ಮೋದಿ ಹುಡುಕಿ ತಿರುಚಿದ್ದು! ಕಾಂಗ್ರೆಸ್ ಮರೆತದ್ದು!!
ಈಗಾಗಲೇ ಒಕ್ಕೂಟ ವ್ಯವಸ್ಥೆಯ ಆದಾಯ ಹಂಚಿಕೆಯಲ್ಲಿ ಕಪಿಮುಷ್ಟಿ ಹೊಂದಿರುವ ಕೇಂದ್ರ ಸರಕಾರ ಜಿ.ಎಸ್.ಟಿ. ಜಾರಿಯ ಮೂಲಕ ರಾಜ್ಯ ಸರಕಾರಗಳ ಆದಾಯ ಮೂಲಗಳಿಗೆ ತಂತಾನೇ ಮಿತಿ ಸೃಷ್ಟಿಯಾಗುವಂತೆ ಮಾಡಿದೆ. ಈಗಾಗಲೇ ಚರ್ಚೆಯಾಗಿರುವಂತೆ ದಕ್ಷಿಣದ ರಾಜ್ಯಗಳು ಈ ಆದಾಯ ಹಂಚಿಕೆಯಲ್ಲಿ ಅಪಾರ ಅನ್ಯಾಯ ಅನುಭವಿಸುತ್ತಿದ್ದು ಈಗ ಜಿ ರಾಮ್ ಜಿಯ ಹೊಸ ನೀತಿಯಿಂದಾಗಿ ಇನ್ನಷ್ಟು ಸಂಕಷ್ಟಕ್ಕೆ ಈಡಾಗಲಿವೆ.
ಸಂವಿಧಾನದ ದಾಖಲೆ ಬಿಟ್ಟರೆ ಈ ದೇಶದ ಜನರೇ ಸರ್ವೋಚ್ಚ, ಸರಕಾರ ಏನಿದ್ದರೂ ಜನರ ಆಶಯಗಳನ್ನು ಈಡೇರಿಸುವ ಏಜೆನ್ಸಿ ಎಂದು ಘೋಷಿಸಿದ ದಾಖಲೆ ಮನರೇಗಾ. ಬೇಡಿಕೆ ಆಧಾರಿತ ಸಾರ್ವತ್ರಿಕ ಉದ್ಯೋಗ ನೀಡಿಕೆಯ ಕಾನೂನಾಗಿ ಮನರೇಗಾ ಈ ದೇಶದ ಹೆಜ್ಜೆ ಗತಿಗಳಿಗೇ ಹೊಸ ಆಯಾಮ ನೀಡಿತು. ಬೇಡಿಕೆ ಸಲ್ಲಿಸಿದಾಗ ಕೆಲಸ, ಸಮಾನ ವೇತನ, ಗ್ರಾಮದ ಸಂಪನ್ಮೂಲಗಳ ಅಭಿವೃದ್ಧಿ, ಕೃಷಿ ಮತ್ತು ತತ್ಸಂಬಂಧಿತ ಜೀವನೋಪಾಯಗಳ ಅಭಿವೃದ್ಧಿ ಹೀಗೆ ಇಡೀ ಗ್ರಾಮ ಭಾರತವನ್ನೇ ಅಭಿವೃದ್ಧಿಪಡಿಸುವ ಯೋಜನೆಯಾಗಿ ಮನರೇಗಾ ಅನಾವರಣಗೊಂಡಿತು.
ಇದರ ಅನುಷ್ಠಾನದ ಪ್ರಕ್ರಿಯೆಯಲ್ಲಿ ವಿಶೇಷತಃ ಮಹಿಳೆಯರು ರೂಢಿಗತ ಪುರುಷಪ್ರಧಾನ ಸಂಸ್ಥೆಗಳನ್ನು ಪ್ರಶ್ನಿಸುವುದನ್ನು ಕಲಿತುಕೊಂಡರು. ಅದರೊಂದಿಗೆ ವ್ಯವಹರಿಸುವುದನ್ನು ಕಲಿತರು. ತಾವಿರುವ ಊರು, ಸಮುದಾಯದ ಅಭಿವೃದ್ಧಿ ಜೊತೆ ಉದ್ಯೋಗದ ಹಕ್ಕು ಹೆಣೆದುಕೊಂಡಿರುವುದನ್ನು ಅರ್ಥ ಮಾಡಿಕೊಂಡರು.
