ಯೋಜನೆಗಳ ಮರುನಾಮಕರಣ: ರಾಜಕೀಯ ಲಾಭವೇ ಅಥವಾ ಸಾರ್ವಜನಿಕ ಹಿತವೇ?
ಯೋಜನೆಗಳ ಮರುನಾಮಕರಣದ ಹಿಂದೆ ರಾಜಕೀಯ ಲಾಭದ ಅಂಶವೂ ಅಡಗಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಹೊಸ ಹೆಸರುಗಳು ಸಾರ್ವಜನಿಕ ಗಮನ ಸೆಳೆಯುತ್ತವೆ, ಆಡಳಿತದ ಸಾಧನೆಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತವೆ. ಆದರೆ ಇದು ದೀರ್ಘಕಾಲೀನ ಪರಿಹಾರವಲ್ಲ. ಹಳೆಯ ಯೋಜನೆಗಳಲ್ಲಿ ಕಂಡುಬಂದ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನವಿಲ್ಲದೆ ಕೇವಲ ಹೆಸರು ಬದಲಿಸಿದರೆ, ಜನರ ವಿಶ್ವಾಸ ಕ್ರಮೇಣ ಕುಸಿಯುತ್ತದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವಿಶ್ವಾಸವೇ ಅತ್ಯಂತ ಪ್ರಮುಖ ಸಂಪತ್ತು; ಅದು ಕಳೆದುಹೋದರೆ, ಅತ್ಯುತ್ತಮ ಯೋಜನೆಗಳೂ ಫಲ ನೀಡುವುದಿಲ್ಲ.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕೇಂದ್ರ, ರಾಜ್ಯ ಅಥವಾ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜೊತೆಯಾಗಿ ಪ್ರತೀ ವರ್ಷ ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸುತ್ತಿವೆ. ಕೇಂದ್ರ ಅಥವಾ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳು ತಮ್ಮದೇ ಆದ ಕಾರ್ಯತಂತ್ರಗಳ ಮೂಲಕ ಅಭಿವೃದ್ಧಿ ಸಾಧಿಸಲು ಹಿಂದಿನ ಸರಕಾರವು ಜಾರಿಗೆ ತಂದಿರುವ ಯೋಜನೆಗಳನ್ನು ಕೆಲವು ಮಾರ್ಪಾಡಿನೊಂದಿಗೆ ಮುಂದುವರಿಸುತ್ತಾ ಅಥವಾ ಮರುನಾಮಕರಣ ಮಾಡಿ ಅಥವಾ ಹೊಸದಾಗಿ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಈ ಯೋಜನೆಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿ ಸಾಧಿಸಲು ಸಹಾಯವಾಗಿದೆ ಎಂಬುದನ್ನು ಕಾಲ ಕಾಲಕ್ಕೆ ತಕ್ಕಂತೆ ಸರಕಾರಗಳು ಯೋಜನೆಗಳನ್ನು ಮೌಲ್ಯಮಾಪನ ಮಾಡುವುದರ ಮೂಲಕ ಕ್ರಮವಹಿಸಿದ್ದರೂ ಕೂಡ ಯೋಜನೆಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಲ್ಲಿ ಹಲವು ಸಂದರ್ಭಗಳಲ್ಲಿ ವಿಫಲವಾಗಿವೆ.
