ಮಾದಕ ವ್ಯಸನಿಗಳ ಅಂತ್ಯಕ್ರಿಯೆಗೆ ಖಬರಸ್ತಾನ್‌ನಲ್ಲಿ ಜಾಗ ನೀಡುವುದಿಲ್ಲ : ಕಟ್ಟಿಗೇನಹಳ್ಳಿ ಮುಸ್ಲಿಮರಿಂದ ಘೋಷಣೆ
ಬೆಂಗಳೂರು : ಮದ್ಯ ಸೇವನೆ, ಗಾಂಜಾ ಸಹಿತ ಯಾವುದೇ ರೀತಿಯ ವ್ಯಸನಗಳಿಂದ ಗುರಿಯಾಗಿ ಮೃತರಾದರೆ ಖಬರಸ್ತಾನ್‌ನಲ್ಲಿ ಅಂತ್ಯಕ್ರಿಯೆಗೆ ಜಾಗ ಕೊಡುವುದಿಲ್ಲ ಎಂದು ಬೆಂಗಳೂರು ಹೊರವಲಯದ ಹೊಸಕೋಟೆ ಸಮೀಪದ ಕಟ್ಟಿಗೇನಹಳ್ಳಿ ಮುಸ್ಲಿಮರು ನಿರ್ಧಾರ ಕೈಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗ್ರಾಮದ ಯುವಕರು, ಅಪ್ರಾಪ್ತ ಬಾಲಕರು ಮದ್ಯ ಸೇವನೆಯ ದಾಸರಾಗುತ್ತಿದ್ದಾರೆ. ಇತ್ತ ಗಾಂಜಾ ಸೇವನೆ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಚಟವೂ ಹೆಚ್ಚಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇನ್ನೊಂದೆಡೆ, ಕುಟುಂಬ ಕಲಹ, ಅನಗತ್ಯ ಗಲಾಟೆಗಳು ಗ್ರಾಮ ವ್ಯಾಪ್ತಿಯಲ್ಲಿ ವರದಿಯಾಗುತಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು, ಜಾಮಿಯಾ ಮಸೀದಿಯ ಕಮಿಟಿ ನೇತೃತ್ವದಲ್ಲಿ ರವಿವಾರ ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿ ಸಾರಾಯಿ ಬಾಟಲು, ಪ್ಯಾಕೆಟ್‌ಗಳು ಹಾಗೂ ವಿವಿಧ ಬಗೆಯ ಮಾದಕ ವಸ್ತುಗಳನ್ನು ಜಪ್ತಿ ಮಾಡಿ ರಸ್ತೆಯಲ್ಲಿಯೇ ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ.
ಈ ವೇಳೆ ವಿಶೇಷ ಘೋಷಣೆ ಮಾಡಿದ ಗ್ರಾಮಸ್ಥರು ಹಾಗೂ ಮಸೀದಿಯ ಇಮಾಮ್, ಕಟ್ಟಿಗೇನಹಳ್ಳಿಯ ಯುವ ಜನತೆ ಮಾದಕ ವಸ್ತುಗಳ ಸೇವನೆಯಿಂದ ಹಾಳಾಗುತ್ತಿರುವ ಕುರಿತು ದಿನನಿತ್ಯ ದೂರುಗಳು, ವರದಿಗಳು ಬೆಳಕಿಗೆ ಬಂದಿವೆ. ಹೀಗಾಗಿ, ಊರಿನ ಜಾಮೀಯಾ ಮಸೀದಿಯ ಕಮಿಟಿ ಸಭೆಯ ನಿರ್ದೇಶನದಂತೆ ಯಾರು ಮದ್ಯ ಸೇವನೆ, ಮಾದಕ ವಸ್ತುಗಳ ಚಟದಿಂದ ಮೃತರಾಗುತ್ತಾರೋ ಅವರಿಗೆ ಗ್ರಾಮದ ವ್ಯಾಪ್ತಿಯಲ್ಲಿರುವ ಖಬರಸ್ತಾನ್‌ನಲ್ಲಿ ಅಂತ್ಯಕ್ರಿಯೆಗೆ ಜಾಗವನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಅದೇ ರೀತಿ, ಮಸೀದಿಯಿಂದ ಅಂತ್ಯಕ್ರಿಯೆಗೆ ಯಾವುದೇ ರೀತಿಯ ನೆರವು ನೀಡಲಾಗುವುದಿಲ್ಲ. ಇದೊಂದು ಸುತ್ತೋಲೆ ಎಂದೇ ಗ್ರಾಮದ ಮಸ್ಲಿಮರು ಪರಿಗಣಿಸಿ, ಕೆಟ್ಟ ಚಟಗಳಿಂದ ಯುವಕರನ್ನು ಹಾಗೂ ಸಂಬಂಧಪಟ್ಟ ವ್ಯಕ್ತಿಗಳನ್ನು ದೂರ ಇಡಬೇಕೆಂದು ತಿಳಿಸಿದ್ದಾರೆ.