×
Ad

‘ಜಾಮೀನು ಕೈದಿಯ ಹಕ್ಕು’ ಎನ್ನುವ ನ್ಯಾ. ಡಿ.ವೈ. ಚಂದ್ರಚೂಡ್‌ರಿಗೆ ಉಮರ್ ಖಾಲಿದ್‌ಗೆ ಜಾಮೀನು ನಿರಾಕರಿಸಿದ್ದು ನೆನಪಾಗಲಿಲ್ಲವೇ?

Update: 2026-01-20 10:10 IST

ನ್ಯಾ ಡಿ.ವೈ. ಚಂದ್ರಚೂಡ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ

ಅವರು ಸುದ್ದಿಯಲ್ಲಿರುವುದರಲ್ಲಿ ಬಹಳ ಜಾಣರು.

ಯಾವಾಗ ಏನು ಮಾತಾಡಿ ಹೇಗೆ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು, ಹೇಗೆ ಪ್ರಚಾರ ಪಡೆಯಬೇಕು ಎಂದು ಅವರಿಗೆ ಬಹಳ ಚೆನ್ನಾಗಿ ಗೊತ್ತಿದೆ.

ಆದರೆ ಇಲ್ಲೊಂದು ವಿಪರ್ಯಾಸವಿದೆ.

ಅವರು ಈಗ ನೀಡುತ್ತಿರುವ ಹೇಳಿಕೆಗಳ ಮೂಲಕ ಭಾರತದ ಮುಖ್ಯನ್ಯಾಯಮೂರ್ತಿಯಾಗಿ ಅವರ ಆಡಳಿತಾವಧಿಯ ವೈರುಧ್ಯಗಳಿಗೆ ಹಾಗೂ ವೈಫಲ್ಯಗಳಿಗೆ ಅವರೇ ಕನ್ನಡಿ ಹಿಡಿಯುತ್ತಿದ್ದಾರೆ.

ಅಧಿಕಾರದಲ್ಲಿದ್ದಾಗ ಉಮರ್ ಖಾಲಿದ್ ಅವರಂತಹ ವಿಚಾರಣಾಧೀನ ಕೈದಿಗಳ ಹಕ್ಕುಗಳನ್ನು ಕಡೆಗಣಿಸಿದವರು, ಈಗ ನಿವೃತ್ತಿಯ ನಂತರ ‘ಜಾಮೀನು ಕೈದಿಯ ಹಕ್ಕು’ ಎಂದು ಭಾಷಣ ಮಾಡುತ್ತಿರುವುದು ಹಾಸ್ಯಾಸ್ಪದ ಮತ್ತು ಸಂವಿಧಾನಕ್ಕೆ ಮಾಡಿದ ಅಪಮಾನ.

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಚರ್ಚಿತ ಮತ್ತು ಪ್ರಭಾವಶಾಲಿ ವ್ಯಕ್ತಿ ಎಂದು ಕರೆಸಿಕೊಳ್ಳುವ ನ್ಯಾ. ಡಿ.ವೈ. ಚಂದ್ರಚೂಡ್ ಅವರು, ಈಗ ಮತ್ತೆ ಒಂದು ಹೇಳಿಕೆ ಕೊಟ್ಟಿದ್ದಾರೆ

ಜೈಪುರ ಲಿಟ್ ಫೆಸ್ಟ್‌ನಲ್ಲಿ ಉಮರ್ ಖಾಲಿದ್ ಅವರ ಐದು ವರ್ಷಗಳ ಜೈಲುವಾಸದ ಬಗ್ಗೆ ಮಾತನಾಡುತ್ತಾ, ಜಾಮೀನು ಹಕ್ಕು ಎಂದು ಅವರು ಪ್ರತಿಪಾದಿಸುತ್ತಿರುವುದು ನೋಡಿದರೆ, ‘ಅಧಿಕಾರವಿದ್ದಾಗ ಅಡಗಿ ಕುಳಿತು, ಅಧಿಕಾರ ಹೋದ ಮೇಲೆ ಅರಚುವ’ ಹಳೇ ಚಾಳಿ ನೆನಪಿಗೆ ಬರುತ್ತದೆ.

