ಅತ್ತ ನಕ್ಸಲರು, ಇತ್ತ ಪೊಲೀಸರು ನಡುವೆ ನಲುಗಿಹೋದ ಗೌಡಲು

Update: 2026-07-29 10:15 IST

ಗೌಡ್ಲು, ಗೌಡಲು, ಗೌಡಾಲು ಎಂದು ಕರೆಯಲಾಗುವ ಈ ಸಮುದಾಯದಲ್ಲಿ ಐದು ಪಂಗಡಗಳಿವೆ. ಅವನ್ನು ಕಬ್ಬಿನ ಗೌಡಲು, ಕೊಡಗಿನ ಗೌಡಲು, ಹಾಲುಗೌಡಲು, ನಾಮಧಾರಿ ಗೌಡಲು ಮತ್ತು ಕುಂಬರೀಗೌಡಲು ಎಂದು ಕರೆಯುತ್ತಾರೆ.

ಗೌಡಲು, ಗೌಡ್ಲು ಎಂದು ಕರೆದಾಗ ಗೌಡರು ಎಂದು ಧ್ವನಿಸುತ್ತದೆ. ಆದರೆ ಈ ಸಮುದಾಯಕ್ಕೆ ಗೌಡರಿಗೆ ಇರಬಹುದಾದ ಯಾವುದೇ ಸಾಮಾಜಿಕ, ಆರ್ಥಿಕ ಸ್ಥಾನಮಾನಗಳಿಲ್ಲ ಎಂಬುದು ಗಮನಾರ್ಹ.

