ಬಿಸಿಲೂರು ರಾಯಚೂರಿಗೆ ಹಸಿರು ಹೊದಿಕೆ : ಇಸ್ರೋ ಅಂಗಸಂಸ್ಥೆಯಿಂದ 1 ಕೋಟಿ ರೂ. ನೆರವು

5 ಲಕ್ಷ ಸಸಿ ನೆಡುವ ಗುರಿ; ಸಿಎಸ್‌ಆರ್ ನಿಧಿಯಿಂದ ನಗರವನ್ನು ‘ಕೂಲ್ ಆಂಡ್ ಗ್ರೀನ್ ಸಿಟಿ’ಯಾಗಿ ರೂಪಿಸಲು ಪಾಲಿಕೆ ಯೋಜನೆ

Update: 2026-07-28 14:47 IST

ರಾಯಚೂರು: ರಾಜ್ಯದಲ್ಲೇ ಅತ್ಯಧಿಕ ತಾಪಮಾನ ದಾಖಲಾಗುವ ಜಿಲ್ಲೆಗಳಲ್ಲಿ ಒಂದಾದ ರಾಯಚೂರಿಗೆ ಹಸಿರು ಹೊದಿಕೆ ಹೊದಿಸಲು ಮಹಾನಗರ ಪಾಲಿಕೆ ಮಹತ್ವಾಕಾಂಕ್ಷಿ ಯೋಜನೆ ಕೈಗೊಂಡಿದೆ. ಈ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಾಣಿಜ್ಯ ಅಂಗಸಂಸ್ಥೆಯಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ತನ್ನ ಸಿಎಸ್‌ಆರ್ ನಿಧಿಯಿಂದ 1 ಕೋಟಿ ರೂ. ಆರ್ಥಿಕ ನೆರವು ನೀಡಿದೆ.

ಎನ್‌ಎಸ್‌ಐಎಲ್, ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಮತ್ತು ಸೇವೆಗಳನ್ನು ವಾಣಿಜ್ಯೀಕರಣಗೊಳಿಸುವ ಉದ್ದೇಶದಿಂದ ಸ್ಥಾಪಿಸಲಾದ ಕೇಂದ್ರ ಸರಕಾರದ ಸಂಸ್ಥೆಯಾಗಿದೆ. ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಅಧಿಕಾರ ಸ್ವೀಕರಿಸಿದ ಬಳಿಕ ನಗರದ ಸ್ವಚ್ಛತೆ, ನೈರ್ಮಲ್ಯ, ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ಹಸಿರೀಕರಣಕ್ಕೂ ಆದ್ಯತೆ ನೀಡಿದ್ದಾರೆ. ಪಾಲಿಕೆಯ ಸೀಮಿತ ಅನುದಾನದ ನಡುವೆಯೂ ವಿವಿಧ ಕಂಪನಿಗಳು ಹಾಗೂ ದಾನಿಗಳ ಸಿಎಸ್‌ಆರ್ ನೆರವು ಪಡೆದು ಪರಿಸರ ಸ್ನೇಹಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.

ನಗರವನ್ನು ಹಸಿರು ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 5 ಲಕ್ಷ ಸಸಿಗಳನ್ನು ಬೆಳೆಸಿ ನೆಡುವ ಯೋಜನೆ ರೂಪಿಸಲಾಗಿದೆ. ರಸ್ತೆ ವಿಭಜಕಗಳು, ಉದ್ಯಾನಗಳು, ಸರಕಾರಿ ಕಚೇರಿ ಆವರಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಂತ ಹಂತವಾಗಿ ಸಸಿಗಳನ್ನು ನೆಡಲಾಗುತ್ತಿದೆ.

ಗೋಶಾಲ ರಸ್ತೆ, ಬಸವೇಶ್ವರ ವೃತ್ತ-ಚಂದ್ರಮೌಳೇಶ್ವರ ವೃತ್ತ ಸಂಪರ್ಕ ರಸ್ತೆ, ಸ್ಟೇಷನ್ ರಸ್ತೆ ಹಾಗೂ ಐ.ಬಿ. ರಸ್ತೆಯ ರಸ್ತೆ ವಿಭಜಕಗಳಲ್ಲಿ ಗುಲ್ಮೋಹರ್, ಫಾರೆಸ್ಟ್ ಪಾಮ್ ಸೇರಿದಂತೆ ನೆರಳು ಮತ್ತು ಅಲಂಕಾರಿಕ ಜಾತಿಯ ಸಸಿಗಳನ್ನು ನೆಡಲಾಗಿದೆ. ರಸ್ತೆಗಳ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ದೀರ್ಘಾವಧಿಯಲ್ಲಿ ನೆರಳು ಒದಗಿಸುವ ಗುರಿ ಹೊಂದಲಾಗಿದೆ.

