ಸರಕಾರಿ ಶಾಲೆಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಯಲಿ
ಭಾಗ - 1
ಕರ್ನಾಟಕ ರಾಜ್ಯ ಸರಕಾರ ಅನುಷ್ಠಾನಗೊಳಿಸುತ್ತಿರುವ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಯೋಜನೆಯನ್ನು ವಿರೋಧಿಸಿ ಹಲವು ಗುಂಪುಗಳು ಸಾರ್ವಜನಿಕ ಹೋರಾಟಗಳನ್ನು ಆರಂಭಿಸಿವೆ. ಸರಕಾರ ವಿಲೀನದ ಹೆಸರಿನಲ್ಲಿ 40 ಸಾವಿರಕ್ಕೂ ಹೆಚ್ಚು(!!?) ಸರಕಾರಿ (kannada) ಶಾಲೆಗಳನ್ನು ಮುಚ್ಚುವ ಮೂಲಕ ಜನರಿಗೆ ದ್ರೋಹ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಸಾರ್ವಜನಿಕರಿಗೆ ಸ್ಪಷ್ಟನೆ ಕೊಡಬೇಕಾದ ಶಿಕ್ಷಣ ಸಚಿವರು ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎನ್ನುವ ಅರ್ಧ ಸತ್ಯವನ್ನು ಪದೇ ಪದೇ ಹೇಳುತ್ತಾ ಇನ್ನಷ್ಟು ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಮುಚ್ಚುವುದು ಮತ್ತು ವಿಲೀನ ಎನ್ನುವ ಪದಗಳ ಅರ್ಥದಲ್ಲಿ ದೊಡ್ಡ ವ್ಯತ್ಯಾಸ ಇಲ್ಲ ಎನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ. ಕೆಪಿಎಸ್ ಯೋಜನೆ ಜಾರಿ ಮಾಡಲು ದೃಢ ನಿರ್ಧಾರ ಮಾಡಿರುವ ಸರಕಾರಕ್ಕೆ ಸಾರ್ವಜನಿಕರ ಗೊಂದಲ ಮತ್ತು ಅಪನಂಬಿಕೆಯನ್ನು ನಿವಾರಿಸಲು ಸಾಧ್ಯವಾಗುತ್ತಿಲ್ಲ. ಯೋಜನೆಯನ್ನು ವಿರೋಧಿಸುತ್ತಿರುವ ಗುಂಪುಗಳ ಕಾಳಜಿ ಕುರಿತು ಭಿನ್ನಾಭಿಪ್ರಾಯ ಇಲ್ಲ. ಆದರೆ ಅವರು ಅವಾಸ್ತವಿಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟವನ್ನು ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳನ್ನು ಮುಚ್ಚುವ ಬದಲು ಎಸ್ ಡಿ ಎಂ ಸಿ ಗಳಿಗೆ ವಹಿಸಿ ಕೊಡಿ. ಹಾಲು ಉತ್ಪಾದಕರ ಸೊಸೈಟಿ ಗಳ ಮಾದರಿಯಲ್ಲಿ ಶಾಲೆಗಳನ್ನು ನಡೆಸುತ್ತೇವೆ ಎನ್ನುವ ಅವರ ಬೇಡಿಕೆಯೇ ಹಾಸ್ಯಾಸ್ಪದವಾಗಿ ಕಾಣುತ್ತದೆ. ಇಂತಹ ಹೋರಾಟಗಳು ಮತ್ತು ಹೇಳಿಕೆಗಳಿಂದ ಕರ್ನಾಟಕದ ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ರಕ್ಷಿಸಲು ಸಾಧ್ಯವಿಲ್ಲ.
ಸರಕಾರಿ ಶಾಲೆಗಳ ದುಸ್ಥಿತಿಗೆ ಕಾರಣಗಳು
ಕರ್ನಾಟಕದಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಆಕರ್ಷಣೆಯನ್ನು ಕಳೆದುಕೊಳ್ಳುತ್ತಿವೆ. ಕಳೆದ 10-15 ವರ್ಷಗಳಲ್ಲಿ ಸರಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಪ್ರಮಾಣ ಶೇ. 30 ರಷ್ಟು ಅಂದರೆ ಸುಮಾರು (17ಲಕ್ಷ ) ಕಡಿಮೆ ಆಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಹೌದು, ಇದು ನಾವು ಒಪ್ಪಿಕೊಳ್ಳಬೇಕಾದ ಕಟು ಸತ್ಯ. ಇದಕ್ಕೆ ಹಲವು ಕಾರಣಗಳಿವೆ. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಮಾತ್ರ ಪಟ್ಟಿ ಮಾಡಿದ್ದೇನೆ.
