ಸ್ವಾತಂತ್ರ್ಯ ಹೋರಾಟಗಾರ ಸಮಾಜವಾದಿ ಧುರೀಣ ಡಾ. ಜಿ.ಜಿ. ಪಾರೀಖ್
ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಮಾಜವಾದಿ ಮತ್ತು ಸಾಂಸ್ಥಿಕ ಚಟುವಟಿಕೆಗಳಿಗಾಗಿ ಇಡೀ ದೇಶಕ್ಕೆ ಮಾರ್ಗದರ್ಶಿ ಡಾ. ಗುಣವಂತರಾಯ್ ಗಣಪತ್‌ಲಾಲ್ ಪಾರೀಖ್ ಅವರು ಡಾ. ಜಿ.ಜಿ. ಎಂದೇ ಖ್ಯಾತರು. ತಮ್ಮ 101ನೇ ವಯಸ್ಸಿನಲ್ಲಿ ಅಕ್ಟೋಬರ್ 2ರಂದು ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆಯಲ್ಲಿ ನಿಧನರಾದರು.
ಡಾ. ಜಿ.ಜಿ. ಅವರು ಮೂಲತಃ ಗುಜರಾತ್ ರಾಜ್ಯದ ಸುರೇಂದ್ರ ನಗರ್‌ನವರು. ಆದರೆ ಅವರ ವಿದ್ಯಾಭ್ಯಾಸ ಸೌರಾಷ್ಟ್ರ, ರಾಜಸ್ಥಾನ ಮತ್ತು ಮುಂಬೈಯಲ್ಲಿ ಆಯಿತು. ವೈದ್ಯಕೀಯ ಶಿಕ್ಷಣ ಪಡೆದ ಅವರು ಕಾಲೇಜು ದಿನಗಳಲ್ಲೇ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತರಾದರು. 1942ರ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಇತರ ಸಮಾಜವಾದಿಗಳೊಂದಿಗೆ ಧುಮುಕಿದಾಗ ಅವರಿಗೆ ಕೇವಲ 18 ವರ್ಷ.
ಮಹಾರಾಷ್ಟ್ರದಲ್ಲಿ ಮುಂಬೈ ಮಹಾನಗರ ಪಾಲಿಕೆಗೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಯೂಸುಫ್ ಮೆಹರಲಿ ಅವರು ಯುವಕ ಡಾ. ಜಿ.ಜಿ. ಪಾರೀಖ್‌ಗೆ ಆದರ್ಶ ವ್ಯಕ್ತಿಯಾಗಿದ್ದರು. 1942ರಲ್ಲಿ ಇವರ ಭಾಷಣವನ್ನು ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಕೇಳಿದಾಗಿನಿಂದ ಡಾ. ಜಿ.ಜಿ. ಅವರು ಯೂಸುಫ್ ಮೆಹರಲಿ ಅವರನ್ನು ಅನುಸರಿಸತೊಡಗಿದರು.
ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಳ್ಳಲು ಹೋರಾಡುತ್ತಿದ್ದ ಕಾಂಗ್ರೆಸ್ ಒಳಗೆ ಅಂದಿನ ದಿನಗಳಲ್ಲಿ ಸಮಾಜವಾದಿಗಳು ಧೀರೋದಾತ್ತ ಚಟುವಟಿಕೆಗಳಿಂದಾಗಿ ಖ್ಯಾತಿ ಗಳಿಸಿದ್ದರು. ತಮ್ಮನ್ನು ಇವರು ಕಾಂಗ್ರೆಸ್ ಸಮಾಜವಾದಿಗಳು ಎಂದು ಗುರುತಿಸಿ ಕೊಂಡಿದ್ದರು. ಇವರದು ಸೋಷಲಿಸ್ಟ್ ವಿದ್ಯಾರ್ಥಿ ಘಟಕ ಇತ್ತು. ಇದರ ಸದಸ್ಯರಾಗಿ ಜಿ.ಜಿ. ಪಾರೀಖ್ ಅವರು ಮೊದಲು ಕೆಲಸ ಮಾಡಲಾರಂಭಿಸಿದರು. ಎದ್ದು ಕಾಣುವಷ್ಟು ಎತ್ತರ ಮತ್ತು ಸೈನಿಕರನ್ನು ನೆನಪಿಸುವಂಥ ಮೈಕಟ್ಟು ಹೊಂದಿದ್ದ ಜಿ.ಜಿ. ಪಾರೀಖ್ ಸೋಷಲಿಸ್ಟ್ ವಿದ್ಯಾರ್ಥಿ ಘಟಕದಲ್ಲಿ ಕೆಡೆಟ್ ಪಾರೀಖ್ ಎಂದೇ ಹೆಸರುವಾಸಿ ಆಗಿದ್ದರು.
