×
Ad

ಪಶ್ಚಿಮ ಘಟ್ಟದಲ್ಲಿ ಕಪ್ಪೆಗಳ ಸಂತಾನ ಅಭಿವೃದ್ಧಿಗೆ ತೊಡಕಾದ ಹವಾಮಾನ ವೈಪರೀತ್ಯ

Update: 2025-06-11 07:27 IST

ಉಡುಪಿ : ಈ ಬಾರಿ ಅಬ್ಬರದ ಮುಂಗಾರುಪೂರ್ವ ಮಳೆ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದೆ ಬಿಸಿಲಿನ ವಾತಾವರಣ ಕಂಡು ಬಂದಿದೆ. ಇದು ಪರಿಸರದ ಮೇಲೆ ನೇರ ಹಾಗೂ ಪರೋಕ್ಷವಾಗಿ ಸಾಕಷ್ಟು ಪರಿಣಾಮ ಬೀರುತ್ತಿದೆ. ಅದರಲ್ಲೂ ಪಶ್ಚಿಮ ಘಟ್ಟಗಳಲ್ಲಿನ ಹಲವು ಪ್ರಭೇದದ ಕಪ್ಪೆಗಳಿಗೆ ಈ ವಾತಾವರಣ ಮಾರಕವಾಗಿ ಪರಿಣಮಿಸಿದೆ. ನಿರಂತರವಾಗಿ ಮಳೆ ಸುರಿಯದ ಕಾರಣ ತೇವಾಂಶ ವಾತಾವರಣದ ಕೊರತೆಯು ಕಪ್ಪೆಗಳ ಸಂತಾನಾಭಿವೃದ್ಧಿಗೆ ತೊಡಕಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಪಶ್ಚಿಮಘಟ್ಟದಲ್ಲಿ ವಿವಿಧ ಪ್ರಭೇದದ ಕಪ್ಪೆಗಳ ಚಟುವಟಿಕೆಗಳು ಆರಂಭವಾಗುತ್ತವೆ. ಗಂಡು ಕಪ್ಪೆಗಳು ಸಂಗಾತಿಯನ್ನು ‘ಕರೆಯುವ’ ಶಬ್ದಗಳ ವಿವಿಧ ಆವರ್ತನ ಎಲ್ಲೆಡೆ ಕೇಳಿಬರುತ್ತವೆ. ಈ ಶಬ್ದ ಹೆಣ್ಣು ಕಪ್ಪೆಯನ್ನು ಆಕರ್ಷಿಸುವುದಲ್ಲದೆ, ತಾನು ಜೋಡಿಯಾಗಲು ಸಿದ್ಧನಿದ್ದೇನೆ ಎಂಬ ಸಂದೇಶವನ್ನೂ ಸಾರುತ್ತದೆ. ಅದರಂತೆ ಕಪ್ಪೆಗಳು ಸೇರಿ ಸಂತಾನಾಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತವೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಕಪ್ಪೆಗಳ ಸಂತನಾಭಿವೃದ್ಧಿ ಪ್ರಕ್ರಿಯೆಗಳು ನಡೆಯುತ್ತವೆ. ಮೊಟ್ಟೆಗಳು ಇಟ್ಟ ಬಳಿಕ ಅವುಗಳಿಗೆ ತೇವಾಂಶದ ವಾತಾವರಣ ಅಗತ್ಯವಾಗಿರುತ್ತದೆ. ಅದಕ್ಕೆ ನಿರಂತರ ಮಳೆ ಬರುತ್ತಿರಬೇಕು. ಇಲ್ಲದಿದ್ದರೆ ಆ ಮೊಟ್ಟೆಗಳು ಒಣಗಿ ಎಲ್ಲವೂ ನಾಶವಾಗಿ ಹೋಗುವ ಸಾಧ್ಯತೆ ಇರುತ್ತದೆ. ಅಂತಹ ಪರಿಸ್ಥಿತಿ ಇದೀಗ ಪಶ್ಚಿಮ ಘಟ್ಟಗಳಲ್ಲಿ ಕಂಡುಬಂದಿದೆ.

