ಯಾದಗಿರಿ | ನಗರದ ರಸ್ತೆಗಳೇ ಸಾವಿನ ಗುಂಡಿಗಳು

ಅಪಘಾತ ಭೀತಿಯಲ್ಲಿ ವಾಹನ ಸವಾರರು

Update: 2026-07-26 08:05 IST

ಯಾದಗಿರಿ: ನಗರದ ಪ್ರಮುಖ ರಸ್ತೆಗಳು ತಗ್ಗು-ಗುಂಡಿಗಳಿಂದ ತುಂಬಿ ವಾಹನ ಸವಾರರಿಗೆ ನಿತ್ಯ ಜೀವಭಯ ಉಂಟುಮಾಡುತ್ತಿವೆ. ಮಳೆ ಬಂದ ಬಳಿಕ ಗುಂಡಿಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಅವು ಕಾಣಿಸದೆ ಅಪಘಾತಗಳ ಅಪಾಯ ಹೆಚ್ಚಾಗುತ್ತಿದೆ. ವಿಶೇಷವಾಗಿ ರಾತ್ರಿ ವೇಳೆ ಸಂಚರಿಸುವ ದ್ವಿಚಕ್ರ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ನಗರದ ಶಾಸ್ತ್ರಿ ಸರ್ಕಲ್, ಎಲ್‌ಐಸಿ ಕಚೇರಿ, ಹತ್ತಿಕುಣಿ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ತಿಂಗಳುಗಳಿಂದ ಹಾಳಾಗಿದ್ದರೂ, ಸಂಬಂಧಪಟ್ಟ ಇಲಾಖೆ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ. ಇದರಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನೂರಾರು ಸಾರ್ವಜನಿಕರು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಣ್ಣ ಎಡವಟ್ಟೂ ದೊಡ್ಡ ಅನಾಹುತಕ್ಕೆ ಕಾರಣವಾಗುವ ಆತಂಕ ಎದುರಾಗಿದೆ.

ಮಳೆ ಬಂದಾಗ ಚರಂಡಿ ನೀರು ರಸ್ತೆಯಲ್ಲೇ ನಿಂತು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಅಲ್ಲದೆ ಕಸದ ರಾಶಿಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾರ್ವಜನಿಕ ಆರೋಗ್ಯಕ್ಕೂ ಅಪಾಯ ಎದುರಾಗಿದೆ. ನಗರದ ಸ್ವಚ್ಛತೆ ಮತ್ತು ಮೂಲ ಸೌಕರ್ಯದ ಕೊರತೆ ಹೊರಗಿನಿಂದ ಬರುವವರ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮಳೆಗಾಲ ಮುಗಿಯುವವರೆಗೆ ಕಾಯದೆ ತಕ್ಷಣ ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿ ಕೈಗೊಳ್ಳಬೇಕು. ಇಲ್ಲವಾದರೆ ದೊಡ್ಡ ಅನಾಹುತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಯನ್ನು ಸಂಬಂಧಪಟ್ಟ ಅಧಿಕಾರಿಗಳೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಯಾದಗಿರಿ ನಗರದ ಪ್ರಮುಖ ರಸ್ತೆಗಳು ಗುಂಡಿಗಳಿಂದ ತುಂಬಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿವೆ. ರಾತ್ರಿ ವೇಳೆ ಗುಂಡಿಗಳು ಕಾಣಿಸದೇ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳಿಗೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಸುರಕ್ಷಿತ ಸಂಚಾರಕ್ಕೆ ಅಗತ್ಯವಾದ ರಸ್ತೆ ದುರಸ್ತಿಯನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಮಾಯಕ ಜೀವಗಳು ಬಲಿಯಾಗುವ ಮುನ್ನವೇ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಹೋರಾಟ ನಡೆಸಬೇಕಾಗುತ್ತದೆ ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ್ ಎಚ್ಚರಿಸಿದ್ದಾರೆ.

