‘ದ್ವಿಭಾಷಾ ಮಾಧ್ಯಮ ನೀತಿ’ ಅತ್ಯಂತ ಅವೈಜ್ಞಾನಿಕ
ಒಂದು ಕಡೆ ಒಕ್ಕೂಟ ಸರಕಾರವು, ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವನ್ನೂ ಪ್ರಾಂತೀಯ (ಕನ್ನಡ) ಭಾಷೆಯಲ್ಲಿ ನೀಡುವ ಕುರಿತು ಯೋಜನೆಯನ್ನು ಜಾರಿಗೆ ತರುತ್ತಿದೆ. ಇನ್ನೊಂದು ಕಡೆ ರಾಜ್ಯ ಸರಕಾರ ಪ್ರಾಥಮಿಕ ಹಂತದಲ್ಲಿಯೇ ಈ ವರೆಗೆ ಕಲಿಕೆಯ ಮಾಧ್ಯಮ ಕನ್ನಡ ಇದ್ದ ಕಡೆಯೂ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವನ್ನಾಗಿ ಸೇರಿಸಿದೆ. ಇನ್ನೂ ಒಂದು ವಿಚಿತ್ರ ಹೆಜ್ಜೆಯನ್ನಿಟ್ಟು ಈ ವರ್ಷದಿಂದ ಹದಿನೈದು ಜಿಲ್ಲೆಗಳ ಸರಕಾರಿ ಶಾಲೆಗಳಲ್ಲಿ ಕನ್ನಡದ ಜೊತೆ ಇಂಗ್ಲಿಷನ್ನೂ ಬೋಧನೆಯ ಮಾಧ್ಯಮವನ್ನಾಗಿ ಜಾರಿಗೆ ತರುತ್ತಿದೆ. ಇದು ಕನ್ನಡ ಭಾಷೆಯ ಕಲಿಕೆ, ಬಳಕೆಗೆ ಮಾರಕ ಎಂಬ ಸಾರ್ವಜನಿಕ ದೂರು ಈಗ ರಾಜ್ಯಪಾಲರ ಬಳಿಗೂ ತಲುಪಿದೆ.
ಈ ಸಂದರ್ಭದಲ್ಲಿ ಒಂದೆರಡು ಪದಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಸರಕಾರಿ ಶಾಲೆಗಳಿಂದ ಹಿಂದಿ ಭಾಷೆಯನ್ನು ತೆಗೆದುಹಾಕಬೇಕು, ಕೇವಲ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತ್ರ ಕಲಿಸಬೇಕು ಎನ್ನುವುದು, ‘ದ್ವಿಭಾಷಾ ಶಿಕ್ಷಣ ನೀತಿ’. ಇಲ್ಲಿ ಇಂಗ್ಲಿಷ್ ಮತ್ತು ಕನ್ನಡವನ್ನು ಭಾಷಾ ವಿಷಯಗಳಾಗಿ ಕಲಿಸಲಾಗುತ್ತದೆ, ‘ವಿಷಯ’ಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಆದರೆ ಈಗ ಶಿಕ್ಷಣ ಇಲಾಖೆ ಸರಕಾರಿ ಶಾಲೆಗಳಲ್ಲಿ ವಿಜ್ಞಾನ, ಸಮಾಜವಿಜ್ಞಾನ ಮತ್ತು ಗಣಿತದಂಥ ‘ವಿಷಯ’ಗಳನ್ನೂ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ, ಒಂದೇ ತರಗತಿಯ ಒಂದೇ ಗುಂಪಿನ ಮಕ್ಕಳಿಗೆ, ಒಬ್ಬರೇ ಶಿಕ್ಷಕರ ಮೂಲಕ ಕಲಿಸುವ ‘ಕ್ರಾಂತಿ’ಕಾರಿ ವಿಧಾನವನ್ನು ಪ್ರಯೋಗಿಸುತ್ತಿದೆ. ಉದಾಹರಣೆಗೆ, ಮೊದಲು ವಿಜ್ಞಾನವನ್ನು ಕಲಿಸುವ ಶಿಕ್ಷಕರು, ತಮ್ಮ ಬಿಎಡ್ ಪ್ರಶಿಕ್ಷಣದಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸುವ ಕೌಶಲವನ್ನು ಕಲಿತಿದ್ದರು, ಅವರು (ಇಂಗ್ಲಿಷ್/ಕನ್ನಡ) ಭಾಷಾ ಶಿಕ್ಷಕರೂ ಅಲ್ಲ. ಈಗ ಆ ಶಿಕ್ಷಕರು ವಿಜ್ಞಾನದ ಒಂದು ಪಾಠವನ್ನು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲಿಯೂ ಕಲಿಸಬೇಕಾಗುತ್ತದೆ. ಈ ವಿಧಾನವನ್ನು ನಾವು ‘ದ್ವಿಭಾಷಾ ಮಾಧ್ಯಮ ಶಿಕ್ಷಣ’ ಎನ್ನಬೇಕಾಗುತ್ತದೆ.