1942ರ ಆಂದೋಲನದಲ್ಲಿ ಅನೇಕ ಸಮಾಜವಾದಿಗಳು ಭೂಗತರಾದರು; ಹಲವರು ಬಂಧನಕ್ಕೆ ಒಳಗಾದರು. ಅವರಲ್ಲಿ ಜಿ.ಜಿ. ಪಾರೀಖ್ ಅವರೂ ಒಬ್ಬರು. ಅವರನ್ನು ಬಾಂಬೆ ಪ್ರಾಂತದ ವರ್ಲಿ ಜೈಲಿನಲ್ಲಿ ಹತ್ತು ತಿಂಗಳ ಕಾಲ ಬಂಧಿಸಿ ಇಡಲಾಯಿತು.
ನಂತರದ ದಿನಗಳಲ್ಲಿ ಜಿ. ಜಿ. ಪಾರೀಖ್ ಅವರು ಕಾಂಗ್ರೆಸ್ ಸಮಾಜವಾದಿ ಪಾರ್ಟಿಯ ಮುಖ್ಯ ಯುವ ಕಾರ್ಯಕರ್ತರಾದರು. 1947ರಲ್ಲಿ ಮುಂಬೈಯಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಾಗ, ಪಾರೀಖ್ ಅವರು ಮುಂಬೈ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು.
ಸ್ವಾತಂತ್ರ್ಯ ದೊರೆತ ಮೇಲೆ, ಸಮಾಜವಾದಿಗಳು ಕಾಂಗ್ರೆಸ್‌ನಿಂದ ಹೊರಕ್ಕೆ ಹೋಗಿ ತಮ್ಮದೇ ರಾಜಕೀಯ ಪಕ್ಷ ಸಮಾಜವಾದಿ ಪಕ್ಷವನ್ನು ಸ್ಥಾಪಿಸುವ ನಿರ್ಣಯವನ್ನು ಮಹಾರಾಷ್ಟ್ರದ ನಾಸಿಕ್ ಜಿಲ್ಲಾ ಕೇಂದ್ರದಲ್ಲಿ ನಡೆಸಿದ ಸಮ್ಮೇಳನದಲ್ಲಿ ಸ್ವೀಕರಿಸಿದಾಗ, ಡಾ. ಜಿ.ಜಿ. ಪಾರೀಖ್ ಅವರೂ ಸಕ್ರಿಯವಾಗಿ ಸಮ್ಮೇಳನದ ಸಂಘಟನೆಯಲ್ಲಿ ತೊಡಗಿದ್ದರು.
ಸ್ವಾತಂತ್ರ್ಯ ದೊರೆತ ವರ್ಷದಲ್ಲಿ ಮತ್ತು ನಂತರದ ವರ್ಷಗಳಲ್ಲಿ ಭಾರತವನ್ನು ಕೋಮು ಸಮಸ್ಯೆಯು ಅತಿ ಗಂಭೀರವಾಗಿ ಕಾಡುತ್ತಾ ಬಂದಿರುವುದನ್ನು ಗುರುತಿಸಿದ ಡಾ. ಜಿ.ಜಿ. ಪಾರೀಖ್ ಅವರು 1961ರಲ್ಲಿ ಯೂಸುಫ್ ಮೆಹರಲಿ ಕೇಂದ್ರವನ್ನು ಸ್ಥಾಪಿಸಿ ಇದರ ಮೂಲಕ ಹಿಂದೂ-ಮುಸ್ಲಿಮ್ ಸಮುದಾಯಗಳಲ್ಲಿ ಸಾಮರಸ್ಯಉಳಿಯುವಂಥ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದರು. ರಾಷ್ಟ್ರೀಯ ಏಕತೆಯ ಪ್ರತಿರೂಪವಾಗಿ ಅವರು ಯೂಸುಫ್ ಮೆಹರಲಿ ಅವರ ವ್ಯಕ್ತಿತ್ವವನ್ನು ಮತ್ತು ಜೀವನವನ್ನು ಜನರ ಮುಂದೆ ಇಡುತ್ತಾ ಬಂದರು. ಹಿಂದೂ-ಮುಸ್ಲಿಮ್ ಯುವಜನರನ್ನು ಒಗ್ಗೂಡಿಸುವ ಪ್ರಯತ್ನವು ಯೂಸುಫ್ ಮೆಹರಲಿ ಕೇಂದ್ರದಿಂದ ಯಶಸ್ವಿಯಾಗಿ ನಡೆಯಿತು. ಅವರ ಎಲ್ಲಾ ಚಟುವಟಿಕೆಗಳ ಕೇಂದ್ರಬಿಂದು ಸಮಾಜವಾದ ಚಿಂತನೆ ಆಗಿತ್ತು.