ಆಯೋಗಕ್ಕೆ ಬಂದು ಕೇವಲ ಹತ್ತನ್ನೊಂದು ದಿನ ಕಳೆದಿರಬಹುದು, ನಾನಿನ್ನು ಆಯೋಗದ ಬಗ್ಗೆ ಅರಿಯಲು ಯತ್ನಿಸುತ್ತಿದ್ದ ದಿನಗಳವು, ಯಾವ ಜಾತಿ ಯಾವ ಪಟ್ಟಿಯಲ್ಲಿದೆ? ಹಿಂದುಳಿದ ವರ್ಗದಲ್ಲಿ ಎಷ್ಟು ಜಾತಿಗಳಿವೆ. ಅಲ್ಪಸಂಖ್ಯಾತರ ಪಟ್ಟಿ ಅನ್ನೋದು ಬೇರೆ ಇದೆಯೆ? ಪರಿಶಿಷ್ಟ ಜಾತಿ ಪಟ್ಟಿ, ಪರಿಶಿಷ್ಟ ಪಂಗಡದ ಪಟ್ಟಿಗಳ ನಡುವಿನ ವ್ಯತ್ಯಾಸವೇನು? ಎಂಬ ಗೊಂದಲಗಳಲ್ಲಿ ಕಳೆದುಹೋಗಿದ್ದೆ. ಈ ಸಂದರ್ಭದಲ್ಲಿ ಶೃಂಗೇರಿ ಬಳಿಯ ಮೆಣಸಿನ ಹಾಡ್ಯದ ‘ಎನ್‌ಕೌಂಟರ್’ ನಡೆದುಹೋಗಿತ್ತು. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಮೆಣಸಿನ ಹಾಡ್ಯದಲ್ಲಿ ಪೊಲೀಸರ ಗುಂಡಿಗೆ ಒಂದೇ ಕುಟುಂಬದ ನಾಲ್ಕು ಮಂದಿ ಬಲಿಯಾಗಿದ್ದರು. ನಕ್ಸಲಿಯರೆಂದೋ, ನಕ್ಸಲೀಯರಿಗೆ ಬೆಂಬಲಿಗರೆಂದೋ ಕಾರಣ ಹೇಳಿ ಒಂದು ಗುಡಿಸಲ ಮೇಲೆ ಪೊಲೀಸರು ಗುಂಡಿನ ಸುರಿಮಳೆಗೈದಿದ್ದರು. ಆ ಗುಡಿಸಲಲ್ಲಿದ್ದ ಹೆಂಗಸರು, ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದರು. ಈ ಕುಟುಂಬ ‘ಗೌಡ್ಲು’ ಎಂಬ ಅತ್ಯಂತ ನಿರ್ಲಕ್ಷಿತ ಹಿಂದುಳಿದ ಸಮುದಾಯಕ್ಕೆ ಸೇರಿದ ಕುಟುಂಬವೆಂದು ಸುದ್ದಿಬಂತು. ಚಿಕ್ಕಮಗಳೂರು, ಶೃಂಗೇರಿ, ಕುದುರೆಮುಖದ ಘಟ್ಟಗಳಲ್ಲಿ ಗೌಡ್ಲು ಎಂಬ ಅತ್ಯಂತ ಹಿಂದುಳಿದ ವರ್ಗವಿದೆ. ತೀರಾ ಬಡತನದಿಂದ ಬಳಲುತ್ತಿರುವ ಇವರು ಜೀವಿಸುವ ಈ ಗುಡಿಸಲುಗಳಿಗೆ ಆಗಾಗ ಅನ್ನ ನೀರಿಗಾಗಿ ಈ ಭಾಗದ ನಕ್ಸಲರು ಬರುತ್ತಿದ್ದರಂತೆ. ಇವರಿಗೆ ಅನ್ನ ನೀಡಿದರೆ ಪೊಲೀಸರು ಬಂದು ಹಿಂಸಿಸುತ್ತಿದ್ದರು. ಅನ್ನ ನೀಡದಿದ್ದರೆ ನಕ್ಸಲರ ಕೆಂಗಣ್ಣಿಗೆ ಈ ಅಸಹಾಯಕ ಸಮುದಾಯದವರು ಸಿಕ್ಕಿ ನರಳಬೇಕಾಗುತ್ತದೆ. ಈ ಕಾರಣಕ್ಕೆ ಈ ಗೌಡ್ಲು ಸಮುದಾಯ ಬಡತನದೊಂದಿಗೆ ಅತ್ಯಂತ ಭಯ ಆತಂಕಗಳಿಂದ ಬದುಕಬೇಕಿತ್ತು. ನಕ್ಸಲರ-ಪೊಲೀಸರ ನಡುವಿನ ಸಂಘರ್ಷದಲ್ಲಿ ಈ ಗೌಡ್ಲು ಸಮುದಾಯ ಅತ್ಯಂತ ನೋವು, ಅಸಹಾಯಕತೆಯಿಂದ ಜರ್ಜರಿತವಾಗಿತ್ತು.

