ಕನಕಗಿರಿ: ಅಕ್ರಮ ಮರಳುಗಾರಿಕೆ ದಂಧೆ

ಪೊಲೀಸರ ಅಭಯಹಸ್ತ: ಆರೋಪ

Update: 2026-07-28 14:59 IST

ಕನಕಗಿರಿ: ತಾಲೂಕು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮರಳು ದಂಧೆ ನಿರಂತರವಾಗಿ ನಡೆಯುತ್ತಿದೆ. ಪರವಾನಿಗೆ ಇಲ್ಲದೆಯೇ ಟಿಪ್ಪರ್, ಟ್ಯಾಕ್ಟರ್‌ಗಳಲ್ಲಿ ಮರಳು ತುಂಬಿಸಿಕೊಂಡು ರಾಜರೋಷವಾಗಿ ಬೇರೆ ಜಿಲ್ಲೆಗಳಿಗೆ ಸಾಗಿಸುತ್ತಿದ್ದು, ಕಾನೂನಿಗೆ ಯಾರೂ ಬಗ್ಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪೊಲೀಸರ ಅಭಯಹಸ್ತದ ಆರೋಪ: ಅಕ್ರಮ ದಂಧೆಗೆ ಪೊಲೀಸರ ಸಹಕಾರ ಇದೆ ಎಂಬ ಆರೋಪಗಳು ಜೋರಾಗಿವೆ. ಮಾಮೂಲಿ ಕೊಡದಿದ್ದರೆ ವಶ, ಕೊಟ್ಟರೆ ಬಿಡುಗಡೆ ಎಂಬ ಮಾತುಗಳು ಸ್ಥಳೀಯರಲ್ಲಿ ಕೇಳಿ ಬರುತ್ತಿವೆ. ಹಗಲು-ರಾತ್ರಿ ಲಾರಿಗಳು ಸಂಚರಿಸುತ್ತಿದ್ದರೂ ಯಾವುದೇ ಚೆಕ್ ಪೋಸ್ಟ್‌ನಲ್ಲಿ ತಡೆಯಾಗುತ್ತಿಲ್ಲ.

ಸಿಡಿಆರ್ ಮೂಲಕ ತನಿಖೆಗೆ ಸಾರ್ವಜನಿಕರ ಆಗ್ರಹ:

ಅಕ್ರಮ ಮರಳು ದಂಧೆಕೋರರ ಜೊತೆ ಮಾತನಾಡಿರುವ ಪೊಲೀಸರ ದಂಧೆ ಬಯಲಿಗೆಳೆಯಲು ಪೊಲೀಸರ ಮೊಬೈಲ್‌ನ ಸಿಡಿಆರ್ ತೆಗೆಸಬೇಕು ಎಂದು ಸಾರ್ವಜನಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇದರಿಂದ ಅವರ ಅಕ್ರಮಗಳು ಬಯಲಾಗುತ್ತವೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ್ ಈಚನಾಳ ಆಗ್ರಹಿಸಿದ್ದಾರೆ.

ಆದಾಯಕ್ಕೆ ಹೊಡೆತ: ಈ ಅಕ್ರಮ ಸಾಗಣೆಯಿಂದ ಹಳ್ಳ ಕೊಳ್ಳಗಳು ನಾಶವಾಗುತ್ತಿವೆ. ಸರಕಾರಕ್ಕೆ ಕೋಟ್ಯಂತರ ರೂ. ರಾಜಧನನಷ್ಟವಾಗುತ್ತಿದೆ.

ಹೆಚ್ಚಿದ ಬೇಡಿಕೆ: ಜಿಲ್ಲಾಡಳಿತ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಅಕ್ರಮ ಮರಳು ದಂಧೆ ವಿರುದ್ಧ ಸಿಡಿಆರ್ ಸಮೇತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು.

ಒಂದು ಟಿಪ್ಪರ್‌ಗೆ 17 ಸಾವಿರ ರೂ.ಮಾಮೂಲಿ?

ಹೆಸರು ಹೇಳಲು ಇಚ್ಚಿಸದ ಟಿಪ್ಪರ್ ಮಾಲೀಕ ರೊಬ್ಬರು ನೀಡಿದ ಸ್ಪೋಟಕ ಮಾಹಿತಿ ಪ್ರಕಾರ, ಒಂದು ಟಿಪ್ಪರ್‌ಗೆ ತಿಂಗಳಿಗೆ 17 ಸಾವಿರ ರೂ. ಮಾಮೂಲಿಫಿಕ್ಸ್ ಮಾಡಲಾಗಿದೆ. ಈ ಹಣ ಕೊಟ್ಟರೆ ಯಾರೂ ತಡೆಯುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹೊನ್ನೂರ ಹುಸೇನ ಬೇಲ್ದಾರ್

contributor

Similar News