ಹೊಸಪೇಟೆ : ಉಪಲೋಕಾಯುಕ್ತ ವೀರಪ್ಪ ದಿಢೀರ್ ಪರಿಶೀಲನೆ

ಚರ್ಚೆಗೆ ಗ್ರಾಸವಾದ ನಗರದ ವಿವಿಧೆಡೆ ನಡೆದ ‘ತ್ವರಿತ ಸ್ವಚ್ಛತೆ’

Update: 2026-07-26 08:09 IST

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಶನಿವಾರ ದಿಢೀರ್ ಭೇಟಿ ನೀಡಿ ವಿವಿಧ ಸರಕಾರಿ ಇಲಾಖೆಗಳ ಕಾರ್ಯವೈಖರಿ, ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಮೂಲಸೌಲಭ್ಯಗಳು ಹಾಗೂ ಸೇವೆಗಳ ಗುಣಮಟ್ಟವನ್ನು ಪರಿಶೀಲಿಸಿದರು.

ಉಪಲೋಕಾಯುಕ್ತರ ಭೇಟಿ ಕುರಿತು ಮುಂಚಿತವಾಗಿ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು ಬಸ್ ನಿಲ್ದಾಣ, ಅಂಗನವಾಡಿ ಸೇರಿದಂತೆ ವಿವಿಧ ಸ್ಥಳಗಳನ್ನು ತ್ವರಿತವಾಗಿ ಸ್ವಚ್ಛಗೊಳಿಸಿ ವ್ಯವಸ್ಥಿತವಾಗಿ ಸಜ್ಜುಗೊಳಿಸಿದ್ದೂ ಗಮನ ಸೆಳೆಯಿತು.

ಮೊದಲು ಹೊಸಪೇಟೆಯ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ ಅವರು, ರೈತರು ಎದುರಿಸುತ್ತಿರುವ ಸಮಸ್ಯೆಗಳು, ಕಮಿಷನ್ ವಸೂಲಿ, ತೂಕದಲ್ಲಿ ನಡೆಯುತ್ತಿರುವ ಅಕ್ರಮ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳು ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚಿಸಿದರು. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಅವರು, ವಿದ್ಯಾರ್ಥಿಗಳ ಬಸ್ ಸಮಸ್ಯೆಗಳನ್ನು ಆಲಿಸಿದರು. ಶೌಚಾಲಯಗಳ ಸ್ವಚ್ಛತೆ, ಲಗೇಜ್ ರೂಂ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೇಕರಿಯಲ್ಲಿ ಮಾರಾಟವಾಗುತ್ತಿದ್ದ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಕುಡಿಯುವ ನೀರಿನ ಬಾಟಲ್‌ಗಳನ್ನು ಪರಿಶೀಲಿಸಿದರು. ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅಗತ್ಯ ಬಸ್ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಹೊಸಪೇಟೆಯ ಚಿತ್ತವಾಡ್ಗಿ ಪ್ರದೇಶದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು, ಮಕ್ಕಳಿಗೆ ಹಾಲಿನ ಪುಡಿ ವಿತರಣೆ ಆಗದಿರುವ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸರಕಾರದ ಕೋಟ್ಯಂತರ ರೂಪಾಯಿ ಸಾರ್ವಜನಿಕ ಕಲ್ಯಾಣಕ್ಕಾಗಿ ಮೀಸಲಾಗಿದೆ. ‘ಇಂಡೆಂಟ್ ಹಾಕಿಲ್ಲ’ ಎಂಬ ಕಾರಣ ಸಮಂಜಸವಲ್ಲ. ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು ಸಮಯಕ್ಕೆ ತಲುಪಬೇಕು. ಇಲಾಖೆಯನ್ನು ಜವಾಬ್ದಾರಿಯಿಂದ ನಿರ್ವಹಿಸಿ, ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಾಮಾನ್ಯ ದಿನಗಳಲ್ಲಿ ಕಂಡುಬರುವ ಹಲವು ಸಮಸ್ಯೆಗಳು ಉಪಲೋಕಾಯುಕ್ತರ ಭೇಟಿ ದಿನ ಗೋಚರಿಸದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಅಧಿಕಾರಿಗಳ ಭೇಟಿ ಸಂದರ್ಭದಲ್ಲಷ್ಟೇ ಅಲ್ಲ, ಸಾರ್ವಜನಿಕರಿಗೆ ಪ್ರತಿದಿನವೂ ಗುಣಮಟ್ಟದ ಸೇವೆ ಹಾಗೂ ಸ್ವಚ್ಛತೆ ದೊರೆಯಬೇಕು ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

ಉಪಲೋಕಾಯುಕ್ತರ ಪರಿಶೀಲನೆಯಿಂದ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ಮತ್ತಷ್ಟು ಜವಾಬ್ದಾರಿತನ ಮೂಡಲಿದೆ ಎಂಬ ನಿರೀಕ್ಷೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದರು.

ಉಪಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಸರಕಾರಿ ಇಲಾಖೆಗಳ ಕಾರ್ಯವೈಖರಿಯನ್ನು ದಿಢೀರ್ ಪರಿಶೀಲಿಸುತ್ತಿರುವುದು ಸ್ವಾಗತಾರ್ಹ. ಇಂತಹ ಪರಿಶೀಲನೆಗಳಿಂದ ಅಧಿಕಾರಿಗಳಲ್ಲಿ ಜವಾಬ್ದಾರಿತನ ಹೆಚ್ಚುವುದರೊಂದಿಗೆ ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ಗುಣಮಟ್ಟದ ಸೇವೆ ದೊರೆಯಲಿದೆ ಎಂಬ ವಿಶ್ವಾಸವಿದೆ.

-ಗುಜ್ಜಲ್ ಗಣೇಶ್, ಉಪಾಧ್ಯಕ್ಷರು, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ, ವಿಜಯನಗರ ಜಿಲ್ಲೆ

ಜಿಲ್ಲೆಯ ಗಣಿಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಲಾರಿ ಮಾಲಕರು, ಚಾಲಕರು ಮತ್ತು ಕಾರ್ಮಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ಕಾನೂನುಬದ್ಧ ಹಾಗೂ ನ್ಯಾಯಸಮ್ಮತ ಪರಿಹಾರ ಕಲ್ಪಿಸಲು ಉಪಲೋಕಾಯುಕ್ತರು ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ನಿರೀಕ್ಷೆ.

-ಶ್ರೀಮತಿ ಶಕುಂತಲಾಬಾಯಿ, ಲಾರಿ ಮಾಲಕರು, ಕಲ್ಲಹಳ್ಳಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ್ ಗೌಸ್, ವಿಜಯನಗರ

contributor

Similar News