ಪ್ರಸ್ತುತ, ಯೋಜನೆಗಳ ಮರುನಾಮಕರಣಕ್ಕೆ ಸೀಮಿತವಾಗದೆ ಪರಿಣಾಮಕಾರಿ ಅನುಷ್ಠಾನಕ್ಕೆ ದಾರಿಯಾಗಬೇಕು ಎಂಬ ವಿಚಾರ ಭಾರತದ ಅಭಿವೃದ್ಧಿ ಚರ್ಚೆಯ ಕೇಂದ್ರಬಿಂದುವಾಗಿದೆ. ಸರಕಾರಗಳು ಕಾಲಕಾಲಕ್ಕೆ ಹೊಸ ಯೋಜನೆಗಳನ್ನು ಘೋಷಿಸುತ್ತಿರುವುದು, ಹಳೆಯ ಯೋಜನೆಗಳಿಗೆ ಹೊಸ ಹೆಸರುಗಳನ್ನು ನೀಡುತ್ತಿರುವುದು ಸಾಮಾನ್ಯವಾಗಿದ್ದರೂ, ಈ ಪ್ರಕ್ರಿಯೆಯಿಂದ ಸಮಾಜದ ಅಂಚಿನಲ್ಲಿರುವ ಜನರ ಬದುಕಿನಲ್ಲಿ ಎಷ್ಟು ವಾಸ್ತವಿಕ ಬದಲಾವಣೆ ಆಗುತ್ತಿದೆ ಎಂಬ ಪ್ರಶ್ನೆ ಹೆಚ್ಚು ಪ್ರಸ್ತುತವಾಗಿದೆ. ಅಭಿವೃದ್ಧಿ ಎಂದರೆ ಕೇವಲ ಘೋಷಣೆಗಳು, ಜಾಹೀರಾತುಗಳು ಅಥವಾ ಆಕರ್ಷಕ ಹೆಸರುಗಳ ಸರಣಿ ಅಲ್ಲ; ಅದು ಜನರ ದಿನನಿತ್ಯದ ಬದುಕಿನಲ್ಲಿ ಕಂಡುಬರುವ ಸುಧಾರಣೆ, ಭದ್ರತೆ ಮತ್ತು ಗೌರವದ ಅನುಭವ. ಈ ಅರ್ಥದಲ್ಲಿ ನೋಡಿದರೆ, ಯೋಜನೆಗಳ ಮರುನಾಮಕರಣಕ್ಕಿಂತ ಅವುಗಳ ಪರಿಣಾಮಕಾರಿ ಅನುಷ್ಠಾನವೇ ನಿಜವಾದ ಅಭಿವೃದ್ಧಿಯ ಮಾನದಂಡವಾಗಬೇಕು.
ಭಾರತದ ಸಾಮಾಜಿಕ ಮತ್ತು ಆರ್ಥಿಕ ಚಿಂತನೆಯ ಇತಿಹಾಸವನ್ನು ನೋಡಿದರೆ, ಅನೇಕ ಮಹಾನ್ ಚಿಂತಕರು ಕಾನೂನು, ನೀತಿ ಮತ್ತು ಯೋಜನೆಗಳಿಗಿಂತ ಅವುಗಳ ಕಾರ್ಯಗತಗೊಳಿಸುವಿಕೆಗೆ ಹೆಚ್ಚು ಮಹತ್ವ ನೀಡಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಸಂದರ್ಭದಲ್ಲಿ ‘‘ರಾಜಕೀಯ ಪ್ರಜಾಪ್ರಭುತ್ವ ಮಾತ್ರ ಸಾಕಾಗದು, ಅದಕ್ಕೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವದ ಬೆಂಬಲ ಅಗತ್ಯ’’ ಎಂದು ಎಚ್ಚರಿಸಿದ್ದರು. ಅಂದರೆ, ಕಾನೂನುಗಳು ಮತ್ತು ಯೋಜನೆಗಳು ಕಾಗದದಲ್ಲೇ ಉಳಿಯದೆ, ಸಮಾಜದ ದುರ್ಬಲ ವರ್ಗಗಳಿಗೆ ನಿಜವಾದ ಹಕ್ಕುಗಳು, ಅವಕಾಶಗಳು ಮತ್ತು ಗೌರವ ತಲುಪಬೇಕು. ಇಂದಿನ ದಿನಗಳಲ್ಲಿ ಅನೇಕ ಕಲ್ಯಾಣ ಯೋಜನೆಗಳು ಸಂವಿಧಾನದ ಮೌಲ್ಯಗಳನ್ನು ಉಲ್ಲೇಖಿಸುತ್ತಿದ್ದರೂ, ಅವುಗಳ ಅನುಷ್ಠಾನದಲ್ಲಿ ಕಾಣುವ ಅಸಮರ್ಥತೆ, ವಿಳಂಬ ಮತ್ತು ನಿರ್ಲಕ್ಷ್ಯ ಅಂಬೇಡ್ಕರ್ ಅವರ ಕನಸಿನ ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಅಡ್ಡಿಯಾಗುತ್ತಿದೆ.