ಹಾಗೆ ನೋಡಿದರೆ, ಉರ್ದು, ತುಳು, ಕೊಂಕಣಿ, ಮರಾಠಿ ಇತ್ಯಾದಿ ಕನ್ನಡೇತರ ಮಾತೃಭಾಷಾ ಹಿನ್ನೆಲೆಗಳಿಂದ ಬರುವ ಮಕ್ಕಳಿಗೆ ಪ್ರಾಥಮಿಕ ಶಾಲೆಗಳಲ್ಲಿ ಅವರವರ ಮಾತೃಭಾಷೆ ಮತ್ತು ಕನ್ನಡ -ಈ ಜೋಡಿಭಾಷೆಯಲ್ಲಿ ವಿಷಯಗಳನ್ನು ಬೋಧನೆ ಮಾಡುವುದಾಗಿದ್ದರೆ ಅದೊಂದು ತಾರ್ಕಿಕ ಹೆಜ್ಜೆಯಾಗುತ್ತಿತ್ತು. ಕನ್ನಡೇತರ ಮಕ್ಕಳನ್ನು ಮೊದಲ ನಾಲ್ಕೈದು ವರ್ಷಗಳಲ್ಲಿ ಕ್ರಮೇಣ ಕ್ರಮಬದ್ಧವಾಗಿ ಕನ್ನಡ ಮಾಧ್ಯಮಕ್ಕೆ ಸಜ್ಜುಗೊಳಿಸುವ ಕ್ರಮ ಅದಾಗುತ್ತಿತ್ತು. ಸರಕಾರ ಅದನ್ನು ಮಾಡುತ್ತಿಲ್ಲ. ಬದಲಿಗೆ ನಮ್ಮ ಮಕ್ಕಳು ತಮ್ಮ ಮನೆಯ ಒಳಗೆ, ಹೊರಗೆ, ಸಮುದಾಯದಲ್ಲಿ ಎಲ್ಲಿಯೂ ಸಹಜವಾದ ದೈನಂದಿನ ಸಂವಹನದ ಭಾಷೆಯಾಗಿ ಬಳಕೆಯೇ ಆಗದ ಇಂಗ್ಲಿಷ್ ಭಾಷೆಯನ್ನು ಪ್ರಾಥಮಿಕ ತರಗತಿಯಿಂದ ನೇರವಾಗಿ ಕಲಿಕೆಯ ಮಾಧ್ಯಮವನ್ನಾಗಿಯೇ ಹೇರುವ ದುಸ್ಸಾಹಸವನ್ನು ಸರಕಾರ ಮಾಡುತ್ತಿದೆ.
