×
Ad

ಹೋತಪೇಟೆ ತಾಂಡಾಗಳಿಗಿಲ್ಲ ಮೂಲಸೌಕರ್ಯ!

ನಿದ್ರೆಗೆ ಜಾರಿದ ಅಧಿಕಾರಿ ವರ್ಗ, ಜವಾಬ್ದಾರಿ ಮರೆತ ಜನಪ್ರತಿನಿಧಿಗಳು

Update: 2025-12-30 15:04 IST

ಶಹಾಪುರ: ಕುಡಿಯಲು ಶುದ್ಧ ನೀರಿಲ್ಲ, ನಡೆದಾಡಲು ಸೂಕ್ತ ರಸ್ತೆ ಇಲ್ಲ, ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಇದು ಜಿಲ್ಲೆಯ ಶಹಾಪುರ ತಾಲೂಕಿನ ಹೋತಪೇಟ ಮೇಲಿನ ತಾಂಡಾ, ನಡುವಿನ ತಾಂಡಾ, ದಿಬ್ಬಿ ತಾಂಡಾ ಹಾಗೂ ಮುಂದಿನ ತಾಂಡಾಗಳ ಪರಿಸ್ಥಿತಿ.

ಇಲ್ಲಿನ ತಾಂಡಾಗಳ ಜನರು ಶುದ್ಧ ನೀರು ಕುಡಿಯಬೇಕೆಂದು ಸರಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದೆ. ಆದರೆ ಅವು 3-4 ವರ್ಷಗಳಿಂದ ಕೆಟ್ಟು ನಿಂತಿವೆ. ಹತ್ತಾರು ಅನುದಾನ ಬಳಸಿ ಸಿಸಿ ರಸ್ತೆ ನಿರ್ಮಿಸಿದ್ದಾರೆ. ಆದರೆ ಜೆಜೆಎಂ ಯೋಜನೆಯ ಕಾಮಗಾರಿ ನಡೆಸಿದ ಪರಿಣಾಮ ಎಲ್ಲ ರಸ್ತೆಗಳು ಒಡೆದು ಹಾಳಾಗಿವೆ. ಅದರಲ್ಲಿ ಚರಂಡಿ ನೀರು ತುಂಬಿ ಗಬ್ಬು ನಾರುವ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ತಾಣವಾಗಿ ಮಾರ್ಪಟ್ಟಿವೆ.

ತಾಂಡಾಗಳಲ್ಲಿ ಸರಿಯಾದ ವಿದ್ಯುತ್ ಕಂಬಗಳು ಇಲ್ಲ. ಎಲ್ಲೆಂದರಲ್ಲಿ ಅಸುರಕ್ಷಿತವಾಗಿ ಮರದ ಕಟ್ಟಿಗೆಗಳಿಗೆ ಆಸರೆಯಾಗಿ ವಿದ್ಯುತ್ ತಂತಿಗಳು ನಿಂತಿವೆ. ಇರುವ ಕೆಲವು ಕಂಬಗಳ ಸಿಮೆಂಟ್ ಕಿತ್ತು ತುಕ್ಕು ಹಿಡಿದ ಕಬ್ಬಿಣ ಕಂಬಿಗಳು ಹೊರಕ್ಕೆ ಇಣುಕುತ್ತಿವೆ. ಮಳೆ ಬಂದರೆ ಸಾಕು ಮರದ ಕಟ್ಟಿಗೆ ತೇವಾಂಶವಾಗಿ ವಿದ್ಯುತ್ ಶಾಕ್ ಹೊಡೆದು ಸಾವು ಸಂಭವಿಸುವ ಅಪಾಯ ಇದೆ. ಜೊತೆಗೆ ಅಸುರಕ್ಷಿತವಾಗಿ ವಿದ್ಯುತ್ ಕಂಬ ಹಾಕಲಾಗಿದೆಯೋ ಅಥವಾ ವಿದ್ಯುತ್ ಕಂಬಕ್ಕೆ ಅಂಟಿಸಿಕೊಂಡು ಮನೆ ಕಟ್ಟಿದ್ದಾರೆಯೋ ಗೊತ್ತಿಲ್ಲ, ಮನೆಯ ಮೇಲಿನಿಂದ ಹಾದುಹೋಗಿರುವ ವಿದ್ಯುತ್ ತಂತಿಗಳು ಯಾರನ್ನೋ ಬಲಿ ಪಡೆಯಲು ಕಾದು ಕೂತಂತೆ ಇವೆ. ಈ ಸಂಬಂಧ ಹಲವು ಬಾರಿ ಕೆಇಬಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋನಜನವಾಗಿಲ್ಲ. ಜೀವ ಭಯದಲ್ಲಿ ವಾಸಿಸುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಿದ್ದಾರೆ