ಮೆಣಸಿನ ಹಾಡ್ಯದಲ್ಲಿ ಗೌಡ್ಲು ಸಮುದಾಯದವರನ್ನು ಎನ್‌ಕೌಂಟರ್ ಮಾಡಿ ಕೊಂದ ವಿಷಯ ತಿಳಿದಾಕ್ಷಣ ನಾನು ಈ ಗೌಡ್ಲು ಯಾವ ಪಟ್ಟಿಗೆ ಬರುತ್ತಾರೆ ಎನ್ನುವುದನ್ನೂ ಚಿಂತಿಸದೆ ಇದೊಂದು ಅತ್ಯಂತ ಶೋಷಣೆಗೆ ಒಳಗಾದ ಸಮುದಾಯವೆಂದು ಗೊತ್ತಿದ್ದ ಕಾರಣಕ್ಕೆ, ಯಾವ ಕೂದಲು ಸೀಳುವ ಚರ್ಚೆಗೂ ತಲೆಗೊಡದೆ ಚಿಕ್ಕಮಗಳೂರಿನ ಕಡೆ ಪಯಣಿಸಿದೆ. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಮತ್ತು ರಕ್ಷಣಾಧಿಕಾರಿಗಳು ಎನ್‌ಕೌಂಟರ್ ನಡೆದ ಸ್ಥಳಕ್ಕೆ ಹೋಗುವುದು ಅಪಾಯಕಾರಿಯೆಂದೂ ಯಾವ ಕಾರಣಕ್ಕೂ ಹೋಗುವುದು ಬೇಡವೆಂದು ನನ್ನನ್ನು ಎಚ್ಚರಿಸಿದರೂ, ನಾನು ಯಾರ ಮಾತನ್ನೂ ಕೇಳದೆ ಗೌಡ್ಲು ಸಮುದಾಯದ ಮಾನವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರತ್ಯಕ್ಷ ವರದಿ ನೀಡುವುದು ನನ್ನ ಪ್ರಾಥಮಿಕ ಕರ್ತವ್ಯವೆಂದು ಭಾವಿಸಿ ಮೆಣಸಿನಹಾಡ್ಯಕ್ಕೆ ಹೋದೆ. ಸ್ಥಳ ಪರಿಶೀಲನೆ ಮಾಡಿ ಸರಕಾರಕ್ಕೆ ವರದಿಯನ್ನೂ ನೀಡಿದೆ. ಅಲ್ಲಿ ಪಟ್ಟ ಪಡಿಪಾಟಲುಗಳ ಕುರಿತು ಅದರ ವಿವರಗಳನ್ನು ಮತ್ತೆಂದಾದರೂ ಬರೆಯುವೆ.

ಚಿಕ್ಕಮಗಳೂರು, ಉಡುಪಿ, ಸಕಲೇಶಪುರ ಭಾಗದ ದಟ್ಟ ಅರಣ್ಯದಲ್ಲಿ ಈ ಗೌಡಲು ಸಮುದಾಯ ನೆಲೆಸಿದೆ. ಇದೊಂದು ವಿಶಿಷ್ಟ ಆದಿವಾಸಿ ಸಮುದಾಯ, ಮಲೆನಾಡಿನ ಅಜ್ಞಾತ ಘಟ್ಟಗಳಲ್ಲಿನ ವಿಕ್ಷಿಪ್ತ ಭೂಮಾಲಕರ ದೌರ್ಜನ್ಯದಲ್ಲಿ ಈ ಸಮುದಾಯ ಹೀನಾಯ ನೋವನ್ನು ಅನುಭವಿಸಿದೆ. ಈ ಕಾರಣಕ್ಕೇ ಈ ಸಮುದಾಯದ ಕೆಲ ಹುಡುಗರು ನಕ್ಸಲರಿಂದ ಆಕರ್ಷಿತರಾಗಿರಬಹುದು. ಇದೇ ಕಾರಣಕ್ಕೆ ನಕ್ಸಲರ ಸಂಪರ್ಕಕ್ಕೆ ಬಂದಿರಲೂಬಹುದು. ಮೂಲತಃ ಈ ಸಮುದಾಯ ಮಲೆನಾಡಿನ ಕಾಫಿ ತೋಟಗಳಲ್ಲಿ ಜೀತಕ್ಕೆಂದು ಬಂದು ನೆಲೆಸಿದಂತಿದೆ. ಗೌಡ್ಲು, ಗೌಡಲು, ಗೌಡಾಲು ಎಂದು ಕರೆಯಲಾಗುವ ಈ ಸಮುದಾಯದಲ್ಲಿ ಐದು ಪಂಗಡಗಳಿವೆ. ಅವನ್ನು ಕಬ್ಬಿನ ಗೌಡಲು, ಕೊಡಗಿನ ಗೌಡಲು, ಹಾಲುಗೌಡಲು, ನಾಮಧಾರಿ ಗೌಡಲು ಮತ್ತು ಕುಂಬರೀಗೌಡಲು ಎಂದು ಕರೆಯುತ್ತಾರೆ.