ಮೇ ಕೊನೆಯ ವಾರದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಕಪ್ಪೆಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿತ್ತು. ನಂತರ ಹೆಣ್ಣು ಕಪ್ಪೆ ಎಲೆ, ಕಲ್ಲು, ನೀರುಗಳಲ್ಲಿ ಮೊಟ್ಟೆಗಳನ್ನು ಇಟ್ಟಿದ್ದವು. ಆದರೆ ಜೂನ್ ಮೊದಲ ವಾರದಲ್ಲಿ ಮಳೆ ಕೈಕೊಟ್ಟಿತು. ಇದರಿಂದ ತೇವಾಂಶದ ವಾತಾವರಣ ಇಲ್ಲದೆ ಇದೀಗ ಮೊಟ್ಟೆಗಳು ಒಣಗುವ ಸ್ಥಿತಿಗೆ ಬಂದಿವೆ.

ಈ ಆತಂಕರಾಗಿ ಅಂಶಗಳನ್ನು ಕಾರ್ಕಳ ತಾಲೂಕಿನ ಮಾಳ ಮಣ್ಣಪಾಪು ಮನೆ ಪರಿಸರದಲ್ಲಿ ಜೂ.6ರಿಂದ 8ರವರೆಗೆ ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ. ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಫ್ರಾಗ್ ವಾಕ್‌ನಲ್ಲಿ ಅಧ್ಯಯನ ತಂಡ ಕಂಡು ಕೊಂಡಿದೆ.

ಸಂಖ್ಯೆ ಇಳಿಮುಖ ಸಾಧ್ಯತೆ: ಫ್ರಾಗ್ ವಾಕ್‌ನಲ್ಲಿ ಅಧ್ಯಯನ ತಂಡವು ಮಾಳ ಪರಿಸರದ ಸುಮಾರು ಎರಡು ಕಿ.ಮೀ. ವ್ಯಾಪ್ತಿಯ ದಟ್ಟ ಅರಣ್ಯದಲ್ಲಿ ಸುತ್ತಾಡಿ ಹಲವು ಕಪ್ಪೆಗಳ ಮಾಹಿತಿ ಯನ್ನು ಕಳೆಹಾಕಿತು.

ಒಟ್ಟು ಮೂರು ದಿನಗಳಲ್ಲಿ ಈ ತಂಡಕ್ಕೆ ನೈಟ್‌ಫ್ರಾಗ್, ಕೆಂಪುಹೊಳೆ ನೈಟ್ ಫ್ರಾಗ್, ವೆಸ್ಚರ್ನ್ ಟ್ರೀ ಫ್ರಾಗ್, ಮಲ ಬಾರ್ ಗ್ಲಿಡ್ಡಿಂಗ್ ಫ್ರಾಗ್, ವಯನಾಡ್ ಬುಶ್ ಫ್ರಾಗ್, ಕ್ರಿಕೆಟ್ ಫ್ರಾಗ್, ಕೊಟ್ಟಿಗೆಹಾರ ಡ್ಯಾನ್ಸಿಂಗ್ ಫ್ರಾಗ್, ಇಂದಿರಾನ ಕಪ್ಪೆ (ಲೀಫಿಂಗ್ ಫ್ರಾಗ್) ಪ್ರಭೇದಗಳು ಪತ್ತೆಯಾದವು.

‘ಮಲಬಾರ್ ಗ್ಲಿಡ್ಡಿಂಗ್ ಫ್ರಾಗ್ ಗಂಡು, ಹೆಣ್ಣು ಒಟ್ಟಿಗೆ ಇರುವುದು ಕಂಡುಬಂತು. ಇದರ ಮೊಟ್ಟೆ ಮರಿಯಾಗಿದ್ದು, ಈ ಗೊದ್ದು ಮೊಟ್ಟೆಗಳು ಮಳೆ ಇಲ್ಲದೆ ಎಲ್ಲಿ ಹೋಗುವುದು ಎಂಬುದು ಗೊತ್ತಾಗದೆ ಎಲ್ಲ ಒಟ್ಟಿಗೆ ಒಂದೇ ಜಾಗದಲ್ಲಿ ಸೇರಿ ಕೊಂಡಿದೆ. ಮಳೆಯಾಗದೆ ಇರುವುದರಿಂದ ಅದು ಜಾರಿ ನೀರಿಗೆ ಸೇರಲು ಆಗುತ್ತಿಲ್ಲ’ ಎಂದು ಡಾ.ಗುರುರಾಜ್ ಕೆ.ವಿ. ತಿಳಿಸಿದರು.

