×
Ad

ಅರಣ್ಯರೋದನವಾದ ಮಲೆಮನೆ, ಮಧುಗುಂಡಿ ಅತಿವೃಷ್ಟಿ ಸಂತ್ರಸ್ತರ ಬೇಡಿಕೆ

ಆರು ವರ್ಷ ಕಳೆದರೂ ಸಿಗದ ಪುನರ್ವಸತಿ

Update: 2025-08-11 08:14 IST

ಚಿಕ್ಕಮಗಳೂರು, ಆ.10: 2019ರ ಆಗಸ್ಟ್ 9ರಂದು ಸುರಿದಿದ್ದ ಭಾರೀ ಮಳೆಗೆ ಗುಡ್ಡ ಕುಸಿದು ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮಸ್ಥರು ಜಮೀನು ಕಳೆದುಕೊಂಡಿದ್ದು, 6 ವರ್ಷ ಕಳೆದರೂ ಪುನರ್ವಸತಿ ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಮೂಡಿಗೆರೆ ತಾಲೂಕಿನ ಬಾಳೂರು, ಕಳಸ, ಬಣಕಲ್ ಹೋಬಳಿಗಳಲ್ಲಿ ಸುರಿದಿದ್ದ ಅಂದಿನ ಮಹಾಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಮನೆಯ ಮೇಲಿನಿಂದ ಕೆಸರಿನ ಹೊಳೆಯಂತೆ ಹರಿದು ಬಂದ ಗುಡ್ಡದ ಮಣ್ಣು ಇಲ್ಲಿನ ಹತ್ತಾರು ಮನೆಗಳನ್ನು ತನ್ನಡಿಯಲ್ಲಿ ಹುದುಗಿಸಿಕೊಂಡಿತ್ತು. ರಾತ್ರಿ ವೇಳೆ ಕೇವಲ ಮೂರ್ನಾಲ್ಕು ಗಂಟೆಗಳ ಕಾಲ ಸುರಿದ ಮಹಾಮಳೆ ಮಲೆನಾಡಿನ ಒಂದು ಭಾಗವನ್ನು ಸಂಪೂರ್ಣ ಅಯೋಮಯವನ್ನಾಗಿಸಿತ್ತು.

ಅಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಮತ್ತು ಗುಡ್ಡ ಕುಸಿತಕ್ಕೆ 10ಮಂದಿ ಮೃತಪಟ್ಟಿದ್ದರು. ಸಾವಿರಾರು ಜನರ ಬದುಕು ಅತಂತ್ರವಾಗಿತ್ತು. ಬಾಳೂರು ಹೋಬಳಿಯ ಮಲೆಮನೆ, ಮಧುಗುಂಡಿ, ದುರ್ಗದಹಳ್ಳಿ, ಕಳಸ ತಾಲೂಕಿನ ಅನೇಕ ಗ್ರಾಮಗಳು ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದವು. ಮಹಾಮಳೆ ಹಾಗೂ ಗುಡ್ಡಕುಸಿತದಿಂದ ಮಲೆನಾಡಿನ ಬಹುತೇಕ ರಸ್ತೆಗಳು ಅಸ್ತವ್ಯಸ್ತವಾಗಿದ್ದವು.

ಮಲೆಮನೆ ಗ್ರಾಮದ ಹಿನ್ನೆಲೆಯಲ್ಲಿ ಇದ್ದ ಗುಡ್ಡವೊಂದು ಮಹಾಮಳೆಗೆ ಕುಸಿದು ಜಾರಿ ಮರಗಿಡ ಕಲ್ಲುಬಂಡೆಗಳ ಸಮೇತ ಗ್ರಾಮವನ್ನು ಬಹುತೇಕ ನಿರ್ನಾಮ ಮಾಡಿತ್ತು. ಗ್ರಾಮಕ್ಕೆ ಹೋಗುವಾಗ ಸಿಗುವ ಚಿಕ್ಕ ಹಳ್ಳವೊಂದು ರೌದ್ರಾವತಾರ ತಳೆದು ಹರಿಯತೊಡಗಿತ್ತು. ಬಣಕಲ್ ಗ್ರಾಮಕ್ಕೆ ಹೋಗಿದ್ದ ಗ್ರಾಮಸ್ಥರು ಮರಳಿ ತಮ್ಮ ಮಲೆಮನೆ ಊರಿಗೆ ತಲುಪಲು ಸಾಧ್ಯವಾಗಿರಲಿಲ್ಲ. ಅವರೆಲ್ಲ ಕೊಟ್ಟಿಗೆಹಾರದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದರು. ಅಲ್ಲಿಂದ ಮುಂದಕ್ಕೆ ರಸ್ತೆ ಸಂಚಾರವೇ ಅಸಾಧ್ಯವಾಗಿತ್ತು.

