ ನಲ್ಲಿ ಎಸ್ಐಆರ್ ಪ್ರಕರಣ ಇತ್ಯರ್ಥ ಆಗುವವರೆಗಾದರೂ ಅದರ ಜಾರಿಯನ್ನು ತಡೆಯಬೇಕೆಂಬ ರಾಜಕೀಯ ನಿಲುವು ಕಾಂಗ್ರೆಸ್ಸಿಗಿರಬೇಕಲ್ಲವೇ?
ಒಂದು ಚುನಾಯಿತ ಸರಕಾರದ ಮಿತಿಯೊಳಗೆ ಪಶ್ಚಿಮ ಬಂಗಾಳದ ಟಿಎಂಸಿ ಮತ್ತು ತಮಿಳುನಾಡಿನ ಡಿಎಂಕೆ ಮಾಡುತ್ತಿರುವಂತೆ ಎಸ್ಐಆರ್ ನ ಫ್ಯಾಶಿಸ್ಟ್ ಉದ್ದೇಶಗಳನ್ನು ಜನರ ಗಮನಕ್ಕೆ ತಂದು ಅದರ ವಿರುದ್ಧ ಒಂದು ಬಲವಾದ ರಾಜಕೀಯ ಅಭಿಪ್ರಾಯವನ್ನಾದರೂ ಸಿದ್ದರಾಮಯ್ಯ ನೇತೃತ್ವದ ಸರಕಾರ ರೂಪಿಸಬೇಕಲ್ಲವೇ? ಹೀಗಿರುವಾಗ ಬಿಜೆಪಿಯ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷ ಎಸ್ಐಆರ್ ಹಿಂದಿನ ಬಿಜೆಪಿಯ ಸಂವಿಧಾನ ವಿರೋಧಿ ಫ್ಯಾಶಿಸ್ಟ್ ಕುತಂತ್ರಗಳನ್ನು ನಗಣ್ಯ ಮಾಡುತ್ತಿರುವುದು ಮತ್ತು ಪರೋಕ್ಷವಾಗಿ ಎಸ್ಐಆರ್ ಪ್ರಕ್ರಿಯೆಗೆ ಸಹಕರಿಸುತ್ತಿರುವುದು ಎಷ್ಟು ಸರಿ?
ಭಾರತದ ಗಣತಂತ್ರದ ಸ್ವರೂಪವನ್ನೇ ಬದಲಿಸಲಿರುವ ಎಸ್ಐಆರ್ ಪ್ರಕ್ರಿಯೆಗೆ ಕಾಂಗ್ರೆಸ್ಸಿನೊಳಗೆ ಪ್ರಗತಿಪರ ಮುಖ್ಯಮಂತ್ರಿ ಎಂದು ಹೆಸರಿರುವ ಸಿದ್ಧರಾಮಯ್ಯ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಘೋಷಿಸಿರುವುದು ಕಾಂಗ್ರೆಸ್ಸಿಗೆ ಫ್ಯಾಶಿಸಂ ಅನ್ನು ಅರ್ಥ ಮಾಡಿಕೊಳ್ಳುವ ಅಥವಾ ವಿರೋಧಿಸುವ ಯಾವ ಇರಾದೆಯೂ ಇಲ್ಲವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿಲ್ಲವೇ?
ಕಾಂಗ್ರೆಸ್ ಎಂಬುದು ಬಿಜೆಪಿ ವಿರೋಧಿ ಪಕ್ಷ ಆಗಿರಬಹುದು. ಆದರೆ, ಫ್ಯಾಶಿಸಂ ವಿರೋಧಿ ಪಕ್ಷವೇ ಎಂಬುದನ್ನು ಕಾಂಗ್ರೆಸ್ ಕುರುಡು ನೀಗಿ ಯೋಚಿಸಬೇಕು. ಕಾಂಗ್ರೆಸ್ಸನ್ನು ನೆಚ್ಚಿಕೊಂಡು ಭಾರತೀಯ ಫ್ಯಾಶಿಸಂ ಅನ್ನು ಸೋಲಿಸಲಾಗದು. ಒಂದು ಬಲವಾದ ಎಸ್ಐಆರ್ ವಿರೋಧಿ ಜನಾಂದೋಲನ ಕಟ್ಟದೆ ಕಾಂಗ್ರೆಸ್ಸಿನ ಬಿಜೆಪಿಕರಣವನ್ನು ಕೂಡ ತಡೆಯಲಾಗದು.