ಮುಂದಿನ ದಶಕಗಳಲ್ಲಿ ಸಮಾಜವಾದಿ ಪಕ್ಷವು ಹಲವು ಏಳು-ಬೀಳುಗಳನ್ನು ಕಂಡಿತು. ವಿಭಜನೆಗೊಂಡಿತು; ಮತ್ತೆ ಒಗ್ಗೂಡಿತು. 1975ರಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಲ್ಪಟ್ಟಾಗ, ಸಮಾಜವಾದಿ ಪಕ್ಷದ ಅನೇಕ ಹಿರಿಯ ನಾಯಕರ ಜೊತೆಗೆ ಡಾ. ಜಿ.ಜಿ. ಪಾರೀಖ್ ಅವರೂ ಅದನ್ನು ದೃಢವಾಗಿ ವಿರೋಧಿಸಿದರು. ಸಮಾಜವಾದಿ ಪಕ್ಷದ ಇನ್ನೊಬ್ಬ ನೇತಾರ ಜಾರ್ಜ್ ಫೆರ್ನಾಂಡಿಸ್ ಅವರನ್ನು ಹುಡುಕಿಕೊಂಡು ಬಂದ ಪೊಲೀಸರು, ಡಾ. ಜಿ.ಜಿ. ಪಾರೀಖ್‌ರನ್ನು ಬಂಧಿಸಿದರು. ದಿಲ್ಲಿಯ ತಿಹಾರ್ ಜೈಲಿನಲ್ಲಿ ಅವರು ಶಿಕ್ಷೆ ಅನುಭವಿಸಿದರು.
ಸ್ವಾತಂತ್ರ್ಯ ಚಳವಳಿಯ ಕಾಲವು ದೇಶದ ಮುಂದೆ ಹತ್ತು ಹಲವು ಮಾನವೀಯ ಮೌಲ್ಯಗಳನ್ನು ಮಂಡಿಸಿತ್ತು. ಅವುಗಳ ಕಡೆಗೆ ದೇಶಾದ್ಯಂತ ಲಕ್ಷಲಕ್ಷ ಸಂಖ್ಯೆಯಲ್ಲಿ ಯುವಜನರು ಆಕರ್ಷಿತರಾಗಿದ್ದರು. ಇದೇ ರೀತಿ, 1975-77ರ ತುರ್ತುಪರಿಸ್ಥಿತಿ ಕಾಲವು ಕೂಡ ದೇಶದ ಮುಂದೆ ಪ್ರಜಾಪ್ರಭುತ್ವ ಕುರಿತಂತೆ ತೀವ್ರ ಎಚ್ಚರವನ್ನು ಮೂಡಿಸಿತು. ಇದರಿಂದಲೂ ದೇಶದ ವಿವಿಧ ಭಾಗಗಳಲ್ಲಿ ಜಾಗೃತ ಯುವ ನಾಯಕರು ರೂಪುಗೊಳ್ಳುವುದು ಸಾಧ್ಯವಾಯಿತು.