ಸಾಲದು ಅಂತ, ವಿಷಯಗಳನ್ನು ಕಲಿಸುವ/ಕಲಿಯುವ ಮಾಧ್ಯಮವನ್ನಾಗಿ ಇಂಗ್ಲಿಷನ್ನು ಜಾರಿಗೆ ತಂದಾಗ ಮಕ್ಕಳು ಇಂಗ್ಲಿಷ್ ಭಾಷೆಯನ್ನೂ ಚೆನ್ನಾಗಿ ಕಲಿಯುತ್ತಾರೆ ಎಂಬ ಕುತರ್ಕವನ್ನೂ ಮುಂದುಮಾಡಲಾಗುತ್ತಿದೆ. ಹೀಗೆ ಮಾಡಿದಾಗ ಮಕ್ಕಳು ಹೊಸ ವಿಷಯ ಮತ್ತು ಹೊಸ ಭಾಷೆ-ಎರಡು ಸಮಸ್ಯೆಗಳನ್ನು ಒಟ್ಟೊಟ್ಟಿಗೇ ಎದುರಿಸಬೇಕಾಗಿ ಬರುತ್ತದೆ. ಇದು ಸರಿಯಲ್ಲ. ಇದಕ್ಕಾಗಿಯೇ ಶಿಕ್ಷಣ ಶಾಸ್ತ್ರದಲ್ಲಿ ‘ಒಂದು ಸಲಕ್ಕೆ ಒಂದು ಸಮಸ್ಯೆ’, ‘ಗೊತ್ತಿರುವುದರಿಂದ ಗೊತ್ತಿಲ್ಲದ ಕಡೆಗೆ’, ‘ಸುಲಭದಿಂದ ಕಠಿಣದತ್ತ’ ಎಂಬುದನ್ನು ಬುನಾದಿ ತತ್ವ ಮತ್ತು ತಂತ್ರಗಳನ್ನಾಗಿ ಅಳವಡಿಸಿಕೊಳ್ಳಲಾಗುತ್ತದೆ.
ಪ್ರತಿಯೊಂದು ಮಗುವೂ ತನ್ನ ಮನೆಯ ಆಡುವ ಭಾಷೆಯಲ್ಲಿ, ಆಲಿಸುವ ಮತ್ತು ಮಾತಾಡುವ ಕೌಶಲಗಳ ಮಟ್ಟಿಗೆ ಆಯಾ ಕುಟುಂಬದ ದೊಡ್ಡವರ ಸುಮಾರು ಶೇ. 90ರಷ್ಟನ್ನು ‘ಗಳಿಸಿ’ಕೊಂಡಿರುತ್ತದೆ ಎಂದು ಮನೋ-ಭಾಷಾವಿಜ್ಞಾನಿಗಳು ಹೇಳುತ್ತಾರೆ. ಇಂಥ ಮಗು ಶಾಲೆಗೆ ಬಂದಾಗ ಅದರ ಆಲಿಸುವ/ಮತಾಡುವ ಕೌಶಲಗಳನ್ನು ‘ಶಾಲಾ ಕನ್ನಡ’ಕ್ಕೆ ಒಗ್ಗಿಸಿ, ಅದರ ಆಧಾರದ ಮೇಲೆ ಓದುವುದು-ಬರೆಯುವುದನ್ನು ಕಲಿಸಿ, ಭಾಷೆಯನ್ನು ತನಗೆ ಅಗತ್ಯವಿರುವ ರೀತಿಯಲ್ಲಿ ಸಶಕ್ತಗೊಳಿಸುವುದು ಸುಲಭ, ಸಮಂಜಸ. ಅದರ ಬದಲಿಗೆ ಆಲಿಸುವ/ಮಾತನಾಡುವ ಬುನಾದಿ ಕೌಶಲ ಅಭ್ಯಾಸವೇ ಆಗಿಲ್ಲದ ಆಗಂತುಕ ಇಂಗ್ಲಿಷನ್ನು ಭಾಷೆಯನ್ನಾಗಿ ಕಲಿಸುವುದನ್ನು ಬಿಟ್ಟು, ನೇರವಾಗಿ ವಿಷಯಗಳನ್ನು ಕಲಿಯುವ ಮಾಧ್ಯಮವನ್ನಾಗಿಯೇ ಬಳಸಲು ನೋಡುತ್ತಿರುವುದು ಯಾವ ನ್ಯಾಯ?