ಮೋದಿ ಸರಕಾರ ಈಗ ತಂದಿರುವ ವಿಬಿ ಜಿ ರಾಮ್ ಜಿ ಈ ಐತಿಹಾಸಿಕ ಕಾನೂನನ್ನು ಹೂತು ಹಾಕಿ ಅದನ್ನೊಂದು ತನ್ನ ಮರ್ಜಿಯ ಯೋಜನೆಯನ್ನಾಗಿಸಿದೆ.
ಈ ಬದಲಾಗಿ ಬಂದಿರುವ ಜಿ ರಾಮ್ ಜಿಯ ಮುಖ್ಯ ಅಂಶಗಳನ್ನು ಗಮನಿಸಿ:
1. ಕೇಂದ್ರ ಸರಕಾರವೇ ಎಲ್ಲಿ ಈ ಯೋಜನೆ ಜಾರಿಗೆ ಬರಬೇಕೆಂದು ನಿರ್ಧರಿಸುತ್ತದೆ. (ಅರ್ಥಾತ್ ಸಾರ್ವತ್ರಿಕವೂ ಅಲ್ಲ, ಬೇಡಿಕೆ ಆಧಾರಿತವೂ ಅಲ್ಲ)
2. ಯಾವ ಯಾವ ಕಾಮಗಾರಿಗಳು ಈ ಯೋಜನೆಯಲ್ಲಿ ಇರುತ್ತದೆ ಎಂಬುದನ್ನೂ ತಾನೇ ಸೂಚಿಗಳ ಮೂಲಕ ನಿರ್ಧರಿಸುತ್ತದೆ. ಕಾಲಕಾಲಕ್ಕೆ ತಾನು ನಿರ್ಧರಿಸುವ ಕಾಮಗಾರಿಗಳನ್ನು ಸೇರಿಸುವ ಅವಕಾಶ, ಅಧಿಕಾರ ಎರಡೂ ಕೇಂದ್ರ ಸರಕಾರಕ್ಕಿದೆ. (ಮೊದಲು ಆಯಾ ಗ್ರಾಮ ಪಂಚಾಯತ್‌ಗಳು ತಮ್ಮ ಪಂಚಾಯತ್‌ನ ಅಭಿವೃದ್ಧಿಯ ಕಾಮಗಾರಿಗಳನ್ನು ನಿರ್ಧರಿಸುತ್ತಿದ್ದವು.)
3. ಹಣಕಾಸು ಹೊಣೆಗಾರಿಕೆಯಲ್ಲಿ ಕೇಂದ್ರದ ಪಾಲು 60ಕ್ಕಿಳಿದರೆ ರಾಜ್ಯಗಳ ಪಾಲು 40ಕ್ಕೇರಿಸಿದೆ. (ಈ ಹಿಂದೆ ಶೇ.90ರಷ್ಟು ಕೇಂದ್ರದ ಪಾಲಿತ್ತು)
4. ರಾಜ್ಯಕ್ಕೆ ಎಷ್ಟು ಅನುದಾನ ನಿಗದಿಪಡಿಸಬೇಕು ಎಂಬುದನ್ನು ಆಯಾ ಆರ್ಥಿಕ ವರ್ಷ ಕೇಂದ್ರ ಸರಕಾರವೇ ನಿರ್ಧರಿಸುತ್ತದೆ.
5. ಕೃಷಿ ಹಂಗಾಮಿನಲ್ಲಿ ಉದ್ಯೋಗ ಖಾತ್ರಿ ಕಾರಣಕ್ಕೆ ಕೂಲಿಯಾಳುಗಳೂ ಸಿಗುತ್ತಿಲ್ಲ, ಕೂಲಿಯೂ ಹೆಚ್ಚಾಗಿದೆ ಎಂಬ ರೈತರ ಆರೋಪವನ್ನು ಅಧಿಕೃತಗೊಳಿಸುವಂತಹ 60 ದಿನಗಳ ಯೋಜನಾ ಅಮಾನತುಗೊಳಿಸುವ ಕಲಮೂ ಇದೆ. (ಆದರೆ ಈ 60 ದಿನಗಳ ಅಮಾನತನ್ನು ನಿರ್ಧರಿಸುವ ಜವಾಬ್ದಾರಿ ರಾಜ್ಯ ಸರಕಾರದ್ದು!)
