ವಿದ್ಯಾರ್ಥಿ ಯುವಜನರ ಚಳವಳಿಯನ್ನು ಗ್ರಹಿಸೋಣ; ಮೇಲ್ಮಟ್ಟದ ಸಂಭ್ರಮದಲ್ಲಿ ಮೈಮರೆಯದಿರೋಣ
ನೀಟ್ ಸೇರಿದಂತೆ ಪರೀಕ್ಷಾ ಅಕ್ರಮಗಳಿಗೆ ಹಾಗೂ ಶಿಕ್ಷಣ ಕ್ಷೇತ್ರದ ಈಗಿನ ಬಿಕ್ಕಟ್ಟುಗಳಿಗೆ ಪ್ರಧಾನ ಕಾರಣವಾಗಿರುವ ಹಿಂದಿನ ಯೂನಿಯನ್ ಸರಕಾರದ ಹೊಸ ಶಿಕ್ಷಣ ನೀತಿ ಹಾಗೂ ಈಗಿನ ಯೂನಿಯನ್ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಗಳ ಬಗ್ಗೆ ವಿದ್ಯಾರ್ಥಿ ಯುವಜನ ಸಮೂಹವು ಗಮನ ಹರಿಸಬೇಕಾಗಿದೆ. ಈಗಿನ ರಾಷ್ಟ್ರೀಯ ಶಿಕ್ಷಣ ನೀತಿಯ ರದ್ದತಿ ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ರದ್ದತಿ, ನೀಟ್ ರದ್ದತಿ, ಎಲ್‌ಕೆಜಿಯಿಂದ ಹಿಡಿದು ಇಡೀ ಶಿಕ್ಷಣ ಕ್ಷೇತ್ರದ ಕಾರ್ಪೊರೇಟೀಕರಣ ನೀತಿಯ ರದ್ದತಿಗಳಿಗಾಗಿ ಈ ಹೋರಾಟವು ಮುಂದೆ ಸಾಗಬೇಕಾಗಿದೆ.
ಕಳೆದೆರಡು ವರ್ಷಗಳ ಹಿಂದೆ ದೇಶದ ಉತ್ತರ ಭಾರತ ಮೂಲದ ರೈತಾಪಿಗಳು ಸುದೀರ್ಘ ಒಂದೂವರೆ ವರ್ಷಗಳ ಚಾರಿತ್ರಿಕ ಸಾಮೂಹಿಕ ಹೋರಾಟಗಳನ್ನು ನಡೆಸಿ ಯಶಸ್ವಿಯಾಗಿತ್ತು. ಈ ಹೋರಾಟಕ್ಕೆ ದೇಶಾದ್ಯಂತ ಹಾಗೂ ವಿದೇಶಗಳಿಂದಲೂ ಭಾರೀ ಬೆಂಬಲ ವ್ಯಕ್ತವಾಗಿತ್ತು. ಜನಹೋರಾಟಗಳ ಚರಿತ್ರೆಯಲ್ಲಿ ಹೋರಾಟದ ಹೊಸ ಹಾಗೂ ಮುಂದುವರಿದ ಮಾದರಿಯನ್ನು ಇಟ್ಟಿತ್ತು. ಇದು ದೇಶದ ಹೋರಾಟದ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನ ಗಳಿಸಿ ಛಾಪು ಮೂಡಿಸಿತ್ತು. ಇದು ಹಿಂದೆ ಸಿಎಎ/ಎನ್‌ಆರ್‌ಸಿ ವಿರೋಧಿ ಹೋರಾಟದಲ್ಲಿ ರೂಪುಗೊಂಡ ಶಹೀನ್ ಬಾಗ್ ಮಾದರಿಯ ಮುಂದುವರಿದ ಹಾಗೂ ವಿಸ್ತೃತಗೊಂಡ ಮಾದರಿಯಾಗಿತ್ತು. ಇದು ಅದ್ಭುತವಾದ ಹಲವು ಪಾಠಗಳನ್ನು ಜನರ ಮುಂದೆ ಇಟ್ಟಿತ್ತು. ಇದರಿಂದಾಗಿ ಕಾರ್ಪೊರೇಟ್ ಪರವಾದ ಮೂರು ಕೃಷಿ ಕಾಯ್ದೆಗಳನ್ನು ಮೋದಿ ನೇತೃತ್ವದ ಯೂನಿಯನ್ ಸರಕಾರ ಅನಿವಾರ್ಯವಾಗಿ ವಾಪಸ್ ಪಡೆಯಲೇಬೇಕಾಗಿ ಬಂದಿತ್ತು. 750ಕ್ಕೂ ಹೆಚ್ಚು ರೈತಾಪಿಗಳ ಬಲಿದಾನವಾಯಿತು. ಇದು ಮೋದಿ ನೇತೃತ್ವದ ಆಕ್ರಮಣಕಾರಿ ಯೂನಿಯನ್ ಸರಕಾರದ ದೊಡ್ಡ ಮಟ್ಟದ ಹಿಂದ್ಸರಿಯುವಿಕೆ ಕೂಡ ಆಗಿತ್ತು. ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಮೇಲೆ ನಿಯಂತ್ರಣ ಗಳಿಸಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಹೊರಟಿತ್ತು. ಇದರ ವಿರುದ್ಧ ಕಾರ್ಮಿಕರು ಒಂದಾಗಿ ದೇಶಾದ್ಯಂತ ಸಮರಶೀಲರಾಗಿ ದೊಡ್ಡಮಟ್ಟದಲ್ಲಿ ಪ್ರತಿಭಟಿಸತೊಡಗಿದಾಗ ಎರಡೇ ದಿನಗಳಲ್ಲಿ ಮೋದಿ ನೇತೃತ್ವದ ಸರಕಾರ ಆ ಸಂಬಂಧಿತ ಆದೇಶವನ್ನು ಹಿಂದೆಗೆದುಕೊಂಡಿತ್ತು. ಅದೇ ರೀತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ದೌರ್ಜನ್ಯ ವಿರೋಧಿ ಮಸೂದೆಯನ್ನು ಬದಲಾಯಿಸ ಹೊರಟಾಗಲೂ ದೇಶದಾದ್ಯಂತ ಸಮರಶೀಲವಾದ ಹೋರಾಟ ಸಿಡಿದಿತ್ತು. ಇವಿಷ್ಟೇ ಅಲ್ಲದೇ ಮಾನೆಸರ್, ನೊಯ್ಡಾದಂತಹ ಕಾರ್ಮಿಕ ಹೋರಾಟಗಳು ದೇಶದ ಹಲವಾರು ಕಡೆಗಳಲ್ಲಿ ನಡೆಯುತ್ತಾ ಬಂದಿದ್ದವು. ಅರಾವಳಿ ಬೆಟ್ಟಗಳನ್ನು ಕಾರ್ಪೊರೇಟ್‌ಗಳ ಲೂಟಿಗೆ ಒಪ್ಪಿಸಲು ಹೊರಟಾಗಲೂ ಜನರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ನಂತರ ಇದೀಗ ಭಾರತದ ಯುವಸಮೂಹ ಮತ್ತೊಂದು ಚಾರಿತ್ರಿಕ ಹೋರಾಟವನ್ನು ಹುಟ್ಟುಹಾಕಿ ಯಶಸ್ಸಿನತ್ತ ಸಾಗಿಸುತ್ತಿದ್ದಾರೆ. ಈ ಹೋರಾಟ ಆರೆಸ್ಸೆಸ್‌ನ ಒಬ್ಬ ಪ್ರಮುಖ ಹಾಗೂ ಮೋದಿ ಸರಕಾರದ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ತನ್ನ ಪದವಿಯನ್ನು ಕಳೆದುಕೊಳ್ಳಬೇಕಾಗಿ ಬಂದಿದೆ. ಹೋರಾಟಗಾರರು ಮುಂದಿಟ್ಟಿರುವ ಇತರ ಹಕ್ಕೊತ್ತಾಯಗಳನ್ನು ಪರಿಗಣಿಸಲು ಒಪ್ಪಿರುವುದಾಗಿ ಜಂಟಿಪತ್ರಿಕಾಗೋಷ್ಠಿಯಲ್ಲಿ ಸರಕಾರದ ಪ್ರತಿನಿಧಿಗಳು ಹೇಳಿದ್ದಾರೆ. ಹೋರಾಟದ ಪ್ರತಿನಿಧಿಗಳು ಕೂಡ ದೃಢಪಡಿಸಿದ್ದಾರೆ. ಇದು ವಿದ್ಯಾರ್ಥಿ ಯುವಜನತೆಯ ಒಂದು ವಿಜಯವಾಗಿದೆ.
ಈ ಹೋರಾಟದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯೊಂದಿಗೆ ಎಐಎಸ್‌ಎ, ಎಸ್‌ಎಫ್‌ಐ, ಎಐಎಸ್‌ಎಫ್, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘ, ದಿಶಾ, ದಿಲ್ಲಿ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಸಂಘ, ಎಐಡಿಎಸ್‌ಒ ಮೊದಲಾದ ವಿದ್ಯಾರ್ಥಿ ಸಂಘಟನೆಗಳು ಸಕ್ರಿಯವಾಗಿ ಹಾಗೂ ದೃಢವಾಗಿ ಭಾಗವಹಿಸಿದ್ದವು.