ಅದೇ ರೀತಿ, ಮಹಾತ್ಮಾ ಗಾಂಧೀಜಿ ಅವರು ‘‘ಕಟ್ಟಕಡೆಯ ವ್ಯಕ್ತಿಯ ತತ್ವವು ಅಭಿವೃದ್ಧಿ ಚರ್ಚೆಗೆ ಗಾಢವಾದ ನೈತಿಕ ಆಧಾರ ಒದಗಿಸುತ್ತದೆ. ಯಾವುದೇ ಯೋಜನೆ ಅಥವಾ ನೀತಿಯನ್ನು ರೂಪಿಸುವಾಗ, ಅದರ ಲಾಭ ಸಮಾಜದ ಅತಿ ದುರ್ಬಲ ವ್ಯಕ್ತಿಗೆ ತಲುಪುತ್ತಿದೆಯೇ ಎಂಬ ಪ್ರಶ್ನೆಯನ್ನು ಕೇಳಬೇಕು’’ ಎಂದು ಹೇಳಿದ್ದರು. ಇಂದು ಹಲವಾರು ಯೋಜನೆಗಳು ಬಡವರು, ಗ್ರಾಮೀಣ ಜನರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಹೆಸರಿನಲ್ಲಿ ಘೋಷಿಸಲ್ಪಡುತ್ತವೆ. ಆದರೆ ತಳಮಟ್ಟದಲ್ಲಿ ಅನುಷ್ಠಾನವಾಗುವಾಗ ಮಧ್ಯವರ್ತಿಗಳ ಪ್ರಾಬಲ್ಯ, ಮಾಹಿತಿ ಕೊರತೆ, ಭ್ರಷ್ಟಾಚಾರ ಮತ್ತು ತಾಂತ್ರಿಕ ಅಡಚಣೆಗಳಿಂದಾಗಿ ಕಟ್ಟಕಡೆಯ ವ್ಯಕ್ತಿಯವರೆಗೆ ಯೋಜನೆಗಳ ಪ್ರತಿಫಲ ತಲುಪದೆ ಹೋಗುವ ಉದಾಹರಣೆಗಳು ಸಾಕಷ್ಟು ಕಂಡುಬರುತ್ತಿವೆ. ಈ ಪರಿಸ್ಥಿತಿಯಲ್ಲಿ, ಯೋಜನೆಗೆ ಹೊಸ ಹೆಸರು ಕೊಟ್ಟರೆ ಸಮಸ್ಯೆ ಪರಿಹಾರವಾಗುವುದಿಲ್ಲ; ಗಾಂಧೀಜಿಯ ತತ್ವದಂತೆ, ಯೋಜನೆಯ ಪರಿಣಾಮ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತಂದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ.
ಆರ್ಥಿಕ ಚಿಂತನೆಯ ದೃಷ್ಟಿಯಿಂದಲೂ ಅನುಷ್ಠಾನದ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದೆ. ಅಮರ್ತ್ಯ ಸೇನ್ ‘‘ಸಾಮರ್ಥ್ಯ ವಿಕಾಸ ಸಿದ್ಧಾಂತವು ಅಭಿವೃದ್ಧಿಯನ್ನು ಕೇವಲ ಆದಾಯ ಅಥವಾ ಜಿಡಿಪಿ ಸಂಖ್ಯೆಗಳ ಮೂಲಕ ಅಳೆಯುವ ಪ್ರವೃತ್ತಿಯನ್ನು ಪ್ರಶ್ನಿಸುತ್ತದೆ. ಜನರು ತಮ್ಮ ಜೀವನವನ್ನು ಸ್ವತಂತ್ರವಾಗಿ ಆಯ್ಕೆಮಾಡುವ ಸಾಮರ್ಥ್ಯ ಹೊಂದಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ’’ ಎಂದು ವಾದಿಸುತ್ತಾರೆ. ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಭದ್ರತೆ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆಯು ಸಾಮರ್ಥ್ಯ ವಿಕಾಸದ ಪ್ರಮುಖ ಅಂಶಗಳು. ಸರಕಾರದ ಯೋಜನೆಗಳು ಈ ಕ್ಷೇತ್ರಗಳಲ್ಲಿ ಸ್ಪಷ್ಟ ಪರಿಣಾಮ ತೋರದೆ ಇದ್ದರೆ, ಅವುಗಳಿಗೆ ಎಷ್ಟೇ ಆಕರ್ಷಕ ಹೆಸರುಗಳಿದ್ದರೂ ಅವು ಅಭಿವೃದ್ಧಿಯ ಗುರಿಯನ್ನು ಸಾಧಿಸಿದಂತಾಗುವುದಿಲ್ಲ. ಹೀಗಾಗಿ, ಯೋಜನೆಗಳ ಅನುಷ್ಠಾನವು ಜನರ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆಯೇ ಎಂಬುದೇ ಮುಖ್ಯ ಪ್ರಶ್ನೆಯಾಗಬೇಕು.
