×
Ad

ರಾಂಪುರ ಗ್ರಾಮಸ್ಥರಿಗೆ ಕುತ್ತು ತರುತ್ತಿರುವ ಪ್ರಿಯಾ ಪಾಮ್ ಆಯಿಲ್ ಫ್ಯಾಕ್ಟರಿ

ದುರ್ವಾಸನೆಯಿಂದ ರೈತರು ಹಾಗೂ ದಾರಿಹೋಕರು ಕಂಗಾಲು

Update: 2026-01-20 11:10 IST

ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರಿಯಾ ಪಾಮ್ ಅಯಿಲ್ ಕಾರ್ಖಾನೆಯಿಂದ ಹೊರಸೂಸುವ ದುರ್ನಾತ ಬೀರುವ ಹೊಗೆಯಿಂದಾಗಿ ರಾಂಪುರ, ಚಿಕ್ಕಮಾದಿನಾಳ, ಇರಕಲಗಡ್, ಚಿಲಕಮುಖಿ ಕೊಪ್ಪಳ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಈ ಗ್ರಾಮಗಳ ರೈತರು ತಮ್ಮ ಹೊಲದಲ್ಲಿ ಬೆಳೆದಿರುವ ತೋಗರಿ, ಮೆಕ್ಕೆ ಜೋಳ, ಅಣ್ಣಿ, ಸಜ್ಜೆ ಬೆಳೆಗಳ ಮೇಲೆ ಕಪ್ಪಿನ ಕಣಗಳು ಹರಡಿದ್ದು, ಬೆಳೆಹಾನಿಯ ಭೀತಿ ಎದುರಾಗಿದೆ.

ಸಾವಿರಾರು ಜನರು ವಾಸಿಸುವ ರಾಂಪುರ ಗ್ರಾಮದ ಜನರು ಪಾಮ್ ಅಯಿಲ್ ಎಣ್ಣೆಯ ವಾಸನೆಯಿಂದಾಗಿ ನೆಮ್ಮದಿಯಿಂದ ಊಟ ಮಾಡಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರಾರಂಭದಲ್ಲಿ ಗ್ರಾಪಂ ಮೂಲಕ ಕಾರ್ಖಾಯು ಪಡೆದುಕೊಂಡಿದ್ದು, ಪರವಾನಿಗೆಯಲ್ಲಿ ಕೊಟ್ಟಿರುವ ನಿಯಮದ ಪ್ರಕಾರ ಕಾರ್ಖಾನೆಯು ಕಾರ್ಯನಿರ್ವಹಿಸುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಡೆದುಕೊಳ್ಳುತ್ತಿದೆ. ಜೊತೆಗೆ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಯಿಂದ ಹೊರಸೂಸುವ ಹೊಗೆಯಿಂದಾಗಿ ಪರಿಸರ ಮಾಲಿನ್ಯ, ಆರೋಗ್ಯ ಸಮಸ್ಯೆಗಳು ಮತ್ತು ಸ್ಥಳೀಯ ಜನರ ಜೀವನಶೈಲಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಈ ಈಬಗ್ಗೆ ಹಲಾವರು ಬಾರಿ ಅಧಿಕಾರಿಗಳಿಗೆ ಮನವಿ ಕೊಟ್ಟರು ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ರೈತರು ಆರೋಪಿಸಿದ್ದಾರೆ.

ಕಾರ್ಖಾನೆಯು ಹೊರಚೆಲ್ಲುವ ಕಪ್ಪು ಧೂಳಿನಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಬದುಕು ದುಸ್ತರವಾಗಿದೆ. ಧೂಳಿನ ಕಣಗಳು ಬೆಳೆಗಳ ಮೇಲೆ ಕುಳಿತು ಇಳುವರೆ ಕಡಿಮೆಯಾಗಿದೆ. ಕುಡಿಯುವ ನೀರು ಕಲುಷಿತವಾಗಿದೆ ಎಂದು ಗ್ರಾಮಸ್ಥರು ನೋವು ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಪಾಮ್ ಅಯಿಲ್ ಕಾರ್ಖಾನೆಯಿಂದ ಹೊರಬರುತ್ತಿರುವ ಧೂಳು ಹೊಲದಲ್ಲಿ ಬೆಳೆಗಳ ಮೇಲೆ ಹರಡುತ್ತಿದೆ. ಅಧಿಕಾರಿಗಳಿಗೆ ಹಲುವು ಬಾರಿ ಮನವಿ ಮಾಡಿಕೊಂಡರು ಪ್ರಯೋಜನೆ ಆಗುತ್ತಿಲ್ಲ ಕಾರ್ಖಾನೆ ಬೇರೆ ಕಡೆ ಸ್ಥಳಾಂತರ ಮಾಡಬೇಕು.

-ಹನುಮೇಶ ಉಡೇಜಾಲಿ, ರೈತ

ಈ ಕಾರ್ಖಾನೆಯನ್ನು ಬಂದ್ ಮಾಡಬೇಕು. ಕರ್ನಾಟಕ ಪಂಚಾಯತ್ ಕಾಯ್ದೆ ಕಲಂ 56ರ ಪ್ರಕಾರ ಕ್ರಮ ತಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಈ ಕಾರ್ಖಾನೆಯ ವಿರುದ್ಧ ಅಧಿಕಾರಿಗಳು ಕ್ರಮವನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಈ ಕಾರ್ಖಾನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕರೆ ಸ್ವೀಕರಿಸದ ಪಿಡಿಒ :

ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರಿಯಾ ಪಾಮ್ ಅಯಿಲ್ ಕಾರ್ಖಾನೆಯ ಕುರಿತು ಮಾಹಿತಿ ಕೇಳಲು ಪಿಡಿಒ ನಾಗೇಶವರನ್ನು ದೂರವಾಣಿಯ ಮೂಲಕ ವಾರ್ತಾಭಾರತಿ ವರದಿಗಾರ ಕರೆ ಮಾಡಿದರೆ ಅವರು ಕರೆಯನ್ನು ಸ್ವೀಕರಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಡಿ ಅಖೀಲ್ ಉಡೇವು

contributor

Contributor - ಹೊನ್ನೂರ ಹುಸೇನ ಬೇಲ್ದಾರ್

contributor

Similar News