ಈಗಾಗಲೇ ಒಕ್ಕೂಟ ವ್ಯವಸ್ಥೆಯ ಆದಾಯ ಹಂಚಿಕೆಯಲ್ಲಿ ಕಪಿಮುಷ್ಟಿ ಹೊಂದಿರುವ ಕೇಂದ್ರ ಸರಕಾರ ಜಿ.ಎಸ್.ಟಿ. ಜಾರಿಯ ಮೂಲಕ ರಾಜ್ಯ ಸರಕಾರಗಳ ಆದಾಯ ಮೂಲಗಳಿಗೆ ತಂತಾನೇ ಮಿತಿ ಸೃಷ್ಟಿಯಾಗುವಂತೆ ಮಾಡಿದೆ. ಈಗಾಗಲೇ ಚರ್ಚೆಯಾಗಿರುವಂತೆ ದಕ್ಷಿಣದ ರಾಜ್ಯಗಳು ಈ ಆದಾಯ ಹಂಚಿಕೆಯಲ್ಲಿ ಅಪಾರ ಅನ್ಯಾಯ ಅನುಭವಿಸುತ್ತಿದ್ದು ಈ ಜಿ ರಾಮ್ ಜಿಯ ಹೊಸ ನೀತಿಯಿಂದಾಗಿ ಇನ್ನಷ್ಟು ಸಂಕಷ್ಟಕ್ಕೆ ಈಡಾಗಲಿವೆ.
ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ರಾಜ್ಯ ಸರಕಾರಗಳದ್ದಾಗಿದ್ದರೂ ಎಲ್ಲಿ, ಯಾವಾಗ, ಯಾವುದು, ಎಷ್ಟು ಎಂಬುದನ್ನು ಕೇಂದ್ರ ಸರಕಾರವೇ ನಿರ್ಧರಿಸಲಿದ್ದು ರಾಜ್ಯ ಸರಕಾರಗಳು ಮೇಲುಸ್ತುವಾರಿಯ ಮೇಸ್ತ್ರಿ ಮಟ್ಟಕ್ಕಿಳಿಯುತ್ತವೆ.
****
ಇದರೊಂದಿಗೆ ಈ ಯೋಜನೆಯಲ್ಲಿ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳು ಸರಕಾರದ ನವ ಆರ್ಥಿಕ ನೀತಿಯ ಉತ್ಸಾಹದ ದ್ಯೋತಕವಾಗಿವೆ.
ಒಂದೆಡೆ ಈ ಹಿಂದಿನ ಮುಂದುವರಿಕೆ ಎಂದು ಭಾಸವಾಗುವ ಕೆಲವು ಗ್ರಾಮೀಣ ಮೂಲಸೌಕರ್ಯದ ಕಾಮಗಾರಿಗಳನ್ನು ಸೂಚಿಸಿದರೂ ಉಳಿದ ಸೂಚಿತ ಕಾಮಗಾರಿಗಳು ಈ ನವ ಆರ್ಥಿಕತೆಯ ಅಭಿವೃದ್ಧಿ ಇಂಜಿನ್‌ಗಳೆಂದು ಸರಕಾರ ಭಾವಿಸುವ ಕ್ಷೇತ್ರಗಳದ್ದೇ ಆಗಿವೆ.
ಮುಖ್ಯ ಗ್ರಾಮೀಣ ಮೂಲ ಸೌಕರ್ಯ.
ವಿಷಯವಾರು ನಾಗರಿಕ, ಸಾಮಾಜಿಕ, ಆಡಳಿತಾತ್ಮಕ ಹಾಗೂ ಸೇವಾ ರವಾನೆಯ ಮುಖ್ಯ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ, ಸಂಪರ್ಕ, ಪುನರ್‌ನವೀಕರಣ ಇಂಧನ ಇತ್ಯಾದಿ ಸೋದಾಹರಣ ಕಾಮಗಾರಿಗಳು ಹೀಗಿರಬಹುದು.