ತಾಂಡಾ ನಿವಾಸಿ ರತ್ತಲಿಬಾಯಿ.

‘ಜನರ ಕಷ್ಟಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸಬೇಕಾದ ಹೋತಪೇಟ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಬರುವ ಅನುದಾನದ ಒಂದು ರೂಪಾಯಿಯು ಜನರಿಗೆ ತಲುಪದಂತೆ ನೋಡಿಕೊಳ್ಳುತ್ತಿದ್ದಾರೆ. ಕೇವಲ ನಕಲಿ ದಾಖಲೆ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳುವುದು ಒಂದೇ ಇವರ ಕಾಯಕವಾಗಿದೆ’ ಎಂದು ನಿವಾಸಿ ಉಮೇಶ್ ರಾಥೋಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಯ ತಾಂಡಾಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ನಿವಾಸಿಗರು ಆಗ್ರಹಿಸುತ್ತಿದ್ದಾರೆ.

ನಮ್ಮ ತಾಂಡಾಗಳಲ್ಲಿ ನಡೆದ ಜೆಜೆಎಂ ಕಾಮಗಾರಿಯಿಂದ ಸಿಸಿ ರಸ್ತೆ ಒಡೆದು ಓಡಾಡಲು ಸಮಸ್ಯೆಯಾಗಿದೆ. ಜೊತೆಗೆ ಸೂಕ್ತ ವಿದ್ಯುತ್ ಕಂಬಗಳಿಲ್ಲದೆ ಜನರು ಜೀವ ಭಯದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಳು ನೀಡದೆ ಉಳ್ಳವರು ಪ್ರಭಾವ ಬಳಸಿ ನಕಲಿ ದಾಖಲೆ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

-ರಮೇಶ್ ರಾಥೋಡ್, ಹೋತಪೇಟ ನಡುವಿನ ತಾಂಡಾ ನಿವಾಸಿ

ಈ ಸಮಸ್ಯೆ ನಿಮ್ಮ ಮೂಲಕ ಗಮನಕ್ಕೆ ಬಂದಿದೆ. ನಮ್ಮ ಅಧಿಕಾರಿಗಳಿಗೆ ತಿಳಿಸಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಿ ಸುರಕ್ಷಿತ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ. ಜೊತೆಗೆ ಅಲ್ಲಿಯ ನಿವಾಸಿಗಳು ಅಸುರಕ್ಷಿತವಾಗಿ ವಿದ್ಯುತ್ ಕಂಬಕ್ಕೆ ಹೊಂದಿಕೊಂಡು ಮನೆ ನಿರ್ಮಾಣ ಮಾಡಿದ್ದಾರೆ. ಜನರು ಸಹ ತಮ್ಮ ಸುರಕ್ಷತೆ ನೋಡಿಕೊಂಡು ಮನೆ ನಿರ್ಮಿಸಬೇಕು.

-ಮರೆಪ್ಪ ಕಡೆಕರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕಾ ಮತ್ತು ಪಾ ಉಪವಿಭಾಗ ಗು.ವಿ.ಸ.ಕಂ.ನಿ ಶಹಾಪುರ


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚನ್ನಬಸಪ್ಪ ಬಿ. ದೊಡ್ಡಮನಿ

contributor

Similar News