×
Ad

ಮಾದಕ ವಸ್ತು ಮುಕ್ತ ಯುವಕರು ವಿಕಸಿತ ಭಾರತದ ಚಾಲಕ ಶಕ್ತಿ

Update: 2025-07-19 14:26 IST

ಇಂದು, ಭಾರತವು ವಿಶ್ವದಲ್ಲೇ ಅತಿ ಹೆಚ್ಚಿನ ಯುವ ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಮತ್ತು ಒಂದು ದೇಶ ಪ್ರಗತಿ ಸಾಧಿಸಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ, ಅದರ ಯುವಜನರನ್ನು ಸಬಲೀಕರಣ ಗೊಳಿಸಬೇಕು ಎಂದು ಹೇಳಲಾಗುತ್ತದೆ. ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2047ರ ವೇಳೆಗೆ ಭಾರತವು ವಿಕಸಿತ ಭಾರತವಾಗಿ ರೂಪುಗೊಳ್ಳಬೇಕಾದರೆ, ನಮ್ಮ ಯುವ ಶಕ್ತಿಯನ್ನು ಸಬಲೀಕರಣಗೊಳಿಸಬೇಕು ಮತ್ತು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಬೇಕು ಎಂದು ನಿರಂತರವಾಗಿ ಉಚ್ಚರಿಸುತ್ತಾ ಬಂದಿದ್ದಾರೆ. ಅವರ ಶಕ್ತಿ, ನಾವೀನ್ಯತೆ ಮತ್ತು ದೃಢ ಸಂಕಲ್ಪ ಮುಂಬರುವ ದಶಕಗಳಲ್ಲಿ ದೇಶದ ಬೆಳವಣಿಗೆಯ ಕಥೆಯನ್ನು ರೂಪಿಸಲಿದೆ.

ಆದರೂ ಇಂದು ದೇಶವು ಎದುರಿಸುತ್ತಿರುವ ಅತ್ಯಂತ ಪ್ರಮುಖ ಸವಾಲುಗಳಲ್ಲಿ ಒಂದೆಂದರೆ ನಮ್ಮ ಯುವಜನರನ್ನು ಮಾದಕ ವ್ಯಸನದ ಹಿಡಿತದಿಂದ ದೂರವಿಡುವುದು. ಹೆಚ್ಚಿನ ಸಂಖೈಯಲ್ಲಿ ಯುವಕರು ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಮಾತ್ರವಲ್ಲದೆ ಅವರ ಭವಿಷ್ಯ ಮತ್ತು ದೇಶದ ಶಕ್ತಿಯ ಮೇಲೂ ಪರಿಣಾಮ ಬೀರುತ್ತಿದೆ. ಒಂದು ಅಧ್ಯಯನದ ಪ್ರಕಾರ, 10 ರಿಂದ 24 ವರ್ಷ ವಯಸ್ಸಿನ ಪ್ರತಿ ಐದು ಭಾರತೀಯರಲ್ಲಿ ಒಬ್ಬರು ತಮ್ಮ ಜೀವನದ ಯಾವುದೋ ಒಂದು ಹಂತದಲ್ಲಿ ಮಾದಕ ವಸ್ತುಗಳನ್ನು ಸೇವಿಸಿದ್ದಾರೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)ಯ ವರದಿಯ ಪ್ರಕಾರ, ಭಾರತದಲ್ಲಿ 8.5 ಲಕ್ಷಕ್ಕೂ ಹೆಚ್ಚು ಮಕ್ಕಳು ಮಾದಕ ವ್ಯಸನದೊಂದಿಗೆ ಹೋರಾಡುತ್ತಿದ್ದಾರೆ. ಈ ಅಂಕಿಅಂಶಗಳು ತೀವ್ರ ಕಳವಳಕಾರಿಯಾಗಿದ್ದು, ತುರ್ತು ಮತ್ತು ಸಾಮೂಹಿಕ ಕ್ರಮಕ್ಕೆ ಕರೆ ನೀಡುತ್ತವೆ.

ಕಳೆದ 11 ವರ್ಷಗಳಲ್ಲಿ, ಮೋದಿ ಸರಕಾರ ಈ ಸಮಸ್ಯೆಯನ್ನು ಎದುರಿಸಲು ಹಲವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. 2020ರಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನಶಾ ಮುಕ್ತ ಭಾರತ ಅಭಿಯಾನ ಅನ್ನು ಪ್ರಾರಂಭಿಸಿತ್ತು. ತಡೆಗಟ್ಟುವಿಕೆ ಮತ್ತು ಪುನರ್ವಸತಿಯನ್ನು ಬೆಂಬಲಿಸಲು, ಸರಕಾರವು ವ್ಯಸನಿಗಳಿಗಾಗಿ ಸಮಗ್ರ