ಇದರಲ್ಲಿ ಶಾಲಾ ಕೊಠಡಿ ನಿರ್ಮಾಣ, ಗ್ರಂಥಾಲಯ, ಒಕ್ಕೂಟಗಳ ಕಟ್ಟಡ, ಸ್ವಸಹಾಯ ಸಂಘಗಳಿಗೆ ವರ್ಕ್ ಶೆಡ್‌ನಿಂದ ಜಲ ಜೀವನ್ ಮಿಷನ್‌ನ ದುರಸ್ತಿ ಮತ್ತು ನಿರ್ವಹಣೆಯನ್ನೂ ಸೇರಿಸಲಾಗಿದೆ.
ಇದರೊಂದಿಗೆ ಆಹಾರ ಧಾನ್ಯ ಸಂಗ್ರಹದ ಕಟ್ಟಡಗಳು, ಕೃಷಿ ಉತ್ಪನ್ನ ಶೇಖರಣಾ ಕಟ್ಟಡಗಳು. ಶೀತಲ ಗೃಹಗಳು ಮತ್ತಿತರ ಕೃಷಿ ಮೌಲ್ಯವರ್ಧನೆಯ ಸರಪಳಿ ಮೂಲ ಸೌಕರ್ಯದ ನಿರ್ಮಾಣಗಳೂ ಸೇರಿವೆ. ಹಾಗೆಯೇ ಕೇಂದ್ರ ಸರಕಾರ ಸೂಚಿಸುವ ಯಾವುದೇ ಲೋಕೋಪಯೋಗಿ ಕಾಮಗಾರಿಗಳನ್ನೂ ಸೇರಿಸಬಹುದು. ಗತಿ ಶಕ್ತಿ ಯೋಜನೆಯ ಪ್ರಮುಖ ಅಂಶಗಳಾದ ಹೆದ್ದಾರಿ ನಿರ್ಮಾಣ ಇದರಲ್ಲಿ ಸೇರುವುದು ಖಚಿತ.
ಗಮನಿಸಬೇಕಾದ್ದು ಇವೆಲ್ಲವೂ ಕಟ್ಟಡ ನಿರ್ಮಾಣ ಕಾಮಗಾರಿಗಳೇ! ಶೀತಲ ಗೃಹದಿಂದ ಹಿಡಿದು ಕೃಷಿ ಗೋದಾಮುಗಳ ನಿರ್ಮಾಣ ಬಹುತೇಕ ಖಾಸಗಿ ಸಹಭಾಗಿತ್ವದಲ್ಲೇ ನಿರ್ಮಾಣವಾಗುವ ನೀತಿ ಈಗಾಗಲೇ ಜಾರಿಯಲ್ಲಿದೆ. ಅಂದರೆ ಖಾಸಗಿ ಹೂಡಿಕೆಯ ನಿರ್ಮಾಣಗಳ ವೆಚ್ಚವನ್ನು ಸರಕಾರ ಇದರಿಂದ ಭರಿಸಲಿದೆ.
ಇದರ ಒಳ ಸೂಚನೆ ಒಂದು ಪುಟ್ಟ ವಿವರದಲ್ಲಿದೆ.
ಐದು ಕಿ.ಮೀ. ದೂರ ಕೆಲಸ ಕೊಟ್ಟಲ್ಲಿ ಕೂಲಿಯ ಮೊತ್ತಕ್ಕಿಂತ ಶೇ.10ರಷ್ಟು ಹೆಚ್ಚುವರಿ ಕೂಲಿ ನೀಡಬೇಕು ಎಂದಿದೆ.