1967ರಲ್ಲಿ ಯೂಸುಫ್ ಮೆಹರಲಿ ಕೇಂದ್ರದ ವತಿಯಿಂದ ತಾರಾ ಎಂಬಲ್ಲಿ 15 ಎಕರೆ ಜಾಗದಲ್ಲಿ ಗ್ರಾಮೀಣ ಬಡ ಜನರಿಗಾಗಿ ಆಸ್ಪತ್ರೆಯನ್ನು ಪ್ರಾರಂಭಿಸಲಾಯಿತು. ಇಂದೂ ಅಲ್ಲಿ 35 ಹಾಸಿಗೆಗಳ ಸೌಲಭ್ಯ ಇರುವ ಆಸ್ಪತ್ರೆ ಯಶಸ್ವಿಯಾಗಿ ನಡೆಯುತ್ತಿದೆ.
ಅದೇ ಸ್ಥಳದಲ್ಲಿ ಉರ್ದು ಮಾಧ್ಯಮದ ಒಂದು ಪ್ರೌಢ ಶಾಲೆ ಮತ್ತು ಮರಾಠಿ ಮಾಧ್ಯಮದ ಇನ್ನೊಂದು ಪ್ರೌಢ ಶಾಲೆ ನಡೆಯುತ್ತಿವೆ. ಇಲ್ಲಿ ಶಿಕ್ಷಣ ಮತ್ತು ವಸತಿ ಉಚಿತ ಇದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಗಮನಾರ್ಹ ಆಸಕ್ತಿ ಮತ್ತು ಸಾಧನೆಯನ್ನು ತೋರುತ್ತಿದ್ದಾರೆ. ಜೊತೆಗೆ, ಇಲ್ಲಿ ಎಣ್ಣೆ, ಸೋಪು, ಮಣ್ಣಿನ ವಸ್ತುಗಳ ತಯಾರಿಕಾ ಘಟಕಗಳನ್ನು ನಡೆಸಲಾಗುತ್ತಿದೆ. ಹನಿ ನೀರಾವರಿ-ಇಂಗು ಗುಂಡಿ ಮಹತ್ವ, ಮಹಿಳಾ ಸ್ವ-ಸಹಾಯ ಗುಂಪುಗಳ ರಚನೆ, ಕೋಮು ಸೌಹಾರ್ದ, ಸಮಾನತಾ ತತ್ವ, ಆದಿವಾಸಿಗಳ ಸಬಲೀಕರಣ ಇತ್ಯಾದಿ ವಿಷಯಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸುತ್ತಾ, ಅಗತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಕೋಮುಗಲಭೆಯಿಂದ ನಲುಗಿದ ಕಾಶ್ಮೀರದಲ್ಲಿ ಮತ್ತು ಸುನಾಮಿ ದುರಂತದಲ್ಲಿ ಬೆಂದ ನಾಗಪಟ್ಟಣಂನಲ್ಲಿ ಯೂಸುಫ್ ಮೆಹರಲಿ ಕೇಂದ್ರ ಪರಿಹಾರ ಮತ್ತು ಪುನರ್‌ವಸತಿ ಕಾರ್ಯಗಳನ್ನು ಹಮ್ಮಿಕೊಂಡು ಸಾವಿರಾರು ಕುಟುಂಬಗಳಿಗೆ ಆಸರೆ ಒದಗಿಸಿದೆ.
ಕಡೆಗೆ 1977ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಜನತಾ ಪಕ್ಷದಲ್ಲಿ ಸಮಾಜವಾದಿ ಪಕ್ಷವು ವಿಲೀನಗೊಂಡಿತು. ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಡಾ. ಜಿ. ಜಿ. ಪಾರೀಖ್ ಅವರು ಸಕ್ರಿಯವಾಗಿ ಭಾಗಿಯಾಗಿದ್ದರು. ಮುಂದೆ ಜನತಾ ಪಕ್ಷವು ಜನತಾ ದಳವಾಗಿ ರೂಪುಗೊಂಡಿತು. ಆಗಲೂ ಡಾ. ಜಿ.ಜಿ. ಪಾರೀಖ್ ಅವರು ಜನತಾ ದಳ ಪಕ್ಷದ ಭಾಗವಾಗಿ, 2000 ವರ್ಷದವರೆಗೆ ಸಕ್ರಿಯ ರಾಜಕಾರಣದಲ್ಲಿ ಉಳಿದರು. ನಂತರ ಅವರು ಸಂಪೂರ್ಣವಾಗಿ ರಚನಾತ್ಮಕ ಚಟುವಟಿಕೆಗಳಿಗೆ ತಮ್ಮನ್ನು ಮೀಸಲು ಇರಿಸಿ ಕೊಂಡರು.