ಯೋಜನೆಗಳ ಮರುನಾಮಕರಣದ ಹಿಂದೆ ರಾಜಕೀಯ ಲಾಭದ ಅಂಶವೂ ಅಡಗಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಹೊಸ ಹೆಸರುಗಳು ಸಾರ್ವಜನಿಕ ಗಮನ ಸೆಳೆಯುತ್ತವೆ, ಆಡಳಿತದ ಸಾಧನೆಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತವೆ. ಆದರೆ ಇದು ದೀರ್ಘಕಾಲೀನ ಪರಿಹಾರವಲ್ಲ. ಹಳೆಯ ಯೋಜನೆಗಳಲ್ಲಿ ಕಂಡುಬಂದ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನವಿಲ್ಲದೆ ಕೇವಲ ಹೆಸರು ಬದಲಿಸಿದರೆ, ಜನರ ವಿಶ್ವಾಸ ಕ್ರಮೇಣ ಕುಸಿಯುತ್ತದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವಿಶ್ವಾಸವೇ ಅತ್ಯಂತ ಪ್ರಮುಖ ಸಂಪತ್ತು; ಅದು ಕಳೆದುಹೋದರೆ, ಅತ್ಯುತ್ತಮ ಯೋಜನೆಗಳೂ ಫಲ ನೀಡುವುದಿಲ್ಲ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಭಿವೃದ್ಧಿ ಸಾಧಿಸಲು ಯೋಜನೆಗಳನ್ನು ಜಾರಿಗೆ ತಂದರೂ ಅವುಗಳ ಅನುಷ್ಠಾನದ ಹಂತದಲ್ಲಿ ಎದುರಾಗುವ ಅಡ್ಡಿಗಳು ಬಹುಮುಖ್ಯವಾಗಿವೆ. ಆಡಳಿತಾತ್ಮಕ ಅಸಮರ್ಥತೆ, ಇಲಾಖೆಗಳ ನಡುವೆ ಸಮನ್ವಯದ ಕೊರತೆ, ತಳಮಟ್ಟದ ಸಿಬ್ಬಂದಿಗೆ ಸಮರ್ಪಕ ತರಬೇತಿ ಇಲ್ಲದಿರುವುದು, ಫಲಾನುಭವಿಗಳಿಗೆ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಇಲ್ಲದಿರುವುದು ಹಾಗೂ ಡಿಜಿಟಲ್ ವ್ಯವಸ್ಥೆಗಳನ್ನು ಬಳಸಲು ಅಸಮರ್ಥರಾಗಿರುವ ಜನರು ಇವೆಲ್ಲವೂ ಯೋಜನೆಗಳ ಯಶಸ್ಸಿಗೆ ದೊಡ್ಡ ಸವಾಲುಗಳಾಗಿವೆ. ಇವುಗಳನ್ನು ಪರಿಹರಿಸದೆ ಹೊಸ ಯೋಜನೆಗಳ ಘೋಷಣೆ ಅಥವಾ ಮರುನಾಮಕರಣ ಮಾಡಿದರೆ, ಅದು ಸಮಸ್ಯೆಯನ್ನು ಮರೆಮಾಚುವ ಪ್ರಯತ್ನವಾಗುತ್ತದೆ ಹೊರತು ಪರಿಹಾರವಾಗುವುದಿಲ್ಲ.
ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ನೋಡಿದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತರುವ ಒಂದೇ ಮಾದರಿಯ ಯೋಜನೆ/ನೀತಿಗಳು ಎಲ್ಲರಿಗೂ ಸಮಾನವಾಗಿ ಪರಿಣಾಮಕಾರಿಯಾಗುವುದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕು. ಭಾರತವು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವೈವಿಧ್ಯತೆಯಿಂದ ಕೂಡಿದ ದೇಶ. ಹೀಗಾಗಿ, ಯೋಜನೆಗಳ ಅನುಷ್ಠಾನವು ಸ್ಥಳೀಯ ಅಗತ್ಯಗಳು, ಪ್ರಾದೇಶಿಕ ವೈಶಿಷ್ಟ್ಯಗಳು ಮತ್ತು ಸಾಮಾಜಿಕ ಹಿನ್ನೆಲೆಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. ಸಮಾನತೆ ಎಂದರೆ ಎಲ್ಲರಿಗೂ ಒಂದೇ ನೀಡುವುದು ಅಲ್ಲ, ಅಗತ್ಯಕ್ಕೆ ಅನುಗುಣವಾಗಿ ನೀಡುವುದು ಎಂಬ ಅರ್ಥವನ್ನು ಅನುಷ್ಠಾನ ಹಂತದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಸಮಾನತೆಯು ಎಲ್ಲರಿಗೂ ಒಂದೇ ರೀತಿಯ ಸಂಪನ್ಮೂಲಗಳನ್ನು ಮತ್ತು ಅವಕಾಶಗಳನ್ನು ನೀಡುವುದನ್ನು ಸೂಚಿಸುತ್ತದೆ. ಆದರೆ ಎಲ್ಲರೂ ಒಂದೇ ಹಂತದಿಂದ ಜೀವನವನ್ನು ಆರಂಭಿಸುವುದಿಲ್ಲ. ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಗಳು ಭಿನ್ನವಾಗಿರುತ್ತವೆ. ಪ್ರತಿಯೊಬ್ಬರ ವೈಯಕ್ತಿಕ ಅಗತ್ಯಗಳ ಆಧಾರದ ಮೇಲೆ ವಿಭಿನ್ನ ಸಂಪನ್ಮೂಲಗಳನ್ನು ಒದಗಿಸುವುದರಿಂದ ನ್ಯಾಯಸಮ್ಮತ ಹಾಗೂ ಸಮಾನ ಫಲಿತಾಂಶಗಳು ಸಾಧ್ಯವಾಗುತ್ತವೆ. ಕೆಲವರು ಹೆಚ್ಚು ಅಡೆತಡೆಗಳನ್ನು ಎದುರಿಸುವುದರಿಂದ, ಅವರಿಗೆ ಹೆಚ್ಚು ಬೆಂಬಲ ಅಗತ್ಯ. ಹಾಗಾಗಿ ಸಮತೆಯ ಮೂಲಕವೇ ಎಲ್ಲರೂ ಒಂದೇ ಗುರಿಯನ್ನು ತಲುಪಲು ಸಮಾನತೆಗಿಂತ ಸಮತೆಗೆ ಹೆಚ್ಚಿನ ಮಹತ್ವ ನೀಡಬೇಕು.