ಚಂದ್ರಚೂಡ್ ಅವರು ಈ ದೇಶದ ಮುಖ್ಯ ನ್ಯಾಯಾಧೀಶರಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ಉಮರ್ ಖಾಲಿದ್ ಅವರ ಅರ್ಜಿಗಳು ಕಣ್ಣೆದುರೇ ಇದ್ದರೂ ಆಗದ ನ್ಯಾಯ, ಈಗ ನಿವೃತ್ತಿ ನಂತರದ ಭಾಷಣದಲ್ಲಿ ಹೊರಹೊಮ್ಮುತ್ತಿರುವುದು ಯಾಕೆ? ಅಧಿಕಾರ ಇದ್ದಾಗ ನ್ಯಾಯ ನೀಡದೆ ಈಗ ನ್ಯಾಯ ಸಿಗಬೇಕಿತ್ತು ಎಂದು ಹೇಳುವುದು ಎಂತಹ ಕಪಟ ನಾಟಕ?

ಉಮರ್ ಖಾಲಿದ್ ಮಾತ್ರವಲ್ಲ ಇನ್ನೂ ಅದೆಷ್ಟೋ ಜನರು ವಿಚಾರಣೆಯೂ ಇಲ್ಲದೆ, ಜಾಮೀನೂ ಸಿಗದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರ ಬಗ್ಗೆ ತಮ್ಮ ಅಧಿಕಾರಾವಧಿಯಲ್ಲಿ ‘ತಾರೀಕ್ ಪೇ ತಾರೀಕ್’ ಕೊಡುತ್ತಾ ಹೋಗುವಾಗ ನೋಡುತ್ತಾ ಕುಳಿತವರು ಇದೇ ನ್ಯಾ ಚಂದ್ರಚೂಡ್.

ನ್ಯಾ. ಡಿ.ವೈ. ಚಂದ್ರಚೂಡ್ ಅವರ ಇಡೀ ವೃತ್ತಿಜೀವನವನ್ನು ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ:

ಅವರಿಗೆ ಭಾಷೆಯ ಮೇಲೆ ಅದ್ಭುತ ಹಿಡಿತವಿದೆ. ಸುಂದರವಾದ ಇಂಗ್ಲಿಷ್ ಪದಬಳಕೆ, ಸಾಹಿತ್ಯಿಕ ಉಲ್ಲೇಖಗಳು ಮತ್ತು ಪ್ರಗತಿಪರ ವಿಚಾರಗಳ ಬಗ್ಗೆ ಮಾತನಾಡುವುದರಲ್ಲಿ ಅವರು ನಿಷ್ಣಾತರು. ಆದರೆ, ಈ ಮಾತಿನ ಅರಮನೆ ಕ್ರಿಯೆಗೆ ಇಳಿದಾಗ ಕೇವಲ ಮರಳಿನ ಕೋಟೆಯಾಗಿ ಬದಲಾಗುತ್ತದೆ.

ಉಮರ್ ಖಾಲಿದ್ ಅವರ ಪ್ರಕರಣವನ್ನೇ ತೆಗೆದುಕೊಳ್ಳೋಣ.

ಐದು ವರ್ಷಗಳ ಕಾಲ ಒಬ್ಬ ವ್ಯಕ್ತಿ ಯಾವುದೇ ವಿಚಾರಣೆ ಇಲ್ಲದೆ ಜೈಲಿನಲ್ಲಿರುವುದು ಸಂವಿಧಾನದ 21ನೇ ವಿಧಿಯ ಜೀವಿಸುವ ಹಕ್ಕಿನ ನೇರ ಉಲ್ಲಂಘನೆ ಎಂದು ಎಲ್ಲರಿಗೂ ತಿಳಿದಿತ್ತು.