2020ರವರೆಗೆ ಡಾ. ಜಿ.ಜಿ. ಪಾರೀಖ್ ಅವರು ಪ್ರತೀವಾರ 100 ಕಿ.ಮೀ.ನಷ್ಟು ದೂರದವರೆಗಿನ ತಾರಾಕ್ಕೆ ಮತ್ತು ಇತರ ಪ್ರದೇಶಗಳಿಗೆ ಪ್ರಯಾಣ ಕೈಗೊಂಡು ಸಾಮುದಾಯಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿದ್ದರು. ಉಳಿದ ದಿನಗಳಲ್ಲಿ ಅವರು ನಿಯತವಾಗಿ ಮುಂಬೈಯಲ್ಲಿನ ತಮ್ಮ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ರೈಲು ಪ್ರಯಾಣವೊಂದರ ಕಾಲದಲ್ಲಿ ಪ್ಲಾಟ್‌ಫಾರ್ಮ್‌ನಿಂದ ರೈಲು ಹತ್ತುವಾಗ ಕಾಲು ಜಾರಿ ಬಿದ್ದ ಕಾರಣಕ್ಕೆ ಅವರು ತಮ್ಮ 92ನೇ ವರ್ಷದಲ್ಲಿ ಊರುಗೋಲಿನ ಆಸರೆ ಪಡೆಯಬೇಕಾಯಿತು. ಅಲ್ಲಿಯವರೆಗೆ ಅವರು ಯಾವೊಂದು ದೈಹಿಕ ಅನಾರೋಗ್ಯಕ್ಕೂ ತುತ್ತಾಗಿರಲಿಲ್ಲ.
ತನ್ನ ಕನಸು ಇನ್ನೂ ಈಡೇರಿಲ್ಲ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಮಾನತೆ ಸ್ಥಾಪನೆ ಆಗಿಲ್ಲ. ಸ್ವತಂತ್ರ ಭಾರತದಲ್ಲಿ ಅಧಿಕಾರವು ಕೆಲವೊಂದು ಜನರ, ಕುಟುಂಬಗಳ ಮತ್ತು ಜಾತಿಗಳ ಕೈಯಲ್ಲಿ ಉಳಿದಿದೆ. ಅದು ಜನರಿಗೆ ತಲುಪಿಲ್ಲ. ರೈತರ-ಕಾರ್ಮಿಕರ ಒಟ್ಟಾರೆ ಶ್ರಮಜೀವಿಗಳ ಬದುಕು ಹಸನಾಗಿಲ್ಲ. ನಗರಗಳು ಗ್ರಾಮಗಳನ್ನು ನುಂಗಿ ನೊಣೆಯುತ್ತಿವೆ. ಇಂತಹ ಅಭಿವೃದ್ಧಿಯು ಭಾರತಕ್ಕೆ ಗೌರವವನ್ನು ತರುವುದಿಲ್ಲ. ಗ್ರಾಮೀಣ ಅಭಿವೃದ್ಧಿ ಆಗದೆ, ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ. ನಗರಗಳತ್ತ ಆಗುತ್ತಿರುವ ವಲಸೆ ಯಾರ ಹಿತವನ್ನೂ ಕಾಪಾಡುವುದಿಲ್ಲ. ಸಂಪತ್ತು ಕೆಲವೇ ಜನರಲ್ಲಿ ಕೇಂದ್ರೀ ಕೃತವಾಗುವುದನ್ನು, ಬಡತನ ಹೆಚ್ಚು ಜನರನ್ನು ಆವರಿಸಿಕೊಳ್ಳುತ್ತಿರುವುದನ್ನು ತಪ್ಪಿಸಲೇ ಬೇಕು. ಜನರಿಗೆ ಉದ್ಯೋಗ ದೊರಕುವುದು, ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವುದು ನೀತಿ-ಯೋಜನೆ ರೂಪಿಸುವವರಿಗೆ ಮುಖ್ಯವಾಗಬೇಕು. ಶ್ರಮವನ್ನು ಮತ್ತು ಪ್ರಕೃತಿಯನ್ನು ಶೋಷಿಸುವ ಅಭಿವೃದ್ಧಿ ಮಾದರಿಯನ್ನು ಧಿಕ್ಕರಿಸದೇ ಬೇರೆ ದಾರಿಯಿಲ್ಲ.ಇಂದಿನ ಸಂದರ್ಭಕ್ಕೆ ತಕ್ಕಂತೆ ಗಾಂಧಿ ತತ್ವಗಳನ್ನು ಮತ್ತು ಸಮಾಜವಾದ ವನ್ನು ಪುನರ್ ನಿರ್ವಚಿಸುವುದು ಅತ್ಯಗತ್ಯ. ಜನರ ಹಕ್ಕುಗಳ ಜೊತೆಗೇ ಪ್ರಕೃತಿಯ ಹಕ್ಕನ್ನೂ ಗೌರವಿಸುವಂಥ ಅಭಿವೃದ್ಧಿ ಮಾದರಿಯು ಸಮಾಜವಾದಿ ತಾತ್ವಿಕತೆಯ ಕೆಂದ್ರಬಿಂದು ಆಗಬೇಕು ಎಂಬುದು ಡಾ. ಜಿ.ಜಿ. ಪಾರೀಖ್ ಅವರ ಅಭಿಮತ ಆಗಿತ್ತು.