ಪುನರ್ವಸತಿ ಕೇಂದ್ರಗಳನ್ನು (IRCAs) ಮತ್ತು ’ಔಟ್ರೀಚ್-ಕಮ್-ಡ್ರಾಪ್-ಇನ್ ಸೆಂಟರ್’ ಗಳನ್ನು (ODICs) ಸ್ಥಾಪಿಸಿದೆ. ಶಾಲೆಗಳು ಮತ್ತು ಕಾಲೇಜುಗಳಲ್ಲಿ ಜಾಗೃತಿ ಅಭಿಯಾನಗಳನ್ನು ತೀವ್ರಗೊಳಿಸಲಾಗಿದ್ದು, ಮಾದಕ ವಸ್ತು ನಿಯಂತ್ರಣ ಬ್ಯೂರೋ (NCB) ಮಾದಕ ವಸ್ತು ಮಾಫಿಯಾಗಳ ವಿರುದ್ಧ ಬಲವಾದ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಜೊತೆಗೆ, ದೇಶಾದ್ಯಂತ ಇರುವ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು ಪ್ರಮುಖ ಸಲಹೆ ಮತ್ತು ಬೆಂಬಲವನ್ನು ನೀಡುತ್ತಿವೆ. ಈ ರಾಷ್ಟ್ರೀಯ ಪ್ರಯತ್ನಗಳಿಗೆ ರಾಜ್ಯ ಸರಕಾರಗಳು,

ಸರಕಾರೇತರ ಸಂಸ್ಥೆಗಳು(ಎನ್‌ಜಿಒ) ಮತ್ತು ಸ್ಥಳೀಯ ಸಮುದಾಯಗಳು ನಡೆಸುತ್ತಿರುವ ತಳಮಟ್ಟದ ಅಭಿಯಾನಗಳು ಪೂರಕವಾಗಿವೆ. ಈ ಮಿಷನ್ ಅನ್ನು ಮುಂದುವರಿಸುತ್ತಾ, ‘ಮೈ ಭಾರತ್’ ಒಂದು ಮಹತ್ವದ ಉಪಕ್ರಮವನ್ನು ಕೈಗೊಂಡಿದೆ. ಅದೇ ಯುವ ಆಧ್ಯಾತ್ಮಿಕ ಶೃಂಗಸಭೆ. ಇದು ಬಾಬಾ ವಿಶ್ವನಾಥರ ಪವಿತ್ರ ಭೂಮಿಯಾದ ಕಾಶಿಯ ಪುಣ್ಯ ಘಟ್ಟಗಳ ಮೇಲೆ ಜುಲೈ 19 ಮತ್ತು 20 ರಂದು ನಡೆಯಲಿದೆ. ವಿಕಸಿತ ಭಾರತಕ್ಕಾಗಿ ಮಾದಕವ್ಯಸನ-ಮುಕ್ತ ಯುವಕರು ಎಂಬ ವಿಷಯದ ಮೇಲೆ ಆಯೋಜಿಸಲಾಗಿರುವ ಈ ಶೃಂಗಸಭೆಯು ಮಾದಕ ವ್ಯಸನದ ವಿರುದ್ಧ ಯುವಕರು ನೇತೃತ್ವ ವಹಿಸಲಿರುವ ರಾಷ್ಟ್ರೀಯ ಆಂದೋಲನಕ್ಕೆ ಅಡಿಪಾಯ ಹಾಕುವ ಗುರಿಯನ್ನು ಹೊಂದಿದೆ.

ಈ ಶೃಂಗಸಭೆಯು ಭಾರತದಾದ್ಯಂತ 100 ಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳಿಂದ ಯುವ ಪ್ರತಿನಿಧಿಗಳನ್ನು ಒಟ್ಟುಗೂಡಿಸಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಮಾದಕ ವಸ್ತು ನಿಯಂತ್ರಣ ಬ್ಯೂರೋ (NCB) ಮತ್ತು ಇತರ ಪ್ರಮುಖ ಸರಕಾರಿ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಲಿವೆ. ಈ ವಿಶಿಷ್ಟ ವೇದಿಕೆಯು ಯುವಜನರಿಗೆ ತಮ್ಮ ಧ್ವನಿ, ದೃಷ್ಟಿಕೋನ ಮತ್ತು ಪರಿಹಾರಗಳನ್ನು ನೀತಿ ನಿರೂಪಕರೊಂದಿಗೆ ನೇರವಾಗಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಿದೆ, ಇದು ರಾಷ್ಟ್ರೀಯ ಕಾರ್ಯತಂತ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡಲಿದೆ.

ಶೃಂಗಸಭೆಯಲ್ಲಿ ಮಾದಕ ವ್ಯಸನದ ಸ್ವರೂಪ ಮತ್ತು ಮಾದರಿಗಳು, ಅದರ ಜನಸಂಖ್ಯಾ ಪರಿಣಾಮ, ಅಂತರ್‌ರಾಷ್ಟ್ರೀಯ ಆಯಾಮಗಳು, ಹಾಗೂ ಸರಕಾರ, ನಾಗರಿಕ ಸಮಾಜ ಮತ್ತು ಯುವ ಸ್ವಯಂಸೇವಕರ ಪಾತ್ರಗಳ ಕುರಿತು ಗೋಷ್ಠಿಗಳು ನಡೆಯಲಿವೆ. ವ್ಯಸನವನ್ನು ಯಶಸ್ವಿಯಾಗಿ ಜಯಿಸಿದ ಯುವಕರ ವೈಯಕ್ತಿಕ ಕಥೆಗಳನ್ನು ಸಹ ಇತರರಿಗೆ ಸ್ಫೂರ್ತಿ ನೀಡಲು ಹಂಚಿಕೊಳ್ಳಲಾಗುವುದು.