ಚಂದ್ರಚೂಡ್ ಅವರು ಸಿಜೆಐ ಆಗಿದ್ದ ಅವಧಿಯಲ್ಲಿ ಈ ಪ್ರಕರಣ ಅವರ ಪೀಠದ ಮುಂದೆ ಬರಲು ಅಥವಾ ಶೀಘ್ರವಾಗಿ ವಿಲೇವಾರಿಯಾಗಲು ಅವರು ಮನಸ್ಸು ಮಾಡಿದ್ದರೆ ಖಂಡಿತ ಸಾಧ್ಯವಿತ್ತು. ಆದರೆ ಅವರು ಮಾಡಿದ್ದೇನು? ವಿಚಾರಣೆಯನ್ನು ಮುಂದೂಡುತ್ತಾ ಹೋದರು. ಇಂದು ಅದೇ ನ್ಯಾ. ಚಂದ್ರಚೂಡ್ ವಿಚಾರಣಾಧೀನ ಕೈದಿಯ ಸಮಯಕ್ಕೆ ಬೆಲೆ ಕಟ್ಟುವವರು ಯಾರು? ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನು ಕೇಳಲು ಇಡೀ ದೇಶಕ್ಕೆ ಹಕ್ಕಿದೆ, ಆದರೆ ಈ ಪ್ರಶ್ನೆ ಕೇಳುವ ಅರ್ಹತೆ ಚಂದ್ರಚೂಡ್ ಅವರಿಗೆ ಮಾತ್ರ ಇಲ್ಲ.

ನ್ಯಾ. ಚಂದ್ರಚೂಡ್ ಅವರ ಈ ಹೇಳಿಕೆಗಳು ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶ ಸ್ಫೋಟಗೊಂಡಿದೆ. ಸಾವಿರಾರು ಜನರು ಅವರನ್ನು ‘ಸಂಪೂರ್ಣ ನಾಚಿಕೆಗೇಡು’ ಎಂದು ಜರೆದಿದ್ದಾರೆ. ಇಷ್ಟು ದಿನ ಅಧಿಕಾರದಲ್ಲಿದ್ದಾಗ ಸುಮ್ಮನಿದ್ದು, ಈಗ ಪ್ರಗತಿಪರ ಬುದ್ಧಿಜೀವಿಗಳ ಗುಂಪಿನಲ್ಲಿ ಸ್ಥಾನ ಪಡೆಯಲು ಇಂತಹ ನಾಟಕವಾಡುತ್ತಿದ್ದಾರೆ ಎಂಬುದು ಜನರ ಆರೋಪ.

ಉಮರ್ ಖಾಲಿದ್ ವಿಚಾರದಲ್ಲಿ ಕೆಳಹಂತದ ನ್ಯಾಯಾಲಯಗಳು ಭಯಪಡುತ್ತಿವೆ ಎಂದು ಅವರು ಹೇಳುತ್ತಾರೆ.

ಆದರೆ ಸುಪ್ರೀಂ ಕೋರ್ಟ್‌ನ ಮುಖ್ಯಸ್ಥರಾಗಿ ಆ ಭಯವನ್ನು ಹೋಗಲಾಡಿಸುವ ಅಥವಾ ಮಾರ್ಗಸೂಚಿಗಳನ್ನು ನೀಡುವ ಜವಾಬ್ದಾರಿ ಅವರದ್ದಾಗಿರಲಿಲ್ಲವೇ ಎಂದು ಜನ ಅವರನ್ನು ಕೇಳುತ್ತಿದ್ದಾರೆ.