ಆರ್ಥಿಕ ಚಿಂತಕರು ಸಾರ್ವಜನಿಕ ವೆಚ್ಚದ ಪರಿಣಾಮಕಾರಿತ್ವದ ಮೇಲೂ ಸದಾ ಒತ್ತಡ ಹಾಕಿದ್ದಾರೆ. ತೆರಿಗೆದಾರರ ಹಣದಿಂದ ನಡೆಯುವ ಯೋಜನೆಗಳು ನಿಜವಾದ ಫಲಿತಾಂಶ ನೀಡುತ್ತಿವೆಯೇ ಎಂಬುದನ್ನು ಅಳೆಯುವ ವ್ಯವಸ್ಥೆ ಬಲವಾಗಬೇಕು. ಫಲಿತಾಂಶ ಆಧಾರಿತ ಮೌಲ್ಯಮಾಪನ, ಸಾಮಾಜಿಕ ಲೆಕ್ಕಪತ್ರ ಮತ್ತು ಸಾರ್ವಜನಿಕ ಪರಿಶೀಲನೆಗಳ ಮೂಲಕ ಯೋಜನೆಗಳ ಪರಿಣಾಮವನ್ನು ನಿರಂತರವಾಗಿ ಪರಿಶೀಲಿಸಬೇಕು. ಇದರಿಂದ ಕೇವಲ ಅಂಕಿಅಂಶಗಳ ಸಾಧನೆಯಲ್ಲ, ಜನರ ಬದುಕಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅಳೆಯಲು ಸಾಧ್ಯವಾಗುತ್ತದೆ.
ಒಟ್ಟಿನಲ್ಲಿ, ಸಾಮಾಜಿಕ ಮತ್ತು ಆರ್ಥಿಕ ಚಿಂತಕರ ಆಲೋಚನೆಗಳು ಒಂದೇ ಸಂದೇಶವನ್ನು ನೀಡುತ್ತವೆ: ಅಭಿವೃದ್ಧಿ ಒಂದು ನಿರಂತರ ಪ್ರಕ್ರಿಯೆ; ಅದು ಘೋಷಣೆಗಳಲ್ಲಿ ಅಲ್ಲ, ಅನುಷ್ಠಾನದಲ್ಲಿ ಅಡಗಿದೆ. ಯೋಜನೆಗಳ ಮರುನಾಮಕರಣ ತಾತ್ಕಾಲಿಕ ರಾಜಕೀಯ ಲಾಭ ನೀಡಬಹುದು, ಆದರೆ ಸಮಾಜದ ತಳಮಟ್ಟದಲ್ಲಿ ಶಾಶ್ವತ ಬದಲಾವಣೆ ತರಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಕನಸು, ಗಾಂಧೀಜಿಯ ಕಟ್ಟಕಡೆಯ ವ್ಯಕ್ತಿಯ ತತ್ವ ಮತ್ತು ಅಮರ್ತ್ಯ ಸೇನ್ ಅವರ ಸಾಮರ್ಥ್ಯ ವಿಕಾಸದ ದೃಷ್ಟಿಕೋನ - ಇವೆಲ್ಲವೂ ಒಟ್ಟಾಗಿ ಪರಿಣಾಮಕಾರಿ ಅನುಷ್ಠಾನವು ಆಡಳಿತದ ನಿಜವಾದ ಪರೀಕ್ಷೆ ಎಂಬುದನ್ನು ನಮಗೆ ನೆನಪಿಸುತ್ತದೆ. ಮುಂದಿನ ದಿನಗಳಲ್ಲಿ ಸರಕಾರಗಳು ಮತ್ತು ನೀತಿ ರೂಪಿಸುವವರು ಯೋಜನೆಗಳಿಗೆ ಹೊಸ ಹೆಸರುಗಳನ್ನು ಘೋಷಿಸುವುದಕ್ಕೆ ಸೀಮಿತವಾಗದೆ, ಅವುಗಳು ಜನರ ದಿನನಿತ್ಯದ ಬದುಕಿನಲ್ಲಿ ನಿಜವಾದ ಭದ್ರತೆ, ಸಾಮಾಜಿಕ ಗೌರವ ಮತ್ತು ಸಮಾನ ಅವಕಾಶಗಳನ್ನು ಎಷ್ಷರ ಮಟ್ಟಿಗೆ ಸೃಷ್ಟಿಸುತ್ತಿವೆ ಎಂಬುದನ್ನು ಕೇಂದ್ರಬಿಂದು ಮಾಡಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ, ಭಾರತದ ಅಭಿವೃದ್ಧಿಯ ಪಥವು ನಿಜಾರ್ಥದಲ್ಲಿ ಅರ್ಥಪೂರ್ಣವಾಗಿಯೂ ಹಾಗೂ ಒಳಗೊಳ್ಳುವಿಕೆಯಾಗಿಯೂ ರೂಪುಗೊಳ್ಳುತ್ತದೆ.