ನಾಲ್ಕು ವರ್ಷಗಳಲ್ಲಿ ರಾಜ್ಯಾದ್ಯಂತ 4,313 ಕೊಲೆ ಪ್ರಕರಣ ದಾಖಲು
ಬೆಂಗಳೂರು : ರಾಜ್ಯದಲ್ಲಿ ಪ್ರತೀ ವರ್ಷ ಸರಾಸರಿ 1,223 ಕೊಲೆ ಪ್ರಕರಣಗಳು ದಾಖಲಾಗುತ್ತಿದ್ದು, 2023ರಿಂದ ಈವರೆಗೆ ರಾಜ್ಯಾದ್ಯಂತ 4,313 ಕೊಲೆ ಪ್ರಕರಣಗಳು ನಡೆದಿವೆ. ಈ ಪೈಕಿ ಶೇ.25ರಷ್ಟು ಕೊಲೆಗಳು ದ್ವೇಷದಿಂದ, ಪ್ರೇಮ ವೈಫಲ್ಯದಿಂದ, ಆಸ್ತಿ ಹಾಗೂ ವ್ಯವಹಾರ ವಿವಾದಗಳಿಂದ ನಡೆದಿವೆ. 672 ಕೊಲೆಗಳು ಬೆಂಗಳೂರಿನಲ್ಲಿಯೇ ನಡೆದಿವೆ.
ಒಟ್ಟು ಕೊಲೆ ಪ್ರಕರಣಗಳಲ್ಲಿ 277 ಪ್ರಕರಣಗಳು ಹಣ ಅಥವಾ ಆಸ್ತಿಗಾಗಿ ನಡೆಸಿದ ಕೊಲೆಗಳಿವೆ. 283 ದ್ವೇಷದಿಂದಾದ ಕೊಲೆಗಳು, 358 ಹಠಾತ್ ಜಗಳಗಳಿಂದ ನಡೆದ ಹತ್ಯೆಗಳಾಗಿವೆ. ಇನ್ನು ನಾಲ್ಕು ವರ್ಷಗಳಲ್ಲಿ 10,958 ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 2,873 ಪ್ರಕರಣ, 2024ರಲ್ಲಿ 2,866 ಪ್ರಕರಣ, 2025ರಲ್ಲಿ 3,258 ಪ್ರಕರಣ, 2026ರಲ್ಲಿ 1,961 ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ.
ಕೊಲೆ ಪ್ರಕರಣಗಳಿಗೆ ಸಂಬಂಧಿಸಿ, 2023ರಲ್ಲಿ 1,296 ಹತ್ಯೆಗಳು ನಡೆದಿವೆ. 84 ಪ್ರತಿಕಾರದ ಹತ್ಯೆಗಳು, 11 ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಗಳು, ಒಂದು ಮರ್ಯಾದೆ ಹತ್ಯೆ, ಒಂದು ಕೋಮು ಹತ್ಯೆ, 13 ವರದಕ್ಷಿಣೆಗಾಗಿ ನಡೆದ ಹತ್ಯೆಗಳಾಗಿವೆ. 86 ಆಸ್ತಿ ಹಾಗೂ ವ್ಯವಹಾರ ವಿವಾದಗಳಿಂದ ನಡೆದ ಹತ್ಯೆಗಳಾಗಿದ್ದು, ಹಠಾತ್ ಜಗಳಗಳಿಂದ 112 ಕೊಲೆಗಳು ನಡೆದಿವೆ. ಇನ್ನಿತರ ವಿಚಾರಗಳಿಗೆ ಸುಮಾರು 988 ಕೊಲೆಗಳು ನಡೆದಿವೆ.