ಗೌಡಲು, ಗೌಡ್ಲು ಎಂದು ಕರೆದಾಗ ಗೌಡರು ಎಂದು ಧ್ವನಿಸುತ್ತದೆ ಆದರೆ ಈ ಸಮುದಾಯಕ್ಕೆ ಗೌಡರಿಗೆ ಇರಬಹುದಾದ ಯಾವುದೇ ಸಾಮಾಜಿಕ, ಆರ್ಥಿಕ ಸ್ಥಾನಮಾನಗಳಿಲ್ಲ ಎಂಬುದು ಗಮನಾರ್ಹ.

ಕಾಡನ್ನೇ ತಾಯಿಯೆಂದು ನಂಬಿದ ಈ ಗೌಡಲು ಸಮುದಾಯದವರು ಕಾಡಲ್ಲೇ ವಾಸಿಸಿದರೂ ಯಾವುದೇ ಕಾಡಿನ ಉತ್ಪನ್ನಗಳನ್ನು ತಮಗೆ ಬೇಕಾದಷ್ಟು ಮಿತಿಯಲ್ಲಿ ಮಾತ್ರ ಬಳಸುತ್ತಾರೆಯೇ ಹೊರತು ಕಾಡಿನ ಪರಿಸರಕ್ಕೆ ಧಕ್ಕೆ ಮಾಡಿ ಕಾಡಿನ ಸಂಪತ್ತನ್ನು ದುರುಪಯೋಗ ಮಾಡುವುದಿಲ್ಲ. ಕಾಡಿಗೆ ಇವರು ಕೊಡುವ ಗೌರವ ಇದು. ಈ ಸಮುದಾಯ ಸಾಮಾಜಿಕ ಸ್ತರ ವಿನ್ಯಾಸಕ್ಕೆ ಅನುಗುಣವಾಗಿ ಆಧುನಿಕ ಸಮಾಜದ ರೀತಿ ರಿವಾಜುಗಳನ್ನು ಒಪ್ಪಿಕೊಳ್ಳುತ್ತಾ ರೂಪಾಂತರ ಗೊಳ್ಳುತಿದ್ದಾರೆ. ಗೌಡಲು ಸಮುದಾಯದ ಜೀವನವಿಧಾನ ಮತ್ತು ಲೋಕರೂಢಿಗಳು, ಸಂಪ್ರದಾಯಗಳು, ಸಹಕಾರ, ಉಡುಗೆತೊಡುಗೆ, ವೃತ್ತಿ ಬೆಡಗುಗಳು, ನ್ಯಾಯ ಪದ್ಧತಿ, ಪಶುಪಾಲನೆ, ಕುಮ್ರಿ ಬೇಸಾಯ ಪದ್ಧತಿ, ಬುಡಕಟ್ಟು ಜೀವನ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಇವರ ಜೀವನಕ್ರಮವನ್ನು ರೂಪಿಸಿದೆ. ಗೌಡಲು ಸಮುದಾಯವನ್ನು ಐದು ಹೆಸರುಗಳಲ್ಲಿ ಕರೆಯುತ್ತಾರೆ. ತುಳು ಗೌಡಲು, ನಾಮಧಾರಿ ಗೌಡಲು, ಮಲೆನಾಡು ಗೌಡಲು, ಕುಂಬ್ರಿ ಗೌಡಲು, ಕಬ್ಬಿನ ಮಲೆಯವರು. ಆಯಾ ಪ್ರದೇಶದಲ್ಲಿ ಆಯಾ ಹೆಸರುಗಳಿಂದ ಕರೆಯುತ್ತಾರೆ.