1.ಸರಕಾರದ ತಪ್ಪು ಶಿಕ್ಷಣ ನೀತಿ
ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ವಹಿಸುವ ಹೊಣೆಗಾರಿಕೆ ಸರಕಾರದ್ದಾಗಿದೆ. ಈ ಜವಾಬ್ದಾರಿಯನ್ನು ಖಾಸಗಿ ಶಿಕ್ಷಣ ವ್ಯಾಪಾರಿಗಳ ತೆಕ್ಕೆಗೆ ವರ್ಗಾಯಿಸುವ ಮೂಲಕ ಸರಕಾರ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ದುರ್ಬಲಗೊಳ್ಳಲು ಕಾರಣವಾಗಿದೆ. ಸರಕಾರದ ಬೇಜವಾಬ್ದಾರಿಯ ಕಾರಣದಿಂದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶಾಸನ ಸಭೆಯ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಕರಾಗಿ ಶಿಕ್ಷಣದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಥಳುಕು ಬಳುಕಿನ ಮುಂದೆ ಸರಕಾರಿ ಕನ್ನಡ ಶಾಲೆಗಳು ಪೇಲವವಾಗಿ ಕಾಣುತ್ತಿವೆ. ಹೀಗಾಗಿ ಸರಕಾರಿ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಖಾಸಗಿ ಶಿಕ್ಷಣ ವ್ಯಾಪಾರದ ನಿಯಂತ್ರಣಕ್ಕೆ ಯಾವುದೇ ಪಕ್ಷದ ಸರಕಾರಗಳು ಕ್ರಮ ವಹಿಸುತ್ತಿಲ್ಲ. ಸರಕಾರಿ ಶಾಲೆಗಳ ಮೂಲಕ ರಾಜ್ಯದ ಎಲ್ಲ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ವನ್ನು ಉಚಿತವಾಗಿ ಮತ್ತು ತಾರತಮ್ಯ ರಹಿತವಾಗಿ ಒದಗಿಸುವಲ್ಲಿ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ.
2. ಶಿಕ್ಷಕರ ಅಸಡ್ಡೆ, ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪ
ಕರ್ನಾಟಕ ರಾಜ್ಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಕುಸಿತದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸರಕಾರಿ ಶಾಲೆಗಳ ಶಿಕ್ಷಕರ ಪಾತ್ರ ತುಂಬಾ ದೊಡ್ಡದು. ಜನರ ತೆರಿಗೆಯ ಹಣದಿಂದ ವೇತನ ಪಡೆದು, ಜೀವನ ಭದ್ರತೆಯ ಗ್ಯಾರಂಟಿ ಪಡೆದಿರುವ ಶಿಕ್ಷಕರು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿಲ್ಲ. ಪ್ರಾಥಮಿಕ ಶಾಲೆಯ ಪ್ರತಿಯೊಂದು ತರಗತಿಯ ಮಕ್ಕಳ ಕಲಿಕಾ ಮಟ್ಟವನ್ನು ನಿಗದಿ ಪಡಿಸಲಾಗಿದೆ.
ಈ ಮಟ್ಟವನ್ನು ಮಕ್ಕಳು ಸಾಧಿಸುವಂತೆ ನೋಡಿಕೊಳ್ಳುವುದು ಶಿಕ್ಷಕರ ಪ್ರಾಥಮಿಕ ಕರ್ತವ್ಯ. 10-20 ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆ ಕೂಡ ತುಂಬಾ ಕಡಿಮೆ ಇದೆ. ಆದರೂ ವಿದ್ಯಾರ್ಥಿಗಳು ನಿಗದಿತ ಕಲಿಕಾ ಮಟ್ಟವನ್ನು ತಲುಪುವಂತೆ ಮಾಡುವಲ್ಲಿ ಶಿಕ್ಷಕರು ವಿಫಲರಾಗುತ್ತಿದ್ದಾರೆ. ಇದರಿಂದ ಪೋಷಕರು ಸರಕಾರಿ ಶಾಲೆಗಳ ಮೇಲಿನ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ.