ಈ ಬಾರಿ ಬೇಗ ಮಳೆ ಆಗಿರುವುದರಿಂದ ಕಪ್ಪೆಗಳು ಮಳೆಗಾಲ ಪ್ರಾರಂಭವಾಯಿತು ಎಂದು ಭಾವಿಸಿ ಮೊಟ್ಟೆ ಇಡಲು ಆರಂಭಿ ಸಿವೆ. ಈ ಮಧ್ಯೆ ಮಳೆ ನಿಂತು ಹೋದ ಪರಿಣಾಮ ವಾತಾವರಣದಲ್ಲಿ ತೇವಾಂಶ ಇಲ್ಲದೆ ಮೊಟ್ಟೆಗಳು ಒಣಗಲು ಆರಂಭವಾಗಿದೆ. ಹಾಗಾಗಿ ಆ ಕಪ್ಪೆಗಳು ಮತ್ತೆ ಈ ಋತುವಿನಲ್ಲಿ ಮೊಟ್ಟೆ ಇಡುತ್ತ ದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಕೆಲವು ಕಪ್ಪೆಗಳು ವರ್ಷಕ್ಕ್ಕೊಮೆ ಮಾತ್ರ ಮೊಟ್ಟೆ ಇಡುತ್ತವೆ. ಮೊಟ್ಟೆ ಒಣಗಲು ಬಿಸಿಲು ಬೇಕೆಂದಿಲ್ಲ, ನೀರು, ತೇವಾಂಶ ಇಲ್ಲದೆಯೂ ಒಣಗುತ್ತದೆ. ಪ್ರಸಕ್ತ ವಾತಾವರಣದಿಂದ ಪಶ್ಚಿಮಘಟ್ಟ ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಕಪ್ಪೆಗಳ ಮೇಲೂ ಪರಿಣಾಮ ಆಗಿರಬಹುದು.

-ಡಾ.ಗುರುರಾಜ ಕೆ.ವಿ., ಕಪ್ಪೆ ಸಂಶೋಧಕ

ಸಿಗದ ಮಲಬಾರ್ ಟ್ರೀ ಟೋಡ್!

ಮಾಳದಲ್ಲಿ ಕಾಣಸಿಗುತ್ತಿದ್ದ ಅಪರೂಪದ ಕಪ್ಪೆ ಎನಿಸಿ ರುವ ಮಲಬಾರ್ ಟ್ರೀ ಟೋಡ್(ಮಲೆನಾಡಿನ ಗ್ರಂಥಿ ಕಪ್ಪೆ) ಈ ಬಾರಿ ಫ್ರಾಗ್ ವಾಕ್‌ನಲ್ಲಿ ಕಂಡುಬಾರದಿದ್ದು, ಅಧ್ಯಯನ ತಂಡಕ್ಕೆ ಭಾರೀ ನಿರಾಸೆ ಮೂಡಿಸಿದೆ.

‘ಮಳೆ ಅವಧಿಗೆ ಮೊದಲೇ ಆಗಿರುವುದರಿಂದ ಕಪ್ಪೆಗಳು ಸಂತಾನಾಭಿವೃದ್ಧಿ ಕಾರ್ಯ ಮುಗಿಸಿ ಹೊರಟು ಹೋಗಿರುವ ಸಾಧ್ಯತೆ ಇದೆ. ಆದ್ದರಿಂದ ಮಲಬಾರ್ ಟ್ರೀ ಟೋಡ್ ನಮಗೆ ಈ ಬಾರಿ ಸಿಕ್ಕಿಲ್ಲ. ಅದು ನಮಗೆ ದೊಡ್ಡ ನಿರಾಸೆ ಉಂಟುಮಾಡಿದೆ. ಇನ್ನು ಆ ಕಪ್ಪೆ ಮರಳಿ ಬರುವುದಿಲ್ಲ. ಮಳೆ ಇಲ್ಲದೆ ಮೊಟ್ಟೆಗಳು ಒಣಗಿ ಹೋಗಿ ಅವುಗಳ ಸಂಖ್ಯೆ ಮುಂದಿನ ವರ್ಷ ಇನ್ನೂ ಕಡಿಮೆ ಆಗಬಹುದು’ ಎಂದು ಗುರುರಾಜ್ ಕೆ.ವಿ. ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಝೀರ್ ಪೊಲ್ಯ

contributor

Similar News