ಶೃಂಗಸಭೆಯು ಕಾಶಿ ಘೋಷಣೆಯನ್ನು ಬಿಡುಗಡೆ ಮಾಡುವುದರೊಂದಿಗೆ ಮುಕ್ತಾಯಗೊಳ್ಳಲಿದೆ. ಇದು ವ್ಯಸನಮುಕ್ತ ಭಾರತ ಅಭಿಯಾನಕ್ಕಾಗಿ ಐದು ವರ್ಷಗಳ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಲಿದೆ. ಯುವಕರು ಮಾದಕ ವ್ಯಸನಕ್ಕೆ ಬೀಳದಂತೆ ತಡೆಯುವ ಕಾರ್ಯತಂತ್ರಗಳು, ಈಗಾಗಲೇ ಬಾಧಿತರಾದವರಿಗೆ ಬೆಂಬಲ ವ್ಯವಸ್ಥೆಗಳು ಮತ್ತು ವ್ಯಸನದ ವಿರುದ್ಧ ಬಲಿಷ್ಠ ಚಳವಳಿಯನ್ನು ರೂಪಿಸಲು ದೇಶಾದ್ಯಂತ ಜಾಗೃತಿ ಅಭಿಯಾನಗಳನ್ನು ಚುರುಕುಗೊಳಿಸುವ ಅಂಶಗಳನ್ನು ಈ ಘೋಷಣೆ ಒಳಗೊಂಡಿರುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯಾವಾಗಲೂ ‘ಅಮೃತ್ ಪೀಢಿ’ಯ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಭಾರತವನ್ನು ಕಲ್ಪಿಸಿದ್ದಾರೆ. ಆ ದೃಷ್ಟಿಕೋನಕ್ಕೆ ಅನುಗುಣವಾಗಿ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಈ ಉಪಕ್ರಮವು ಯುವಜನತೆಯ ಜೀವನವನ್ನು ವ್ಯಸನದಿಂದ ರಕ್ಷಿಸುವುದಷ್ಟೇ ಅಲ್ಲದೆ, ರಾಷ್ಟ್ರ ನಿರ್ಮಾಣದ ಪ್ರಯಾಣದಲ್ಲಿ ಅವರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಬಲ ಹೆಜ್ಜೆಯಾಗಿದೆ.

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಜವಾಬ್ದಾರಿ ಅದರ ಯುವಜನರ ಮೇಲಿದೆ. ಯುವ ಆಧ್ಯಾತ್ಮಿಕ ಶೃಂಗಸಭೆ ಕೇವಲ ಒಂದು ಕಾರ್ಯಕ್ರಮವಲ್ಲ-ಇದು ಹೊಸ ರಾಷ್ಟ್ರೀಯ ಜಾಗೃತಿಯ ಆರಂಭವನ್ನು ಸೂಚಿಸುತ್ತದೆ. ಇದು ಯುವ ನಾಗರಿಕರಲ್ಲಿ ಶಿಸ್ತು, ನೈತಿಕ ಸಮಗ್ರತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ಬೆಳಗಿಸಿ, ಅವರ ಜೀವನವನ್ನು ಸಮೃದ್ಧಗೊಳಿಸುತ್ತದೆ ಮತ್ತು ದೇಶದ ಭವಿಷ್ಯವನ್ನು ಸದೃಢಗೊಳಿಸುತ್ತದೆ.

ಕಾಶಿಯ ಪವಿತ್ರ ಮಣ್ಣಿನಿಂದ ಹೊರಹೊಮ್ಮುವ ಕರೆ, ಪ್ರತಿ ಯುವ ಹೃದಯದಲ್ಲಿ ಜಾಗೃತಿ, ದೇಶಭಕ್ತಿ ಮತ್ತು ಉದ್ದೇಶದ ಜ್ವಾಲೆಯನ್ನು ಹೊತ್ತಿಸುತ್ತದೆ. ಈ ಸಾಮೂಹಿಕ ಸಂಕಲ್ಪವು ಬಲಿಷ್ಠ, ಸ್ವಾವಲಂಬಿ ಮತ್ತು ೨೦೪೭ರ ವಿಕಸಿತ ಭಾರತಕ್ಕೆ ಮೂಲಾಧಾರವಾಗಿ ಕಾರ್ಯನಿರ್ವಹಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಮನ್ಸುಖ್ ಮಾಂಡವಿಯಾ

contributor

Similar News