ಉಪವಾಸ ಸತ್ಯಾಗ್ರಹದಲ್ಲಿ ಎಐಎಸ್‌ಎಯ ನೇಹಾ ಬೋರಾ, ಅಮಿನ್, ಮನೀಶ್ ಮೊದಲಾದವರು ಪಾಲ್ಗೊಂಡಿದ್ದರು. ಸೋನಂ ವಾಂಗ್ಚುಕ್‌ರೊಂದಿಗೆ ಇಪ್ಪತ್ತೆರಡು ದಿನಗಳು ನಿರಂತರವಾದ ಉಪವಾಸ ಸತ್ಯಾಗ್ರಹವನ್ನು ಈ ಯುವ ವಿದ್ಯಾರ್ಥಿಗಳು ನಡೆಸಿದರು. ಇದರಲ್ಲಿ ಕೆಲವರು ಆಸ್ಪತ್ರೆ ಸೇರಿದರು. ಇದು ಸುಲಭದ್ದೂ ಅಲ್ಲ, ಸಣ್ಣ ವಿಚಾರವೂ ಅಲ್ಲ. ಅವರ ಹೋರಾಟದ ಬದ್ಧತೆ ಹಾಗೂ ಕೆಚ್ಚು ಇಡೀ ದೇಶದ ಯುವ ಸಮೂಹಕ್ಕೆ ಮತ್ತು ಜನರಿಗೆ ಸ್ಫೂರ್ತಿಯಾಗಿ ಇತಿಹಾಸದಲ್ಲಿ ದಾಖಲಾಯಿತು.
ಈ ಹೋರಾಟ ಸಿಡಿದಿದ್ದಕ್ಕೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಸೂರ್ಯಕಾಂತ್‌ರ ಯುವಸಮೂಹದ ಕುರಿತಾದ ಅಸಹನೆಯ ಧೋರಣೆ ಹಾಗೂ ಮಾತುಗಳು ನಿಮಿತ್ತವಾಯಿತು. ಅದರಿಂದಾಗಿ ಅದನ್ನು ವ್ಯಂಗ್ಯಗೊಳಿಸಿ ಹೊರಬಂದ ‘ಎಲ್ಲಾ ಜಿರಲೆಗಳು ಒಟ್ಟಾದರೆ ಏನಾಗುತ್ತದೆ’ ಎಂಬ ಅಭಿಜೀತ್ ದೀಪ್ಕೆಯ ಪೋಸ್ಟ್ ಯುವ ಸಮೂಹ ತನ್ನದಾಗಿಸಿಕೊಂಡು ಲಕ್ಷಕೋಟಿಯ ಸಂಖ್ಯೆಯಲ್ಲಿ ಬೆಂಬಲಿಸಿದರು. ಅದರ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹುಟ್ಟು ಪಡೆದು ಕೋಟಿಗೂ ಹೆಚ್ಚು ಜನರು ಅದರ ಸದಸ್ಯರಾದರು.
ಭಾರತದ ಎಲ್ಲಾ ರಂಗಗಳಲ್ಲೂ ಭಾರೀ ಬಿಕ್ಕಟ್ಟುಗಳನ್ನು ಸೃಷ್ಟಿ ಮಾಡಲಾಗಿದೆ. ನಿರುದ್ಯೋಗ, ಉದ್ಯೋಗ ಅಭದ್ರತೆ, ಶಿಕ್ಷಣ ಸೌಲಭ್ಯಗಳ ವಂಚನೆ, ಅವಕಾಶಗಳ ನಿರಾಕರಣೆ, ಸಾಮಾಜಿಕ ಅಭದ್ರತೆ, ಪ್ರಶ್ನೆ ಮಾಡುವವರ ಪ್ರಜಾತಾಂತ್ರಿಕ ಹಕ್ಕುಗಳ ಪೂರ್ಣ ನಿರಾಕರಣೆಗಳು, ಪ್ರಶ್ನೆಮಾಡುವವರನ್ನು ಕೀಳಾಗಿ ನಿಂದಿಸುವ, ದೇಶದ್ರೋಹಿಗಳೆಂದು ಮುದ್ರೆ ಒತ್ತುವ ಹಾವಳಿಗಳು ವಿಪರೀತವಾಗಿ ಹೆಚ್ಚಿದ್ದವು. ಇಡೀ ದೇಶದ ಜನರ ತಾಳ್ಮೆಯ ಕಟ್ಟೆ ಒಡೆಯುವ ಹಂತ ತಲುಪಿತ್ತು. ಅದನ್ನು ಸೂಕ್ತವಾಗಿ ಪ್ರತಿನಿಧಿಸುವ ಭರವಸೆಯುಕ್ತ ಪಕ್ಷಗಳು ಸಂಘಟನೆಗಳು ಜನರಿಗೆ ದಕ್ಕಿರಲಿಲ್ಲ. ಹೊಸದಾಗಿ ಹಾಗೂ ವ್ಯಂಗ್ಯಾತ್ಮಕವಾಗಿ ಹುಟ್ಟಿದ ಕಾಕ್ರೋಚ್ ಜನತಾ ಪಾರ್ಟಿಯನ್ನು ಯುವ ಜನತೆ ತಮ್ಮದಾಗಿಸಿಕೊಂಡು ಬೀದಿಗಿಳಿದಾಗ ಜನರು ಅದನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿ ನಿಂತರು.
ದೇಶದ ರಾಜಧಾನಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಅವಕಾಶ ನಿರಾಕರಣೆಯ ನಡುವೆಯೂ ಯುವಸಮೂಹ ಹೋರಾಟವನ್ನು ಪ್ರಾರಂಭಿಸಿದರು. ದೇಶದ ಯುವ ಜನರು ಭಾರೀ ಸಂಖ್ಯೆಯಲ್ಲಿ ಸೇರತೊಡಗಿದರು.
