×
Ad

ಹಲವು ಅನುಮಾನಗಳಿಗೆ ಕಾರಣವಾದ ಸರಕಾರದ ನಡೆ

Update: 2025-05-15 12:31 IST

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇರುವವರಿಗೆ ಒಳ ಮೀಸಲಾತಿಯನ್ನು ನೀಡಲು ಏಕಸದಸ್ಯ ಆಯೋಗದ ಮೂಲಕ ಪರಿಶಿಷ್ಟರ ಜಾತಿ ಮತ್ತು ಉಪ ಜಾತಿ ಸಮೀಕ್ಷೆಯನ್ನು ಈಗಾಗಲೇ ಆರಂಭಿಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಕಾಂಗ್ರೆಸ್ ಸರಕಾರದ ಕ್ರಾಂತಿಕಾರಿ ಹೆಜ್ಜೆ ಅನಿಸಬಹುದು. ಮಾದಿಗ ದಂಡೋರ ಸಂಘಟನೆಯ ಸಹೋದರರು ದಶಕಗಳಿಂದ ಹೋರಾಟ ಮಾಡುತ್ತಿದ್ದ ನ್ಯಾಯಯುತ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ವಿಜಯೋತ್ಸವ ಆಚರಿಸಲು ಮನಸ್ಸಾಗಬಹುದು. ಆದರೆ, ಸರಕಾರದ ನಡೆಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕ್ರೊನೊಲಾಜಿ ಗಮನಿಸಿದರೆ ದೀರ್ಘಕಾಲ ಶೈತ್ಯಾಗಾರದಲ್ಲಿದ್ದ ಕಾಂತರಾಜು ವರದಿಯನ್ನು ಜಯಪ್ರಕಾಶ್ ಹೆಗ್ಡೆ ಆಯೋಗ ವರದಿಯ ರೂಪದಲ್ಲಿ ಸ್ವೀಕರಿಸಿದೆ. ಮೊನ್ನೆ ಯಾರೋ ಅಪ್ರಬುದ್ಧ ರಾಜಕಾರಣಿಯೊಬ್ಬರು ಜಾತಿ ಗಣತಿಯ ಕಲ್ಪನೆಯೇ ಇಲ್ಲದ ಕಾಲದಲ್ಲಿ ಸಿದ್ದರಾಮಯ್ಯನವರು ಜಾತಿ ಗಣತಿ ನಡೆಸಿದ್ದರು ಎಂದು ಮಾತನಾಡುತ್ತಿದ್ದರು. ಬ್ರಿಟಿಷರು 1871 ಮತ್ತು 1881ರಲ್ಲಿ ದಶವಾರ್ಷಿಕ ಜನಗಣತಿ ಮಾಡಿದಾಗಲೇ ಜಾತಿ ಗಣತಿ ನಡೆಸಿದ್ದರು. ದೇಶದಲ್ಲಿ ಮೊದಲ ಜಾತಿ ಗಣತಿ 1931ರಲ್ಲೇ ನಡೆದಿತ್ತು. ನಿರಂತರ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಈ ಜನಸಮುದಾಯಕ್ಕೆ ನ್ಯಾಯ ನೀಡುವ ಕಾರ್ಯಕ್ಕೆ ಮುಂದಾಗಲಿಲ್ಲ.

ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಅವರ ಜನತಾ ಸರಕಾರ ದೇಶದಲ್ಲಿ ಇತರ ಹಿಂದುಳಿದ ವರ್ಗದವರಿಗೆ ಮಂಡಲ್ ಆಯೋಗದ ಶಿಫಾರಸು ಪ್ರಕಾರ ಶೈಕ್ಷಣಿಕ ಮತ್ತು ಉದ್ಯೋಗದ ಮೀಸಲಾತಿ ನೀಡಿತು. ಅದನ್ನು ಭಾರತೀಯ ಜನತಾ ಪಾರ್ಟಿ ಸ್ಪಷ್ಟವಾಗಿ ವಿರೋಧಿಸಿ ಬೀದಿಗಿಳಿಯಿತು. ಆನಂತರದ್ದು ಇತಿಹಾಸ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರವು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನು ಸಚಿವ ಸಂಪುಟದ ಮುಂದಿಡಲು ಯಾಕೆ ವಿಳಂಬ ಮಾಡಿತು ಎಂದು ಸಂಬಂಧಪಟ್ಟವರೇ ಹೇಳಬೇಕು. ವರದಿಯನ್ನು ನೋಡುವುದಕ್ಕೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಮುಖಂಡರು ವಿರೋಧಿಸಿದರು. ಈ ನಡುವೆ ಸುಪ್ರೀಂ ಕೋರ್ಟ್ ಆದೇಶವೊಂದರ ಅನುಷ್ಠಾನಕ್ಕಾಗಿ ಅರ್ಥಾತ್ ಪರಿಶಿಷ್ಟರಿಗೆ ಒಳ ಮೀಸಲಾತಿಯನ್ನು ನೀಡಲು ಜಸ್ಟಿಸ್ ಡಾ. ನಾಗಮೋಹನದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ನೇಮಿಸಿತ್ತು. ಏಕ ಸದಸ್ಯ ಆಯೋಗ ಅಹವಾಲುಗಳನ್ನು ಸ್ವೀಕರಿಸಿ ಮಾತುಕತೆ ನಡೆಸುತ್ತಿರುವ ವೇಳೆಯಲ್ಲೇ ಜಯಪ್ರಕಾಶ್ ಹೆಗ್ಡೆ ಆಯೋಗ ವರದಿಯ ಶಿಫಾರಸುಗಳನ್ನು ಸರಕಾರ ಬಹಿರಂಗ ಮಾಡಿದೆ.

ಹೀಗಿರುತ್ತಲೇ, ಏಕಸದಸ್ಯ ಆಯೋಗವು ಪ್ರಾಯೋಗಿಕ ಅಂಕಿ ಅಂಶಗಳು ಇಲ್ಲ ಎಂದು ಪರಿಶಿಷ್ಟ ಜಾತಿ ಮತ್ತು ಉಪ ಜಾತಿ ಸಮೀಕ್ಷೆಗೆ ಚಾಲನೆ ನೀಡಿದೆ. ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗುವ ಮುನ್ನ ಏಕಸದಸ್ಯ ಆಯೋಗವಾಗಲೀ ಸರಕಾರವಾಗಲೀ ಕನಿಷ್ಠ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ದೊಂದಿಗೆ ಚರ್ಚಿಸಿದೆಯೇ ಎಂಬ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.

ಸಂವಿಧಾನ ಪ್ರಕಾರ ಮತ್ತು ಸರ್ವೋಚ್ಚ ನ್ಯಾಯಾಲಯದ ಹಲವು ತೀರ್ಪುಗಳ ಪ್ರಕಾರ ಎಸ್‌ಸಿ ಆಯೋಗದ ಗಮನಕ್ಕೆ ತರಬೇಕಾಗುತ್ತದೆ. ಪರಿಶಿಷ್ಟರ ಪರವಾಗಿ ಮಾತನಾಡಲು ಕೆಲವು ಮಂದಿ ತಜ್ಞ ಪರಿಶಿಷ್ಟ ಜಾತಿಗಳ ಮುಖಂಡರಾದರೂ ಇದ್ದಾರೆ. ಆದರೆ ಇತರ ಹಿಂದುಳಿದ ವರ್ಗಗಳಲ್ಲಿ ಈ ಕೊರತೆ ಇದೆ.