ಮೇಲೆ ಮಿನುಗುವ ಸೌಂದರ್ಯೀಕರಣ, ಕೆಳಗೆ ಕೊಳಚೆಯ ದರ್ಶನ:

ನಗರದ ಪ್ರಮುಖ ರಸ್ತೆಗಳಲ್ಲಿ ಸೌಂದರ್ಯೀಕರಣಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಅದೇ ರಸ್ತೆಗಳ ಪಕ್ಕದಲ್ಲೇ ಚರಂಡಿ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಸ್ವಚ್ಛತೆ ಮತ್ತು ಮೂಲಸೌಕರ್ಯಕ್ಕೂ ನಗರಸಭೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಶೌಚಾಲಯದ ಪಕ್ಕದಲ್ಲೇ ಬಾಯ್ತೆರೆದ ಚರಂಡಿ :

ನಗರದ ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿರುವ ಚರಂಡಿ ಗುಂಡಿ ಮುಚ್ಚಳವಿಲ್ಲದೆ ಬಾಯ್ತೆರೆದು ನಿಂತಿದೆ. ಪ್ರತಿದಿನ ನೂರಾರು ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಈ ಶೌಚಾಲಯ ಬಳಸುತ್ತಿದ್ದು, ರಾತ್ರಿ ವೇಳೆ ಕಾಲು ಜಾರಿ ಚರಂಡಿಗೆ ಬೀಳುವ ಅಪಾಯ ಎದುರಾಗಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸದ್ಯ ಯಾದಗಿರಿಯಲ್ಲಿ ಡಾಂಬರ್ ಸಮಸ್ಯೆಯಿದ್ದು, ಸಿಗುತ್ತಿಲ್ಲ. ಇದರಿಂದ ರಸ್ತೆ ದುರಸ್ತಿ ಕಾಮಗಾರಿಗೆ ಸ್ವಲ್ಪ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ಸಿಸಿ ಅಥವಾ ಮರಮು ಹಾಕಬೇಕು ಅಂತ ಯೋಚನೆ ಮಾಡಲಾಗಿತ್ತು. ಆದರೆ ಅದು ಸೂಕ್ತ ಪರಿಹಾರವಾಗುವುದಿಲ್ಲ. ಆದ್ದರಿಂದ ಈಗ ತಾತ್ಕಾಲಿಕವಾಗಿ ರಸ್ತೆ ಗುಂಡಿಗಳಿಗೆ ಮರಮು ಹಾಕುತ್ತೇವೆ. ಡಾಂಬರ್ ಸಿಕ್ಕ ಕೂಡಲೇ ಕಾಯಂ ಡಾಂಬರೀಕರಣ ಕಾಮಗಾರಿ ಮಾಡುತ್ತೇವೆ.

-ಉಮೇಶ್ ಚವ್ಹಾಣ, ನಗರಸಭೆ ಪೌರಾಯುಕ್ತರು

ಯಾದಗಿರಿ ಜಿಲ್ಲೆಯ ಹಲವು ರಸ್ತೆಗಳಲ್ಲಿ ತಗ್ಗು-ಗುಂಡಿಗಳಿಂದ ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳು ಕೂಡ ವಾಹನದಿಂದ ಇಳಿದು ಗುಂಡಿಗಳನ್ನು ದಾಟಿ ಮತ್ತೆ ವಾಹನ ಏರುವ ಪರಿಸ್ಥಿತಿ ಇದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಗುಂಡಿ ಮುಚ್ಚುವ ಕಾರ್ಯ ನಡೆದಿಲ್ಲ. ಸರಕಾರ ಗ್ಯಾರಂಟಿ ಯೋಜನೆಗಳಲ್ಲೇ ತೊಡಗಿ ಮೂಲಭೂತ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ.

-ಶುಭಾಶ್ಚಂದ್ರ ಕಟಕಟಿ, ಜೆಡಿಎಸ್ ಜಿಲ್ಲಾಧ್ಯಕ್ಷ, ಯಾದಗಿರಿ

ಸರಕಾರ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತ ಅಭಿವೃದ್ಧಿಯನ್ನೇ ಮರೆತಿದೆ. ರಸ್ತೆಗಳಲ್ಲಿನ ತಗ್ಗು-ಗುಂಡಿಗಳನ್ನು ಮುಚ್ಚುವಷ್ಟು ಹಣ ಸರಕಾರದ ಬಳಿ ಇಲ್ಲವೇ ಅಥವಾ ಅಧಿಕಾರಿಗಳ ಬೇಜವಾಬ್ದಾರಿತನವೋ ತಿಳಿಯುತ್ತಿಲ್ಲ. ಸ್ವಲ್ಪ ಇಚ್ಛಾಶಕ್ತಿ ತೋರಿಸಿ ರಸ್ತೆಗಳನ್ನು ದುರಸ್ತಿಪಡಿಸಬೇಕು.

-ರಾಚಣ್ಣಗೌಡ ಮುದ್ನಾಳ, ಹಿರಿಯ ಬಿಜೆಪಿ ಮುಖಂಡ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ

contributor

Similar News