3. ಆಂಗ್ಲ ಭಾಷಾ ಮಾಧ್ಯಮದಲ್ಲಿ ಕಲಿಕೆಯ ವ್ಯಾಮೋಹ
ಪ್ರಸ್ತುತ ಸಮಾಜದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಉತ್ತಮ ಭವಿಷ್ಯಕ್ಕೂ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೂ ಸಂಬಂಧವನ್ನು ಕಲ್ಪಿಸಲಾಗುತ್ತಿದೆ. ಕನ್ನಡ ಮಾಧ್ಯಮ ಕಳಪೆ, ಆಂಗ್ಲ ಮಾಧ್ಯಮ ಶ್ರೇಷ್ಠ ಎನ್ನುವ ಮನೋಭಾವ ಕಂಡು ಬರುತ್ತಿದೆ. ಸರಕಾರದ ತಪ್ಪು ಶಿಕ್ಷಣ ನೀತಿಯೇ ಈ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ. ತಮ್ಮ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆ
(English) ಕಲಿಕೆಗೆ ಅವಕಾಶ ಇಲ್ಲ ಎನ್ನುವ ಕಾರಣಕ್ಕೆ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಸಿಲುಕುತ್ತಿದ್ದಾರೆ. ಸರಕಾರಿ ಶಾಲೆಗಳ ಶಿಕ್ಷಕರಿಗೆ ಕೂಡ ಸರಕಾರದ ಶಾಲೆಗಳ ಮೇಲೆ ನಂಬಿಕೆ ಇಲ್ಲ. ಅವರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರ್ಪಡೆ ಮಾಡುತ್ತಿದ್ದಾರೆ. ಇದು ವಿಪರ್ಯಾಸ..!! ಒಂದು ಬಾರಿ ಖಾಸಗಿ ಆಂಗ್ಲ ಮಾಧ್ಯನಾ ಶಾಲೆಗಳು ನಡೆಸುತ್ತಿರುವ ಆಂಗ್ಲ ಮಾಧ್ಯಮ ಐಏಉ- Uಏಉ ವ್ಯವಸ್ಥೆಗೆ ಕಾಲಿಟ್ಟ ಯಾವ ಮಕ್ಕಳು ಕೂಡ ಮರಳಿ ಸರಕಾರಿ ಶಾಲೆಗೆ ಪ್ರವೇಶ ಮಾಡುವುದಿಲ್ಲ.! ಆಂಗ್ಲ ಮಾಧ್ಯಮ ಕಲಿಕೆಯ ವ್ಯಾಮೋಹ ಎಷ್ಟಿದೆಯೆಂದರೆ, ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಸೇರ್ಪಡೆಯಾಗುವ ಮಕ್ಕಳ ಪ್ರಮಾಣದಲ್ಲಿ ವಿಪರೀತ ಏರಿಕೆ ಕಂಡು ಬರುತ್ತಿದೆ. 2015-16ರಲ್ಲಿ ಖಾಸಗಿ ಶಾಲೆಗಳ ಮಕ್ಕಳ ದಾಖಲಾತಿ 30.3 ಲಕ್ಷದಷ್ಟು ಇತ್ತು. 2025-26 ನೇ ಸಾಲಿನಲ್ಲಿ ಇದು 47 ಲಕ್ಷಗಳಿಗೆ ಏರಿಕೆಯಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಆಂಗ್ಲ ಭಾಷಾ ಮಾಧ್ಯಮದ ವ್ಯಾಮೋಹ ಸರಕಾರಿ ಕನ್ನಡ ಶಾಲೆಗಳ ಅವನತಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
4. ಸ್ಥಳೀಯಾಡಳಿತ ಸಂಸ್ಥೆಗಳ ವೈಫಲ್ಯ
ಆಯಾ ಹಂತಗಳ ಸ್ಥಳೀಯಾಡಳಿತ ಸಂಸ್ಥೆಗಳು (ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳು ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳು) ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಕಾಯ್ದೆಯನ್ನು ಬದ್ಧ ಜವಾಬ್ದಾರಿಯಿಂದ ಸಮರ್ಥವಾಗಿ ನಿಭಾಯಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಸರಕಾರಗಳನ್ನು ಸಜ್ಜು ಗೊಳಿಸಲು ಸರಕಾರ ಗಮನ ನೀಡುತ್ತಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆ ತಮ್ಮ ಕಡ್ಡಾಯ ಪ್ರಕಾರ್ಯ ಎನ್ನುವುದನ್ನು ಮರೆತಿವೆ.
