ಅರ್ಧಕ್ಕೆ ನಿಂತ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳು
ಸಂಕಷ್ಟಕ್ಕೆ ಸಿಲುಕಿದ ಫಲಾನುಭವಿಗಳು
ಬಸವಕಲ್ಯಾಣ: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೊಜನೆ ಅಡಿಯಲ್ಲಿ ನಗರದ ಧರ್ಮಪ್ರಕಾಶ್ ಓಣಿಯಲ್ಲಿ ಮಂಜೂರಾದ ಮನೆಗಳ ಕಟ್ಟಡದ ಕೆಲಸ ಅರ್ಧಕ್ಕೆ ನಿಂತಿದ್ದು, ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆಯೇ ಮನೆಗಳು ಮಂಜೂರಾಗಿದ್ದವು. ಆದರೆ ನಿಗದಿತ ಸಮಯದಲ್ಲಿ ಸರಕಾರದಿಂದ ಹಣ ಬಿಡುಗಡೆಯಾಗದ ಕಾರಣ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳು ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿವೆ. ಸುಮಾರು 500ಕ್ಕಿಂತ ಹೆಚ್ಚು ಮನೆಗಳು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದು, ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಬೆರೆ ಕಡೆಯಿಂದ ಬಡ್ಡಿಯಲ್ಲಿ ಸಾಲ ಮಾಡಿ 3 ಕಂತುಗಳಲ್ಲಿ ಒಟ್ಟು 65 ಸಾವಿರ ರೂ. ಕಟ್ಟಿದ್ದೇವೆ. ಆದರೆ ಇದೀಗ ನಮ್ಮ ಮನೆಗಳು ಅರ್ಧಕ್ಕೆ ನಿಂತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿದರೆ ಕೆಲವೇ ದಿನಗಳಲ್ಲಿ ಮನೆ ಕೆಲಸ ಮುಗಿಯುತ್ತದೆ ಎಂದು ಕಳೆದ ಕೆಲವು ವರ್ಷಗಳಿಂದ ಸುಳ್ಳು ಭರವಸೆ ನೀಡುತ್ತಿದ್ದಾರೆ. ಮಳೇಗಾಲ ಸಮಿಪಿಸುತ್ತಿದ್ದು, ಮನೆ ಕಟ್ಟಡ ಕೆಲಸ ಅರ್ಧಕ್ಕೆ ನಿಲ್ಲಿಸಿದ್ದರಿಂದ ಅದರಲ್ಲಿ ವಾಸಿಸುವುದು ಹೇಗೆಂದು ದಿಕ್ಕೇ ತೋಚುತ್ತಿಲ್ಲ ಎಂದು ಫಲಾನುಭವಿಗಳು ತಮ್ಮ ಅಳಲು ತೊಂಡಿಕೊಂಡಿದ್ದಾರೆ.
ಈಗಾಗಲೇ ಮನೆಗಳು ಅರ್ಧಕ್ಕೆ ನಿಂತ ಕಾರಣ ಬಾಡಿಗೆ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಿಂಗಳಿಗೆ ಸಾವಿರಾರು ರೂ. ಬಾಡಿಗೆ ನೀಡಿ ಬದುಕುವ ಶಕ್ತಿ ನಮಗಿಲ್ಲ. ಅಧಿಕಾರಿಗಳ ಬಳಿ ಹೋದರೆ ಯಾರೊಬ್ಬರೂ ಕೂಡ ಸ್ಪಂದನೆ ನೀಡುತ್ತಿಲ್ಲ. ಈಗ ಕಟ್ಟುತ್ತಿರುವ ಮನೆಗಳು ಸಹ ಕಳಪೆ ಮಟ್ಟದಾಗಿದ್ದು, ಕೂಡಲೇ ಸಂಭಂದಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳು ನಮ್ಮ ಸಹಾಯಕ್ಕೆ ಬಂದು ಮನೆ ನಿರ್ಮಿಸಿ ಕೊಡಬೇಕು ಎಂದು ಫಲಾನುಭವಿಗಳು ಮನವಿ ಮಾಡಿದ್ದಾರೆ.
ಕಳೆದ ನಾಲ್ಕೈದು ವರ್ಷಗಳ ಹಿಂದೆ ಮನೆ ಮಂಜೂರಾದ ತಕ್ಷಣ 10% ಬಡ್ಡಿಯಿಂದ ಸಾಲ ಮಾಡಿ ಸರಕಾರಕ್ಕೆ ಹಣ ಕಟ್ಟಿದ್ದೇವೆ. ಇದೀಗ ನಮಗೆ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಮನೆ ಕೂಡ ಪೂರ್ಣಗೊಳ್ಳುತ್ತಿಲ್ಲ. ಮಳೆಗಾಲ ಸಮಿಪಿಸುತ್ತಿದ್ದು, ಕೂಡಲೇ ಮನೆಗಳು ಪೂರ್ಣ ಗೊಳಿಸಬೇಕು.
-ಪುತಳಬಾಯಿ ಚೌದರಿ, ಫಲಾನುಭವಿ ಮಹಿಳೆ
ಮಂಜೂರಾದ ಮನೆ ಕಟ್ಟಡ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಚುನಾವಣೆ, ಸರಕಾರಗಳ ಬದಲಾವಣೆ ಹಾಗೂ ಬಜೆಟ್ ಸಮಸ್ಯೆಯಿಂದ ಕೆಲಸ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ. ಈ ವರ್ಷ ಕೊನೆ ತಿಂಗಳ ಒಳಗಾಗಿ ಕೆಲಸ ಪೂರ್ಣಗೊಳಿಸಿ ಎಂದು ಸರಕಾರ ಆದೇಶ ನಿಡಿದೆ. ಅದರಂತೆ ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸುತ್ತೇವೆ. ಫಲಾನುಭವಿಗಳು ಈಗಾಗಲೇ ಮೂರು ಕಂತುಗಳಲ್ಲಿ 65 ಸಾವಿರ ರೂ. ಕಟ್ಟಿದ್ದಾರೆ. ಆದರೆ ಈಗಿನ ಸರಕಾರ 1ಲಕ್ಷ ರೂ. ಕಟ್ಟಬೇಕು ಎಂದು ತಿಳಿಸಿದೆ. ಅದರಂತೆ ಫಲಾನುಭವಿಗಳು ಬಾಕಿ ಉಳಿದ ಮೊತ್ತ ಕಟ್ಟಬೇಕು.
ಲಕ್ಷ್ಮೀಪತಿ, ಎಇ
ಸ್ಲಂ ಬೋರ್ಡ್ ಕಲಬುರ್ಗಿ
ಮನೆ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಬಜೆಟ್ ಇಲ್ಲ ಎಂದು ಹೇಳುತ್ತಿದ್ದಾರೆ. ಮನೆಗಳು ಅರ್ಧಕ್ಕೆ ನಿಂತ ಕಾರಣ ಬಾಡಿಗೆ ಮನೆಯಲ್ಲಿ ಬದುಕುತ್ತಿದ್ದೇವೆ. ತಿಂಗಳಿಗೆ 3 ಸಾವಿರ ರೂ. ಬಾಡಿಗೆ ಕಟ್ಟುವುದು ಕಷ್ಟವಾಗುತ್ತಿದೆ. ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಆದಷ್ಟು ಬೇಗ ನಮ್ಮ ಸಮಸ್ಯೆ ಬಗೆ ಹರಿಸಬೇಕು.
-ಸುರೇಶ್, ಫಲಾನುಭವಿ