ಯಾವುದೇ ಪ್ರಾಯೋಗಿಕ ಅಂಕಿ ಅಂಶಗಳು ಇಲ್ಲದೆಯೂ ಜಯಪ್ರಕಾಶ್ ಹೆಗ್ಡೆ ಆಯೋಗವು ದೇವದಾಸಿಯಂತಹ ಅತ್ಯಂತ ಶೋಷಿತ ಸಮುದಾಯವನ್ನು ಎಲ್ಲ ರೀತಿಯಿಂದಲೂ ಬಲಾಢ್ಯರಾದ ಹಾಲು ಮತಸ್ಥರ ಗುಂಪಿನಲ್ಲಿ ಸೇರಿಸಿದ್ದಲ್ಲದೆ ಹೆಚ್ಚಿನ ಶೇಕಡಾವಾರು ಮೀಸಲು ನೀಡಿದೆ.

ಇವೆಲ್ಲ ವಿದ್ಯಮಾನಗಳು ನಡೆಯುತ್ತಿದ್ದಾಗ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಹೊರಬಂದರೆ ಆಕಾಶವೇ ಕಳಚಿಬೀಳುತ್ತದೆ, ಸರಕಾರ ಉರುಳುತ್ತದೆ ಎನ್ನುತ್ತಿದ್ದವರೆಲ್ಲ ಸುಮ್ಮನಾ ಗಿದ್ದಾರೆ ಯಾಕೆ ಎಂಬ ಅನುಮಾನ ನಮ್ಮನ್ನು ಕಾಡುವುದಿಲ್ಲವೇ? ಹಾಗಾದರೆ ಸರಕಾರ ಒಟ್ಟಾರೆ ಎಲ್ಲ ಹಿಂದುಳಿತ ಜಾತಿಗಳನ್ನು ಚೂರು ಚೂರಾಗಿ ಒಡೆದು ಹಾಕಲು ಮುಂದಾಗಿದೆಯೇ? ಒಟ್ಟು ಪರಿಶಿಷ್ಟರ ಸಂಖ್ಯೆ ಇತರ ಬಲಾಢ್ಯ ಜಾತಿಗಳಿಂದ ಜಾಸ್ತಿ ಇದೆ ಎಂದು ವರದಿ ಹೇಳಿತ್ತು. ಅದುವೇ ವಿರೋಧಕ್ಕೆ ಕಾರಣವಾಗಿತ್ತು.

ಎರಡು ಆಯೋಗಗಳನ್ನು ಉಪಯೋಗಿಸಿಕೊಂಡು ಸರಕಾರ ರಾಜಕೀಯ ಬೇಳೆ ಬೇಯಿಸಲು ಮುಂದಾಗಿದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ರಾಜ್ಯದ ಎರಡು ಪ್ರಬಲ ಜಾತಿಗಳ ರಾಜಕೀಯ ಮುಖಂಡರನ್ನು, ಜಾತಿ ಮುಖಂಡರನ್ನು ಸಂತೃಪ್ತಿ ಪಡಿಸುವಲ್ಲಿ ಸರಕಾರ ಯಶಸ್ವಿಯಾಗಿದೆ. ಇವೆರಡು ಆಯೋಗದ ಕೆಲಸಗಳಲ್ಲಿ ದೊಡ್ಡ ಪ್ರಮಾದಗಳು ನಡೆಯುತ್ತಿದ್ದರೂ ಪರಿಶಿಷ್ಟ ಮತ್ತು ಇತರ ಹಿಂದುಳಿದ ಜಾತಿಗಳ ರಾಜಕೀಯ ಮುಖಂಡರು, ಶಾಸಕರು, ಸಚಿವರು ಸುಮ್ಮನಾಗಿದ್ದಾರೆ ಯಾಕೆ? ಅವರವರ ಸ್ಥಾನಮಾನ ಉಳಿಸಿಕೊಳ್ಳುವುದೇ ಅವರ ಆದ್ಯತೆಯೇ? ಪರಿಶಿಷ್ಟರ ನೋಡಲ್ ಇಲಾಖೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು, ಸಂವಿಧಾನದ ಬಗ್ಗೆ ಆಳವಾದ ತಿಳುವಳಿಕೆ, ಗೌರವ ಇರುವವರು ಕೂಡ ಕಣ್ಣು ಮುಚ್ಚಿ ಕುಳಿತಿರುವುದು ಕಳವಳಕಾರಿ ವಿದ್ಯಮಾನ.