ಹೆದ್ದಾರಿ ಯೋಜನೆಯಿಂದ ಹಿಡಿದು ಯಾವುದೇ ಇಂತಹ ಕಾಮಗಾರಿಗಳ ಕೂಲಿ 600-800ರಷ್ಟಿದ್ದು ಸರಕಾರ ಗ್ರಾಮೀಣ ಕೂಲಿಕಾರರಿಗೆ ಉದ್ಯೋಗ ಕೊಡುವ ಹೆಸರಿನಲ್ಲಿ ಭಾಗಶಃ ಕೂಲಿ ಸಬ್ಸಿಡೈಸ್ ಮಾಡಲಿದೆ. ಅಷ್ಟಕ್ಕೂ ಎಲ್ಲಿ ಜಾರಿ ಮಾಡಬೇಕೆಂಬ ನಿರ್ಧಾರ ಕೇಂದ್ರದ್ದೇ ಆಗಿರುವಾಗ ಇದು ತಂತಾನೇ ಒಳ ತೂರುತ್ತದೆ.
ರೈತರ ಖಾಸಗಿ ಕೆಲಸಗಳಿಗೆ ವಿಶಿಷ್ಟ ಕೊಕ್ಕೆ ಹಾಕಿದ್ದು ನೇರ ಗೋಚರವಾಗುತ್ತಿದೆ. ಗ್ರಾಮದ ಪರಿಶಿಷ್ಟ ಜಾತಿ/ ಪಂಗಡ, ಒಂಟಿ ಮಹಿಳೆ, ಇತ್ಯಾದಿ ವಿಶೇಷ ಕೆಟಗರಿಗಳ ಜಮೀನಿನ ಕೆಲಸ ಪೂರ್ತಿಯಾದ ಮೇಲೆ ಉಳಿದವರಿಗೆ ನೀಡಬೇಕು ಎಂಬ ಷರತ್ತಿದೆ. ಈಗಾಗಲೇ ತೋಟಗಾರಿಕಾ ಬೆಳೆಗಳಿಗಿದ್ದ ಉದ್ಯೋಗ ಖಾತರಿ ನೆರವಿನ ಪಟ್ಟಿಯಿಂದ ಬಾಳೆ ಮತ್ತು ಪಪ್ಪಾಯಿಗಳನ್ನು ಹೊರಗಿಡಲಾಗಿದೆ. ಮುಂದಿನ ದಿನಗಳಲ್ಲಿ ರೈತರ ಹೊಲ ಗದ್ದೆ, ತೋಟಗಳ ಅಭಿವೃದ್ಧಿಗೆ ಈ ಯೋಜನೆಯಿಂದ ಯಾವ ನೆರವೂ ದೊರಕುವುದಿಲ್ಲ.
ಈ ಯೋಜನೆಯ ಒತ್ತು ಬದಲಾದ ಬಗೆಯನ್ನು ಎರಡು ರೀತಿ ಗಮನಿಸಬೇಕು
1. ಖಾಸಗಿ ಬಂಡವಾಳ ಹೂಡಿಕೆಯ ಕಾಮಗಾರಿ (ಕಟ್ಟಡ ಎಂದು ಓದಿಕೊಳ್ಳಿ) ನಿರ್ಮಾಣದಲ್ಲಿ ಕೂಲಿ ಕೆಲಸದ ಭಾಗ ಕಡಿಮೆ. ಅರ್ಥಾತ್ ಇಷ್ಟು ದಿನ ಮೆಟೀರಿಯಲ್ ವೆಚ್ಚ ಭರಿಸಲು ಕೂಲಿ ವೆಚ್ಚವನ್ನು ಅಡ್ಡ ದಾರಿಯಲ್ಲಿ ತುಂಬುವ ಭ್ರಷ್ಟಾಚಾರ ಹಾಸುಹೊಕ್ಕಾಗಿತ್ತು. ಈಗ ಸರಕಾರ ಅದನ್ನು ಕಾನೂನು ಬದ್ಧಗೊಳಿಸಲಿದೆ.
2. ಇಷ್ಟು ದಿನ ಈ ಕಾನೂನಿನಡಿ ದುಡಿಯುವ ಕಾರ್ಮಿಕರಿಗೆ ತಾವು ಸಮುದಾಯದ ಭಾಗ ಅದರ ಆಸ್ತಿ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುತ್ತಿದ್ದೇವೆ ಎಂಬ ಐಡೆಂಡಿಟಿ ಈ ಕಾನೂನಿನಲ್ಲಿತ್ತು. ಈಗ ಮೋದಿ ಸರಕಾರ ಅವರನ್ನು ಯಾವ ಲೇಪವೂ ಇಲ್ಲದ ಕೇವಲ ಕಾರ್ಮಿಕರನ್ನಾಗಿ ಪರಿವರ್ತಿಸಿ ಅವರನ್ನು ದುಡಿಯಲು ಹಚ್ಚಲಿದೆ.