2024ರಲ್ಲಿ 1,222 ಹತ್ಯೆಗಳು ನಡೆದಿದ್ದು, 38 ಪ್ರತೀಕಾರದ ಹತ್ಯೆಗಳಾಗಿವೆ. 8 ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಗಳು, ಮೂರು ಜಾತಿ ಕಾರಣಕ್ಕಾಗಿ ಉಂಟಾದ ಗಲಭೆಯಲ್ಲಿನ ಹತ್ಯೆಗಳು, 11 ವರದಕ್ಷಿಣೆಗಾಗಿ ನಡೆದ ಹತ್ಯೆಗಳಾಗಿವೆ. 81 ಆಸ್ತಿ ಹಾಗೂ ವ್ಯವಹಾರ ವಿವಾದಗಳಿಂದ ನಡೆದ ಹತ್ಯೆಗಳಾಗಿದ್ದು, ಹಠಾತ್ ಜಗಳಗಳಿಂದ 104 ಕೊಲೆಗಳು ನಡೆದಿವೆ. ಇನ್ನಿತರ ವಿಚಾರಗಳಿಗೆ ಉಳಿದ ಕೊಲೆಗಳು ನಡೆದಿವೆ.
2025ರಲ್ಲಿ 1,210 ಹತ್ಯೆಗಳು ನಡೆದಿದ್ದು, 79 ಪ್ರತಿಕಾರದ ಹತ್ಯೆಗಳು, 10 ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಗಳು, ಒಂದು ಮರ್ಯಾದೆ ಹತ್ಯೆ, ಒಂದು ಕೋಮು ಹತ್ಯೆ, 8 ವರದಕ್ಷಿಣೆಗಾಗಿ ನಡೆದ ಹತ್ಯೆಗಳಾಗಿವೆ. 73 ಆಸ್ತಿ ಹಾಗೂ ವ್ಯವಹಾರ ವಿವಾದಗಳಿಂದ ನಡೆದ ಹತ್ಯೆಗಳಾಗಿದ್ದು, ಹಠಾತ್ ಜಗಳಗಳಿಂದ 96 ಕೊಲೆಗಳು ನಡೆದಿವೆ. ಇನ್ನಿತರ ವಿಚಾರಗಳಿಗೆ ಉಳಿದ ಕೊಲೆಗಳು ನಡೆದಿವೆ.
2026ರಲ್ಲಿ 580 ಹತ್ಯೆಗಳು ನಡೆದಿದ್ದು, 36 ಪ್ರತಿಕಾರದ ಹತ್ಯೆಗಳು, 5 ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಗಳು, ಒಂದು ಮರ್ಯಾದೆ ಹತ್ಯೆ, 3 ವರದಕ್ಷಿಣೆಗಾಗಿ ನಡೆದ ಹತ್ಯೆಗಳಾಗಿವೆ. 37 ಆಸ್ತಿ ಹಾಗೂ ವ್ಯವಹಾರ ವಿವಾದಗಳಿಂದ ನಡೆದ ಹತ್ಯೆಗಳಾಗಿದ್ದು, ಹಠಾತ್ ಜಗಳಗಳಿಂದ 46 ಕೊಲೆಗಳು ನಡೆದಿವೆ. ಇನ್ನಿತರ ವಿಚಾರಗಳಿಗೆ ಉಳಿದ ಕೊಲೆಗಳು ನಡೆದಿವೆ ಎಂದು ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ.
72 ಮಂದಿ ಪ್ರೇಮಿಗಳ ಹತ್ಯೆ
ರಾಜ್ಯದಲ್ಲಿ ಪ್ರೇಮ ವೈಫಲ್ಯದಿಂದಾಗಿ ಕೊಲೆಯಾಗುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಾಲ್ಕು ವರ್ಷಗಳಲ್ಲಿ 72 ಪ್ರೇಮ ವೈಫಲ್ಯದಿಂದಾಗಿ ನಡೆದ ಕೊಲೆಗಳಾಗಿವೆ. 2023ರಲ್ಲಿ 19 ಕೊಲೆಗಳು, 2024ರಲ್ಲಿ 25 ಕೊಲೆಗಳು, 2025ರಲ್ಲಿ 23 ಕೊಲೆಗಳು, 2026ರಲ್ಲಿ ಜೂನ್ ಅಂತ್ಯದವರೆಗೆ 5 ಕೊಲೆಗಳು ಪ್ರೇಮ ವೈಫಲ್ಯದಿಂದಾಗಿ ನಡೆದಿವೆ.