ಗೌಡಲು ಬುಡಕಟ್ಟು ಸಮುದಾಯದಲ್ಲಿ ಈಚೆಗೆ ಹೆಚ್ಚಿನ ಸಂಖ್ಯೆಯವರು ಕನ್ನಡ ಮಾತನಾಡುತ್ತಾರೆ. ಉಳಿದಂತೆ ತುಳು ಮಾತನಾಡುತ್ತಾರೆ. ಚಿಕ್ಕಮಗಳೂರು ವ್ಯಾಪ್ತಿಗೆ ಬರುವ ಶೃಂಗೇರಿ, ಕೊಪ್ಪ, ಎನ್.ಆರ್. ಪುರ, ಮೂಡಿಗೆರೆ ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಬರುವ ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲಿ ಕನ್ನಡ ಮಾತನಾಡುತ್ತಾರೆ. ಉಡುಪಿ, ಕಾರ್ಕಳ ತಾಲೂಕುಗಳಲ್ಲಿ ತುಳು ಮಾತನಾಡುತ್ತಾರೆ.

ಗೌಡಲು ಸಮುದಾಯ ಅಪ್ಪಟ ಬುಡಕಟ್ಟು ಸಮುದಾಯವಾಗಿದ್ದು ಇದು ಪರಿಶಿಷ್ಟ ಪಂಗಡಕ್ಕೆ ಸೇರಬೇಕೇ, ಪರಿಶಿಷ್ಟ ಜಾತಿಗೆ ಸೇರಬೇಕೇ ಅಥವಾ ಹಿಂದುಳಿದ ವರ್ಗಕ್ಕೆ ಸೇರಬೇಕೇ ಎನ್ನುವ ಜಿಜ್ಞಾಸೆ ಬಹಳ ಕಾಲದಿಂದ ಇದೆ. ಗೌಡಲು, ಗೌಡ್ಲು ಎಂಬುದು ಗೌಡರು ಎಂಬ ರೀತಿಯಲ್ಲಿ ಧ್ವನಿಸುವುದರಿಂದ ಅನೇಕ ಮಂದಿ ತಹಶೀಲ್ದಾರರು ಇವರಿಗೆ ಜಾತಿ ಸರ್ಟಿಫಿಕೇಟ್ ನೀಡಲು ಹಿಂಜರಿಯುತ್ತಾರೆ. ಇದರಿಂದಾಗಿ ಇವರ ಮಕ್ಕಳ ಶಿಕ್ಷಣಕ್ಕೆ ತೊಡಕಾಗುತ್ತಿದೆ. ಆದಿವಾಸಿ, ಅಲೆಮಾರಿ ಸಮುದಾಯಗಳಲ್ಲಿರುವ ಹೆಸರಿನ ಗೊಂದಲಗಳನ್ನು ಸರಿಪಡಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳನ್ನು ಒಳಗೊಂಡಂತೆ ಆಯೋಗವೊಂದನ್ನು ರಚಿಸಬೇಕೆಂದು ಈ ನತದೃಷ್ಟ ಸಮುದಾಯಗಳು ‘ಶೋಷಿತ ಸಮುದಾಯಗಳ ಧ್ವನಿ’ಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕನಿಷ್ಠ ಒಂದು ಡಝನ್ ಸಲವಾದರೂ ಹೋಗಿ ಮನವಿ ಮಾಡಿದರೂ ಅವರು ಈ ನೊಂದವರ ನೋವಿಗೆ ಕನಿಷ್ಠ ಸ್ಪಂದಿಸಲಿಲ್ಲ! ಈ ಹಿನ್ನೆಲೆಯಲ್ಲಿ ಗೌಡಲು ಸಮುದಾಯಕ್ಕೆ ಸರಕಾರದ ಯಾವುದೇ ಸವಲತ್ತುಗಳು ಈವೆರೆಗೂ ಸಿಕ್ಕಿಲ್ಲ. ಗೌಡಲು ಇತರ ಬುಡಕಟ್ಟುಗಳಂತೆಯೇ ನಶಿಸಿಹೋಗುತ್ತಿದ್ದಾರೆ ಎನ್ನುವುದೇ ವಾಸ್ತವ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News