ಮಹಾರಾಷ್ಟ್ರದ ಸಮಾಜವಾದಿಗಳು 1925ರಷ್ಟು ಹಿಂದೆಯೇ ರಾಷ್ಟ್ರ ಸೇವಾ ದಳ ಪ್ರಾರಂಭಿಸಿ, ಆರೆಸ್ಸೆಸ್ ತತ್ವಗಳಿಗೆ ವಿರುದ್ಧವಾದ ಮೌಲ್ಯಗಳನ್ನು ಜನರಲ್ಲಿ ಬಿತ್ತುತ್ತಾ ಬಂದಿದ್ದಾರೆ. ಸೇವಾ ದಳ ಕೋಮುಸೌಹಾರ್ದ ಕಾಪಾಡುವ ಹತ್ತಾರು ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ.
‘‘ಸಮಾಜವಾದಿಗಳು ಈಗ ಹಸಿರು ರಾಜಕಾರಣ ಪ್ರಾರಂಭಿಸಬೇಕಿದೆ’’ ಎನ್ನುತ್ತಾ, ‘‘ಒಗ್ಗೂಡಿ ಇದ್ದಾಗಲೇ ಜನರಲ್ಲಿ ಭರವಸೆಯನ್ನು ಮೂಡಿಸಲು ಸಾಧ್ಯ’’ ಎಂಬ ಕಿವಿಮಾತನ್ನೂ ಡಾ. ಜಿ.ಜಿ. ಪಾರೀಖ್ ಅವರು ಹೇಳಿದ್ದರು. ‘‘ಪ್ರಸ್ತುತ ಫ್ಯಾಶಿಸ್ಟ್ ರೂಪ ಪಡೆಯುತ್ತಿರುವ ಸಂಘ ಪರಿವಾರ/ಬಿಜೆಪಿ ವಿರೋಧಿ ತಿಳುವಳಿಕೆಯನ್ನು ಜನರ ಹೃದಯ/ಮನಸುಗಳಲ್ಲಿ ಮೂಡಿಸಬೇಕು; ಇದಕ್ಕಾಗಿ ತಾತ್ಕಾಲಿಕವಾಗಿ ಕಾಂಗ್ರೆಸ್ ಪರ ನಿಲುವನ್ನು ತಾಳುವುದು ತಪ್ಪೇನೂ ಅಲ್ಲ. ಒಟ್ಟಾರೆ, ಶೋಷಣೆರಹಿತ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವ ತುರ್ತು ಇದೆ’’ ಎಂದ ಅವರು, ‘‘ಈ ನಿಟ್ಟಿನಲ್ಲಿ ನಡೆಯುವ ಪ್ರಯತ್ನದ ನೇತೃತ್ವವನ್ನು ಸಮಾಜವಾದಿಗಳು ವಹಿಸಿಕೊಳ್ಳಬೇಕು’’ ಎಂದೂ ಕಿವಿಮಾತು ಹೇಳಿದ್ದರು.
(ಆಧಾರ: ವಿವಿಧ ಮೂಲಗಳು)