ಬರದ ನಾಡಲ್ಲಿ ಹಸಿರು ಕ್ರಾಂತಿಯ ಪ್ರಯತ್ನ

ಭತ್ತದ ಕಣಜ, ಹಟ್ಟಿ ಚಿನ್ನದ ಗಣಿ, ಶಕ್ತಿನಗರ ಹಾಗೂ ಯರಮರಸ್ ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೂಲಕ ಗುರುತಿಸಿಕೊಂಡಿರುವ ರಾಯಚೂರು ಜಿಲ್ಲೆ, ತೀವ್ರ ಬಿಸಿಲು ಮತ್ತು ಮಳೆಯ ಅಭಾವದಿಂದ ಬರದ ನಾಡು ಎಂಬ ಹೆಸರನ್ನೂ ಪಡೆದಿದೆ. ಬೇಸಿಗೆಯಲ್ಲಿ ಅಧಿಕ ಉಷ್ಣಾಂಶದಿಂದಾಗಿ ವಿವಿಧ ಇಲಾಖೆಗಳಿಗೆ ವರ್ಗಾವಣೆಯಾಗಿ ಬರುವ ಅನೇಕ ಅಧಿಕಾರಿಗಳು ದೀರ್ಘಾವಧಿ ಸೇವೆ ಸಲ್ಲಿಸದೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಪಡೆಯುವುದು ಸಾಮಾನ್ಯವಾಗಿದೆ.

ಸಾವಿರಾರು ಕೋಟಿ ರೂಪಾಯಿ ಅನುದಾನ ಬಂದಿದ್ದರೂ ನಗರಾಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ ಎಂಬ ಟೀಕೆಗಳಿವೆ. ಆದರೆ ಮಾಜಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರ ಅವಧಿಯಲ್ಲಿ ಆಯುಕ್ತ ಜುಬಿನ್ ಮೊಹಪಾತ್ರ ಅವರೊಂದಿಗೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದವು.

ಮಳೆಯ ಕೊರತೆ, ಹವಾಮಾನ ವೈಪರೀತ್ಯ ಹಾಗೂ ಸಾರ್ವಜನಿಕರಲ್ಲಿ ಹಸಿರೀಕರಣದ ಬಗ್ಗೆ ಜಾಗೃತಿ ಕಡಿಮೆಯಿರುವುದು ನಗರದಲ್ಲಿ ಮರಗಳ ಸಂಖ್ಯೆಯೂ ಕಡಿಮೆಯಾಗಲು ಕಾರಣವಾಗಿದೆ. ಪರಿಸರ ತಜ್ಞರ ಪ್ರಕಾರ ನಗರ ಪ್ರದೇಶದಲ್ಲಿ ಕನಿಷ್ಠ ಶೇ.30ರಷ್ಟು ಹಸಿರು ಪ್ರದೇಶ ಇರಬೇಕಾದರೆ, ರಾಯಚೂರಿನಲ್ಲಿ ಅದು ಕೇವಲ ಶೇ.2ರಷ್ಟೇ ಇರುವುದರಿಂದ ಆತಂಕ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳು, ವೃತ್ತಗಳು, ಉದ್ಯಾನಗಳು, ಸರಕಾರಿ ಕಚೇರಿ ಆವರಣಗಳು ಹಾಗೂ ಖಾಲಿ ಜಾಗಗಳಲ್ಲಿ ಹಸಿರೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ.

ನಗರದ ಹೊರವಲಯದ ಯಕ್ಲಾಸಪುರದಲ್ಲಿ ಮಿಯಾವಾಕಿ ಮಾದರಿಯ ಕಿರು ಅರಣ್ಯ ನಿರ್ಮಾಣಕ್ಕಾಗಿ ಭಾರತ ಭದ್ರತಾ ಮುದ್ರಣ ಮತ್ತು ನಾಣ್ಯ ತಯಾರಿಕಾ ನಿಗಮ (ಎಸ್‌ಪಿಎಂಸಿಐಎಲ್) ವತಿಯಿಂದ 1.5 ಕೋಟಿ ರೂ. ಸಿಎಸ್‌ಆರ್ ನೆರವು ಪಡೆದು 70 ಸಾವಿರ ಸಸಿಗಳನ್ನು ನೆಡಲಾಗಿದೆ.