ಯೂನಿಯನ್ ಸರಕಾರ ಹೋರಾಟದಲ್ಲಿದ್ದ ಯುವ ಸಮೂಹದ ನ್ಯಾಯಯುತ ಹಕ್ಕೊತ್ತಾಯಗಳನ್ನು ಪರಿಗಣಿಸದೆ ಪ್ರಭುತ್ವ ಸಶಸ್ತ್ರಬಲ ಹಾಗೂ ಕುಟಿಲ ಕುತಂತ್ರಗಳ ಮೂಲಕ ದಮನಿಸಲು ನಿಂತಾಗ ಯುವ ಸಮೂಹ ಮತ್ತು ಜನರು ಮತ್ತಷ್ಟು ದೃಢವಾಗುತ್ತಾ ಬೀದಿಗಿಳಿದು ಪ್ರತಿಭಟಿಸ ತೊಡಗಿದರು. ಹೋರಾಟದ ಕಿಚ್ಚು ದೇಶಾದ್ಯಂತ ಹರಡತೊಡಗಿತು. ಸಂಸತ್‌ಚಲೋ ಪ್ರತಿಭಟನೆಯನ್ನು ಯಾವಾಗ ಯೂನಿಯನ್ ಸರಕಾರ ಕ್ರೂರವಾಗಿ ಹಿಂಸಾಕಾಂಡಗಳ ಮೂಲಕ ದಮನಿಸಲು ನಿಂತಿತೋ ಅದು ದೇಶದ ಯುವ ಸಮೂಹ ಮತ್ತು ಇತರ ಜನಸಮೂಹದ ರೊಚ್ಚನ್ನು ಮತ್ತಷ್ಟು ಬಡಿದೆಬ್ಬಿಸಿತು. ಮೊದಲಿಗಿಂತಲೂ ಗಟ್ಟಿಯಾಗಿ ಮತ್ತು ಬಲವಾಗಿ ಜಂತರ್ ಮಂತರ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಯೂನಿಯನ್ ಸರಕಾರದ ಎಲ್ಲಾ ರೀತಿಯ ಬೆದರಿಕೆಗಳು, ದೂರುದಾಖಲುಗಳು, ತಡೆಗಳು ನಿರ್ಬಂಧಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಜನರು ಸೇರತೊಡಗಿದರು. ಲಕ್ಷಕ್ಕೂ ಮೀರಿ ಜನರು ಜಂತರ್ ಮಂತರ್ ನಲ್ಲಿ ಜಮಾಯಿಸತೊಡಗಿದರು.
ಯೂನಿಯನ್ ಸರಕಾರ ಪ್ರತಿಭಟನಾಕಾರರಿಗೆ ಹತ್ತು ಹಲವು ಕಿರುಕುಳಗಳನ್ನು ನೀಡಿತು. ಯೂನಿಯನ್ ಸರಕಾರದ ಪಡೆಗಳು ಹೋರಾಟ ಪ್ರದೇಶದೊಳಕ್ಕೆ ನೀರು ಆಹಾರ ತಡೆ, ಅಂತರ್ಜಾಲ ತಡೆ, ಸುತ್ತುವರಿದು ನಿಲ್ಲುವುದು, ಟೆಂಟ್‌ಗಳಿಗೆ ತಡೆಯೊಡ್ಡುವುದು, ಕೊನೆ ಕೊನೆಗೆ ಔಷಧಿಗಳಿಗೆ ತಡೆಯೊಡ್ಡುವುದು, ಸಿಕ್ಕಸಿಕ್ಕಲ್ಲಿ ಹೊಡೆಯುವುದು, ಪೆಲೆಟ್ ಗುಂಡುಗಳನ್ನು ಪ್ರತಿಭಟನಾಕಾರರ ಮೇಲೆ ಹಾರಿಸುವುದು, ಬಂದೂಕುಗಳಿಂದ ಬೆದರಿಸುವುದು, ಗುಂಡು ಹಾರಿಸುವುದು, ಮಹಿಳೆಯರಿಗೆ ಹೊಡೆಯುವುದು ಮತ್ತು ಲೈಂಗಿಕ ಕಿರುಕುಳ ನೀಡುವುದು, ಅವಮಾನ ಮಾಡುವುದು, ಮಹಿಳೆಯರ ಬಟ್ಟೆ ಹಿಡಿದು ಎಳೆದು ಹರಿಯುವುದು, ಮಹಿಳೆಯರ ಶರೀರಭಾಗಗಳ ಮೇಲೆ ಕೈಯಾಡಿಸುವುದು, ಕೈಕಾಲುಗಳು ಮುರಿಯುವಂತೆ ಬಡಿಯುವುದು, ತಡೆಗಳಿಗೆ ವಿದ್ಯುತ್ ಹರಿಸಿ ಪ್ರತಿಭಟನಾಕಾರರಿಗೆ ವಿದ್ಯುತ್ ಆಘಾತವಾಗುವಂತೆ ಮಾಡುವುದು ಮುಂತಾದ ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವದ ಸರಕಾರ ಮಾಡಬಾರದ ಕ್ರೂರ ಹಿಂಸಾತ್ಮಕ ದಮನಕಾಂಡಗಳನ್ನು ನಡೆಸಿತು. ನಮ್ಮ ದೇಶದಲ್ಲಿರುವ ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಅಸಲಿಯತ್ತನ್ನು ದೇಶದ ಜನರಿಗೆ ಪರಿಚಯಿಸಿತು. ಮೊದಲಿನಿಂದ ಹಿಂಸಾತ್ಮಕ ದಮನಕಾಂಡಗಳು ಕಾಶ್ಮೀರ, ಈಶಾನ್ಯ ಭಾರತ, ಮಧ್ಯ ಭಾರತಗಳ ಹೋರಾಟನಿರತ ಜನರ ಮೇಲೆ ನಿರಂತರವಾಗಿ ನಡೆಯುತ್ತಾ ಬಂದಿದ್ದವು.