****
ಗಮನಿಸಬೇಕಾದ್ದು, ಈ ಯೋಜನೆ ಕಾರ್ಮಿಕ ಹಕ್ಕು ಆಧಾರಿತ ಕಾನೂನಿನಿಂದ ಗುತ್ತಿಗೆದಾರರ ಊಟದ ತಟ್ಟೆಯಾಗಿ ಬದಲಾಗಿದೆ.
ಈ ಮೋದಿ ಸರಕಾರದ ಯೋಜನಾ ಆದ್ಯತೆಗಳ ಬಗ್ಗೆ ಕಾಂಗ್ರೆಸ್ ಕೂಡಾ ಸಹಮತ ಹೊಂದಿದೆ. ನಮ್ಮ ರಾಜ್ಯ ಸರಕಾರದ ಬಜೆಟ್ ತುಂಬಾ ಈ ಖಾಸಗಿ ಸಹಭಾಗಿತ್ವದ ಹತ್ತಾರು ಉಲ್ಲೇಖಗಳಿವೆ. ಕೇಂದ್ರ ಸರಕಾರದ ಬಹುತೇಕ ಪ್ರಾಯೋಜಿತ ಯೋಜನೆಗಳನ್ನು ಅನುದಾನದ ಕಾರಣಕ್ಕೆ ರಾಜ್ಯ ಸರಕಾರ ಅನುಷ್ಠಾನ ಮಾಡುತ್ತಿದೆ. ರಾಜ್ಯದ ಪ್ರಮುಖ ಇಲಾಖೆಗಳ ಮಂತ್ರಿಗಳ ಈ ಖಾಸಗಿ ಹೂಡಿಕೆ ಮತ್ತು ಬೃಹತ್ ಮೂಲ ಸೌಕರ್ಯ ಹೂಡಿಕೆಗಳ ಕುರಿತ ಉತ್ಸಾಹ ಗಮನಿಸಿದರೆ ಕಾಂಗ್ರೆಸ್‌ನ ಬಹುತೇಕರಿಗೆ ಈ ಹೊಸ ಪುನರ್‌ರೂಪಿತ ‘ಉದ್ಯೋಗ ಖಾತರಿ’ ಬಗ್ಗೆ ಕಡು ಆಕ್ಷೇಪ ಇರಲಾರದು. 60:40ರ ಷರತ್ತು ಸಡಲಿಸಿ, ಸಾರ್ವತ್ರಿಕಗೊಳಿಸಿದರೆ ಬಹುತೇಕ ಕಾಂಗ್ರೆಸ್ ಶಾಸಕರೂ ಇದಕ್ಕೆ ಮಣೆ ಹಾಕುವುದು ಖಚಿತ.
ಈ ಯೋಜನೆಯನ್ನು ‘ಆಜೀವಿಕಾ’ದ ಜೊತೆ ಹೆಣೆದಿರುವುದು ಬಹುತೇಕ ಮಂದಿ ಗಮನಿಸಿದ ಹಾಗಿಲ್ಲ. ಆಜೀವಿಕಾ ಅಂದರೆ ಗ್ರಾಮೀಣ ಜೀವನೋಪಾಯ ಸಂವರ್ಧನಾ ಮಿಷನ್ (NRLM) ಮೋದಿ ಬಿಹಾರದಲ್ಲಿ ಮಹಿಳೆಯರಿಗೆ ಹತ್ತು ಸಾವಿರ ಹಂಚಿದ್ದೂ ಇದೇ ಯೋಜನೆಯ ಅಡಿಯಲ್ಲಿ.