ಮೊದಲಿಗೆ, ಉಪಜಾತಿ ಸಮೀಕ್ಷೆಯ ಕೈಪಿಡಿ ಪ್ರಕಟಣೆಯೇ ಕಾನೂನು ಬಾಹಿರವಾಗಿದೆ. ಆ ಕೈಪಿಡಿಯ ಯಾವ ಪುಟದಲ್ಲೂ ಅದನ್ನು ಬರೆದವರು ಯಾರು, ಮುದ್ರಿಸಿದವರು ಯಾರು, ಪ್ರಕಟಣೆ ಮಾಡಿದವರು ಯಾರು ಎಂದು ನಮೂದಿಸಿಲ್ಲ. ಇದರ ಅರ್ಥವೇನು?

ಪ್ರಮುಖವಾಗಿ ಸಂವಿಧಾನ ಶೆಡ್ಯೂಲಲ್ಲಿ ನಮೂದಿಸಿದ ಮೂರು ಪ್ರಮುಖ ಜಾತಿಗಳನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ. ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಎಂಬ ಮೂರು ಪ್ರಮುಖ ಪರಿಶಿಷ್ಟ ಜಾತಿಗಳನ್ನು ಕೈಬಿಡಲಾಗಿದೆ. ಸಂವಿಧಾನ ಶೆಡ್ಯೂಲಲ್ಲಿ ಇದ್ದ ಜಾತಿಗಳನ್ನು ಕೈಬಿಡಲು ಇವರಿಗೆ ಅಧಿಕಾರ ನೀಡಿದವರು ಯಾರು? ಮೂಲಭೂತವಾಗಿ ಸಂವಿಧಾನದಲ್ಲಿ ಉಪಜಾತಿಗೆ ಸ್ಥಾನ ಇದೆಯೇ? ಮತ್ತು ಪ್ರತಿಯೊಂದು ಜಾತಿಗೂ ಉಪಜಾತಿ ಇರಬೇಕೆಂದು ಇದೆಯೇ? ಎಡಗೈ ಮತ್ತು ಬಲಗೈ ಪ್ರಯೋಗಕ್ಕೆ ಕಾನೂನಿನ ಮಾನ್ಯತೆ ಇದೆಯೇ? ಸರಕಾರ ಯಾವ ಮುಲಾಜಿಲ್ಲದೆ ಒಡೆದು ಆಳಲು ಮುಂದಾದಾಗ ಪರಿಶಿಷ್ಟ ಜಾತಿಗಳ ಮುಖಂಡರು ಆಕ್ಷೇಪ ಮಾಡದೆ ಸರಕಾರದ ತಾಳಕ್ಕೆ ಕಣಿಯುತ್ತಿರುವುದೇಕೆ? ಇಂತಹವರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕತೆ ಇದೆಯೇ?