ಈ ಹಿಂದೆ ಪಾಲಿಕೆ ಅನುದಾನದಲ್ಲಿ ಚಂದ್ರಬಂಡಾ ರಸ್ತೆ ಹಾಗೂ ಎಪಿ ಕಚೇರಿ ರಸ್ತೆಯ ಎರಡೂ ಬದಿಯಲ್ಲಿ ನೆಡಲಾಗಿದ್ದ ಸಸಿಗಳು ಉತ್ತಮವಾಗಿ ಬೆಳೆದಿವೆ. ಆದರೆ ರಸ್ತೆ ವಿಭಜಕಗಳಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನೆಡಲಾಗಿದ್ದ ಕೆಲವು ಸಸಿಗಳು ಸಮರ್ಪಕ ನೀರಿನ ಕೊರತೆಯಿಂದ ಒಣಗಿದ್ದವು. ಈ ಅನುಭವದ ಹಿನ್ನೆಲೆಯಲ್ಲಿ ಈಗ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ರಸ್ತೆ ಬದಿಯಲ್ಲಿ ಸ್ಪಾಥೋಡಿಯಾ ಹಾಗೂ ಕದಂಬ ಮರಗಳನ್ನು, ರಸ್ತೆ ವಿಭಜಕಗಳಲ್ಲಿ ಬೋಗನ್‌ವಿಲಿಯಾ, ಕನಕಾಂಬರ ಮತ್ತು 10-12 ಅಡಿ ಎತ್ತರದ ಫಾಕ್ಸ್ ಟೇಲ್ ಪಾಮ್ ನೆಡುವ ಕಾರ್ಯ ನಡೆಯುತ್ತಿದೆ. ಸಸಿಗಳ ನಿರ್ವಹಣೆಗಾಗಿ ಆರು ಕೊಳವೆಬಾವಿಗಳನ್ನು ಕೊರೆಸಿ ಸುಮಾರು 3 ಕಿ.ಮೀ. ಪೈಪ್‌ಲೈನ್ ಅಳವಡಿಸಲಾಗಿದ್ದು, ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕವೂ ನೀರುಣಿಸಲಾಗುತ್ತಿದೆ.

1,165 ಎಕರೆಯಲ್ಲಿ ಹಸಿರೀಕರಣ ಗುರಿ

ರಾಯಚೂರನ್ನು ಕೂಲ್ ಅಂಡ್ ಗ್ರೀನ್ ಸಿಟಿಯಾಗಿ ರೂಪಿಸಲು ಪಾಲಿಕೆ ಹಾಗೂ ವಿವಿಧ ಸಂಸ್ಥೆಗಳ ಸಿಎಸ್‌ಆರ್ ನಿಧಿಯಿಂದ ಇದುವರೆಗೆ ಸುಮಾರು 3 ಕೋಟಿ ರೂ. ವೆಚ್ಚ ಮಾಡಲಾಗಿದೆ. ಯೋಜನೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಲು ಇನ್ನೂ ಸುಮಾರು 2 ಕೋಟಿ ರೂ. ಅಗತ್ಯವಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.

ಸಸಿ ನೆಟ್ಟ ಬಳಿಕ ಅವು ಒಣಗದಂತೆ ನಿಯಮಿತ ನೀರುಣಿಕೆ, ನಿರ್ವಹಣೆ ಮತ್ತು ರಕ್ಷಣೆಗಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಸುಮಾರು 1,165 ಎಕರೆ ಪ್ರದೇಶದಲ್ಲಿ ಹಸಿರೀಕರಣ ಮಾಡುವ ಗುರಿ ಹೊಂದಲಾಗಿದ್ದು, ನಗರದ ಎಲ್ಲ ವಾರ್ಡ್‌ಗಳಲ್ಲಿ ಖಾಲಿ ಜಾಗಗಳನ್ನು ಗುರುತಿಸಿ ಹಂತ ಹಂತವಾಗಿ ಸಾವಿರಾರು ಸಸಿಗಳನ್ನು ನೆಡುವ ಕಾರ್ಯ ಮುಂದುವರಿಯಲಿದೆ. ನಗರ ಉಷ್ಣಾಂಶ ತಗ್ಗಿಸುವುದು, ಪರಿಸರ ಸಮತೋಲನ ಕಾಪಾಡುವುದು ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor

Similar News