ಆಪದ್ಬಾಂಧವ ಯೋಧರ ಪಡೆ:

ಮಲೆನಾಡು ಭಾಗದಲ್ಲಿ ಭೂಕುಸಿತದಿಂದ ಅಪಾಯಕ್ಕೆ ಸಿಲುಕಿದ್ದ ಜನರನ್ನು ಹೊರತರುವಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ಯೋಧರು ನಿರ್ಣಾಯಕ ಪಾತ್ರ ವಹಿಸಿದ್ದರು. ಆಲೇಕಾನ್ ಹೊರಟ್ಟಿ, ಮಧುಗುಂಡಿ, ದುರ್ಗದಹಳ್ಳಿ ಸುತ್ತಮುತ್ತ ಜನರು ಗುಡ್ಡ ಮತ್ತು ರಸ್ತೆಗಳ ಕುಸಿತದಿಂದ ಹೊರಪ್ರಪಂಚದ ಸಂಪರ್ಕ ಕಳೆದುಕೊಂಡಿದ್ದರು. ಮನೆಗಳು ಕುಸಿಯುತ್ತಿದ್ದರಿಂದ ಎಲ್ಲೆಂದರಲ್ಲಿ ಆಶ್ರಯ ಪಡೆದಿದ್ದರು. ದುರ್ಗಮವಾದ ಹಾದಿಯಲ್ಲಿ ಅವರನ್ನು ಹೊರತರುವುದು ಒಂದು ಹರಸಾಹಸದ ಕೆಲಸವಾಗಿತ್ತು. ಅಂತಹ ಸ್ಥಿತಿಯಲ್ಲಿ ನಮ್ಮ ಯೋಧರು ಸಾಹಸ ಮೆರೆದು ಜನರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಯಶಸ್ವಿಯಾಗಿದ್ದರು.

ನೆರವಿಗೆ ಬಂಧ ಸಂಘ ಸಂಸ್ಥೆಗಳು:

ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗೊತ್ತಾದ ತಕ್ಷಣ ಎಲ್ಲ ಸಂಘಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಭೂತಪೂರ್ವವಾಗಿ ಸ್ಪಂದಿಸಿ ಜನರನ್ನು ರಕ್ಷಿಸುವಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಹರಿದು ಬಂದ ನೆರವಿನ ಮಹಾಪೂರ:

ಸರಕಾರ ಅನೇಕ ಕಡೆ ನಿರಾಶ್ರಿತರ ಶಿಬಿರಗಳನ್ನು ಮಾಡಿ ಜನರಿಗೆ ತಾತ್ಕಾಲಿಕ ನೆಲೆಯನ್ನು ಒದಗಿಸಿತ್ತು. ಮಲೆನಾಡಿನ ಜನರ ಸಂಕಷ್ಟವನ್ನು ಅರಿತು ನಾಡಿನ ಮೂಲೆ ಮೂಲೆಯಿಂದ ಜನ ಸ್ಪಂದಿಸಿ ಅಪಾರ ಪ್ರಮಾಣದಲ್ಲಿ ಆಹಾರಧಾನ್ಯ, ದಿನಸಿ, ಬಟ್ಟೆ ಮುಂತಾದ ಮೂಲ ಅವಶ್ಯಕ ಸಾಮಗ್ರಿ ಗಳನ್ನು ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಈ ಭಾಗಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದರು.

ಮರೀಚಿಕೆಯಾಗಿಯೇ ಉಳಿದಿರುವ ಪುನರ್ವಸತಿ:

ಮಹಾಮಳೆಯಲ್ಲಿ ಮನೆ ಜಮೀನು ಕಳೆದುಕೊಂಡವರಲ್ಲಿ ಅನೇಕರಿಗೆ ಇನ್ನೂ ಪುನರ್ವಸತಿ ನೀಡಲು ಸರಕಾರಗಳಿಂದ ಸಾಧ್ಯವಾಗಿಲ್ಲ. ಮಲೆಮನೆ, ಮಧುಗುಂಡಿ ಗ್ರಾಮಗಳ ಜನರು ಕಳೆದ ಆರು ವರ್ಷಗಳಿಂದ ಪರ್ಯಾಯ ಭೂಮಿಗಾಗಿ ಅಲೆದಾಡುತ್ತಲೇ ಇದ್ದಾರೆ. 4 ವರ್ಷಗಳ ಹಿಂದೆ ಮಲೆಮನೆ ಸಂತ್ರಸ್ತರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರವನ್ನೂ ಬರೆದಿದ್ದರು.

ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಮೂಡಿಗೆರೆ ತಾಲೂಕಿನ ನಾಗರಿಕರು ಆಗ್ರಹಿಸುತ್ತಿದ್ದಾರೆ.

Tags:    

Writer - ಕೆ.ಎಲ್. ಶಿವು

contributor

Editor - ಕೆ.ಎಲ್. ಶಿವು

contributor

Byline - ಕೆ.ಎಲ್. ಶಿವು

contributor

Similar News