ಉದ್ಯೋಗ ಖಾತರಿ ಮತ್ತು ಈ ಆಜೀವಿಕಾ ಯುಪಿಎ ಕೂಸುಗಳು. ಕಾಂಗ್ರೆಸ್ ಇವೆರಡರ ಬಗ್ಗೆ ಕಾಳಜಿ ವಹಿಸಿದ್ದೇ ಇಲ್ಲ. ಇದರ potential ಅರ್ಥ ಮಾಡಿಕೊಂಡ ಮೋದಿ ಇವೆರಡಕ್ಕೂ ತನ್ನ ನಿಯಂತ್ರಣದ ಮೂಲಕ ಹೂಡಿಕೆ ಮಾಡುತ್ತಿದ್ದಾರೆ! ಅರ್ಥ ಮಾಡಿಕೊಳ್ಳಬೇಕಾದದ್ದು, ಈ ಹೊಸ ಜಿ ರಾಮ್ ಜಿಯಲ್ಲಿ ಸಂದರ್ಭ, ಒತ್ತಡ ನೋಡಿಕೊಂಡು ಮೋದಿ ಅನುದಾನ ಕೊಡಬಹುದು. ಕಾರ್ಮಿಕರಿಗೆ ಕೆಲಸಕ್ಕೆ ಅಡ್ಡಿ ಇಲ್ಲ. ಆದರೆ ಮಾಮೂಲಿ ಕಾರ್ಮಿಕರ ಹಾಗೆ ಹೇಳಿದಲ್ಲಿ ದುಡಿಯಬೇಕು!
ಉದ್ಯೋಗ ಖಾತರಿ/ಆಜೀವಿಕಾಗಳನ್ನು ಆಸ್ಥೆಯಿಂದ ಪೋಷಿಸಿದ ಆಂಧ್ರ, ಕೇರಳ ಮತ್ತು ಬಿಹಾರಗಳಲ್ಲಿ ಇದರ ರಾಜಕೀಯ ಡಿವಿಡೆಂಡ್ ದೊರಕಿದೆ. ಕಾಂಗ್ರೆಸ್ ತನ್ನ ಉದಾಸೀನತೆಯಿಂದ ಇದರ ಮೇಲೆ ತನ್ನ ಮುದ್ರೆ ಒತ್ತಲು ವಿಫಲವಾಗಿ ಈಗ ಜಾರಿಗೊಳಿಸುವ ಮೇಸ್ತ್ರಿಯಾಗಿ ಕೂತಿದೆ. ಜಾರಿಗೊಳಿಸದಿದ್ದರೆ ದೂರು ರಾಜ್ಯ ಸರಕಾರಕ್ಕೆ! ಮೋದಿ ಹೆಣೆದ ದಾಸ್ಯದ ಬಲೆಗಳಲ್ಲಿ ಇದೂ ಒಂದು.
ಮೋದಿಯ ನವ ಉದಾರವಾದಿ ಆರ್ಥಿಕ ನೀತಿಯ ಅನುಷ್ಠಾನದ ಯೋಜನೆಗಳನ್ನು ಅನುಮೋದಿಸಿದ ಎಲ್ಲಾ ಸರಕಾರಗಳೂ ಈ ಉರುಳಲ್ಲಿ ಕೇಂದ್ರದ ಮೇಸ್ತ್ರಿಗಿರಿ ಮಾಡುತ್ತಾ ದಿನ ದೂಡಬೇಕಿದೆ.
ಜಿ ರಾಮ್ ಜಿ ಗ್ರಾಮ ಭಾರತದ ಸ್ವಾಯತ್ತೆಯನ್ನು ಕಸಿದು ಅದನ್ನು ಖಾಸಗಿ ಹೂಡಿಕೆಯ ಅಗ್ಗದ ಕೂಲಿಗಳನ್ನಾಗಿ ಪರಿವರ್ತಿಸಿದೆ. ಸ್ವಾಯತ್ತ ಸುಸ್ಥಿರ ಅಭಿವೃದ್ಧಿಯ ದಾರಿದೀಪವಾಗಿದ್ದ ಯೋಜನೆ ಈಗ ಈ ವಿಕೃತ ಬದಲಾವಣೆಯಿಂದ ಗ್ರಾಮ ಭಾರತವನ್ನು ಇನ್ನಷ್ಟು ದುರ್ಭರಗೊಳಿಸಲಿದೆ.