ಇದರಿಂದಾಗಿ ಹಲವರು ಕೈಕಾಲುಗಳು ಮುರಿತಕ್ಕೊಳಗಾದರು, ಕಣ್ಣುಗಳು ಹಾನಿಗೀಡಾದವು, ತಲೆಗಳು ಒಡೆದವು, ಮುಖ ದೇಹಗಳು ಗಂಭೀರವಾದ ಗಾಯಗಳಿಗೆ ಈಡಾದವು. ಹಲವಾರು ಬಂಧನಗಳು, ಚಿತ್ರಹಿಂಸೆಗಳನ್ನು ನಡೆಸಲಾಯಿತು. ನೂರಾರು ಪ್ರಕರಣಗಳನ್ನು ದಾಖಲಿಸಲಾಯಿತು.
ಆದರೆ ಪ್ರತಿಭಟನಾಕಾರರು ಯೂನಿಯನ್ ಸರಕಾರದ ಈ ಎಲ್ಲಾ ಹಿಂಸಾಕಾಂಡಗಳನ್ನು ಮೀರಿ ನಿಂತು ಪ್ರತಿಭಟಿಸತೊಡಗಿದರು. ದೇಶದಾದ್ಯಂತ ಪ್ರತಿಭಟನಾ ಕಿಚ್ಚು ಹೆಚ್ಚತೊಡಗಿತು. ಸಂಘ ಪರಿವಾರ ಹಾಗೂ ಬಿಜೆಪಿ ವಿರುದ್ಧ ಜನರು ಒಗ್ಗೂಡಿ ಹಲವು ರೀತಿಗಳಲ್ಲಿ ಬೀದಿಗೆ ಇಳಿಯತೊಡಗಿದರು. ಆಝಾದಿ ಘೋಷಣೆಗಳು ಎಲ್ಲೆಲ್ಲೂ ಮೊಳಗತೊಡಗಿದವು. ಈ ಮಟ್ಟದ ದೇಶವ್ಯಾಪಿ ಹಬ್ಬಿದ ಹಾಗೂ ಅಂತರ್‌ರಾಷ್ಟ್ರೀಯ ಜನರ ಗಮನ ಹಾಗೂ ಬೆಂಬಲ ಪಡೆದ ಪ್ರತಿಭಟನೆ ಕಳೆದ ಕೆಲವು ದಶಕಗಳಿಂದ ಅಪರೂಪವಾಗಿದ್ದ ವಿದ್ಯಮಾನವಾಗಿತ್ತು.
ಸಂಘ ಪರಿವಾರ, ಬಿಜೆಪಿ ಮತ್ತು ಭಾರೀ ಕಾರ್ಪೊರೇಟ್‌ಗಳ ಕೂಟವು ಅಣ್ಣಾ ಹಝಾರೆಯನ್ನು ಮುಂದಿಟ್ಟುಕೊಂಡು ನಡೆಸಿದ ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಹಿಡಿದು ಇದುವರೆಗೂ ತನ್ನ ತೆಕ್ಕೆಯೊಳಗೆ ಇರಿಸಿಕೊಂಡು ತಮ್ಮ ಕಾರ್ಯಸೂಚಿಗಳನ್ನು ಜಾರಿ ಮಾಡಿಕೊಂಡು ಬಂದಿತ್ತು. ಕೋಮುವಾದ ಹಾಗೂ ಜಾತೀಯತೆಗಳಲ್ಲಿ, ಮೀಸಲಾತಿ ವಿರೋಧಿತನದಲ್ಲಿ ಮುಳುಗಿಸಿಟ್ಟುಕೊಂಡಿತ್ತು. ಈ ಯುವ ಸಮೂಹದ ತಂದೆ ತಾಯಿಗಳು, ಪೋಷಕರು ಅಂದಿನಿಂದ ಸಂಘ ಪರಿವಾರದ ತೆಕ್ಕೆಯಲ್ಲಿ ಸಿಲುಕಿದ್ದರು. ಆದರೆ ದೇಶದಲ್ಲಿ ಬೆಳೆಯುತ್ತಿರುವ ಬಿಕ್ಕಟ್ಟುಗಳ ಬಿಸಿ ನೇರವಾಗಿ ಈ ಸಮೂಹವನ್ನೂ ಸುಡಲು ತೊಡಗಿದೆ. ಈಗ ಈ ಸಮೂಹಕ್ಕೆ ಬದುಕೆನ್ನುವುದು ಬಹಳ ಪ್ರಯಾಸದಾಯಕ ಆಗತೊಡಗಿದೆ. ಹತ್ತರಿಂದ ಹನ್ನೆರಡು ಗಂಟೆ ದುಡಿದರೂ ಬದುಕಲು ಸಾಕಾಗುತ್ತಿಲ್ಲ. ವಿಶ್ರಾಂತಿ, ನೆಮ್ಮದಿಗಳಿಗೆ ತತ್ವಾರವಾಗತೊಡಗಿದೆ. ಐಟಿ, ಮೊಬೈಲುಗಳಲ್ಲಿ ಮುಳುಗಿದ್ದು ಕುರುಡಾದ ಭರವಸೆಗಳಲ್ಲಿ ಮುಳುಗಿಸಿಡಲಾಗಿದ್ದ ಈ ಸಮೂಹಕ್ಕೆ ವಾಸ್ತವದ ಸುಡುಬಿಸಿ ತಟ್ಟಿದೆ. ಆತಂಕ, ಭಯ ಅಭದ್ರತೆಗಳ ಸರಪಳಿಗಳು ಸುತ್ತಿಕೊಳ್ಳುತ್ತಾ ಬಿಗಿಯಾಗತೊಡಗಿರುವುದರ ಅನುಭವವಾಗತೊಡಗಿದೆ. ಇದುವರೆಗೂ ಇದ್ದ ಪರಸ್ಪರ ಮನುಷ್ಯ ಸಂಬಂಧಗಳಲ್ಲಿ ಭಾರೀ ಬಿಕ್ಕಟ್ಟು ಕಾಡತೊಡಗಿದೆ. ಕಣ್ಣ ಮುಂದೆ ಯಾವುದೇ ಪರ್ಯಾಯವೂ ಕಾಣದಂತಹ ಸ್ಥಿತಿ. ಇವೆಲ್ಲದರ ಒಟ್ಟಾರೆ ಪರಿಣಾಮವೇ ಈ ಹೋರಾಟದ ಸಿಡಿತ ಸಂಭವಿಸಿದ್ದು. ಇದಕ್ಕೆ ಅಭಿಜೀತ್ ದೀಪ್ಕೆ ಹಾಗೂ ಕಾಕ್ರೋಚ್ ಜನತಾ ಪಾರ್ಟಿ ಒಂದು ನಿಮಿತ್ತ ಮಾತ್ರವಾಗಿತ್ತು. ಅದೊಂದು ವಿಶಾಲ ಸಾಮೂಹಿಕ ಚಳವಳಿಯಾಗಿ ಬೆಳೆಯುತ್ತಾ ಹೋಯಿತು.
ಈ ಹೋರಾಟವು ಸಂಘಪರಿವಾರ ಹಾಗೂ ಸರಕಾರ ಇದುವರೆಗೂ ಅದರಲ್ಲೂ ಕಳೆದೆರಡು ದಶಕಗಳಿಂದ ನೂರಾರು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾ ಕಟ್ಟಿಕೊಂಡು ಬಂದಿದ್ದ ಸಂಕಥನಗಳನ್ನು ಹೊಡೆದು ಹಾಕಿತು. ಗೋದಿಮಾಧ್ಯಮಗಳು ಸಾಮಾಜಿಕ ಜಾಲತಾಣಗಳ ಮೂಲಕ ಹರಡಿಕೊಳ್ಳುತ್ತಾ ಬಂದಿದ್ದ ಧಾರ್ಮಿಕ ವಿಭಜನೆಯ ಹಾಗೂ ಬ್ರಾಹ್ಮಣಶಾಹಿ ಊಳಿಗಮಾನ್ಯ ಸಂಕಥನಗಳನ್ನು ನುಚ್ಚುನೂರು ಮಾಡಿ ನಿಂತಿತು. ಹೋರಾಟದಲ್ಲಿ ಎಲ್ಲಾ ಧಾರ್ಮಿಕ ಹಾಗೂ ಜಾತಿಯ ಹಿನ್ನೆಲೆಯವರು ಒಂದಾಗುತ್ತಾ ಸೇರಿಕೊಂಡರು. ಭಯೋತ್ಪಾದಕರು, ವಿದೇಶಿ ಶಕ್ತಿಗಳು, ದೇಶದಲ್ಲಿ ಅಸ್ಥಿರತೆ ಹುಟ್ಟುಹಾಕುವವರು, ದೇಶದ ವಿರುದ್ಧದ ಸಂಚು ಇತ್ಯಾದಿ ಸಂಘಪರಿವಾರದ ಮಾಮೂಲಿ ನುಡಿಗಟ್ಟು ಹಾಗೂ ಸಂಕಥನಗಳು ವಿಫಲವಾದವು. ಸಾಮಾಜಿಕ ಮಾಧ್ಯಮಗಳಲ್ಲಿನ ಸುಳ್ಳು ಕತೆಗಳ ಹರಡುವಿಕೆಗಳೂ ಕೆಲಸ ಮಾಡದಂತಾದವು. ಮಾರಿಕೊಂಡ ಮಾಧ್ಯಮಗಳ ಸುಳ್ಳು ವರದಿಗಳನ್ನು ದೇಶದ ಜನರು ಕಡೆಗಣಿಸಿದರು. ಹೋರಾಟದ ನಾಯಕತ್ವದಲ್ಲಿ ದಲಿತ ಹಿಂದುಳಿದ ಹಿನ್ನೆಲೆಯವರು ಹಾಗೂ ಮಹಿಳೆಯರು ಇದ್ದರು. ಈ ನಾಯಕತ್ವವನ್ನು ಯುವ ಸಮೂಹ ಒಪ್ಪಿ ಅಪ್ಪಿಕೊಂಡು ಹೋರಾಟದಲ್ಲಿ ಮುನ್ನಡೆದರು. ಕಲಾವಿದರು, ಹಾಡುಗಾರರು ಸೃಜನಶೀಲವಾಗಿ ಈ ಹೋರಾಟದಲ್ಲಿ ತೊಡಗಿಕೊಂಡರು. ಕವಿಗಳು, ಸಾಹಿತಿಗಳು, ನಟ-ನಟಿಯರು ಹಲವು ರೀತಿಗಳಲ್ಲಿ ಸ್ಪಂದಿಸಿ ನಿಂತರು. ಹಲವು ರೀತಿಯ ಸೃಜನಶೀಲ ಹಾಗೂ ಕ್ರಿಯಾತ್ಮಕ ಸ್ಪಂದನಗಳು ಈ ಹೋರಾಟಕ್ಕೆ ಹರಿದು ಬಂದವು. ಈ ಪ್ರತಿಭಟನೆಯಲ್ಲಿ ಹಲವಾರು ಸಂಘಟನೆಗಳಿದ್ದರೂ ಎಲ್ಲರೂ ಒಂದು ಸಂಯೋಜನೆ ರೂಪಿಸಿಕೊಂಡು ಹೋರಾಟಕ್ಕೆ ನಾಯಕತ್ವ ನೀಡಿದರು.
ಮುಸ್ಲಿಮ್, ಸಿಖ್, ಕ್ರೈಸ್ತ, ಬೌದ್ಧ ಸೇರಿದಂತೆ ಎಲ್ಲಾ ಧಾರ್ಮಿಕ ಹಿನ್ನೆಲೆಯವರು ಹೋರಾಟಗಾರರಿಗೆ ಹಲವಾರು ರೀತಿಗಳಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಕೈ ಜೋಡಿಸಿ ನಿಂತರು. ಆಹಾರ, ನೀರು, ಔಷಧಿ, ಟೆಂಟುಗಳು ಇನ್ನಿತರ ಅವಶ್ಯಕ ವಸ್ತುಗಳನ್ನು ಪ್ರಭುತ್ವದ ಬೆದರಿಕೆ ಕಿರುಕುಳಗಳ ನಡುವೆಯೇ ಸರಬರಾಜು ಮಾಡಿದರು. ಪ್ರಭುತ್ವ ಪಡೆಗಳು ಟೆಂಟುಗಳನ್ನು ಕಿತ್ತೆಸೆಯುವುದು ಸೇರಿದಂತೆ ಹಲವಾರು ನಷ್ಟಗಳನ್ನು ಮಾಡಿದರೂ ಜನರ ಸಹಕಾರದ ಮೂಲಕ ಹೋರಾಟಗಾರರು ಪುನಃ ಅವನ್ನೆಲ್ಲಾ ಹಾಕಿಕೊಂಡರು. ವೈದ್ಯರ ತಂಡ, ವಕೀಲರ ತಂಡ ಹೋರಾಟಗಾರರ ನೆರವಿಗೆ ತಯಾರಾಗಿ ನಿಂತವು. ಇದುವರೆಗೂ ಸಂಘ ಪರಿವಾರದ ಹಾಗೂ ಬಿಜೆಪಿಯ ಬೆಂಬಲಿಗರಾಗಿದ್ದವರು ಈಗ ಅದರಿಂದ ಹೊರಬಂದು ಹೋರಾಟದ ಜೊತೆಗೆ ನಿಂತರು. ಇವೆಲ್ಲಾ ಈ ಹೋರಾಟದ ಮಹತ್ವದ ಸಾಧನೆಗಳಾಗಿವೆ.
ಇವು ಈ ಹೋರಾಟದ ನಿಜವಾದ ವಿಜಯಗಳಾಗಿವೆ. ಈ ವಿಜಯಗಳನ್ನು ಸಾಧಿಸಿದ್ದರಿಂದಾಗಿ ಯೂನಿಯನ್ ಸರಕಾರದ ಶಿಕ್ಷಣ ಮಂತ್ರಿ ರಾಜೀನಾಮೆಯನ್ನು ನೀಡಬೇಕಾದಂತಹ ಹಾಗೂ ಹೋರಾಟಗಾರರು ಮುಂದಿಟ್ಟ ಹಕ್ಕೊತ್ತಾಯಗಳನ್ನು ಪರಿಗಣಿಸುತ್ತೇವೆಂದು ಹೇಳಲೇಬೇಕಾದ ಪರಿಸ್ಥಿತಿಯನ್ನು ಈ ಹೋರಾಟವು ನಿರ್ಮಿಸಿತು.