ಸರಕಾರಕ್ಕೆ ಮುಜುಗರವಾಗುವ ದೊಡ್ಡ ಪ್ರಕರಣಗಳಲ್ಲಿ ಕೇವಲ ಭಾಷಣದ ಮೂಲಕ ಸಂವಿಧಾನವನ್ನು ರಕ್ಷಿಸುವ ಭ್ರಮೆ ಹುಟ್ಟಿಸಿ, ಅಂತಿಮವಾಗಿ ಸರಕಾರದ ಹಿತಾಸಕ್ತಿಯನ್ನೇ ಕಾಯ್ದುಕೊಂಡವರು ನ್ಯಾ. ಚಂದ್ರಚೂಡ್ ಎಂಬುದು ವಿಮರ್ಶಕರ ವಾದ.

ಉಮರ್ ಖಾಲಿದ್ ಬೆನ್ನಿಗೆ ಚೂರಿ ಹಾಕಿದ್ದು ಇದೇ ನ್ಯಾಯ ವ್ಯವಸ್ಥೆ ಎನ್ನುವುದಾದರೆ, ಆ ವ್ಯವಸ್ಥೆಯ ಚುಕ್ಕಾಣಿ ಹಿಡಿದವರು ಯಾರು?

ಖಾಲಿದ್ ಅವರ ಜಾಮೀನು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಾರಗಳಲ್ಲ, ತಿಂಗಳುಗಳಲ್ಲ, ವರ್ಷಗಟ್ಟಲೆ ನನೆಗುದಿಗೆ ಬಿದ್ದವು.

ಅತಿಸೂಕ್ಷ್ಮ ಪ್ರಕರಣಗಳನ್ನು ಚಂದ್ರಚೂಡ್ ಅವರು ತಮಗೆ ಬೇಕಾದ ಅಥವಾ ಆಳುವವರ ಸಿದ್ಧಾಂತಕ್ಕೆ ಪೂರಕವಾದ ಪೀಠಗಳಿಗೆ ವಹಿಸುತ್ತಿದ್ದರು ಎಂಬ ಆರೋಪ ನ್ಯಾಯಾಂಗದ ವಲಯದಲ್ಲೇ ಕೇಳಿಬಂದಿತ್ತು.

ನ್ಯಾಶನಲ್ ಸೆಕ್ಯುರಿಟಿ ಎಂಬ ಪದವನ್ನು ಬಳಸಿದ ಕೂಡಲೇ ನ್ಯಾಯಾಲಯಗಳು ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದು ಎಂದು ಈಗ ಹೇಳುವ ಚಂದ್ರಚೂಡ್, ಅವರು ಸಿಜೆಐ ಆಗಿದ್ದಾಗ ಯಾಕೆ ಅದೇ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸರಕಾರ ಸಲ್ಲಿಸುತ್ತಿದ್ದ ‘ಸೀಲ್ಡ್ ಕವರ್’ ವರದಿಗಳನ್ನು ಪ್ರಶ್ನಿಸಲು ಧೈರ್ಯ ತೋರಿಸಲಿಲ್ಲ?

ಅವರ ಈ ದ್ವಂದ್ವ ನಿಲುವು ದೇಶದ ಸಾಮಾನ್ಯ ಜನರಿಗೂ ಈಗ ಅರ್ಥವಾಗುತ್ತಿದೆ. ಒಬ್ಬ ಸಿಜೆಐ ಕೆಲಸ ಕೇವಲ ತೀರ್ಪು ಬರೆಯುವುದಲ್ಲ, ನ್ಯಾಯಾಂಗದ ಸ್ವಾಯತ್ತೆಯನ್ನು ಕಾಪಾಡುವುದು.

ನ್ಯಾ. ಚಂದ್ರಚೂಡ್ ಅವರ ಅವಧಿಯಲ್ಲಿ ಈ ದೇಶದಲ್ಲಿ ನ್ಯಾಯಾಂಗದ ವಿಶ್ವಾಸಾರ್ಹತೆ ಕುಸಿದಿದೆ. ಅವರು ಮಾಧ್ಯಮಗಳ ಮುಂದೆ ಹೀರೋ ಆಗಿ ಕಾಣಿಸಿಕೊಳ್ಳಲು ಪ್ರಯತ್ನಿಸಿದರೇ ಹೊರತು, ಒಬ್ಬ ದೃಢ ನಿರ್ಧಾರದ ನ್ಯಾಯಾಧೀಶರಾಗಿ ಕೆಲಸ ಮಾಡಲಿಲ್ಲ.