ಕರಾವಳಿ ಪ್ರದೇಶದಲ್ಲಿ ಆದಿ ದ್ರಾವಿಡ ಜಾತಿ ಪ್ರಮಾಣಪತ್ರ ಪಡೆದು ಕೊಂಡವರಲ್ಲಿ ಕೆಲವರಿಗೆ ಸಮಸ್ಯೆ ಇದೆ. ಹಾಗೆಂದು ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದು ಸರಿಯಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದಿ ದ್ರಾವಿಡ ಜಾತಿ ಸರ್ಟಿಫಿಕೇಟ್ ಪಡೆದ ಅತ್ಯಂತ ಹಿಂದುಳಿದ ಪಂಗಡದವರು ತಮ್ಮನ್ನು ಮನ್ಸ ಎಂದು ಕರೆಯಿಸಿಕೊಳ್ಳಲು ಇಷ್ಟಪಡುವುದಿಲ್ಲ. ಮಾತ್ರವಲ್ಲದೆ, ಈ ಜಾತಿ ಹೆಸರು ಸಂವಿಧಾನ ಶೆಡ್ಯೂಲಲ್ಲಿ ಇಲ್ಲದಿರುವುದರಿಂದ ಅದೊಂದು ಜಾತಿ ಎಂದು ಪರಿಗಣಿಸಲಾಗುವುದಿಲ್ಲ. ಸಮೀಕ್ಷೆಯಲ್ಲೂ ಈ ಜಾತಿಯ ಆಯ್ಕೆಗೆ ಅವಕಾಶ ನೀಡಲಾಗಿಲ್ಲ. ಹಾಗಿದ್ದರೂ, ಸಂವಿಧಾನ ಗುರುತಿಸಿದ ಆದಿ ದ್ರಾವಿಡ ಜಾತಿಯನ್ನು ಜಾತಿ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ಅವರಿಗೆ ಸಮಾನ ಅವಕಾಶ(ಮೀಸಲು) ನಿರಾಕರಿಸುವಂತಿಲ್ಲ.

ಸಮೀಕ್ಷೆಯಲ್ಲಿ ವೃತ್ತಿಯ ಪಟ್ಟಿಯಲ್ಲಿ ಪರಿಶಿಷ್ಟರು ಪ್ರಯತ್ನ ಮಾಡದ ಹೆಂಡ ಇಳಿಸುವ ಕಸುಬನ್ನು ಸೇರಿಸಲಾಗಿದೆ. ಆದರೆ, ಹಲವು ಕುಟುಂಬಗಳು ಬದಲಾದ ಸನ್ನಿವೇಶದಲ್ಲಿ ಕಮ್ಮಾರ ಮತ್ತಿತರ ಕರಕುಶಲ ಕಾಯಕ ಮಾಡುತ್ತಿದ್ದಾರೆ. ಬಹುಮುಖ್ಯವಾಗಿ ದೈವ ಚಾಕರಿ ಮಾಡುವ ದೈವ ನರ್ತಕ, ದೈವ ಪೂಜಾರಿ, ಪರಿಶಿಷ್ಟರದ್ದೇ ಪೂಜಾ ವಿಧಾನಗಳನ್ನು ನೆರವೇರಿಸುವ ಕೆಲಸ ಮಾಡುವ, ದುಡಿ ನುಡಿಸುವ, ದುಡಿ ಕಟ್ಟುವ ಮುಂತಾದ ಕಸುಬುಗಳನ್ನು ಸೇರಿಸಲಾಗಿಲ್ಲ. ಇದರರ್ಥ ಸರಕಾರ ಸಮೀಕ್ಷೆಗೆ ಮುನ್ನ ಪರಿಶಿಷ್ಟರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.

ಹಿಂದುಳಿದ ವರ್ಗಗಳ ಆಯೋಗದ ವರದಿ ಮತ್ತು ಪರಿಶಿಷ್ಟರ ಉಪ ಜಾತಿ ಸಮೀಕ್ಷೆಗೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ ದೇಶದ್ರೋಹಿ ಪಟ್ಟ ದೊರಕುವ ಸಾಧ್ಯತೆ ಇದೆ. ಹೀಗಿದ್ದರೂ, ಸಂವಿಧಾನ ಸಂರಕ್ಷಣೆಯ ಗುತ್ತಿಗೆ ವಹಿಸಿಕೊಂಡಂತೆ ಮಾತನಾಡುವ ರಾಜಕೀಯ ಪಕ್ಷವೊಂದರ ಸರಕಾರ ಯಾವುದೇ ನಾಚಿಕೆ, ಅಂಜಿಕೆ ಇಲ್ಲದೆ ಸಂವಿಧಾನ ಉಲ್ಲಂಘಿಸಿ ಹಿಂದುಳಿದವರನ್ನು ಒಡೆದು ಚೂರು ಚೂರು ಮಾಡುತ್ತಿದೆ.