‘ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿತೋಡಿದರು’ ಎನ್ನುವ ಗಾದೆ ಇದೆ, ಇಲ್ಲಿ ಸರಕಾರ ಇನ್ನೂ ಮುಂದಕ್ಕೆ ಹೋಗಿ, ತಾನೇ ಗಡ್ಡಕ್ಕೆ ಬೆಂಕಿ ಹಂಚಿಕೊಂಡು, ಅದು ಹೊತ್ತಿ ಉರಿಯುತ್ತಿರುವಾಗ ಗಡಿಬಿಡಿಯಲ್ಲಿ ಬಾವಿಯನ್ನು ತೋಡತೊಡಗಿದೆ. ಪ್ರಾಥಮಿಕ ಐದನೇ ತರಗತಿಯವರೆಗೆ ಈ ವರ್ಷದಿಂದಲೇ ದ್ವಿಭಾಷಾ ಮಾಧ್ಯಮ ಬೋಧನೆಯನ್ನು ಆರಂಭಿಸಿಯಾಗಿದೆ, ಈಗಷ್ಟೆ ಈ ವರೆಗೆ ವಿಜ್ಞಾನ ಇತ್ಯಾದಿಗಳನ್ನು ಕನ್ನಡದಲ್ಲಿ ಬೋಧಿಸುತ್ತಿದ್ದ ಶಿಕ್ಷಕರಿಗೆ ಕನ್ನಡ-ಇಂಗ್ಲಿಷ್ ಎರಡರಲ್ಲಿಯೂ ಬೋಧಿಸುವುದು ಹೇಗೆ ಎಂಬ ತರಬೇತಿಯೂ ನಡೆಯುತ್ತಿದೆ. ವಿಷಯಗಳನ್ನು ಬೋಧಿಸುವ ಮಟ್ಟಿಗೆ ಶಿಕ್ಷಕರ ಕನ್ನಡ ಭಾಷಾ ಸಾಮರ್ಥ್ಯವನ್ನೇ ವೃದ್ಧಿಸುವ ಅಗತ್ಯವಿತ್ತು. ಅದನ್ನು ಬಿಟ್ಟು ಸರಕಾರವು ಅವರು ಈ ವರೆಗೆ ಬಳಸದೇ ಇರುವ ಇಂಗ್ಲಿಷ್ ಭಾಷೆಯಲ್ಲಿಯೂ ವಿಷಯಗಳನ್ನು ಕಲಿಸುವುದನ್ನು ನಿರೀಕ್ಷಿಸುತ್ತಿದೆ.
ಕೊನೆಯದಾಗಿ, ಇಂಥ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸರಿಯುತ್ತರ ಬರೆದವರಿಗೆ ಎ+ ಮತ್ತು ಕನ್ನಡದಲ್ಲಿ ಸರಿಯುತ್ತರ ಬರೆದವರಿಗೆ ಬಿ+ ಶ್ರೇಣಿಯನ್ನು ನೀಡಬೇಕು ಎಂದು ಬೇರೆ ಸುತ್ತೋಲೆಯಿದೆ. ಇದು ಖಂಡಿತ ಕನ್ನಡ ಭಾಷೆಯನ್ನು ಭಾಷೆಯಾಗಿ, ಕಲಿಯುವ ಮಾಧ್ಯಮವಾಗಿ-ಎರಡೂ ರೀತಿಯಲ್ಲಿ ಕಡೆಗಣಿಸಿದಂತೆ. ಇಂಗ್ಲಿಷ್ ಮಾಧ್ಯಮವೇ ಬೇಕು ಎಂದು ಬಯಸುವ ಪೋಷಕರು ಬೇಕಾದರೆ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದರು. ಆದರೆ, ರಾಜ್ಯದ ಬಹುತೇಕ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಕನ್ನಡ ಮಾಧ್ಯಮವೇ ಸರಿ ಎಂಬ ಸತ್ಯವನ್ನು ಪ್ರತಿಪಾದಿಸಿ, ಜನರಲ್ಲಿ ಸರಿಯಾದ ಜಾಗೃತಿಯನ್ನು ಮೂಡಿಸಬೇಕಾಗಿದ್ದ ಸರಕಾರ, ಮಾರುಕಟ್ಟೆಯ ಬೇಡಿಕೆಯನ್ನು ಅನುಸರಿಸುವ ವ್ಯಾಪಾರೀ ಧೋರಣೆಯನ್ನು ತೋರಿಸುತ್ತಿದೆ. ಆಲ್ಕೋಹಾಲ್‌ಗಿಂತ ಹಾಲೇ ಆರೋಗ್ಯಕ್ಕೆ ಒಳ್ಳೆಯದು ಎಂದು ಅರ್ಥ ಮಾಡಿಸುವ ಬದಲಿಗೆ ಜನಪ್ರಿಯ ಬೇಡಿಕೆ ಇದೆಯಲ್ಲಾ ಎಂದು ಹೇಳಿ, ‘ಸರಕಾರಿ ಮದ್ಯದಂಗಡಿ’ಗಳನ್ನು ತೆರೆದ ಹಾಗೆ.