ಆದರೆ ನೀಟ್ ಸೇರಿದಂತೆ ಪರೀಕ್ಷಾ ಅಕ್ರಮಗಳಿಗೆ ಹಾಗೂ ಶಿಕ್ಷಣ ಕ್ಷೇತ್ರದ ಈಗಿನ ಬಿಕ್ಕಟ್ಟುಗಳಿಗೆ ಪ್ರಧಾನ ಕಾರಣವಾಗಿರುವ ಹಿಂದಿನ ಯೂನಿಯನ್ ಸರಕಾರದ ಹೊಸ ಶಿಕ್ಷಣ ನೀತಿ ಹಾಗೂ ಈಗಿನ ಯೂನಿಯನ್ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಗಳ ಬಗ್ಗೆ ವಿದ್ಯಾರ್ಥಿ ಯುವಜನ ಸಮೂಹವು ಗಮನ ಹರಿಸಬೇಕಾಗಿದೆ. ಈಗಿನ ರಾಷ್ಟ್ರೀಯ ಶಿಕ್ಷಣ ನೀತಿಯ ರದ್ದತಿ ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ರದ್ದತಿ, ನೀಟ್ ರದ್ದತಿ, ಎಲ್‌ಕೆಜಿಯಿಂದ ಹಿಡಿದು ಇಡೀ ಶಿಕ್ಷಣ ಕ್ಷೇತ್ರದ ಕಾರ್ಪೊರೇಟೀಕರಣ ನೀತಿಯ ರದ್ದತಿಗಳಿಗಾಗಿ ಈ ಹೋರಾಟವು ಮುಂದೆ ಸಾಗಬೇಕಾಗಿದೆ. ಶಿಕ್ಷಣ ರಂಗದ ಫ್ಯಾಶಿಸ್ಟೀಕರಣವನ್ನು ರದ್ದುಗೊಳಿಸಬೇಕಿದೆ. ಈ ದಿಕ್ಕಿನಲ್ಲಿ ಸಾಗಲು ದೇಶದ ಎಲ್ಲಾ ಜನಪರ ವಿದ್ಯಾರ್ಥಿ ಸಂಘಟನೆಗಳು ರಾಷ್ಟ್ರ ಮಟ್ಟದಲ್ಲಿ ಹಾಗೂ ಸ್ಥಳೀಯ ಮಟ್ಟದಲ್ಲಿ ಪ್ರಜಾತಾಂತ್ರಿಕವಾದ ಒಂದು ವೇದಿಕೆಯಡಿ ಒಂದಾಗಬೇಕಾದ ಅನಿವಾರ್ಯತೆಯಿದೆ. ಶಿಕ್ಷಣದ ಕಾರ್ಪೋರೇಟೀಕರಣ ಮತ್ತು ಫ್ಯಾಶಿಸ್ಟೀಕರಣವನ್ನು ವಿರೋಧಿಸುವ ಸಾಮಾನ್ಯ ಕಾರ್ಯಕ್ರಮವಾಗಿ ಹಾಕಿಕೊಳ್ಳಬೇಕಿದೆ. ಕಾಕ್ರೋಚ್ ಜನತಾ ಪಾರ್ಟಿಯನ್ನೂ ಇದರಲ್ಲಿ ಒಳಗೊಳಿಸಬಹುದು. ಆದರೆ ಆಳುವಶಕ್ತಿಗಳೊಂದಿಗೆ ನೇರವಾಗಿ ಸಂಬಂಧವಿರುವ ಯಾವುದೇ ವಿದ್ಯಾರ್ಥಿ ಯುವಜನ ಸಂಘಟನೆಗಳನ್ನು ಈ ವೇದಿಕೆಗೆ ಸೇರಿಸಿಕೊಳ್ಳದಂತಿರಬೇಕು. ಸಮಾನ ನೆಲೆಗಟ್ಟಿನಲ್ಲಿ ಉದ್ದೇಶ ಪ್ರಾಧಾನ್ಯತೆಯ ಆಧಾರದಲ್ಲಿ ಇದು ರೂಪುಗೊಳ್ಳುವಂತಾಗಬೇಕು. ಈಗ ನಡೆದ ಹೋರಾಟ ಈ ದೂರಗಾಮಿ ಹಾಗೂ ವಿಶಾಲ ದೃಷ್ಟಿಕೋನದೊಂದಿಗೆ ಕಾರ್ಯಾಚರಿಸುವತ್ತ ಸಾಗಿದರೆ ಅದು ಈ ಚಳವಳಿಯ ಈ ಸಂದರ್ಭದ ಮಹತ್ತರವಾದ ವಿಜಯದ ಭಾಗವಾಗುತ್ತದೆ.