ಇಂತಹ ಪ್ರಮಾದಗಳು ನಡೆಯುತ್ತಿದ್ದರೂ ಪ್ರತಿಪಕ್ಷ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುತ್ತಿಲ್ಲ ಎಂಬುದು ಅತ್ಯಂತ ವಿಷಾದನೀಯ ಮತ್ತು ಖಂಡನೀಯ. ಆಯೋಗಗಳ ಇಂತಹ ಪ್ರಮಾದಗಳನ್ನು ಪ್ರಶ್ನಿಸುವಷ್ಟು ಬೌದ್ಧಿಕತೆ ವಿರೋಧ ಪಕ್ಷಗಳಲ್ಲಿ ಕೂಡ ಇಲ್ಲ. ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರ ಹೇಳಿಕೆಗೆ ಪ್ರತಿಪಕ್ಷ ಮುಖಂಡರು ಜೋತು ಬಿದ್ದಿದ್ದಾರೆ. ಪ್ರತಿಪಕ್ಷಗಳಿಗೆ ಇಷ್ಟವಾದ ‘ಹಿಂದೂ-ಮುಸ್ಲಿಮ್’ ಇಲ್ಲೂ ಇದೆ. ಗಮನಿಸಿ.

ಜಾತಿ ಎಂಬುದು ಹಿಂದೂ ಧರ್ಮದಲ್ಲಿ ಮಾತ್ರ ಇದೆ. ಈ ಸಮೀಕ್ಷೆ ಹಿಂದೂ ಧರ್ಮ ಎಂದು ಪ್ರಮಾಣಪತ್ರ ಇದ್ದವರಿಗೆ ಮಾತ್ರ ಅನ್ವಯಿಸಬೇಕು. ಪರಿಶಿಷ್ಟ ಜಾತಿ ಸರ್ಟಿಫಿಕೇಟ್ ಪಡೆದ ಮಾತ್ರಕ್ಕೆ ಕ್ರೈಸ್ತ, ಇಸ್ಲಾಮ್ ಧರ್ಮಾನುಯಾಯಿ ಈ ಸಮೀಕ್ಷೆಯ ಪರಿಧಿಯಲ್ಲಿ ಬರಬಾರದು. ಅಂತಹ ಮುನ್ನೆಚ್ಚರಿಕೆಯನ್ನು ಆಯೋಗವಾಗಲಿ, ಸರಕಾರವಾಗಲಿ ವಹಿಸಿಕೊಂಡಿದೆಯೇ? ಕ್ರೈಸ್ತ ಧರ್ಮವನ್ನು ಪಾಲಿಸುವ ಒಂದು ಕುಟುಂಬ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸಮೀಕ್ಷೆ ಮಾಡುವವರಿಗೆ ತೋರಿಸಿದರೆ ಅದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಸಮೀಕ್ಷೆಯಲ್ಲಿ ಅಗತ್ಯ ಇರಬೇಕಾದ ಧರ್ಮದ ಕಾಲಂ ಇಲ್ಲ ಎಂಬುದನ್ನು ಗಮನಿಸಬೇಕು. ಇದನ್ನು ಯಾಕೆ ಪ್ರತಿಪಕ್ಷಗಳು ಗಮನಿಸಿಲ್ಲ. ಪರಿಶಿಷ್ಟರು ಹಿಂದೂ ಧರ್ಮಕ್ಕೆ ಸೇರಿದವರು ಅಲ್ಲ ಎಂದು ಪರಿಗಣಿಸಿರುವ ಸಾಧ್ಯತೆಗಳಿಲ್ಲ.