ಉಮರ್ ಖಾಲಿದ್ ಇಂದು ಜೈಲಿನಲ್ಲಿರುವುದಕ್ಕೆ ವ್ಯವಸ್ಥೆಯಷ್ಟೇ ಚಂದ್ರಚೂಡ್ ಅವರ ‘ನಿಷ್ಕ್ರಿಯತೆ’ ಕೂಡ ಕಾರಣ.

ಅವರು ಅಧಿಕಾರದಲ್ಲಿದ್ದಾಗ ಒಂದು ವಿವೇಕದ ಹೆಜ್ಜೆ ಇಟ್ಟಿದ್ದರೆ ಇಂದು ಉಮರ್ ಖಾಲಿದ್ ಅವರಂತಹ ಸಾವಿರಾರು ವಿಚಾರಣಾಧೀನ ಕೈದಿಗಳಿಗೆ ನ್ಯಾಯ ಸಿಗುತ್ತಿತ್ತು. ಆದರೆ ಅವರು ಆ ಸಮಯವನ್ನು ಕೇವಲ ಪ್ರವಚನ ನೀಡುವುದರಲ್ಲೇ ಕಳೆದರು.

ಡಿ.ವೈ. ಚಂದ್ರಚೂಡ್ ಅವರು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ‘ಟ್ರ್ಯಾಜಿಕ್ ಹೀರೋ’. ಅವರಲ್ಲಿ ಜ್ಞಾನವಿತ್ತು, ಅಧಿಕಾರವಿತ್ತು, ಆದರೆ ಅದನ್ನು ನ್ಯಾಯಕ್ಕಾಗಿ ಬಳಸುವ ಇಚ್ಛಾಶಕ್ತಿ ಇರಲಿಲ್ಲ. ಈಗ ಅವರು ನೀಡುತ್ತಿರುವ ಹೇಳಿಕೆಗಳು ಕೇವಲ ಅವರ ಅಂತರಾತ್ಮವನ್ನು ಶಾಂತಗೊಳಿಸುವ ಅಥವಾ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮನ್ನು ತಾವು ಪ್ರಜಾಪ್ರಭುತ್ವದ ರಕ್ಷಕ ಎಂದು ಬಿಂಬಿಸಿಕೊಳ್ಳುವ ತಂತ್ರಗಳಷ್ಟೇ.

ಇತಿಹಾಸವು ಅವರನ್ನು ಒಬ್ಬ ಚಂದದ ಮಾತುಗಾರನೆಂದು ನೆನಪಿಟ್ಟುಕೊಳ್ಳಬಹುದೇ ಹೊರತು, ಒಬ್ಬ ದಿಟ್ಟ ನ್ಯಾಯಾಧೀಶನೆಂದಲ್ಲ.

ಉಮರ್ ಖಾಲಿದ್ ಹಾಗೂ ಅವರಂತೆಯೇ ವಿಚಾರಣೆಯೂ ಆಗದೆ, ಜಾಮೀನೂ ಸಿಗದೇ ಜೈಲಿನಲ್ಲಿ ವರ್ಷಗಟ್ಟಲೆ ಕಳೆದುಹೋದ ಇನ್ನೂ ಹಲವರ ಹೊಣೆಗಾರಿಕೆಯಲ್ಲಿ ಡಿ.ವೈ. ಚಂದ್ರಚೂಡ್‌ಪಾಲು ಕೂಡ ದೊಡ್ಡದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಿನಯ್ ಕೆ.

contributor

Similar News