5. ಪೋಷಕರ ಸಮಿತಿಗಳ ವೈಫಲ್ಯ
ಸರಕಾರಿ ಶಾಲೆಗಳ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪೋಷಕರ ಪ್ರತಿನಿಧಿಗಳು ಇರುವ ಸಮಿತಿ (Sಆಒಅ) ಗಳನ್ನು ರಚಿಸುವುದು ಕಡ್ಡಾಯವಾಗಿದೆ. ಈ ಸಮಿತಿಗಳು ತಮ್ಮ ಉದ್ದೇಶಿತ ಕರ್ತವ್ಯಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸೂಕ್ತ ತರಬೇತಿ ಗಳನ್ನು ಆಯೋಜಿಸಿ ಮನವರಿಕೆ ಮಾಡುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿವೆ. ಈ ಸಮಿತಿಗಳನ್ನು ಗ್ರಾಮ ಪಂಚಾಯತ್‌ಗಳ ಉಪಸಮಿತಿಗಳಾಗಿ ಕಾರ್ಯಕ್ರಮ ನಿರ್ವಹಿಸುವಂತೆ ಮಾಡುವ ಕಾಯಿದೆ ಬದ್ಧ ಅವಕಾಶವನ್ನು ಪಂಚಾಯತ್ ರಾಜ್ ಇಲಾಖೆ ಕೈ ಚೆಲ್ಲಿದೆ.
ಮೇಲಿನ ಅಂಶಗಳಲ್ಲದೆ ಇನ್ನೂ ಹಲವು ಆಡಳಿತಾತ್ಮಕ ಸಮಸ್ಯೆಗಳು ಕೂಡ ಸರಕಾರಿ ಶಾಲೆಗಳ ಅವನತಿಗೆ ಕಾರಣವಾಗಿವೆ.
ಕೆಪಿಎಸ್ ಯೋಜನೆಗೆ ವಿರೋಧ
ರಾಜ್ಯ ಸರಕಾರ ಆರಂಭಿಸಿರುವ ಕೆಪಿಎಸ್ (Karnataka public school) ಯೋಜನೆಗೆ ಈಗ ವಿರೋಧ ವ್ಯಕ್ತವಾಗಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರದಲ್ಲಿ 2018-2019ರ ಅವಧಿಯಲ್ಲಿ ಕೆಪಿಎಸ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಮೊದಲಿಗೆ ಆಯ್ದ 176 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲಾಯಿತು. ಮುಂದಿನ ವರ್ಷ ಇನ್ನಷ್ಟು ಶಾಲೆಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಯಿತು. ಪ್ರಸ್ತುತ ರಾಜ್ಯದಲ್ಲಿ ಒಟ್ಟು 309 ಶಾಲೆಗಳು ಕೆಪಿಎಸ್ ಯೋಜನೆಯಡಿಯಲ್ಲಿ ಉನ್ನತೀಕರಿಸಲ್ಪಟ್ಟಿವೆ. ನಂತರದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಈ ಯೋಜನೆಯನ್ನು ಕೈಬಿಟ್ಟು ಮಾದರಿ ಶಾಲೆ ಎನ್ನುವ ಹೊಸ ಯೋಜನೆಯನ್ನು ಘೋಷಿಸಿತು. ಆದರೆ ಆ ಯೋಜನೆ ಕಾರ್ಯಗತ ಆಗಲೇ ಇಲ್ಲ. ಮತ್ತೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕೆಪಿಎಸ್ ಯೋಜನೆಗೆ ಮರು ಚಾಲನೆ ನೀಡಿ ಇನ್ನಷ್ಟು ವಿಸ್ತಾರಗೊಳಿಸಲು ಹೊರಟಿದೆ. ಮೊದಲ ಹಂತದಲ್ಲಿ ಯೋಜನೆಯನ್ನು ಆರಂಭಿಸಿದಾಗ ಕಾಣದಿದ್ದ ವಿರೋಧ ಈಗ ಮುನ್ನೆಲೆಗೆ ಬಂದಿದೆ. ಸರಕಾರದ ನಿರ್ಧಾರದ ವಿರುದ್ಧ ಜನವರಿ 26 ರಂದು ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹೂರಾಟಗಾರರು ಹೇಳಿಕೆ ನೀಡಿದ್ದಾರೆ.