ಸರಕಾರ ಹೇಳಿಕೊಂಡಿರುವ ಈ ಉಪಜಾತಿ ಸಮೀಕ್ಷೆಯು, ಪರಿಶಿಷ್ಟರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯೂ ಆಗಿದೆ. ಸಂವಿಧಾನ ಆಶಯ ಪ್ರಕಾರ ಸರಕಾರವು ಅವಕಾಶ ವಂಚಿತರಿಗೆ ಸಮಾನ ಅವಕಾಶ ದೊರಕಿಸುವ ಮತ್ತು ಜಾತಿ ನಿರ್ಮೂಲನೆ ಮಾಡುವ ಆಶಯಗಳನ್ನು ಹೊಂದಿರಬೇಕು. ಒಳ ಮೀಸಲಾತಿ ಬೇಡಿಕೆ ಬಂದಿರುವುದೇ ಪರಿಶಿಷ್ಟರಲ್ಲಿ ಅತ್ಯಂತ ಕೆಳಗಿನ ಸಾಮಾಜಿಕ ವರ್ಗಗಳಲ್ಲಿರುವ ಅವಕಾಶ ದೊರಕಿಲ್ಲ ಎನ್ನುವ ಕಾರಣಕ್ಕಾಗಿ. ಐಎಎಸ್ ಅಧಿಕಾರಿಯ ಮಕ್ಕಳ ಜತೆ ಬೀದಿಗುಡಿಸುವ, ಚರಂಡಿಗಿಳಿಯುವ, ಚಪ್ಪಲಿ ಹೊಲಿಯುವವರ ಮಕ್ಕಳು ಪೈಪೋಟಿ ಮಾಡಲು ಅಸಾಧ್ಯ. ಈ ಸಮೀಕ್ಷೆಯ ಫಲಿತಾಂಶವಾಗಿ ಇಂತಹ ಕಾರ್ಮಿಕರ ಮಕ್ಕಳಿಗೆ ಕೂಡ ಈ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲ್ ಸ್ತರದಲ್ಲಿರುವ ಮಕ್ಕಳೊಂದಿಗೆ ಸಮಾನ ಅವಕಾಶ ದೊರೆಯಬೇಕು. ಆಯೋಗವು ಮೂರು ಅಥವಾ ನಾಲ್ಕು ಗುಂಪುಗಳಲ್ಲಿ ಮೀಸಲಾತಿಯನ್ನು ಹಂಚುವ ಸಾಧ್ಯತೆ ಇದೆ. ಆಗ ಇಂತಹ ಕಾರ್ಮಿಕ ವರ್ಗದ ಪರಿಶಿಷ್ಟರಿಗೆ ಎಲ್ಲ ಗುಂಪುಗಳಲ್ಲೂ ಅವಕಾಶ ನೀಡುವ ಒಂದು ವಿಭಿನ್ನ ಒಳ ಮೀಸಲಾತಿ ಸೂತ್ರವನ್ನು ರಚಿಸಲಿ ಮತ್ತು ಅದೊಂದು ಸರಕಾರದ ನೀತಿಯಾಗಿ ಜಾರಿಯಾಗಲಿ. ನಾವು ಹರ್ಯಾಣ, ತಮಿಳುನಾಡು, ತೆಲಂಗಾಣ ನೋಡದೆ ಇಡೀ ದೇಶವೇ ನಮ್ಮ ನೀತಿಯನ್ನು ಜಾರಿ ಮಾಡುವಂತಾಗಲಿ. ಅಂತಹ ಕ್ರಾಂತಿಕಾರಿ ಕೆಲಸಕ್ಕೆ ಆಯೋಗ ಮುಂದಾಗಬೇಕು. ಇದೇ ನೀತಿ ಇತರ ಹಿಂದುಳಿದ ವರ್ಗಗಳಿಗೆ ಮತ್ತು ಸಂವಿಧಾನ ಬಾಹಿರ ಇಡಬ್ಲ್ಯುಎಸ್ ಮೀಸಲಾತಿಗೂ ಅನ್ವಯವಾಗಲಿ. ಆಯೋಗ ರಾಜಕಾರಣಿಗಳ ಒಡೆದು ಆಳುವ ನೀತಿಗೆ ಆಯುಧ ಆಗಬಾರದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಮೇಶ್ ಎಸ್. ಪೆರ್ಲ

contributor

Similar News